ಪ್ರತಿ ಭಾನುವಾರ.. 60 ನಿಮಿಷ.. 15 ವಾರ.. ಇದ್ಯಾವುದು ಪ್ಯಾನ್ ಇಂಡಿಯಾ ರಿಯಾಲಿಟಿ ಶೋ 'ಬಿಗ್ ಪಿಚ್ಚರ್'?
ಕಿರುತೆರೆ, ಓಟಿಟಿ ವೇದಿಕೆಗಳಲ್ಲಿ ರಿಯಾಲಿಟಿ ಶೋಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಭಾರತದ ದುಬಾರಿ ರಿಯಾಲಿಟಿ ಶೋ 'ಬಿಗ್ ಬಾಸ್' ದೇಶಾದ್ಯಂತ ದೊಡ್ಡ ಮಟ್ಟಕ್ಕೆ ಜನಪ್ರಿಯವಾಗಿದೆ. ಭಾರತದ ಪ್ರಮುಖ ಭಾಷೆಗಳಲ್ಲಿ ಬಿಗ್ ಬಾಸ್ ಪ್ರಸಾರವಾಗುತ್ತಿದೆ. ಈ ಬೆನ್ನಲ್ಲೇ ಹಲವು ವಿಭಿನ್ನ ಕಲ್ಪನೆಯಲ್ಲಿ ರಿಯಾಲಿಟಿ ಶೋಗಳು ಪ್ರಸಾರ ಆಗಿವೆ. ಈ ಸಾಲಿಗೆ ಮತ್ತೊಂದು ರಿಯಾಲಿಟಿ ಶೋ ಆರಂಭ ಆಗುತ್ತಿದೆ.
ಹೌದು, ಭಾರತೀಯ ಮನರಂಜನಾ ಲೋಕದ ದಿಕ್ಕನ್ನೇ ಬದಲಿಸುವುದಕ್ಕೆ ಹೊಸ ರಿಯಾಲಿಟಿ ಶೋ ಆರಂಭ ಆಗುತ್ತಿದೆ. ಅದು ಅಂತಿಂಥ ರಿಯಾಲಿಟಿ ಶೋ ಅಲ್ಲ. ಇದು ಭಾರತದ ಮೊದಲ ಪ್ಯಾನ್ ಇಂಡಿಯಾ ರಿಯಾಲಿಟಿ ಶೋ ಎಂದು ಹೇಳಲಾಗುತ್ತಿದೆ. 'ಗ್ಯಾಮೆನ್ ಸ್ಪೋರ್ಟ್ಸ್ ಅಂಡ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆ ಈ ಪ್ಯಾನ್ ಇಂಡಿಯಾ ರಿಯಾಲಿಟಿ ಶೋ 'ಬಿಗ್ ಪಿಚ್ಚರ್' ಅನ್ನು ನಿರ್ಮಾಣ ಮಾಡುತ್ತಿದೆ.

ಇದು ರೆಗ್ಯೂಲರ್ ರಿಯಾಲಿಟಿ ಶೋ ಅಲ್ಲ. ಇದೇ ಮೊದಲ ಬಾರಿಗೆ ಇಂತಹ ವಿಭಿನ್ನ ಕಾನ್ಸೆಪ್ಟ್‌ನ ರಿಯಾಲಿಟಿ ಶೋ ಬರುತ್ತಿದೆ. ಇದು ಪ್ರೇಕ್ಷಕರಿಗೆ ಟಾಸ್ಕ್ ಕೊಡುವ ರಿಯಾಲಿಟಿ ಶೋ. ಹಾಗಿದ್ದರೆ, 'ಬಿಗ್ ಪಿಕ್ಚರ್' ರಿಯಾಲಿಟಿ ಶೋನ ಹೈಲೈಟ್ ಏನು? ಕಾನ್ಸೆಪ್ಟ್ ಏನು? ನಿರೂಪಣೆ ಮಾಡೋದು ಯಾರು? ತಿಳಿಯುವುದಕ್ಕೆ ಮುಂದೆ ಓದಿ.
