Pritam & Pedro: ಓಟಿಟಿಗೆ ರಾಜ್‌ಕುಮಾರ್ ಹಿರಾನಿ ಎಂಟ್ರಿ; 'ಪ್ರೀತಂ & ಪೆಡ್ರೋ' ಯಾರಿವರು? ರಿಲೀಸ್ ಯಾವಾಗ?
ಬಾಲಿವುಡ್‌ನಲ್ಲಿ ವಿಶಿಷ್ಟ ಪರಿಕಲ್ಪನೆಯ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ನಿರ್ದೇಶಕ ರಾಜ್‌ಕುಮಾರ್ ಹಿರಾನಿ. ಇವರ ಸಿನಿಮಾಗಳಿಗೆ ಪ್ರತ್ಯೇಕ ಫ್ಯಾನ್ ಫಾಲೋವಿಂಗ್ ಇದೆ. ಆದರೆ, ಅವರು ನಿರ್ದೇಶಿಸೋ ಸಿನಿಮಾಗಳು ಎರಡು-ಮೂರು ವರ್ಷಕ್ಕೆ ಒಂದು ರಿಲೀಸ್ ಆಗುತ್ತವೆ. ಹಾಗಾಗಿ ನಿರೀಕ್ಷೆಗಳು ಕೂಡ ಬೆಟ್ಟದಷ್ಟು ಇರುತ್ತವೆ. ಆ ಕಾತುರವನ್ನು ತಣಿಸುವುದಕ್ಕೆ ರಾಜ್‌ಕುಮಾರ್ ಹಿರಾನಿ ಓಟಿಟಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ರಾಜ್‌ಕುಮಾರ್ ಹಿರಾನಿ ಬರೆದಿರೋ ಕಥೆಯೀಗ ವೆಬ್ ಸೀರಿಸ್ ಸ್ವರೂಪ ಪಡೆದುಕೊಂಡಿದೆ. ಅದುವೇ 'ಪ್ರೀತಂ & ಪೆಡ್ರೋ'. ಈ ವೆಬ್ ಸೀರಿಸ್ ಮೊದಲ ಲುಕ್ ಮೂಲಕವೇ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಈ ಬೆನ್ನಲ್ಲೇ 'ಪ್ರೀತಂ & ಪೆಡ್ರೋ' ವೆಬ್ ಸೀರಿಸ್‌ನ ಅಧಿಕೃತ ಟ್ರೈಲರ್ ಈಗ ರಿಲೀಸ್ ಆಗಿದೆ. ಹಾಸ್ಯ, ರಹಸ್ಯ,ಅನಿರೀಕ್ಷಿತ ತಿರುವುಗಳಿಂದ ಕೂಡಿರುವ ಈ ವೆಬ್ ಸೀರಿಸ್ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡುವುದಕ್ಕೆ ಸಜ್ಜಾಗಿದೆ.

ರಾಜ್‌ಕುಮಾರ್ ಹಿರಾನಿ ಸೃಷ್ಟಿಸಿದ ಈ ಕಥೆಯನ್ನು ಅವಿನಾಶ್ ಅರುಣ್ ನಿರ್ದೇಶನ ಮಾಡಿದ್ದಾರೆ. ಅರ್ಶದ್ ವಾರ್ಸಿ ಮತ್ತು ವಿಕ್ರಾಂತ್ ಮ್ಯಾಸ್ಸೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ಪ್ರೀತಂ & ಪೆಡ್ರೋ' ಈ ವೆಬ್ ಸೀರಿಸ್ ಮುಂದಿನ ತಿಂಗಳು ಅಂದರೆ, ಜುಲೈ 3 ರಿಂದ ಜಿಯೋಹಾಟ್‌ಸ್ಟಾರ್ ನಲ್ಲಿ ಪ್ರೀಮಿಯರ್ ಆಗುತ್ತಿದೆ. ಹಾಗಿದ್ದರೆ, ಈ ವೆಬ್ ಸೀರಿಸ್‌ನ ಹೈಲೈಟ್ಸ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ಪ್ರೀತಂ & ಪೆಡ್ರೋ' ಕಥೆಯೇನು?
