ಆತ್ಮಹತ್ಯೆಗೆ ಯತ್ನಿಸಿದ ಡ್ರೋನ್ ಆಪರೇಟರ್; ಜಮೀರ್ ಪುತ್ರ ಝೈದ್ ಖಾನ್ 'ಕಲ್ಟ್' ತಂಡದ ವಿರುದ್ಧ ದೂರು
2024ರ ಕೊನೆಯಲ್ಲಿ ಇದ್ದೇವೆ. ಇದೇ ವೇಳೆ ವಿವಾದಗಳು ಕೂಡ ಒಂದೊಂದಾಗೇ ಹೆಜ್ಜಾಗುತ್ತಿದೆ. ಈಗ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ನಟಿಸುತ್ತಿರುವ 'ಕಲ್ಟ್' ಸಿನಿಮಾ ತಂಡದ ವಿರುದ್ಧವೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ಝೈದ್ ಖಾನ್ ನಟಿಸುತ್ತಿರುವ ಎರಡನೇ ಸಿನಿಮಾ. ಈಗ 'ಕಲ್ಟ್' ಚಿತ್ರತಂಡದ ವಿರುದ್ಧ ದೂರನ್ನು ದಾಖಲಿಸಲಾಗಿದೆ.
'ಕಲ್ಟ್' ಸಿನಿಮಾ ಕೆಲವೇ ತಿಂಗಳ ಹಿಂದಷ್ಟೇ ಸೆಟ್ಠೇರಿತ್ತು. ಮೊದಲ ಸಿನಿಮಾ 'ಬನಾರಸ್' ಬಳಿಕ ಎರಡನೇ ಸಿನಿಮಾಗೆ ಝೈದ್ ಖಾನ್ ಕೈ ಹಾಕಿದ್ದರು. ಅದುವೇ 'ಕಲ್ಟ್'. ಈಗಾಗಲೇ 'ಉಪಾಧ್ಯಕ್ಷ' ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿರುವ ಅನಿಲ್ ಕುಮಾರ್ 'ಕಲ್ಟ್'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಹೀರೋ ಹಾಗೂ ನಿರ್ದೇಶಕರ ಇಬ್ಬರ ಮೇಲೂ ಗಂಭೀರ ಆರೋಪ ಮಾಡಲಾಗಿದೆ.

'ಕಲ್ಟ್' ತಂಡದ ವಿರುದ್ಧ ಪ್ರಕರಣ ದಾಖಲಿಸಿದ್ದು ಇದೇ ಸಿನಿಮಾದ ಡ್ರೋನ್ ಆಪರೇಟರ್ ಸಂತೋಷ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತೋಷ್ ಪರವಾಘಿ ಅವರ ಸಹೋದರಿ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಅಷ್ಟಕ್ಕೂ ಏನಿದು ಘಟನೆ? ಅಂತಹದ್ದು ಏನಾಯ್ತು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಜಮೀರ್ ಪುತ್ರ ಝೈದ್ ಖಾನ್ 'ಬನಾರಸ್' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಗೊತ್ತೇ ಇದೆ. ಮೊದಲ ಸಿನಿಮಾ ಬಳಿಕ ಒಂದಿಷ್ಟು ದಿನ ಗ್ಯಾಪ್ ಕೊಟ್ಟು ಎರಡನೇ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅ ಸಿನಿಮಾ 'ಕಲ್ಟ್' ಅನ್ನು ಅನಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ರಗಡ್ ಲುಕ್‌ನಲ್ಲಿ ಝೈದ್ ಖಾನ್ ಅನ್ನು ತೆರೆಮೇಲೆ ತರುವ ಪ್ರಯತ್ನ ನಡೆಯುತ್ತಿದೆ. ಈ ವೇಳೆ ಹೀರೋ ಮತ್ತು ನಿರ್ದೇಶಕ ಇಬ್ಬರೂ ಎಡವಟ್ಟು ಮಾಡಿಕೊಂಡಿದ್ದಾರೆ.

