ಜೀ ಶಾರ್ಟ್ ಫಿಲ್ಮ್ ನೋಡಲಿದ್ದಾರೆ ಭಾರತದ ಟಾಪ್ ನಿರ್ದೇಶಕರು; ಅನುರಾಗ್ ಕಶ್ಯಪ್, ಹೇಮಂತ್ ಮತ್ಯಾರು?
'ಜೀ' ಸಂಸ್ಥೆ ಮನರಂಜನಾ ಲೋಕದಲ್ಲಿ ವಿನೂತನ ಪ್ರಯೋಗಗಳನ್ನು ಮಾಡುತ್ತಿದೆ. ಕೆಲವು ತಿಂಗಳ ಹಿಂದಷ್ಟೇ 'ಜೀ ಕಿರುಚಿತ್ರ ಸ್ಪರ್ಧೆ'ಯನ್ನು (Zee Short Film Contest) ಆಯೋಜಿಸವ ಬಗ್ಗೆ ಮಾಹಿತಿಯನ್ನು ನೀಡಿತ್ತು. ಸಿನಿಮಾ ಕ್ಷೇತ್ರದಲ್ಲಿ ದೇಶದಾದ್ಯಂತ ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸರಿಯಾದ ವೇದಿಕೆಯನ್ನು ಕಲ್ಪಸಿ ಕೊಡುವ ಕೆಲಸಕ್ಕೆ ಜೀ ಮುಂದಾಗಿದೆ. ಇದರ ಮೊದಲ ಹೆಜ್ಜೆಯೇ ಜೀ ಶಾರ್ಟ್ ಫಿಲ್ಮ್ ಸ್ಪರ್ಧೆ.
ಭಾರತದ ಬೇರೆ ಬೇರೆ ರಾಜ್ಯಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವುದು ಈ ಸ್ಪರ್ಧೆಯ ಇನ್ನೊಂದು ಉದ್ದೇಶ. ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಬಹುಭಾಷಾ ಪ್ರತಿಭೆಯ ಅನ್ವೇಷಣೆಯ ಪ್ರಯತ್ನವನ್ನು ಮಾಡುತ್ತಿದೆ. ಕನ್ನಡ, ಹಿಂದಿ, ಮರಾಠಿ, ಬೆಂಗಾಲಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಏಳು ಪ್ರಮುಖ ಭಾಷೆಗಳಲ್ಲಿ ಈ ಕಿರುಚಿತ್ರ ಸ್ಪರ್ಧೆ ನಡೆಯಲಿದೆ. ಈ ಮೂಲಕ ಸಿನೆಮಾ ಮಾಡಲು ಹೊರಟ ಯುವ ಕಥೆಗಾರರಿಗೆ ರಾಷ್ಟ್ರ ಮಟ್ಟದ ಅವಕಾಶ ಸಿಗಲಿದೆ.

ಈ ಕಿರು ಸ್ಪರ್ಧೆಯ ಪ್ರಮುಖ ಆಕರ್ಷಣೆ ಎಂದರೆ ಭಾರತದ ಟಾಪ್ ನಿರ್ದೇಶಕರು ತೀರ್ಪುಗಾರರಾಗಿರೋದು. 'ಗ್ಯಾಂಗ್ಸ್ ಆಫ್ ವಾಸೇಪುರ್' ಸಿನಿಮಾ ಮೂಲಕ ಆಧುನಿಕ ಹಿಂದಿ ಸಿನಿಮಾ ಟ್ರೆಂಡ್ ಶುರು ಮಾಡಿದ ಅನುರಾಗ್ ಕಶ್ಯಪ್, 'ನಟರಂಗ್' ಸಿನಿಮಾ ನಿರ್ದೇಶಕ ಮರಾಠಿಯ ರವಿ ಜಾಧವ್, 'ಆಟೋಗ್ರಾಫ್' ಹಾಗೂ 'ಜಾತಿಶ್ವರ್' ಸಿನಿಮಾಗಳ ನಿರ್ದೇಶಕ ಬೆಂಗಾಲಿಯ ಸೃಜಿತ್ ಮುಖರ್ಜಿ, 'ಕಲ್ಕಿ 2898 AD' ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ನಿರ್ದೇಶಕ ತೆಲುಗಿನ ನಾಗ್ ಅಶ್ವಿನ್, ಸಾಮಾಜಿಕ ಸಿನಿಮಾಗಳನ್ನು ತೆರೆಮೇಲೆ ತಂದು ಗೆಲ್ಲುವ ತಮಿಳಿನ ಸಮುತಿರಕಾನಿ, 'ಜಲ್ಲಿಕಟ್ಟು' ಸಿನಿಮಾ ನಿರ್ದೇಶಕ ಮಲಯಾಳಂನ ಲಿಜೋ ಜೋಸ್ ಪೆಲ್ಲಿಸ್ಸೇರಿ ಹಾಗೂ ನಮ್ಮ ಕನ್ನಡದ ನಿರ್ದೇಶಕ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾಗಳ ಮೂಲಕ ಹೆಸರುವಾಸಿಯಾದ ಕನ್ನಡದ ಹೆಮಂತ್ ರಾವ್ ತೀರ್ಪುಗಾರರಾಗಿದ್ದಾರೆ.
