ರಾಮ್ ಚರಣ್ ಡಾಕ್ಯೂಮೆಂಟರಿಗೆ ಸ್ಕೆಚ್ ಹಾಕಿತೇ ನೆಟ್‌ಫ್ಲಿಕ್ಸ್? ನಯನತಾರಾ, ರಾಜಮೌಳಿ ಹಾದಿಯಲ್ಲಿ ಮೆಗಾ ಹೀರೊ!
ಟಾಲಿವುಡ್‌ನ ಮೆಗಾ ಫ್ಯಾಮಿಲಿಯ ಹೀರೊ ರಾಮ್ ಚರಣ್ ಕರಿಯರ್ ಉತ್ತುಂಗದಲ್ಲಿದೆ. ರಾಜಮೌಳಿ ನಿರ್ದೇಶಿಸಿದ RRR ಸಿನಿಮಾ ಬಳಿಕ ರಾಮ್ ಚರಣ್ ಸಿನಿಮಾ ಸೋತಿದ್ದರೂ, ಕ್ರೇಜ್ ಏನು ಕಮ್ಮಿಯಾಗಿಲ್ಲ. ರಾಜಮೌಳಿ ಸಿನಿಮಾ ರಾಮ್ ಚರಣ್ ಅನ್ನು ಗ್ಲೋಬಲ್ ಸ್ಟಾರ್ ಪಟ್ಟಕೊಡಿಸಿದ್ದಾಗಿದೆ. ಈಗ ಪ್ರಪಂಚದಾದ್ಯಂತ ರಾಮ್ ಚರಣ್‌ಗೆ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಈ ಜನಪ್ರಿಯತೆಯನ್ನು ಮನಗಂಡು ನೆಟ್‌ಫ್ಲಿಕ್ಸ್ ಮತ್ತೊಂದು ದುಬಾರಿ ಪ್ರಯತ್ನಕ್ಕೆ ಕೈ ಹಾಕಿದೆ.
ರಾಮ್ ಚರಣ್ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತೆಲುಗು ಸಿನಿಮಾಗಳಿಂದ ಗ್ಲೋಬಲ್ ಸ್ಟಾರ್ ಆಗುವವರೆಗೂ ರಾಮ್ ಚರಣ್ ಬೆಳೆದಿದ್ದೇ ಇಂಟ್ರೆಸ್ಟಿಂಗ್ ಸ್ಟೋರಿ. ಇತ್ತೀಚೆಗಷ್ಟೇ ಲಂಡನ್ನ ವಿಶ್ವ ವಿಖ್ಯಾತ ಮೇಡಮ್ ಟುಸ್ಸಾಡ್ಸ್ ವ್ಯಾಕ್ಸ್ ಮ್ಯೂಸಿಯಂನಲ್ಲಿ ರಾಮ್ ಚರಣ್ ಮೇಣದ ಪ್ರತಿಮೆ ಅನಾವರಣಗೊಂಡಿದ್ದೇ ಇದಕ್ಕೆ ಮತ್ತೊಂದು ಸಾಕ್ಷಿ. ಮಗನ ಮೇಣದ ಪ್ರತಿಮೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ತಂದೆ ಮೆಗಾಸ್ವಾರ್ ಚಿರಂಜೀವಿ, ತಾಯಿ ಹಾಗೂ ಅವರ ಪತ್ನಿ ಕೂಡ ಲಂಡನ್‌ಗೆ ಹೋಗಿದ್ದರು.

ಈ ಜನಪ್ರಿಯತೆಯನ್ನು ಅರಿತಿರುವ ನೆಟ್‌ಫ್ಲಿಕ್ಸ್ ರಾಮ್ ಚರಣ್ ಕುರಿತಾದ ಡಾಕ್ಯೂಮೆಂಟರಿಯನ್ನು ನಿರ್ಮಾಣ ಮಾಡುವುದಕ್ಕೆ ತೆರೆಮರೆಯಲ್ಲಿ ಸರ್ಕಸ್ ಮಾಡುತ್ತಿದೆ ಎಂಬ ಸುದ್ದಿ ಓಡಾಡುತ್ತಿದೆ. ನೆಟ್‌ಫ್ಲಿಕ್ಸ್ ಮತ್ತೊಬ್ಬ ಸೆಲೆಬ್ರೆಟಿಯ ಡಾಕ್ಯೂಮೆಂಟರಿ ಮಾಡುವುದಕ್ಕೆ ಮುಂದಾಗಿದ್ದೇಕೆ? ಗ್ಲೋಬಲ್ ಸ್ಟಾರ್ ಆಗಿದ್ದಕ್ಕೆ ರಾಮ್ ಚರಣ್ ಆಯ್ಕೆ ಮಾಡಿಕೊಂಡಿತ್ತೇ? ಏನೆಲ್ಲ ಸುದ್ದಿ ಓಡಾಡುತ್ತಿದೆ ಎನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ತೆಲುಗಿನ ಮೆಗಾ ಕುಟುಂಬದ ಸೂಪರ್‌ಸ್ಟಾರ್ ರಾಮ್ ಚರಣ್ ಲೈಫ್ ಸ್ಟೋರಿಯನ್ನು ತನ್ನ ವೀಕ್ಷಕರ ಮುಂದೆ ಇಡುವುದಕ್ಕೆ ನೆಟ್‌ಫ್ಲಿಕ್ಸ್ ಹೊರಟಿದೆ ಅನ್ನೋದು ಸುದ್ದಿ. ಈಗಾಗಲೇ ನೆಟ್‌ಫ್ಲಿಕ್ಸ್ ತೆರೆಮರೆಯಲ್ಲಿ ಈ ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ತೆಲುಗು ಚಿತ್ರಾಲು ಪ್ರಕಾರ, ರಾಮ್ ಚರಣ್ ಡಾಕ್ಯೂಮೆಂಟರಿಯ ಚಿತ್ರೀಕರಣವನ್ನು ಆರಂಭ ಮಾಡಿದೆ ಎಂದು ವರದಿ ಮಾಡಿದೆ.

