ಅಂದ್ಕೊಂಡಿದ್ದಕ್ಕಿಂತ ಮೊದಲೇ ಒಟಿಟಿಗೆ ಲಗ್ಗೆ ಇಡುತ್ತಾ ಸೂರ್ಯ, ಪೂಜಾ ಹೆಗ್ಡೆಯ 'ರೆಟ್ರೋ'? ಈ ದಿನ ರಿಲೀಸ್?
'ರೆಟ್ರೋ' ಈ ವರ್ಷದ ತಮಿಳು ಚಿತ್ರರಂಗದ ಬಹು ನಿರೀಕ್ಷೆಯ ಸಿನಿಮಾ ಆಗಿತ್ತು. ಸೂರ್ಯ, ಪೂಜಾ ಹೆಗ್ಡೆ ಮೊದಲ ಬಾರಿಗೆ ತೆರೆಮೇಲೆ ಕಾಣಿಸಿಕೊಂಡಿದ್ದರು. ಇನ್ನೊಂದು ಕಡೆ ಕಾರ್ತಿಕ್ ಸುಬ್ಬರಾಜು ಇದೇ ಮೊದಲ ಬಾರಿಗೆ ಸೂರ್ಯಗೆ ಆಕ್ಷನ್ ಕಟ್ ಹೇಳಿದ್ದರು. ಹೀಗಾಗಿ ಈ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಾಕಿ ಮೇ 1 ರಂದು ಗ್ರ್ಯಾಂಡ್ ಆಗಿ ಎಂಟ್ರಿ ಥಿಯೇಟರ್‌ಗಳಿಗೆ ಲಗ್ಗೆ ಇಟ್ಟಿತ್ತು.
ಆದರೆ, 'ರೆಟ್ರೋ' ನಿರೀಕ್ಷೆ ಹುಟ್ಟಿಸಿದಷ್ಟು ಸದ್ದು ಮಾಡಲಿಲ್ಲ. ಫಸ್ಟ್ ಡೇ ಫಸ್ಟ್ ಶೋನೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಾಕ್ಸಾಫೀಸ್‌ನಲ್ಲೂ ಎರಡನೇ ದಿನವೇ ಕುಸಿಯುವುದಕ್ಕೆ ಶುರು ಮಾಡಿತ್ತು. ಹೀಗಾಗಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆಗಳನ್ನು ಹುಟ್ಟಾಕಿದ್ದ ಈ ಸಿನಿಮಾ ಹೆಚ್ಚೇನು ಸದ್ದು ಮಾಡಲಿಲ್ಲ. ಹೀಗಾಗಿ ಅಂದ್ಕೊಂಡಿದ್ದಕ್ಕಿಂತ ಮುಂಚೆಯೇ ಒಟಿಟಿಯಲ್ಲಿ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಹೊರಟಿದೆ ಅನ್ನೋ ವದಂತಿ ಹರಿದಾಡುತ್ತಿದೆ.

ಸಾಮಾನ್ಯವಾಗಿ ಸೂಪರ್‌ಸ್ಟಾರ್ ಸಿನಿಮಾಗಳು ಬೇಗನೇ ಒಟಿಟಿಗೆ ಲಗ್ಗೆ ಇಡುವುದಿಲ್ಲ. ಕಮ್ಮಿ ಅಂದರೂ ಎರಡು ತಿಂಗಳ ಬಳಿಕ ಒಟಿಟಿಯಲ್ಲಿ ರಿಲೀಸ್ ಆಗುತ್ತೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರ ಸಂಖ್ಯೆ ಸಂಪೂರ್ಣವಾಗಿ ಕಡಿಮೆ ಆದ್ಮೇಲೆ ಬಿಡುಗಡೆ ಆಗುತ್ತೆ. ಆದರೆ, ಸೂರ್ಯ ಸಿನಿಮಾ 'ರೆಟ್ರೋ' ಅಂದುಕೊಂಡಿದ್ದಕ್ಕಿಂತ ಬೇಗನೇ ರಿಲೀಸ್ ಆಗುತ್ತಿದೆ ಅನ್ನೋದು ಸದ್ದಕ್ಕೆ ಹರಿದಾಡುತ್ತಿರುವ ಸುದ್ದಿ.