ಇದೇ ಮೊದಲ ಬಾರಿಗೆ ಭಾರತದ ಟಾಪ್ ಡೈರೆಕ್ಟರ್‌ಗಳು ಉದಯೋನ್ಮುಖ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಆ ಒಂದು ವೇದಿಕೆಯನ್ನು ಜೀ ಸಂಸ್ಥೆ ಮಾಡಿಕೊಟ್ಟಿದೆ. ಈ ಸ್ಪರ್ಧೆಯ ಮೂಲಕ ಯುವ ಉತ್ಸಾಹಿ ನಿರ್ದೇಶಕರಿಗೆ ತಮ್ಮ ಸ್ಕಿಲ್ ಅನ್ನು ಪ್ರದರ್ಶಿಸಲು ಅವಕಾಶ ನೀಡಿದೆ. ಇಷ್ಟೇ ಅಲ್ಲದೆ, ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ನಗದು ಬಹುಮಾನಗಳ ಜೊತೆಗೆ 'ಜೀ'ನಲ್ಲಿ ಕೆಲಸ ಮಾಡುವ ಅವಕಾಶಗಳನ್ನು ಪಡೆದುಕೊಳ್ಳಲಿದ್ದಾರೆ.
ಈ ಶಾರ್ಟ್ ಫಿಲ್ಮ್ ಸ್ಪರ್ಧೆ ಬಗ್ಗೆ ಜೀ ಮತ್ತು ಜೀ 5ನ ಚೀಫ್ ಮಾರ್ಕೆಟಿಂಗ್ ಆಫೀಸರ್, ಕಾರ್ತಿಕ್ ಮಹದೇವ್ ಹೀಗಂತಾರೆ. "ಭಾರತವು ವಿಶ್ವದ ಅತ್ಯಂತ ವೈವಿಧ್ಯಮಯ ಕಥೆ ಹೇಳುವ ಸಂಸ್ಕೃತಿಗಳಿಗೆ ನೆಲೆಯಾಗಿದೆ. ಜೀ ಕಿರುಚಿತ್ರ ಸ್ಪರ್ಧೆಯ ಮೂಲಕ ನಾವು ಈ ಪ್ರತಿಭೆಗಳಿಗೆ ರಾಷ್ಟ್ರ ಮಟ್ಟದಲ್ಲಿ ಅವಕಾಶಗಳನ್ನು ಒದಗಿಸುತ್ತಿದ್ದೇವೆ. ಇದು ಕೇವಲ ಸ್ಪರ್ಧೆಯಲ್ಲ. ಬದಲಿಗೆ ಭಾರತೀಯ ಸಿನಿಮಾದ ಭವಿಷ್ಯವನ್ನು ರೂಪಿಸುವ ಹೊಸ ತಲೆಮಾರಿನ ಕಥೆಗಾರರನ್ನು ಹುಟ್ಟಾಕುವುದಕ್ಕೆ ಒಂದು ಹೆಜ್ಜೆಯಾಗಿದೆ" ಎಂದು ಹೇಳಿದ್ದಾರೆ.

