"ನನ್ನ ಸಿನಿಮಾವನ್ನೇ ಯಾಕೆ ಕೊಲೆ ಮಾಡ್ತಿದ್ದೀರ?"; ದುನಿಯಾ ವಿಜಯ್-ಝೈದ್ ಖಾನ್ ನಡುವೆ ನಡೆದಿದ್ದೇನು?
2026 ಮೂರನೇ ವಾರದಂದು ಕನ್ನಡದಲ್ಲಿ ಎರಡು ಸಿನಿಮಾಗಳು ರಿಲೀಸ್ ಆಗುತ್ತಿದೆ. ಗಣರಾಜ್ಯೋತ್ಸವದಂದು ಬ್ಯಾಕ್ ಟು ಬ್ಯಾಕ್ ರಜೆಗಳು ಇರುವುದರಿಂದ ಎರಡು ಸಿನಿಮಾಗಳನ್ನು ಒಟ್ಟೊಟ್ಟಿಗೆ ರಿಲೀಸ್ ಆಗುತ್ತಿವೆ. ಅದರಲ್ಲಿ ದುನಿಯಾ ವಿಜಯ್ ನಟನೆಯ 'ಲ್ಯಾಂಡ್‌ಲಾರ್ಡ್' ಒಂದಾದರೆ, ಇನ್ನೊಂದು ಕಡೆ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ 'ಕಲ್ಟ್' ಕೂಡ ರಿಲೀಸ್ ಆಗುತ್ತಿದೆ.
ಕಳೆದ ತಿಂಗಳು 'ಮ್ಯಾಕ್ಸ್' ಹಾಗೂ '45' ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗಿದ್ದವು. ಆದರೆ, ಬಾಕ್ಸಾಫೀಸ್‌ನಲ್ಲಿ ಎರಡೂ ಸಿನಿಮಾಗಳಿಗೂ ಪೆಟ್ಟು ಬಿದ್ದಿತ್ತು. ಈ ತಿಂಗಳು ಕೂಡ ಒಂದೇ ದಿನ ಎರಡೂ ಸಿನಿಮಾಗಳು ರಿಲೀಸ್ ಆಗುತ್ತಿವೆ. ಹೀಗಾಗಿ ಮತ್ತೆ ಬಾಕ್ಸಾಫೀಸ್‌ನಲ್ಲಿ ಕ್ಲ್ಯಾಶ್ ಆಗುವ ಸಾಧ್ಯತೆಯಿದೆ. ಯಾವುದಾರೂ ಒಂದು ಸಿನಿಮಾಗೆ ಪೆಟ್ಟು ಬೀಳುತ್ತೆ ಎಂಬ ಲೆಕ್ಕಾಚಾರ ಹಾಕಲಾಗಿದೆ.

'ಕಲ್ಟ್' ಸಿನಿಮಾದ ಪ್ರಚಾರದ ವೇಳೆ ಝೈದ್ ಖಾನ್ ಕೆಲವು ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ. ಅದರಲ್ಲೂ ಟಿವಿ9ಗೆ ನೀಡಿದ ಸಂದರ್ಶನದಲ್ಲಿ ದುನಿಯಾ ವಿಜಯ್‌ಗೆ ಕರೆ ಮಾಡಿ ತನ್ನ ಸಿನಿಮಾವನ್ನು ಯಾಕೆ ಕೊಲ್ಲುತ್ತೀರಾ? ಎಂದು ಕೇಳಿದ್ದಾಗಿ ಹೇಳಿಕೊಂಡಿದ್ದಾರೆ. ಈ ಹೇಳಿಕೆಯ ತುಣುಕುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಸಲಿಗೆ ಇಬ್ಬರ ನಡುವೆ ನಡೆದ ಸಂಭಾಷಣೆ ಏನು? ಝೈದ್ ಖಾನ್ ಪ್ರಶ್ನೆಗೆ ದುನಿಯಾ ವಿಜಯ್ ರೆಸ್ಪಾನ್ಸ್ ಏನಿತ್ತು? ತಿಳಿಯುವುದಕ್ಕೆ ಮುಂದೆ ಓದಿ.
ಸಾಮಾನ್ಯವಾಗಿ ಎರಡು ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗುವುದಕ್ಕೆ ಮಿಶ್ರ ಅಭಿಪ್ರಾಯಗಳಿವೆ. ಕನ್ನಡ ಚಿತ್ರರಂಗದಲ್ಲಿ ಕೆಲವು ಎರಡು ಸಿನಿಮಾ ಒಟ್ಟಿಗೆ ರಿಲೀಸ್ ಆಗುವುದರಿಂದ ಯಾವುದೇ ಸಮಸ್ಯೆ ಆಗಲ್ಲ ಎಂದರೆ, ಇನ್ನು ಕೆಲವರು ಬಾಕ್ಸಾಫೀಸ್‌ನಲ್ಲಿ ಸಮಸ್ಯೆ ಆಗುತ್ತೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಉದಾಹರಣೆಗಳಿವೆ. ಅದರಲ್ಲೂ ಸ್ಟಾರ್ ಸಿನಿಮಾ ಜೊತೆ ಹೊಸಬರ ಸಿನಿಮಾಗೆ ಹಿನ್ನಡೆ ಆಗೇ ಆಗುತ್ತೆ.
ಇನ್ನು ಝೈದ್ ಖಾನ್ 'ಕಲ್ಟ್' ಸಿನಿಮಾ ಹಾಗೂ ದುನಿಯಾ ವಿಜಯ್ 'ಲ್ಯಾಂಡ್‌ಲಾರ್ಡ್' ಎರಡು ಸಿನಿಮಾಗಳ ಲೆಕ್ಕಾಚಾರ ಬೇರೆನೇ ಇದೆ. ಝೈದ್ ಖಾನ್ ಹೇಳುವ ಪ್ರಕಾರ 'ಕಲ್ಟ್' ಸಿನಿಮಾ ರಿಲೀಸ್ ಡೇಟ್ ಅನ್ನು ಕಳೆದ ವರ್ಷ ಅಕ್ಟೋಬರ್ 2ರಂದೇ ಅನೌನ್ಸ್ ಮಾಡಲಾಗಿತ್ತು. ಅದಾದ ಬಳಿಕ ದುನಿಯಾ ವಿಜಯ್ 'ಲ್ಯಾಂಡ್‌ಲಾರ್ಡ್' ತಂಡ ಬಿಡುಗಡೆ ದಿನವನ್ನು ಅನೌನ್ಸ್ ಮಾಡಿದ್ದರು. ಹೀಗಾಗಿ ದುನಿಯಾ ವಿಜಯ್ ಅವರಿಗೆ ಕರೆ ಮಾಡಿ, "ನನ್ನ ಸಿನಿಮಾವನ್ನು ಯಾಕೆ ಕೊಲ್ತೀರಾ? ಎಂದು ಕೇಳಿದ್ದೆ" ಎಂಬುದಾಗಿ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

