ಬಿಗ್ ಬಾಸ್ ಓಟಿಟಿ ಸೀಸನ್ 1 ರಿಯಾಲಿಟಿ ಶೋನ 8ನೇ ಸ್ಪರ್ಧಿ ರಾಕೇಶ್ ಅಡಿಗ!
ಬಿಗ್ ಬಾಸ್ ಓಟಿಟಿ ಸೀಸನ್ 1 ರಿಯಾಲಿಟಿ ಶೋ ಗ್ರ್ಯಾಂಡ್ ಆಗಿ ಆರಂಭ ಆಗಿದೆ. ಇದು ದಕ್ಷಿಣ ಭಾರತದ ಮೊದಲ ಬಿಗ್ ಬಾಸ್ ಓಟಿಟಿ ಶೋ. ಹೀಗಾಗಿ ಎಲ್ಲರ ನಿರೀಕ್ಷೆ ಈ ಶೋ ಮೇಲಿದೆ. ಹಾಗೆಯೇ ಬಿಗ್ ಬಾಸ್ ಓಟಿಟಿ ರಿಯಾಲಿಟಿ ಶೋಗೆ ಸ್ಪರ್ಧಿಗಳು ಯಾರು ಹೋಗುತ್ತಾರೆ? ಅಂತ ಕುತೂಹಲದಿಂದಲೇ ನೋಡುತ್ತಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಹಲವು ಇಂಟ್ರೆಸ್ಟಿಂಗ್ ವ್ಯಕ್ತಿಗಳು ಪ್ರವೇಶ ಮಾಡಿದ್ದಾರೆ. ಇವರಲ್ಲಿ ಸ್ಯಾಂಡಲ್‌ವುಡ್ ನಟ ರಾಕೇಶ್ ಅಡಿಗ ಒಬ್ಬರು. ನಿರೀಕ್ಷೆಯಂತೆ ರಾಕೇಶ್ ಅಡಿಗ ಎಂಟ್ರಿ ಕೊಟ್ಟಿದ್ದಾರೆ. ಕನ್ನಡ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆ ಮಾಡಿರೋ ರಾಕೇಶ್ ಅಡಿಗ ವಿವಾದಗಳಲ್ಲೂ ಸಿಕ್ಕಿಕೊಂಡಿದ್ದಾರೆ.

ರಾಕೇಶ್ ಅಡಿಗ ಕನ್ನಡದ ಮೊದಲ ಹಿಪಾಪ್ ಬ್ಯಾಂಡ್ ಅನ್ನು ಆರಂಭಿಸಿದ್ದರು. ಅಲ್ಲಿಂದ ರಾಕೇಶ್ ಅಡಿಗ ಕನ್ನಡಿಗರಿಗೆ ಚಿರಪರಿಚಿತ. ಮಲೆನಾಡಿನಿಂದ ಬಂದು ಬೆಂಗಳೂರಿನಲ್ಲಿ ಬೆಳೆದ ಪಕ್ಕಾ ನಗರದ ಹುಡುಗ. ಸಂಗೀತ, ಸಿನಿಮಾ, ಆಧ್ಯಾತ್ಮ ಅಂತ ರಾಕೇಶ್ ಅಡಿಗ ಬೇರೆ ಬೇರೆ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ರಾಕೇಶ್ ಅಡಿಗ ಸಿನಿಮಾದಲ್ಲಿ ನಟಿಸುವುದಕ್ಕಿಂತ ಮುನ್ನ ಗಾಯಕನಾಗಿ ಗುರುತಿಸಿಕೊಂಡಿದ್ದರು. ಆದರೆ, 2009ರಲ್ಲಿ 'ಜೋಶ್' ಸಿನಿಮಾ ರಿಲೀಸ್ ಆಗಿತ್ತು. ಶಿವಮಣಿ ನಿರ್ದೇಶಿಸಿದ ಈ ಸಿನಿಮಾ ರಾಕೇಶ್ ಅಡಿಗ ಕರಿಯರ್‌ಗೆ ಹೊಸ ತಿರುವು ನೀಡಿತ್ತು. ಇಲ್ಲಿಂದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

'ಅಲೆಮಾರಿ', 'ಮನಸೋಲಾಜಿ', 'ಪರಿ', ಯಾರೇ ಕೂಗಾಡಲಿ', 'ಮಂದಹಾಸ', 'ಡವ್' 'ಕೋಟಿಗೊಂದ್ ಲವ್ ಸ್ಟೋರಿ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಮ್ಮೆ ನಾಯಕನಾಗಿ, ಮತ್ತೊಮ್ಮೆ ಖಳನಾಯಕನಾಗಿ ಕಂಡಿದ್ದೂ ಇದೆ. ಆದರೆ, 'ಜೋಶ್' ಬಳಿಕ ಒಂದೊಳ್ಳೆ ಸಿನಿಮಾ ಸಿಕ್ಕಿರಲಿಲ್ಲ. 2019ರಲ್ಲಿ ನಿರ್ದೇಶನಕ್ಕೂ ಇಳಿದಿದ್ದರು. 'ನೈಟ್ ಔಟ್' ಅನ್ನೋ ಸಿನಿಮಾಗೆ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದರು.
ಇತ್ತೀಚೆಗೆ ಗಾಂಚಾ ಲೀಗಲ್ ಮಾಡಬೇಕು ಅನ್ನೋ ವಿಚಾರಕ್ಕೆ ಬೆಂಬಲ ಸೂಚಿಸಿದ್ದರು. ಈ ಮೂಲಕ ರಾಕೇಶ್ ಅಡಿಗ ವಿವಾದಕ್ಕೂ ಸಿಲುಕಿದ್ದರು. ಆ ಬಳಿಕ ರಾಕೇಶ್ ತಮ್ಮ ನಿರ್ದೇಶನದ ಸಿನಿಮಾ ಕಡೆಗೆ ಹೆಚ್ಚು ಗಮನ ಹರಿಸಿದ್ದರು. ಕೆಲವು ವರ್ಷಗಳಿಂದ ಸೈಲೆಂಟ್ ಆಗಿದ್ದ ರಾಕೇಶ್ ಈಗ ಬಿಗ್ ಬಾಸ್‌ಗೆ ಎಂಟ್ರಿಕೊಡುವ ಮೂಲಕ ಮತ್ತೆ ಸುದ್ದಿಯಲಿದ್ದಾರೆ.


Click it and Unblock the Notifications











