Xerox Kannada Web Series: ಡಾಲಿ ಧನಂಜಯ 'ಜೆರಾಕ್ಸ್'ಗೆ ನಾಗಭೂಷಣ್ ಎಂಟ್ರಿ; ವೆಬ್ ಸರಣಿ ಹೈಲೈಟ್ಸ್ ಏನು?
ಭಾರತದಲ್ಲಿ ಬೇರೆ ಭಾಷೆಯಲ್ಲಿ ವೆಬ್ ಸೀರಿಸ್‌ಗಳು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿವೆ. ಹಿಂದಿ ಭಾಷೆಯಲ್ಲಿ ಅತೀ ಹೆಚ್ಚು ವೆಬ್ ಸೀರಿಸ್‌ಗಳು ನಿರ್ಮಾಣ ಆಗುತ್ತಿವೆ. ಈಗಾಗಲೇ ಮಾರುಕಟ್ಟೆಯನ್ನು ಕೂಡ ಸೃಷ್ಟಿಸಿಕೊಂಡಿವೆ. ಹಾಗೇ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿಯೂ ವೆಬ್ ಸೀರಿಸ್‌ಗಳು ಯಶಸ್ವಿಯಾಗುತ್ತಿವೆ. ಆದರೆ, ಕನ್ನಡದಲ್ಲಿ ಮಾತ್ರ ಆಗೊಂದು ಈಗೊಂದು ಬಂದು ಹೋಗುತ್ತಿವೆ ಅಷ್ಟೇ.
ಕನ್ನಡದಲ್ಲಿ ವೆಬ್ ಸೀರಿಸ್ ಮಾಡುವಂತಹ ಕಂಟೆಂಟ್ ಇಲ್ಲವೋ? ಇಲ್ಲಾ ವೆಬ್ ಸೀರಿಸ್ ಮಾಡುವ ಮನಸ್ಸೇ ಇಲ್ಲವೋ? ಅನ್ನೋ ಪ್ರಶ್ನೆ ಎದುರಾಗಿತ್ತು. ಆದರೆ, ಜೀ 5 ಕನ್ನಡ ವೆಬ್ ಸೀರಿಸ್‌ಗೆ ಪ್ರೋತ್ಸಾಹ ನೀಡುತ್ತಿದೆ. ಇತ್ತೀಚೆಗೆ ಕನ್ನಡದಲ್ಲಿ ಬಂದ ವೆಬ್ ಸೀರಿಸ್‌ಗಳಿಗೆ ಉತ್ತಮ ಪ್ರಶಂಸೆ ಸಿಕ್ಕಿದೆ. ಕನ್ನಡ ಮಣ್ಣಿನ ಸೊಗಡಿನ ಕಥೆಗಳಿಗೆ ZEE 5 ವೇದಿಕೆ ಕಲ್ಪಿಸಿದೆ. ಈಗಾಗಲೇ ಹಲವು ವೆಬ್ ಸೀರಿಸ್ ಅನ್ನು ವೀಕ್ಷಕರ ಮುಂದೆ ಇಟ್ಟಿರುವ ZEE 5 ಈಗ 'ಜೆರಾಕ್ಸ್' ಮೂಲಕ ಮತ್ತೆ ಕನ್ನಡಿಗರ ಮನ ಸೆಳೆಯಲು ಸಜ್ಜಾಗಿದೆ.

ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ 'ಜೆರಾಕ್ಸ್' ವೆಬ್ ಸೀರಿಸ್ ಅನ್ನು ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಈ ವೆಬ್ ಸೀರಿಸ್‌ಗೆ ಇನ್ನಷ್ಟು ಕುತೂಹಲ ಹೆಚ್ಚಾಗಿದೆ. ಇನ್ನು ಕನ್ನಡ ಹಾಸ್ಯ ನಟ ನಾಗಭೂಷಣ್ ಈ ವೆಬ್ ಸೀರಿಸ್‌ಗೆ ಎಂಟ್ರಿ ಕೊಟ್ಟಿರೋದು ಮತ್ತಷ್ಟು ಸಿನಿಪ್ರಿಯರಿಗೆ ಕಿಕ್ ಕೊಟ್ಟಂತಾಗಿದೆ. ಹಾಗಿದ್ದರೆ, ಈ ವೆಬ್ ಸೀರಿಸ್ ಕಥೆಯೇನು? ಯಾವಾಗ ಸ್ಟ್ರೀಮಿಂಗ್ ಆಗುತ್ತೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ಬ್ಯಾನರ್ ನಡಿ 'ಜೆರಾಕ್ಸ್' ವೆಬ್ ಸರಣಿಯನ್ನು ನಿರ್ಮಿಸುತ್ತಿರೋ ಈ ವೆಬ್ ಸಿರೀಸ್ ಅನ್ನು 'ಬ್ಲಿಂಕ್' ಸಿನಿಮಾದ ಡೈರೆಕ್ಟರ್ ಶ್ರೀನಿಧಿ ಬೆಂಗಳೂರು ನಿರ್ದೇಶಿಸಲಿದ್ದಾರೆ. ಜೆರಾಕ್ಸ್ ವೆಬ್ ಸರಣಿಯ ಪ್ರಮುಖ ಪಾತ್ರದಲ್ಲಿ ನಾಗಭೂಷಣ್ ನಟಿಸುತ್ತಿರೋದು ಮತ್ತೊಂದು ಹೈಲೈಟ್. 'ಟಗರು ಪಲ್ಯ', 'ವಿದ್ಯಾಪತಿ' ಸಿನಿಮಾಗಳ ಜೊತೆಗೆ 'ಇಕ್ಕಟ್' ಹಾಗೂ 'ಹನಿಮೂನ್' ಅಂತಹ ವೆಬ್ ಸೀರಿಸ್‌ಗಳಲ್ಲಿ ನಟಿಸಿದ ಅನುಭವವೂ ಇದೆ. ನಾಗಭೂಷಣ್ ಈಗ 'ಜೆರಾಕ್ಸ್' ಮೂಲಕ ಮತ್ತೊಂದು ವೆಬ್ ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಬಹು ಬೇಡಿಕೆ ಕಾಮಿಡಿ ನಟರುಗಳಲ್ಲಿ ಒಬ್ಬರಾಗಿರುವ ನಾಗಭೂಷಣ್ ಡಾರ್ಕ್ ಹಾಸ್ಯ ಥ್ರಿಲ್ಲರ್ ಕಥೆಯ 'ಜೆರಾಕ್ಸ್' ವೆಬ್ ಸಿರೀಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

'ಜೆರಾಕ್ಸ್' ವೆಬ್ ಸೀರಿಸ್ ಮಂಡ್ಯ-ಮೈಸೂರು ಸುತ್ತಮುತ್ತಲಿನ ಕಥೆ. 'ಜೆರಾಕ್ಸ್' ಅಂಗಡಿಯ ಮಾಲೀಕ ಪ್ರಕಾಶ್ ಜೀವನದಲ್ಲಿ ನಡೆಯುವ ಅನಿರೀಕ್ಷಿತ ತಿರುವುಗಳನ್ನು ಕಟ್ಟಿಕೊಡಲಾಗಿದೆ. ZEE5 ಪ್ರಾದೇಶಿಕವಾಗ ಬೇರೂರಿರುವ ಕಥೆಗಳು ಮತ್ತು ಸಾಂಸ್ಕೃತಿಕ ಸತ್ಯ ಹಾಗೂ ಸಮಕಾಲೀನ ಸಂಗತಿಗಳನ್ನು ಪರದೆ ಮೇಲೆ ತರುವ ಪ್ರಯತ್ನ ಮಾಡಲಾಗಿದೆ.
ಇನ್ನು ವೆಬ್ ಸೀರಿಸ್‌ನ ನಾಯಕ ನಟ ನಾಗಭೂಷಣ ಮಾತನಾಡಿ, " ನಾನು ಇದೂವರೆಗೂ ಭಾಗವಾಗಿದ್ದ ಯಾವುದೇ ಕಥೆಗಳಿಗಿಂತ ಜೆರಾಕ್ಸ್ ಭಿನ್ನವಾಗಿದೆ. ಅದು ಅನಿರೀಕ್ಷಿತ, ವಿಲಕ್ಷಣ ಮತ್ತು ನಿರಂತರವಾಗಿ ಬದಲಾಗುತ್ತಿದೆ. ಶ್ರೀನಿಧಿ ಸೃಷ್ಟಿಸಿರುವ ಪ್ರಪಂಚವು ಅದೇ ಸಮಯದಲ್ಲಿ ಪರಿಚಿತ ಮತ್ತು ವಿಲಕ್ಷಣವೆನಿಸುತ್ತದೆ. ಒಬ್ಬ ಕಲಾವಿದನಾಗಿ ಆ ಜಾಗ ಅನ್ವೇಷಣೆ ಮಾಡಲು ರೋಮಾಂಚನಕಾರಿಯಾಗಿತ್ತು" ಎಂದು ನಾಗಭೂಷಣ್ ಹೇಳಿದ್ದಾರೆ.


Click it and Unblock the Notifications