"ನಾವು ಅಕ್ಟೋಬರ್ 2ಕ್ಕೆ ರಚಿತಾ ರಾಮ್ ಹುಟ್ಟುಹಬ್ಬದಂದೇ ಜನವರಿ 23ರಂದು ರಿಲೀಸ್ ಅಂತ ಘೋಷಣೆ ಮಾಡಿದ್ವಿ. ಅಂದು ರಚಿತಾ ರಾಮ್ ಅವರ ಹುಟ್ಟುಹಬ್ಬವಿತ್ತು. ಆದರೆ, ಲ್ಯಾಂಡ್‌ಲಾರ್ಡ್ ಟೀಮ್‌ನವರು ತಡವಾಗಿ ಅನೌನ್ಸ್ ಮಾಡಿದರು. ದುನಿಯಾ ವಿಜಯ್ ಅವರು ಸೂಪರ್‌ಸ್ಟಾರ್. ಅದಕ್ಕೆ ಅವರಿಗೆ ಪೋನ್ ಮಾಡಿ, ನಿಮ್ಮ ಸಿನಿಮಾವನ್ನು ಮುಂದಕ್ಕೆ ಹಾಕಿಕೊಳ್ಳುವುದಕ್ಕೆ ಆಗುತ್ತಾ? ನನ್ನ ಸಿನಿಮಾವನ್ನು ಯಾಕೆ ಕೊಲೆ ಮಾಡುತ್ತಿದ್ದೀರಾ? ನಾನು ನಿಮ್ಮ ಹುಡುಗನೇ ಎಂದು ಕೇಳಿಕೊಂಡೆ" ಎಂದು ಈ ಸಂದರ್ಶನದಲ್ಲಿ ಹೇಳಿದ್ದಾರೆ.
ಅದಕ್ಕೆ ದುನಿಯಾ ವಿಜಯ್ ಕೊಟ್ಟ ಉತ್ತರವೇನು? ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಜನವರಿ 20ರಂದು ನನ್ನ ಹುಟ್ಟುಹಬ್ಬ ಅಂದು ಸಿನಿಮಾವನ್ನು ರಿಲೀಸ್ ಮಾಡುವುದು ನಾನು ರೂಢಿಸಿಕೊಂಡು ಬಂದಿದ್ದೇನೆ. ಎರಡು ಸಿನಿಮಾಗಳು ಒಟ್ಟಿಗೆ ಬರುತ್ತಿವೆ ಅಂತ ತಲೆಕೆಡಿಸಿಕೊಳ್ಳಬೇಡ. ಅದೇನು ದೊಡ್ಡ ವಿಷಯವಲ್ಲ. ಇಲ್ಲಿ ಸಾಕಷ್ಟು ಚಿತ್ರಮಂದಿರಗಳು ಇವೆ. ನಿನ್ನ ಆಡಿಯನ್ಸ್ ಬೇರೆ.. ನನ್ನ ಆಡಿಯನ್ಸ್ ಬೇರೆ" ಎಂದು ದುನಿಯಾ ವಿಜಯ್ ಹೇಳಿದ್ದಾಗಿ ಝೈದ್ ಖಾನ್ ಹೇಳಿದ್ದಾರೆ.


Click it and Unblock the Notifications











