ಬಾಕ್ಸಾಫೀಸ್‌ನಲ್ಲಿ ಹೀನಾಯ ಸೋಲು: 3 ವಾರಗಳಲ್ಲೇ OTTಗೆ ಅಖಿಲ್ 'ಏಜೆಂಟ್': ಎಲ್ಲಿ? ಯಾವಾಗ?
ಕಳೆದ ವಾರವಷ್ಟೇ ಅಕ್ಕಿನೇನಿ ಕುಟುಂಬದ ಕುಡಿ ಅಖಿಲ್ ಅಭಿನಯದ ಸಿನಿಮಾ 'ಏಜೆಂಟ್' ರಿಲೀಸ್ ಆಗಿತ್ತು. ಅಖಿಲ್ ಅಕ್ಕಿನೇನಿ, ಮಮ್ಮುಟ್ಟಿಯ ಈ ಸ್ಪೈ ಥ್ರಿಲ್ಲರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯಾವಾಗಿ ಸೋತು ಮಕಾಡೆ ಮಲಗಿದೆ.
'ಏಜೆಂಟ್' ಸಿನಿಮಾ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಂತೆ ಸಿನಿಮಾ ನಿರ್ಮಾಪಕ ಅನಿಲ್ ಸುಂಕರ ಸೋಲು ಒಪ್ಪಿಕೊಂಡಿದ್ದಾರೆ. ಮಲಯಾಳಂ ಟಾಪ್ ನಟ ಮಮ್ಮುಟ್ಟಿ, ಬಾಲಿವುಡ್ ನಟ ಡಿನೋ ಮೋರಿಯಾದಂತಹ ಸ್ಟಾರ್ ನಟರು ನಟಿಸಿದ್ದರೂ ಸಿನಿಮಾ ಜನ ಮನಸ್ಸನ್ನು ಗೆಲ್ಲಲಿಲ್ಲ.

'ಸೈರಾ ನರಸಿಂಹ ರೆಡ್ಡಿ'ಯಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಸುರೇಂದ್ರ ರೆಡ್ಡಿ 'ಏಜೆಂಟ್'ಗೆ ಆಕ್ಷನ್ ಕಟ್ ಹೇಳಿದ್ದರು. ಹೀಗಿದ್ದರೂ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿದೆ. ಈ ಕಾರಣಕ್ಕೆ ಬಿಡುಗಡೆಯಾದ ಮೂರು ವಾರಗಳಲ್ಲಿಯೇ ಸಿನಿಮಾ ಓಟಿಟಿಗೆ ಲಗ್ಗೆ ಇಡುತ್ತಿದೆ.
'ಏಜೆಂಟ್' OTT ರಿಲೀಸ್ ಯಾವಾಗ?
ಟಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಲು ಪರದಾಡುತ್ತಿರೋ ಅಖಿಲ್ ಅಕ್ಕಿನೇನಿಗೆ 'ಏಜೆಂಟ್' ಗೆಲ್ಲಬೇಕಿತ್ತು. ಅದಕ್ಕಾಗಿ ತಯಾರಿ ಕೂಡ ನಡೆಸಿದ್ದರು. ಆದರೂ, ಗೆಲುವು ಅಕ್ಕಿನೇನಿ ಕೈ ಹಿಡಿಯಲಿಲ್ಲ. ಹೀಗಾಗಿ ರಿಲೀಸ್ ಆದ ಮೂರು ವಾರಗಳ ಅಂತರದಲ್ಲಿಯೇ ಓಟಿಟಿಗೆ ಲಗ್ಗೆ ಇಡಲು ತಯಾರಿ ನಡೆಸಿದೆ.
ಅಂದ್ಹಾಗೆ, 'ಏಜೆಂಟ್' ಓಟಿಟಿ ರೈಟ್ಸ್ ಅನ್ನು ಸೋನಿ ಲಿವ್ ಪಡೆದುಕೊಂಡಿದೆ. ಥಿಯೇಟರ್‌ಗಳಲ್ಲಿ ಸಿನಿಮಾ ಸೋಲು ಕಂಡಿರುವ ಬೆನ್ನಲ್ಲೇ ಮೇ 19ರಂದು ಗ್ರ್ಯಾಂಡ್ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದೆ. ಈಗಾಗಲೇ ಸಿನಿಮಾ ಬಿಡುಗಡೆಯಾಗಿ ಒಂದು ವಾರ ಆಗಿದೆ. ಇನ್ನು ಎರಡು ವಾರಗಳಲ್ಲಿ ಓಟಿಟಿಗೆ ಲಗ್ಗೆ ಇಡುತ್ತಿದೆ.