ಕಳೆದ ಆರು ತಿಂಗಳಿನಿಂದ ರಾಮ್ ಚರಣ್ ಹಿಂದೆ ಮುಂದೆ ನೆಟ್‌ಫ್ಲಿಕ್ಸ್ ಕ್ಯಾಮರಾಗಳು ಸುತ್ತುತ್ತಿವೆ ಎಂದು ಹೇಳಲಾಗಿದೆ. ರಾಮ್ ಚರಣ್ ಅವರ ವೈಯಕ್ತಿಕ ಜೀವನ, ಅವರು ಅಭಿಮಾನಿಗಳು, ಅಭಿಮಾನಿಗಳೊಂದಿಗಿನ ಒಡನಾಟ, ಸಿನಿಮಾ ಸೆಟ್ಟಿನಲ್ಲಿ ರಾಮ್ ಚರಣ್ ಹೇಗಿರುತ್ತಾರೆ? ಸಿನಿಮಾ ಶೂಟಿಂಗ್‌ಗೆ ಹೇಗೆ ತಯಾರಿ ನಡೆಸುತ್ತಾರೆ? ಅನ್ನೋದನ್ನು ನೆಟ್‌ಫ್ಲಿಕ್ಸ್ ಕ್ಯಾಮರಾಗಳು ಸೆರೆ ಹಿಡಿಯುತ್ತಿವೆ ಎಂದು ಹೇಳಲಾಗಿದೆ. ಈ ವಿಷಯ ಹೊರ ಬೀಳುತ್ತಿದ್ದಂತೆ ರಾಮ್ ಚರಣ್ ಅಭಿಮಾನಿಗಳು ಈ ಸುದ್ದಿಯನ್ನು ತಮ್ಮ ಹೀರೋ ಕಡೆಯಿಂದಲೇ ತಿಳಿದುಕೊಳ್ಳುವುದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ.
ನೆಟ್‌ಫ್ಲಿಕ್ಸ್ ದಕ್ಷಿಣ ಭಾರತದ ಸ್ಟಾರ್ ಸೆಲೆಬ್ರೆಟಿಗಳ ಬಗ್ಗೆ ಡಾಕ್ಯೂಮೆಂಟರಿ ಮಾಡುವುದಕ್ಕೆ ಹೆಚ್ಚು ಒಲವು ತೋರಿದಂತೆ ಕಾಣುತ್ತಿದೆ. ಈಗಾಗಲೇ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಕುರಿತು ಮಾಡಿದ ಡಾಕ್ಯೂಮೆಂಟರಿ ಜನಪ್ರಿಯವಾಗಿತ್ತು. ಹಾಗೆಯೇ ಎಸ್ ಎಸ್ ರಾಜಮೌಳಿಯ ಕುರಿತ ವಿಶೇಷ ವಿಡಿಯೋವನ್ನು ಮಾಡಿತ್ತು. ಎರಡಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಟಾಲಿವುಡ್‌ನ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಹಿಂದೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ನೆಟ್‌ಫ್ಲಿಕ್ಸ್ ಹಾಗೂ ರಾಮ್ ಚರಣ್ ಇಬ್ಬರೂ ಖಚಿತ ಪಡಿಸಿಲ್ಲ.
RRR ಬಳಿಕ ರಾಮ್ ಚರಣ್ ನಟಿಸಿದ 'ಆಚಾರ್ಯ' ಹಾಗೂ 'ಗೇಮ್ ಚೇಂಜರ್' ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿವೆ. ಹೀಗಾಗಿ ಮುಂದಿನ ಸಿನಿಮಾ 'ಪೆದ್ದಿ'ಯಲ್ಲಿ ಮತ್ತೆ ರಗಡ್ ಅವತಾರವೆತ್ತಿದ್ದಾರೆ. 'ಪುಷ್ಪ' ಖ್ಯಾತಿಯ ನಿರ್ದೇಶಕ ಸುಕುಮಾರ್ ಶಿಷ್ಯ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ರಾಮ್ ಚರಣ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ವೇಳೆ ರಾಮ್ ಚರಣ್ ಡಾಕ್ಯೂಮೆಂಟರಿ ರಿಲೀಸ್ ಆದರೆ, ಗ್ಲೋಬಲ್ ಮಟ್ಟದಲ್ಲಿ ಮತ್ತೆ ಸದ್ದು ಮಾಡೋದು ಗ್ಯಾರಂಟಿ.


Click it and Unblock the Notifications