ರಾಜ್‌ಕುಮಾರ್ ಹಿರಾನಿ ಸೃಷ್ಟಿಸಿದ ಕಥೆ ಗೋವಾದ ಸುಂದರ ಹಿನ್ನೆಲೆಯಲ್ಲಿ ನಡೆಯುವ ಈ ಕಥೆ. ಸಂಪೂರ್ಣ ವಿಭಿನ್ನ ವ್ಯಕ್ತಿತ್ವದ ಇಬ್ಬರು ವ್ಯಕ್ತಿಗಳು ವಿಚಿತ್ರ ಪರಿಸ್ಥಿತಿಯಲ್ಲಿ ಮುಖಾಮುಖಿಯಾಗುವ ರೋಚಕ ಜರ್ನಿಯನ್ನು ಹೇಳುವುದಕ್ಕೆ ಹೊರಟಿದ್ದಾರೆ. ಪೆಡ್ರೋ (ಅರ್ಶದ್ ವಾರ್ಸಿ) ತನ್ನ ಅಂತರ್ದೃಷ್ಟಿಯನ್ನೇ ನಂಬಿ ನಡೆಯುವ ಹಳೆಯ ಶೈಲಿಯ ಪೊಲೀಸ್ ಅಧಿಕಾರಿ. ಇತ್ತ ಪ್ರೀತಂ (ವಿಕ್ರಾಂತ್ ಮ್ಯಾಸ್ಸೆ) ಚುರುಕು ಬುದ್ಧಿ, ತಂತ್ರಜ್ಞಾನದಲ್ಲಿ ಪಳಗಿದ ಯುವಕ. ಇವರಿಬ್ಬರೂ ಸೇರಿ ತಮ್ಮ ಕಲ್ಪನೆಗೂ ಮೀರಿದ ರಹಸ್ಯವೊಂದರಲ್ಲಿ ಸಿಕ್ಕಿಕೊಳ್ಳುತ್ತಾರೆ. ಇವರಿಬ್ಬರ ಪಯಣ ಮುಂದೆ ಸಾಗಿದಂತೆ ರಹಸ್ಯಗಳು ಇನ್ನೂ ಆಳವಾಗುತ್ತಾ ಹೋಗುತ್ತವೆ. ಅವರವರ ನಂಬಿಕೆಗಳು ಪರೀಕ್ಷೆಗೊಳಗಾಗುತ್ತವೆ, ಪ್ರತಿ ಹಂತದಲ್ಲೂ ಗೊಂದಲಗಳು ಸೃಷ್ಟಿಯಾಗುತ್ತವೆ.
ಸ್ಟಾರ್ ಕಾಸ್ಟ್ ಹೇಗಿದೆ?
ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಜಕುಮಾರ್ ಹಿರಾನಿ ಅವರ ಪರಿಕಲ್ಪನೆಯ ಈ ಸಿನಿಮಾದಲ್ಲಿ ಅರ್ಶದ್ ವಾರ್ಸಿ, ವಿಕ್ರಾಂತ್ ಮ್ಯಾಸ್ಸೆ ನಟಿಸಿದ್ದಾರೆ. ಇವರೊಂದಿಗೆ ರಾಜ್‌ಕುಮಾರ್ ಹಿರಾನಿ ಪುತ್ರ ವೀರ್ ಹಿರಾಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಮೋನಾ ಸಿಂಗ್ ಮತ್ತು ಬೋಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಜಕುಮಾರ್ ಹಿರಾನಿ ಅವರ ವಿಶಿಷ್ಟ ಶೈಲಿಯ ನಿರೂಪಣೆ, ಹಾಸ್ಯ ಮತ್ತು ಸಸ್ಪೆನ್ಸ್ ಇರುವ ಈ ವೆಬ್ ಸೀರಿಸ್‌ಗಾಗಿ ಸಿನಿ ಪ್ರಿಯರು ಕಾದು ಕೂತಿದ್ದಾರೆ.

ಏನು ಹೇಳ್ತಿದೆ ಟೀಮ್?
ರಾಜಕುಮಾರ್ ಹಿರಾನಿ ತಾವು ಸೃಷ್ಟಿಸಿದ ಕಥೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ವಿಭಿನ್ನ ವ್ಯಕ್ತಿತ್ವದ ಇಬ್ಬರು ವ್ಯಕ್ತಿಗಳ ನಡುವಿನ ಅನಿರೀಕ್ಷಿತ ಸಂಬಂಧವೇ ತನ್ನನ್ನು ಆಕರ್ಷಣೆ ಮಾಡಿದೆ. ಪಾತ್ರಗಳ ದೌರ್ಬಲ್ಯ, ವೈಶಿಷ್ಟ್ಯ ಮತ್ತು ಅವುಗಳ ನಡುವಿನ ಮೋಜಿನ ಜರ್ನಿಯನ್ನು ಅನ್ವೇಷಿಸಲು ಈ ವೆಬ್ ಸೀರಿಸ್ ಅದ್ಭುತ ಅವಕಾಶ ನೀಡಿದೆ. ವೀಕ್ಷಕರು ಇದನ್ನು ಜಿಯೋಹಾಟ್‌ಸ್ಟಾರ್‌ನಲ್ಲಿ ಆನಂದಿಸುವುದನ್ನು ನೋಡುವುದಕ್ಕೆ ಕಾಯುತ್ತಿದ್ದೇನೆ" ಎಂದು ಹೇಳಿದ್ದಾರೆ.
