ಬಿಡುಗಡೆಗೂ ಮುನ್ನವೇ ಓಟಿಟಿಗೆ ಆದಿಪುರುಷ್ ಮಾರಾಟ? ಈ ತರಾತುರಿ ಯಾಕೆ? ಸೇಲ್ ಆಗಿದ್ಯಾರಿಗೆ?
ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಸಿನಿಮಾ 'ಆದಿಪುರುಷ್' ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತೆ. ಅದಕ್ಕೆ ಬೇಕಾಗಿರೋ ತಯಾರಿಯನ್ನೆಲ್ಲಾ ಚಿತ್ರತಂಡ ಈಗಾಗಲೇ ಮಾಡಿಕೊಂಡಿದೆ. ಬಹಳ ದಿನಗಳ ಬಳಿಕ ಪೌರಾಣಿಕ ಸಿನಿಮಾವೊಂದು ರಿಲೀಸ್ ಆಗುತ್ತಿರುವುದರಿಂದ ಕುಟುಂಬ ಸಮೇತ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
'ಆದಿಪುರುಷ್' ವಿಶ್ವದಾದ್ಯಂತ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಸಿನಿಮಾ ಕಲೆಕ್ಷನ್, ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ಸಿನಿಮಾ ಗೆಲ್ಲುತ್ತೋ? ಸೋಲುತ್ತೋ? ಈ ಪ್ರಶ್ನೆಗೆ ಬಿಡುಗಡೆಯಾದ ಮೊದಲ ದಿನವೇ ಉತ್ತರ ಸಿಗಲಿದೆ.
'ಬಾಹುಬಲಿ' ಬಳಿಕ ಪ್ರಭಾಸ್ ಮತ್ತೊಂದು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಕಾರಣಕ್ಕೆ ನಿರೀಕ್ಷೆ ಆ ಲೆವೆಲ್‌ನಲ್ಲೇ ಇದೆ. ಆದರೆ, ಬಾಹುಬಲಿಯಷ್ಟು ಕ್ರೇಜ್ ಹುಟ್ಟಾಕಿರುವ ಬಗ್ಗೆ ಅನುಮಾನಗಳಿವೆ. ಈ ಮಧ್ಯೆ ಟಾಲಿವುಡ್‌ನಲ್ಲಿ 'ಆದಿಪುರುಷ್' ಸಿನಿಮಾವನ್ನು ಬಿಡುಗಡೆಗೂ ಮುನ್ನವೇ ಓಟಿಟಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

'ಆದಿಪುರುಷ್' ಓಟಿಟಿ ಹಕ್ಕು ಮಾರಾಟ
ಪ್ರಭಾಸ್ ಸಿನಿಮಾ 'ಆದಿಪುರುಷ್' ಬಿಡುಗಡೆ ಇನ್ನೊಂದು ವಾರ ಬಾಕಿಯಿದೆಯಷ್ಟೇ. ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆಗಳು ದುಪ್ಪಟ್ಟಾಗಿದೆ. ಪ್ರಭಾಸ್ ಅಭಿಮಾನಿಗಳು ಈ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಅವರಿಗಾಗಿಯೇ ಇತ್ತೀಚೆಗೆ ದೊಡ್ಡ ಈವೆಂಟ್ ಕೂಡ ಆಯೋಜನೆ ಮಾಡಲಾಗಿತ್ತು.
ಇನ್ನೇನು ಸಿನಿಮಾ ರಿಲೀಸ್ ಆಗೋಕೆ ಕೆಲವು ದಿನಗಳು ಬಾಕಿ ಇದೆ ಅನ್ನುವಾಗಲೇ ಓಟಿಟಿ ಹಕ್ಕುಗಳನ್ನು ಸಿನಿಮಾ ತಂಡ ಸೇಲ್ ಮಾಡಿದೆ. ಇದು ಸಿನಿಮಾ ವಲಯದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇಷ್ಟು ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಗೂ ಮುನ್ನವೇ ಓಟಿಟಿ ಹಕ್ಕುಗಳನ್ನು ಮಾರಾಟ ಯಾಕೆ ಮಾಡಿದ್ರು? ಅಂತ ಚರ್ಚೆಯಾಗುತ್ತಿದೆ.
ಓಟಿಟಿ ಹಕ್ಕು ಸೇಲ್ ಆಗಿದ್ಯಾರಿಗೆ?