'ಗ್ಯಾಮೆನ್ ಸ್ಪೋರ್ಟ್ಸ್ ಅಂಡ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್' ಇದನ್ನು ಕ್ರಾಂತಿಕಾರಿ ಈ ರಿಯಾಲಿಟಿ ಶೋ ಎಂದು ಹೇಳಿಕೊಂಡಿದೆ. ಈ ಶೋದ ಕಾನ್ಸೆಪ್ಟ್ ವಿಭಿನ್ನವಾಗಿದೆ. ಪ್ರೇಕ್ಷಕರ ಕೈಗೆ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ನೀಡುವ ವಿಭಿನ್ನ ಶೋ ಆಗಿದೆ. ಒಟ್ಟು ಐದು ಭಾಷೆಗಳಲ್ಲಿ ಈ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. "ನೀವು ಯಾವಾಗಲೂ ಸಿನಿಮಾಗಳನ್ನು ವಿಮರ್ಶಿಸಿದ್ದೀರಿ, ಈಗ ನೀವೇ ಒಂದು ಸಿನಿಮಾ ಮಾಡಿ" ಎಂಬ ಸವಾಲನ್ನು ದೇಶದ ಜನರ ಮುಂದೆ ಈ ಶೋ ಇಟ್ಟಿದೆ.
ಇತ್ತೀಚೆಗೆ ಯಾರು ಬೇಕಾದರೂ ಸಿನಿಮಾ ವಿಮರ್ಶೆ ಮಾಡುತ್ತಾರೆ. ಸಿನಿಮಾ ರಿಲೀಸ್ ಆದ ತಕ್ಷಣವೇ ಸ್ಮಾರ್ಟ್ ಫೋನ್‌ಗಳಲ್ಲಿ ರಿವ್ಯೂ ಮಾಡಿ ಹಾಕುತ್ತಿದ್ದಾರೆ. ಅದನ್ನೇ ಗಮನದಲ್ಲಿ ಇಟ್ಕೊಂಡು ಹೀಗೆ ವಿಮರ್ಶೆ ಮಾಡುವವರಿಗೆ ಸಿನಿಮಾ ಮಾಡುವ ಸವಾಲು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ 'ಬಿಗ್ ಪಿಚ್ಚರ್' ರಿಯಾಲಿಟಿ ಶೋನ ಕಾನ್ಸೆಪ್ಟ್ ಅನ್ನು ಡಿಸೈನ್ ಮಾಡಲಾಗಿದೆ.
ಅಂದ್ಹಾಗೆ 'ಬಿಗ್ ಪಿಕ್ಚರ್' ರಿಯಾಲಿಟಿ ಶೋನ ಹೈಲೈಟ್ ಏನಂದ್ರೆ, ಇದು 15 ವಾರಗಳ ಕಾಲ ನಡೆಯಲಿದೆ. ಇಲ್ಲಿ ಪ್ರೇಕ್ಷಕರನ್ನೇ ಕಥೆಗಾರರು, ನಿರ್ದೇಶಕರು, ನಟರು ಹಾಗೂ ನಿರ್ಣಯಕಾರರನ್ನಾಗಿ ಮಾಡುತ್ತದೆ. ಇಷ್ಟೇ ಅಲ್ಲದೆ, ಈ ಶೋನ ಅಂತ್ಯದಲ್ಲಿ "ಜನರಿಂದ, ಜನರಿಗಾಗಿ" ತಯಾರಾದ ಸಿನಿಮಾ ದೇಶಾದ್ಯಂತ ಥಿಯೇಟರ್‌ಗಳಲ್ಲಿಯೂ ಬಿಡುಗಡೆಯಾಗುತ್ತಿದೆ. ಈ ರಿಯಾಲಿಟಿ ಶೋನ ಕನ್ನಡ ಅವತರಣೆಕೆಯನ್ನು ನಟ ವಸಿಷ್ಠ ಸಿಂಹ ನಿರೂಪಣೆ ಮಾಡುತ್ತಿದ್ದಾರೆ.