ಇನ್ನು ಜಿಯೋ ಹಾಟ್‌ಸ್ಟಾರ್‌ನ ಆಲೋಕ್ ಜೈನ್ "ಅತ್ಯುತ್ತಮ ಕಥೆಗಳು ಕೇವಲ ಕೆಲವರಿಗೆ ಸೀಮಿತವಾಗಿರದೆ ಎಲ್ಲರನ್ನೂ ತಲುಪಬೇಕು. 'ಪ್ರೀತಂ & ಪೆಡ್ರೋ' ಜನರ ದಿನನಿತ್ಯದ ಜೀವನದ ಭಾಗವಾಗಲಿದೆ. ಉದ್ಯೋಗಕ್ಕೆ ಹೋಗುವಾಗ, ಸಂಜೆಯ ವಿಶ್ರಾಂತಿ ವೇಳೆಯಲ್ಲಿ ಅಥವಾ ಕುಟುಂಬದೊಂದಿಗೆ ಕಳೆಯುವ ಕ್ಷಣಗಳಲ್ಲಿ ಇದು ಮನರಂಜಿಸಲಿದೆ. ರಾಜಕುಮಾರ್ ಹಿರಾಣಿ ಅವರಂತಹ ಅಪ್ರತಿಮ ಕಥೆಗಾರರನ್ನು ಡಿಜಿಟಲ್ ಸ್ಟ್ರೀಮಿಂಗ್‌ಗೆ ಕರೆತರುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ" ಎಂದು ಹೇಳಿದ್ದಾರೆ.
"ಪ್ರೇಕ್ಷಕರನ್ನು ಪ್ರತಿ ಹಂತದಲ್ಲೂ ಆಶ್ಚರ್ಯಚಕಿತಗೊಳಿಸುವ ಶಕ್ತಿ 'ಪ್ರೀತಂ & ಪೆಡ್ರೋ'ಗಿದೆ. ಇದು ಹಾಸ್ಯ ಹಾಗೂ ಗೊಂದಲಗಳ ಜೊತೆಗೆ ಮಾನವೀಯ ಸಂಬಂಧಗಳಲ್ಲಿ ಆಳವಾಗಿ ಬೇರೂರಿದೆ. ಈ ಅದ್ಭುತ ತಂಡದೊಂದಿಗೆ ಪಾತ್ರಗಳಿಗೆ ಜೀವ ತುಂಬಲಾಗಿದೆ" ಎಂದು ನಿರ್ದೇಶಕ ಅವಿನಾಶ್ ಅರುಣ್ ಹೇಳಿದ್ದಾರೆ. ಹಾಗೇ ಅರ್ಶದ್ ವಾರ್ಸಿ "ಪೆಡ್ರೋ ಹೆಚ್ಚಿಗೆ ಯೋಚಿಸದೆ ತನ್ನ ಮನಸ್ಸು ಮತ್ತು ಅಂತರ್ದೃಷ್ಟಿ ಹೇಳಿದಂತೆ ಕೇಳುವ ವ್ಯಕ್ತಿ. ಈ ಮನಸ್ಥಿತಿಯಿಂದಲೇ ಅತ್ಯಂತ ಕಷ್ಟದ ಪರಿಸ್ಥಿತಿಗಳಲ್ಲಿ ಸಿಲುಕಿಕೊಳ್ಳುತ್ತಾನೆ. ಈ ಪಾತ್ ಖಂಡಿತವಾಗಿಯೂ ಇಷ್ಟವಾಗುತ್ತೆ" ಎಂದಿದ್ದಾರೆ.
"ಹಾಸ್ಯ, ರಹಸ್ಯ, ಭಾವನೆಗಳ ಸಮ್ಮಿಲನವೇ ಈ 'ಪ್ರೀತಂ & ಪೆಡ್ರೋ'. ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ಗುರಿಯಿದೆ. ಜೊತೆಗೆ ನ್ಯೂನ್ಯತೆಗಳೂ ಇವೆ. ಹೀಗಾಗಿ ಇಡೀ ಕಥೆಯು ಅದ್ಭುತವಾಗಿ ಮೂಡಿ ಬಂದಿದೆ" ಎಂದು ವಿಕ್ರಾಂತ್ ಮ್ಯಾಸ್ಸೆ ಹೇಳಿದ್ದಾರೆ. ಹಾಸ್ಯ, ರಹಸ್ಯ, ಭಾವನೆ ಮತ್ತು ಸಾಹಸವಿರುವ ಈ ವಿಶಿಷ್ಟ ವೆಬ್ ಸೀರಿಸ್ 'ಪ್ರೀತಂ & ಪೆಡ್ರೋ' ಜುಲೈ 3 ರಿಂದ ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.


Click it and Unblock the Notifications