ಟಾಲಿವುಡ್ ಮೂಲಗಳ ಪ್ರಕಾರ, 'ಆದಿಪುರುಷ್' ಸಿನಿಮಾದ ಡಿಜಿಟಪ್ ಹಕ್ಕುಗಳು ಅಮೆಜಾನ್ ಪ್ರೈಂಗೆ ಮಾರಾಟ ಆಗಿದೆ. ಎಲ್ಲಾ ಭಾಷೆಯ ಸಿನಿಮಾಗಳ ಹಕ್ಕನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ ಅನ್ನೋ ಸುದ್ದಿ ಓಡಾಡುತ್ತಿದೆ. ಈ ಮೂಲಕ ನಿರ್ಮಾಪಕರಿಗೆ ಭರ್ಜರಿ ಲಾಭ ಆಗಿದೆ ಎಂದು ಹೇಳಲಾಗುತ್ತಿದೆ.
ಆದರೆ, ಸಿನಿಮಾ ಬಿಡುಗಡೆ ಬಳಿಕ ಓಟಿಟಿ ಹಕ್ಕು ಸೇಲ್ ಮಾಡಿದ್ದರೆ, ಇನ್ನೂ ಹೆಚ್ಚು ಹಣ ಸಿಗುತ್ತಿತ್ತು ಅನ್ನೋದು ಟ್ರೇಡ್ ಎಕ್ಸ್‌ಪರ್ಟ್‌ಗಳ ಅಭಿಪ್ರಾಯ. ಇದೇ ವೇಳೆ ಥಿಯೇಟರ್‌ನಲ್ಲಿ ಸಿನಿಮಾಗೆ ರೆಸ್ಪಾನ್ಸ್ ನೆಗೆಟಿವ್ ಸಿಕ್ಕಿದರೆ, ಓಟಿಟಿ ಬೆಲೆ ಕಡಿಮೆ ಆಗುತ್ತೆ ಅನ್ನೋ ಭಯದಲ್ಲಿಯೇ ಸೇಲ್ ಮಾಡಿದ್ದಾರೆ ಅನ್ನೋ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಅಡ್ವಾನ್ಸ್ ಬುಕಿಂಗ್‌ಗೆ ಹೇಗಿದೆ ರೆಸ್ಪಾನ್ಸ್ ?
'ಆದಿಪುರುಷ್' ತಂಡ ಭರ್ಜರಿಯಾಗಿ ಪ್ರಚಾರ ಮಾಡುತ್ತಿದೆ. ಪೌರಾಣಿಕ ಸಿನಿಮಾ ಆಗಿರುವುದರಿಂದ ಸಿನಿಮಾಗೆ ಒಳ್ಳೆ ಹೈಪ್ ಸಿಕ್ಕಿದೆ. ಟ್ರೈಲರ್ ಹಾಗೂ ಹಾಡುಗಳು ಸೂಪರ್ ಹಿಟ್ ಆಗಿವೆ. ಹೀಗಾಗಿ ಅಡ್ವಾನ್ಸ್ ಬುಕಿಂಗ್‌ಗೂ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ ಎನ್ನಲಾಗಿದೆ. ಬುಕಿಂಗ್ ಓಪನ್ ಆದಲ್ಲಿಂದ ಸುಮಾರು 10 ಸಾವಿರ ಟಿಕೆಟ್‌ಗಳು ಮಾರಾಟ ಆಗಿದೆ ಎನ್ನಲಾಗಿದೆ.
'ಆದಿಪುರುಷ್' ಸಿನಿಮಾ ಐಮ್ಯಾಕ್ಸ್‌ನಲ್ಲಿ ರಿಲೀಸ್ ಆಗುತ್ತಿಲ್ಲ ಎನ್ನಲಾಗಿದೆ. ಹಾಲಿವುಡ್ ನಿರ್ಮಾ ಸಂಸ್ಥೆ ವಾರ್ನರ್ ಬ್ರದರ್ಸ್ 'ದಿ ಫ್ಲ್ಯಾಶ್' ಸಿನಿಮಾಗಾಗಿ ಐಮ್ಯಾಕ್ಸ್ ಸ್ಕ್ರೀನ್‌ಗಳನ್ನು ಈಗಾಗಲೇ ಬುಕ್ ಮಾಡಿದೆ. ಹೀಗಾಗಿ 'ಆದಿಪುರುಷ್'ಗೆ ಟಿಕೆಟ್ ಸಿಕ್ಕಿಲ್ಲ ಎನ್ನಲಾಗಿದೆ.


Click it and Unblock the Notifications