ಗ್ಯಾಮೆನ್ ಸ್ಪೋರ್ಟ್ಸ್ ಅಂಡ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ನಿರ್ಮಾಪಕ ಮಿ. ರಾವ್ ಈ ಶೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಪ್ರತಿ ಶುಕ್ರವಾರ ಬಿಡುಗಡೆಯಾಗುವ ಸಿನಿಮಾದ ವರ್ಷಗಳ ಕಠಿಣ ಶ್ರಮವನ್ನು ಕೇವಲ ಕೆಲವು ನಿಮಿಷಗಳ ವಿಮರ್ಶೆಯಲ್ಲಿ ಅಳೆದು ಹಾಕಲಾಗುತ್ತದೆ. 'ಬಿಗ್ ಪಿಚ್ಚರ್' ಮೂಲಕ ನಾವು ಈ ಚಿತ್ರಣವನ್ನು ಬದಲಿಸಲು ಹೊರಟಿದ್ದೇವೆ. ಸಿನಿಮಾ ನಿರ್ಮಾಣದ ಒತ್ತಡ ಮತ್ತು ಅದರ ಗಾಂಭೀರ್ಯ ಪ್ರೇಕ್ಷಕರಿಗೆ ತಿಳಿಯಬೇಕು ಎಂಬುದು ಈ ರಿಯಾಲಿಟಿ ಶೋನ ಆಸೆ" ಎಂದು ಹೇಳಿದ್ದಾರೆ.
ಇನ್ನು 15 ವಾರ ನಡೆಯುವ ಈ ರಿಯಾಲಿಟಿ ಶೋ ಪ್ರತಿ ಭಾನುವಾರ ಪ್ರಸಾರ ಆಗಲಿದೆ. ಪ್ರತಿ ಸಂಚಿಕೆ 60 ನಿಮಿಷಗಳ ಕಾಲ ಪ್ರಸಾರ ಆಗಲಿದೆ. ಅಂತಿಮ ಸಂಚಿಕೆಯಲ್ಲಿ ವಿಜೇತರನ್ನು ಘೋಷಿಸಲಾಗುವುದು. ಅವರೆಲ್ಲರೂ ಸೇರಿ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಶೋನ ಕನ್ನಡ ಅವೃತ್ತಿಗೆ ವಸಿಷ್ಠ ಎನ್.ಸಿಂಹ ನಿರೂಪಣೆ ಮಾಡುತ್ತಿದ್ದಾರೆ.
"ಕನ್ನಡ ಚಿತ್ರರಂಗವು ಯಾವಾಗಲೂ ಸಿನಿಮಾ ಪ್ರೇಮಿಗಳ ಪ್ರೀತಿಯಿಂದಲೇ ಬೆಳೆದಿದೆ. ಈಗ ಇದೇ ಮೊದಲ ಬಾರಿಗೆ ಅಭಿಮಾನಿಗಳು ಕೇವಲ ಪ್ರೇಕ್ಷಕರಾಗಿ ಉಳಿಯದೆ, ನಿರ್ದೇಶಕನ ಕುರ್ಚಿಯಲ್ಲಿ ಕುಳಿತುಕೊಳ್ಳಲಿದ್ದಾರೆ " ಎಂದು ಈ ಪ್ಯಾನ್ ಇಂಡಿಯಾ ರಿಯಾಲಿಟಿ ಶೋ 'ಬಿಗ್ ಪಿಕ್ಚರ್' ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನೋಂದಣಿ ಪ್ರಕ್ರಿಯೆ ಹೇಗೆ?
ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಆಸಕ್ತಿ ಉಳ್ಳ ಬರಹಗಾರರು, ನಟರು, ತಂತ್ರಜ್ಞರು ಮತ್ತು ಸಂಗೀತಗಾರರು ತಮ್ಮ ಅಧಿಕೃತ ವೆಬ್‌ಸೈಟ್ www.bigpitchure.in ಅಥವಾ 'Big Pitchure' ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಅಧಿಕೃತವಾಗಿ ಎಂಟ್ರಿ ಕೊಡಬಹುದು. ಹಾಗೇ ಬೆಂಗಳೂರಿನ ಗೋಪಾಲನ್ ಮಾಲ್‌ನಲ್ಲಿ ಆಡಿಷನ್‌ಗಳು ಆರಂಭ ಆಗುತ್ತಿವೆ.


Click it and Unblock the Notifications