ಇದೇ ನವೆಂಬರ್ 25ರಂದು 'ಕಲ್ಟ್' ಸಿನಿಮಾದ ಶೂಟಿಂಗ್ ಚಿತ್ರದುರ್ಗದಲ್ಲಿ ನಡೆಯುತ್ತಿತ್ತು. ಈ ವೇಳೆ ಡ್ರೋನ್ ಶಾಟ್‌ಗಳನ್ನು ಇಡಲಾಗಿತ್ತು. ಸಂತೋಷ್ ಎಂಬುವವರು ಈ ಸಿನಿಮಾಗೆ ಡ್ರೋನ್‌ನ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಈ ವೇಳೆ ಒಂದು ಎಡವಟ್ಟು ನಡೆದು ಹೋಗಿತ್ತು. ಶೂಟಿಂಗ್ ವೇಳೆ ಡ್ರೋನ್ ಚಿತ್ರದುರ್ಗದ ವಿಂಡ್ ಫ್ಯಾನ್‌ಗೆ ತಗುಲಿ ತುಂಡಾಗಿತ್ತು. ಆದರೆ, ಚಿತ್ರತಂಡ ಮಾತ್ರ ಇದ್ಯಾವುಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ. ನಷ್ಟವನ್ನು ಭರಿಸಿಕೊಡುವುದಕ್ಕೂ ಮುಂದಾಗಿರಲಿಲ್ಲ.
ಸಂತೋಷ್ ಈ ಹಿಂದೆ 'ಯುವ', 'ಮಾರ್ಟಿನ್' ಅಂತಹ ಸಿನಿಮಾಗಳಿಗೆ ಡ್ರೋನ್ ಆಪರೇಟರ್ ಆಗಿ ಕೆಲಸ ಮಾಡಿದ್ದರು. ಇತ್ತೀಚೆಗೆ 25 ಲಕ್ಷ ರೂಪಾಯಿ ಸಾಲ ಮಾಡಿ ಡ್ರೋನ್ ಖರೀದಿ ಮಾಡಿದ್ದರು. ಅದರಲ್ಲೇ 'ಕಲ್ಟ್' ಸಿನಿಮಾದ ಶೂಟಿಂಗ್ ಮಾಡಿದ್ದರು. ಶೂಟಿಂಗ್ ವೇಳೆ ಡ್ರೋನ್ ತುಂಡಾಗಿದ್ದರಿಂದ ನಷ್ಟವನ್ನು ತುಂಬಿಕೊಡಲು ಹಿಂದೇಟು ಹಾಕಿದ್ದರು. ಇಷ್ಟೇ ಅಲ್ಲದೆ ಒಂದೂವರೆ ಲಕ್ಷ ರೂಪಾಯಿ ಮೊತ್ತದ ಮೆಮೋರಿ ಕಾರ್ಡ್ ಅನ್ನು ಕಿತ್ತುಕೊಂಡಿದೆ ಎಂಬ ಆರೋಪವಿದೆ.
ಈ ಘಟನೆಗಳಿಂದ ಮನನೊಂದ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮಾಗಡಿ ರಸ್ತೆಯ ಪೊಲೀಸ್ ಠಾಣೆಗೆ ಸಂತೋಷ್ ಅವರ ಸಹೋದರಿ ದೂರನ್ನು ದಾಖಲಿಸಿದ್ದಾರೆ. ಸದ್ಯ ಕೇಸ್ ದಾಖಲಿಸಿದ್ದು, ಚಿತ್ರತಂಡವನ್ನು ವಿಚಾರಣೆಗೆ ಹಾಜರಾಗಲು ತಂಡಕ್ಕೆ ತಿಳಿಸಿದೆ ಎನ್ನಲಾಗಿದೆ. ಡಿಸೆಂಬರ್ 3ರಂದು ವಿಚಾರಣೆ ಬಳಿಕ ಪೊಲೀಸರು ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಈ ಸಿನಿಮಾ ಝೈದ್ ಖಾನ್ ಜೊತೆಗೆ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಅನಿಲ್ ಕುಮಾರ್ ನಿರ್ದೇಶನವನ್ನು ಮಾಡುತ್ತಿದ್ದಾರೆ. ಸದ್ಯ 'ಕಲ್ಟ್' ಸಿನಿಮಾ ವಿವಾದಕ್ಕೆ ಸಿಲುಕಿದ್ದು, ಇನ್ನೂ ಈ ಘಟನೆ ಬಗ್ಗೆ ಅಧಿಕೃತ ಹೇಳಿಕೆ ಕೊಟ್ಟಿಲ್ಲ.


Click it and Unblock the Notifications