ಈ ಕಿರು ಸ್ಪರ್ಧೆಯ ಬಗ್ಗೆ ಅನುರಾಗ್ ಕಶ್ಯಪ್ ಹೀಗೆ ಪ್ರತಿಕ್ರಿಯಿಸಿದ್ದಾರೆ. "ಒಂದು ಕಿರುಚಿತ್ರ ನನಗೆ ಸಿನಿಮಾ ಮಾಡುವ ಅವಕಾಶವನ್ನು ತಂದುಕೊಟ್ಟಿತು. ಸಿನಿಮಾ ನಿರ್ದೇಶಕರಾಗುವ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶ" ಎಂದಿದ್ದಾರೆ. ಹಾಗೇ ಇನ್ನೊಬ್ಬ ನಿರ್ದೇಶಕ ಸೃಜಿತ್ ಮುಖರ್ಜಿ "ಚಲನಚಿತ್ರ ನಿರ್ಮಾಣವು ಯಾವಾಗಲೂ ಹೃದಯಕ್ಕೆ ಸಂಬಂಧಿಸಿದ ವಿಷಯ. ನಿಮ್ಮ ಗುರಿಯನ್ನು ಅನುಸರಿಸಿ, ಅದು ಅಡೆತಡೆಗಳ ನಡುವೆಯೂ ನಿಮಗೆ ದಾರಿಯನ್ನು ತೋರಿಸುತ್ತದೆ" ಎಂದಿದ್ದಾರೆ. ಮಲಯಾಳಂ ನಿರ್ದೇಶಕ ಲಿಜೋ ಜೋಸ್ ಪೆಲ್ಲಿ ಹೀಗಂತಾರೆ, "ನೀವು ಒಬ್ಬ ಸಿನಿಮಾ ನಿರ್ದೇಶಕ ಎನ್ನುವ ಆತ್ಮವಿಶ್ವಾಸ ನಿಮ್ಮಲ್ಲಿದ್ದರೆ ಬನ್ನಿ, ದೊಡ್ಡ ಮಟ್ಟಕ್ಕೆ ಬೆಳೆಯಲು ಒಂದು ಕಿರುಚಿತ್ರ ಮಾಡಿ" ಎಂದು ಯುವ ನಿರ್ದೇಶಕರಿಗೆ ಕರೆ ನೀಡಿದ್ದಾರೆ.
'ಕಲ್ಕಿ' ನಿರ್ದೇಶಕ ನಾಗ್ ಅಶ್ವಿನ್ ಮಾತನಾಡಿ, " ಸಿನಿಮಾ ಇಂಡಸ್ಟ್ರಿ ಕೇವಲ ಕನಸುಗಳ ಲೋಕವಲ್ಲ. ಅದು ಕಥೆಗಳ ಲೋಕ. ನಿಮ್ಮ ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಿ" ಎಂದು ಕರೆ ನೀಡಿದ್ದಾರೆ. ಇನ್ನು ಕನ್ನಡದ ನಿರ್ದೇಶಕ ಹೇಮಂತ್ ರಾವ್ "ಸಿನಿಮಾ ಪ್ರೇಮ ಅನ್ನೋದು ಎಂದಿಗೂ ಗುಣವಾಗದ ಕಾಯಿಲೆ. ನಿಮ್ಮೊಳಗೆ ಕಾಡುತ್ತಿರುವ ಕಥೆ ಇದೆಯೇ? ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ" ಎಂದಿದ್ದಾರೆ. ಮರಾಠಿ ನಿರ್ದೇಶಕ ರವಿ ಜಾಧವ್ "ಸಿನಿಮಾಗೆ ಪ್ರತಿಭೆ, ಉತ್ಸಾಹ ಮತ್ತು ದೃಷ್ಟಿ ಮುಖ್ಯ. ಅವು ನಿಮ್ಮಲ್ಲಿದ್ದರೆ ಈ ಸ್ಪರ್ಧೆ ನಿಮಗೆ ಸರಿಯಾದ ಆಯ್ಕೆ" ಎಂದು ಹೇಳಿದ್ದಾರೆ. ಹಾಗೇ ಸಮುತಿರಕಾನಿ "ನಿಮ್ಮ ಕಿರುಚಿತ್ರವನ್ನು ಕಳುಹಿಸಿ ಮತ್ತು ದೇಶದ ಪ್ರಸಿದ್ಧ ನಿರ್ದೇಶಕರ ಮುಂದೆ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇರುವ ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಿ" ಎಂದು ಹೇಳಿದ್ದಾರೆ.


Click it and Unblock the Notifications











