100 ರೂಪಾಯಿ ಕೊಡಿ.. ಆಮಿರ್ ಖಾನ್ ಸಿನಿಮಾ ನೋಡಿ; 'ಸಿತಾರೆ ಜಮೀನ್ ಪರ್' ಎಲ್ಲಿ? ಯಾವಾಗ ರಿಲೀಸ್?
ಬಾಲಿವುಡ್‌ನಲ್ಲಿ ಎಕ್ಸ್‌ಪೆರಿಮೆಂಟ್ ಮಾಡುವ ಸೂಪರ್‌ಸ್ಟಾರ್ ಅಂದರೆ, ಅದು ಆಮಿರ್ ಖಾನ್. ಇತ್ತೀಚೆಗೆ ತೆರೆಕಂಡಿದ್ದ ಅವರ 'ಸಿತಾರೆ ಜಮೀನ್ ಪರ್' ಸಿನಿಮಾ ಜೂನ್ 20ರಂದು ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. 'ಲಾಲ್ ಸಿಂಗ್ ಚಡ್ಡ' ಹೀನಾಯ ಸೋಲಿನ ಬಳಿಕ ಆಮಿರ್ ಖಾನ್ ಈ ಸಿನಿಮಾದಲ್ಲಿ ನಟಿಸಿದ್ದರು. ಥಿಯೇಟರ್‌ನಲ್ಲೂ 'ಸಿತಾರೆ ಜಮೀನ್ ಪರ್'ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು.
ಹೆಚ್ಚು ಕಡಿಮೆ ಒಂದು ತಿಂಗಳ ಬಳಿಕ ಆಮಿರ್ ಖಾನ್ ತಮ್ಮ ಸಿನಿಮಾವನ್ನು ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದಾರೆ. ಸಾಮಾನ್ಯವಾಗಿ ಸಿನಿಮಾವನ್ನು ಓಟಿಟಿಯಲ್ಲಿ ರಿಲೀಸ್ ಮಾಡುವ ವಾಡಿಕೆ ಇರುವಾಗಲೇ ಮಿಸ್ಟರ್ ಪರ್ಫೆಕ್ಷನಿಸ್ಟ್ ಯೂಟ್ಯೂಬ್ ಮೊರೆ ಹೋಗಿದ್ದಾರೆ. ಅದರಲ್ಲೂ ಅತೀ ಕಡಿಮೆ ಬೆಲೆಯಲ್ಲಿ ಯೂಟ್ಯೂಬ್‌ನಲ್ಲಿ ಸಿನಿಮಾ ತೋರಿಸುವುದಕ್ಕೆ ಮುಂದಾಗಿದ್ದಾರೆ. ಓಟಿಟಿಗೆ ಗೋಲಿ ಹೊಡೆದು ಯೂಟ್ಯೂಬ್ ಮೊರೆ ಹೋಗಿದ್ದರೆ ತಂತ್ರವೇನು? ತಿಳಿಯುವುದಕ್ಕೆ ಮುಂದೆ ಓದಿ.

ಸೋಲಿನ ಬಳಿಕ ಆಮಿರ್ ಖಾನ್ ಜಾಗರೂಕರಾಗಿ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದರು. ಬಾಸ್ಕೆಟ್‌ಬಾಲ್ ಕೋಚ್ ಆಗಿ ಆಮಿರ್ ಖಾನ್ ನಟಿಸಿದ್ದು, ಥಿಯೇಟರ್‌ನಲ್ಲಿ ಸಿನಿಮಾವನ್ನು ಪ್ರೇಕ್ಷಕರು ಕೂಡ ಇಷ್ಟಪಟ್ಟಿದ್ದರು. ಆದರೆ, ಸಿನಿಮಾ ಬಿಡುಗಡೆ ವೇಳೆನೇ ಆಮಿರ್ ಖಾನ್ ಈ ಸಿನಿಮಾವನ್ನು ಯೂಟ್ಯೂನ್‌ನಲ್ಲಿ ರಿಲೀಸ್ ಮಾಡುವುದಾಗಿ ಸುಳಿವನ್ನು ನೀಡಿದ್ದರು. ಅದರಂತೆ ತಮ್ಮ 'ಸಿತಾರೆ ಜಮೀನ್ ಪರ್' ಸಿನಿಮಾವನ್ನು ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡುವುದಕ್ಕೆ ಮುಹೂರ್ತವನ್ನು ಫಿಕ್ಸ್ ಮಾಡಿದ್ದಾರೆ.
ಆಮಿರ್ ಖಾನ್ ಸಿನಿಮಾ ಓಟಿಟಿಗೆ ದೊಡ್ಡ ಮೊತ್ತಕ್ಕೆ ಸೇಲ್ ಆಗುತ್ತೆ. ಇದರ ಹೊರತಾಗಿಯೂ ಆಮಿರ್ ಖಾನ್ ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ನಿರ್ಧಾರದ ಹಿಂದೆ ಹಣಕಾಸಿನ ಲೆಕ್ಕಾಚಾರವಿದೆ. ಒಂದು ವೇಳೆ ಆಮಿರ್ ಖಾನ್ ಯೂಟ್ಯೂಬ್‌ನಲ್ಲಿ ಸಿನಿಮಾ ರಿಲೀಸ್ ಮಾಡಿ ಗೆದ್ದರೆ, ಥಿಯೇಟರ್ ಹಾಗೂ ಓಟಿಟಿ ವೇದಿಕೆಗಳಿಗೆ ದೊಡ್ಡ ಪೆಟ್ಟು ಬೀಳಬಹುದು. ಅದ್ಹೇಗೆ ಓಟಿಟಿಗೆ ಹಾಗೂ ಥಿಯೇಟರ್‌ಗೆ ನಷ್ಟ ಆಗುತ್ತೆ? ಆಮಿರ್ ಖಾನ್ ಲೆಕ್ಕಾಚಾರವೇನು?
ಜುಲೈ 29ರಂದು ಆಮಿರ್ ಖಾನ್ ಪತ್ರಿಕಾಗೋಷ್ಠಿಯಲ್ಲಿ 'ಸಿತಾರೆ ಜಮೀನ್ ಪರ್' ಸಿನಿಮಾವನ್ನು ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದೇ ಆಗಸ್ಟ್ 1ರಿಂದ ಈ ಸಿನಿಮಾ ಅವರ ಆಮಿರ್ ಖಾನ್ ಟಾಕೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಹಾಗಂತ ಈ ಸಿನಿಮಾವನ್ನು ಫ್ರೀಯಾಗಿ ನೋಡುವುದಕ್ಕೆ ಸಾಧ್ಯವಿಲ್ಲ. 100 ರೂಪಾಯಿ ಪಾವತಿಸಿ 'ಸಿತಾರೆ ಜಮೀನ್ ಪರ್' ಸಿನಿಮಾವನ್ನು ಯೂಟ್ಯೂಬ್‌ನಲ್ಲಿ ನೋಡಬಹುದಾಗಿದೆ. ಹೀಗಾಗಿ ಯಾವುದೇ ಓಟಿಟಿ ವೇದಿಕೆಗಳಿಗೆ ಸಬ್‌ಸ್ಕ್ರೈಬ್ ಆಗಬೇಕಿಲ್ಲ.