ಸ್ಟಾರ್ ಸಿನಿಮಾ OTTಗೆ ಬಂದಿದ್ದು ಇದೇ ಮೊದಲು
'ಏಜೆಂಟ್' ಸಿನಿಮಾ ಇದೇ ಏಪ್ರಿಲ್ 28ರಂದು ಥಿಯೇಟರ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿತ್ತು. ಆದರೆ, ಸ್ಟಾರ್ ನಟನ ಸಿನಿಮಾವೊಂದು ಮೂರು ವಾರಗಳಲ್ಲಿಯೇ ಓಟಿಟಿಗೆ ಲಗ್ಗೆ ಇಡುತ್ತಿರುವುದು ಎನ್ನಲಾಗಿದೆ. ಹಿಂದೆಂದೂ ಸ್ಟಾರ್ ನಟನ ಸಿನಿಮಾ ಮೂರನೇ ವಾರಕ್ಕೆ ಓಟಿಟಿಗೆ ಬಂದಿರೋ ಉದಾಹರಣೆಗಳಿಲ್ಲ ಎಂದು ವರದಿಯಾಗಿದೆ.
ಟಾಲಿವುಡ್‌ನಲ್ಲಿ 'ಏಜೆಂಟ್' ಭಾರೀ ನಿರೀಕ್ಷೆಗಳನ್ನು ಹುಟ್ಟಾಕಿತ್ತು. ಆದರೆ, ಮೊದಲ ಶೋನಿಂದಲೇ ಹಿನ್ನೆಡೆ ಅನುಭವಿಸಿತ್ತು. ಇನ್ನು ಎರಡನೇ ದಿನವೇ ಕಲೆಕ್ಷನ್ ಮೇಲೆ ತೀವ್ರ ಪರಿಣಾಮ ಬೀರಿದೆ. ಸಿನಿಮಾ ಮೊದಲ ದಿನವೇ 4 ಕೋಟಿ ರೂ. ಶೇರ್ ಸಿಕ್ಕಿದೆ. ಇದು ಎರಡನೇ ದಿನಕ್ಕೆ ಒಂದೂವರೆ ಕೋಟಿಗೆ ಇಳಿದಿತ್ತು. ಮೂರನೇ ದಿನದಿಂದ ಲಕ್ಷಕ್ಕೆ ಇಳಿದಿತ್ತು. ಈ ಕಾರಣಕ್ಕೆ ಓಟಿಟಿಗೆ ಲಗ್ಗೆ ಇಡಲು ಮುಂದಾಗಿದೆ ಎಂದು ಹೇಳಲಾಗಿದೆ.
ಸೋಲು ಒಪ್ಪಿಕೊಂಡ ನಿರ್ಮಾಪಕ
ಏಜೆಂಟ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋಲುಂಡಿದೆ ಎಂದು ಸ್ವತ: ನಿರ್ಮಾಪಕರೇ ಒಪ್ಪಿಕೊಂಡಿದ್ದಾರೆ. ಸ್ಕ್ರಿಪ್ಟ್ ಇಲ್ಲದೆ ಸಿನಿಮಾ ಶುರು ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. 'ಏಜೆಂಟ್' ಸಿನಿಮಾ ಒಂದು ದುಬಾರಿ ತಪ್ಪು ಎಂದು ನಿರ್ಮಾಪಕ ಅನಿಲ್ ಸುಂಕರ ಟ್ವೀಟ್ ಮಾಡಿದ್ದಾರೆ. ಹೀಗಾಗಿ ಓಟಿಟಿ ಕಡೆ ಮುಖ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಸಿನಿಮಾದ ಕಥೆ ಕಡೆ ಬರೋದಾದರೆ, ಅಖಿಲ್ ಅಕ್ಕಿನೇನಿ ಈ ಸಿನಿಮಾದಲ್ಲಿ ರಿಕಿ ಅಲಿಯಾಸ್ ರಾಮಕೃಷ್ಣ 'RAW' ಏಜೆಂಟ್ ಆಗಲು ಇಷ್ಟ ಪಡುತ್ತಾನೆ. ಪ್ರವೇಶ ಪರೀಕ್ಷೆಯನ್ನು ಮೂರು ಬಾರಿ ಬರೆದರೂ, ಸಂದರ್ಶನಗಳಲ್ಲಿ ರಿಜೆಕ್ಟ್ ಆಗುತ್ತಾನೆ. 'ರಾ' ಮುಖ್ಯಸ್ಥನಾಗಿ ನಟಿಸಿರೋ ಮಮ್ಮುಟ್ಟಿ ಗಮನ ಸೆಳೆಯಲು ಹ್ಯಾಕಿಂಗ್‌ಗೆ ಮುಂದಾಗುತ್ತಾನೆ. ಅಲ್ಲಿಂದ ರಾ ಗಮನ ಸೆಳೆಯೋ ಅಖಿಲ್ ಲೈಫ್‌ನಲ್ಲಿ ಮುಂದೇನಾಗುತ್ತೆ? ಎಂತಹ ಸಂಕಷ್ಟಕ್ಕೆ ಸಿಲುಕುತ್ತಾನೆ? ಅನ್ನೋದೇ ಸಿನಿಮಾ.


Click it and Unblock the Notifications