'ರೆಟ್ರೋ' ಒಂದು ಗ್ಯಾಂಗ್‌ಸ್ಟರ್ ಸಿನಿಮಾ. ಕಾರ್ತಿಕ್ ಸುಬ್ಬರಾಜು ಸಿನಿಮಾದ ಮೇಕಿಂಗ್ ರಿಚ್ ಆಗಿದೆ ಅನ್ನೋ ಅಭಿಪ್ರಾಯವನ್ನು ವಿಮರ್ಶಕರು ವ್ಯಕ್ತಪಡಿಸಿದ್ದರು. ಸಿನಿಮಾದ ಮೇಕಿಂಗ್ ಉತ್ತಮವಾಗಿದ್ದು, ಸ್ಕ್ರೀನ್ ಪ್ಲೇಯಲ್ಲಿ ಕಾರ್ತಿಕ್ ಸುಬ್ಬರಾಜು ಎಡವಿದ್ದಾರೆಂದು ಫಿಲ್ಮಿಬೀಟ್ ಕನ್ನಡದ ವಿಮರ್ಶೆಯಲ್ಲಿ ಹೇಳಿತ್ತು. ಈಗ ಚಿತ್ರಮಂದಿರದಲ್ಲಿ ಐವತ್ತು ದಿನಗಳನ್ನು ಪೂರೈಸುವುದಕ್ಕೂ ಮುನ್ನವೇ ಒಟಿಟಿಗೆ ಲಗ್ಗೆ ಇಡುತ್ತಿದೆ ಎನ್ನುವ ಸುದ್ದಿ ಒಡಾಡುತ್ತಿದೆ.
ಸೂರ್ಯ ಹಾಗೂ ಪೂಜಾ ಹೆಗ್ಡೆ ಇಬ್ಬರಿಗೂ ಸಿನಿಮಾದ ಗೆಲವು ತುಂಬಾನೇ ಮುಖ್ಯ ಆಗಿತ್ತು. ಸೂರ್ಯ ನಟಿಸಿದ 'ಕಂಗುವ' ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಇತ್ತ ಪೂಜಾ ಹೆಗ್ಡೆ ಸಿನಿಮಾಗಳು ಇತ್ತೀಚೆಗೆ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತಿಲ್ಲ. ಹೀಗಾಗಿ ಇಬ್ಬರಿಗೂ 'ರೆಟ್ರೋ' ಬೂಸ್ಟ್ ಕೊಡುತ್ತೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ, ಹಾಗಾಗಲಿಲ್ಲ. ಸೂರ್ಯ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿದೆ.
ತೆಲುಗು ಹಾಗೂ ತಮಿಳು ಮಾಧ್ಯಮಗಳಲ್ಲಿ 'ರೆಟ್ರೋ' ಸಿನಿಮಾ ಒಟಿಟಿ ರಿಲೀಸ್ ಬಗ್ಗೆ ವರದಿಗಳಾಗಿವೆ. 'ರೆಟ್ರೋ' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಅಂದುಕೊಂಡಿದ್ದಕ್ಕಿಂತ ಬೇಗನೇ ಪ್ರೀಮಿಯರ್ ಆಗಲಿದೆ ಎಂದು ವರದಿಯಾಗಿವೆ. ಮುಂದಿನ ತಿಂಗಳು ಜೂನ್ 5ರಂದು ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್ ಪ್ರೀಮಿಯರ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದರೆ, ನೆಟ್‌ಫ್ಲಿಕ್ಸ್ ಹಾಗೂ ಸೂರ್ಯ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿಲ್ಲ.
'ರೆಟ್ರೋ' ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಇಷ್ಟೇ ಅಲ್ಲದೆ ಹಿಂದಿ ಡಬ್ ವರ್ಷನ್ ಇನ್ನೂ ಬೇಗನೇ ರಿಲೀಸ್ ಆಗಬಹುದೆಂದು ಕೆಲವು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ವರದಿಯಾಗಿದೆ. ಮೇ 29 ಅಥವಾ 31ಕ್ಕೆ 'ರೆಟ್ರೋ' ಹಿಂದಿ ವರ್ಷನ್ ರಿಲೀಸ್ ಆಗಬಹುದು. ಹಾಗೇ ಜುಲೈ ತಿಂಗಳಲ್ಲಿ ಜೀ ಸಿನಿಮಾದಲ್ಲಿ ರೆಟ್ರೋ ಪ್ರಸಾರ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಎನಕ್ಕೂ ಅಧಿಕೃತ ಮಾಹಿತಿಗಾಗಿ ಕಾಯಬೇಕು.


Click it and Unblock the Notifications