ಇದೇ ವಿಷಯದ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಆಮಿರ್ ಖಾನ್ ಯೂಟ್ಯೂಬ್‌ನಲ್ಲಿ ತಮ್ಮ ಸಿನಿಮಾ ರಿಲೀಸ್ ಮಾಡುತ್ತಿರುವುದಕ್ಕೆ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. "ದೇಶದ ಜನಸಂಖ್ಯೆಯ ಕೇವಲ 2-3% ರಷ್ಟು ಮಾತ್ರ ಜನರು ಥಿಯೇಟರ್‌ಗಳಲ್ಲಿ ಸಿನಿಮಾಗಳನ್ನು ವೀಕ್ಷಿಸುತ್ತಾರೆ. ದೇಶದಲ್ಲಿ ಯುಪಿಐ ಅನ್ನು ಪರಿಚಯಿಸಿದ ಬಳಿಕ ಭಾರತೀಯರಿಗೆ ಡಿಜಿಟಲ್ ಪಾವತಿಗಳು ತುಂಬಾ ಅನುಕೂಲಕರವಾಗಿವೆ. ಇದು ಡಿಜಿಟಲ್ ವೇದಿಕೆಗೆ ಬರಲು ಸರಿಯಾದ ಸಮಯ" ಎಂದು ಆಮಿರ್ ಖಾನ್ ಹೇಳಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಆಮಿರ್ ಖಾನ್ 'ಜನತಾ ಕಾ ಥಿಯೇಟರ್' ಎಂದು ಕರೆದಿದ್ದಾರೆ. "ಯೂಟ್ಯೂಬ್ ಅನ್ನು ಬಹುತೇಕ ಎಲ್ಲರೂ ಬಳಸುತ್ತಾರೆ. ಟಿವಿ, ಮೊಬೈಲ್, ಟ್ಯಾಬ್ ಅಂತಹ ಸಾಧನಗಳಲ್ಲಿ ಇದನ್ನು ಬಳಸಬಹುದು. ಸುಮಾರು 55 ಕೋಟಿ ಭಾರತೀಯರು ಪ್ರತಿ ದಿನ ಯೂಟ್ಯೂಬ್‌ಗೆ ವಿಸಿಟ್ ಹಾಕುತ್ತಾರೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಸಿನಿಮಾ ಹಣವನ್ನು ಸಂಪಾದನೆ ಮಾಡಬಹುದೆಂಬುದು ಆಮಿರ್ ಖಾನ್ ಲೆಕ್ಕಾಚಾರ. ಒಂದು ವೇಳೆ ಈ ಸ್ಟ್ರಾಟಜಿ ವರ್ಕ್ ಆದರೆ, ಸಿನಿಮಾ ಮಂದಿಗೆ ಓಟಿಟಿ ಹಾಗೂ ಥಿಯೇಟರ್‌ಗಳ ಮೇಲೆ ಅವಲಂಭಿಸೋದು ಕಡಿಮೆ ಆಗಬಹುದು.


Click it and Unblock the Notifications











