'ಕಾಟೇರ'ಗೆ ಥಿಯೇಟರ್‌ನಲ್ಲಿ ಇನ್ನೂ ಸಿಗ್ತಿದೆ ಭರ್ಜರಿ ರೆಸ್ಪಾನ್ಸ್: 43ನೇ ದಿನಕ್ಕೆ ಓಟಿಟಿಗೆ ಲಗ್ಗೆ ಇಡುತ್ತಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಕಾಟೇರ' 2023ರ ಕೊನೆಯ ವಾರದಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿದೆ ಅಂತ ಈಗಾಗಲೇ ಲೆಕ್ಕ ಒಪ್ಪಿಸಲಾಗಿದೆ. ಸಿನಿಮಾ ತಂಡಕ್ಕೆ ಆಪ್ತರಾಗಿರುವವರೇ ಕೊಟ್ಟಿರುವ ಮಾಹಿತಿ ಪ್ರಕಾರ, 'ಕಾಟೇರ' ಈಗಾಗಲೇ 200 ಕೋಟಿ ಕ್ಲಬ್ ಸೇರಿದೆ.
ಕನ್ನಡದ ಸಿನಿಮಾವೊಂದು ಕೇವಲ ಕನ್ನಡದಲ್ಲಷ್ಟೇ ಬಿಡುಗಡೆಯಾಗಿ ಈ ಮಟ್ಟಿಗೆ ಸದ್ದು ಮಾಡಿದ್ದು ಇದೇ ಮೊದಲು. ಕನ್ನಡ ಸಿನಿಮಾಗೆ ಇಷ್ಟೊಂದು ಮಾರ್ಕೆಟ್ ಇದೆ ಅನ್ನೋದನ್ನು 'ಕಾಟೇರ' ಸಿನಿಮಾ ಸಾಬೀತು ಮಾಡಿದಂತಾಗಿದೆ. ಆದರೆ, ಈ ಕಲೆಕ್ಷನ್ ಬಗ್ಗೆ ಇನ್ನೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅಧಿಕೃತವಾಗಿ ಇನ್ನೂ ಮಾಹಿತಿ ಕೊಡಬೇಕಿದೆ.

'ಕಾಟೇರ' ಬಿಡುಗಡೆಯಾಗಿ ನಾಲ್ಕು ವಾರಗಳಾಗಿವೆ. ನಾಲ್ಕನೇ ವಾರದಲ್ಲಿ ರಾಜ್ಯದಲ್ಲಿರೋ ಬಿ ಹಾಗೂ ಸಿ ಸೆಂಟರ್‌ಗಳಲ್ಲಿ 'ಕಾಟೇರ' ಇನ್ನೂ ಉತ್ತಮ ಪ್ರದರ್ಶನ ಕಾಣುತ್ತಿದೆ. ವೀಕೆಂಡ್‌ಗಳಲ್ಲಿ ಈ ಸಿನಿಮಾ ಹಲವು ಭಾಗಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದಾಗಿ ವರದಿಯಾಗಿವೆ. ಹೀಗಿರುವಾಗ 'ಕಾಟೇರ' ರಿಲೀಸ್ ಆದ 43ನೇ ದಿನಕ್ಕೆ ಓಟಿಟಿಗೆ ಲಗ್ಗೆ ಇಡುತ್ತಾ? ಇಂತಹದ್ದೊಂದು ಪ್ರಶ್ನೆ ಮೂಡಿದೆ.
ಈ ಪ್ರಶ್ನೆ ಮೂಡುವುದಕ್ಕೆ ಕಾರಣವಿದೆ. 'ಕಾಟೇರ' ಜೀ 5 ಓಟಿಟಿಗೆ ಮಾರಾಟ ಆಗಿದೆ. ಓಟಿಟಿ ಸಂಸ್ಥೆ ಹಾಗೂ ಸಿನಿಮಾ ನಿರ್ಮಾಪಕರ ಮಧ್ಯೆ ಒಡಂಬಡಿಕೆ ಆಗಿರುತ್ತೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, 'ಕಾಟೇರ' ರಿಲೀಸ್ ಆದ 40 ದಿನಗಳ ಬಳಿಕ ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡಲು ಜೀ 5 ಮುಂದಾಗಿದೆ ಎನ್ನಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಕಾಟೇರ' ಸಿನಿಮಾವನ್ನು ಜೀ 5 ಫೆಬ್ರವರಿ 9ಕ್ಕೆ ಸ್ಟ್ರೀಮಿಂಗ್ ಮಾಡಿಕೊಳ್ಳುವುದಕ್ಕೆ ಮುಂದಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಜೀ 5 ಹೊಸ ಸಿನಿಮಾಗಳನ್ನು ಪ್ರತಿ ಶುಕ್ರವಾರ ಬಿಡುಗಡೆ ಮಾಡುವುದನ್ನು ರೂಢಿ ಮಾಡಿಕೊಂಡಿದೆ. ಫೆಬ್ರವರಿ 9ಕ್ಕೆ 'ಕಾಟೇರ' ರಿಲೀಸ್ ಆಗಿ 43 ದಿನಗಳಾಗುತ್ತೆ. ಹೀಗಾಗಿ ಸಿನಿಮಾ ಅದೇ ದಿನ ಸ್ಟ್ರೀಮಿಂಗ್ ಆಗುತ್ತೆ ಅನ್ನೋದು ಸುದ್ದಿ.

ಇತ್ತ 'ಕಾಟೇರ' ಸಿನಿಮಾ ಇನ್ನೂ ಥಿಯೇಟರ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ರಾಜ್ಯದ ಬಿ ಹಾಗೂ ಸಿ ಸೆಂಟರ್‌ಗಳಲ್ಲಿ ಈ ಸಿನಿಮಾವನ್ನು ಇನ್ನೂ ಥಿಯೇಟರ್‌ಗೆ ಬಂದು ನೋಡುತ್ತಿದ್ದಾರೆ. ಫೆಬ್ರವರಿ ಎರಡನೇ ವಾರದವರೆಗೂ ಹೀಗೆ ಮುಂದುವರೆದರೆ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ 'ಕಾಟೇರ' ಸಿನಿಮಾವನ್ನು ಫೆಬ್ರವರಿ 9ಕ್ಕೆ ಓಟಿಟಿಗೆ ಬಿಡುಗಡೆ ಮಾಡುವುದಕ್ಕೆ ಒಪ್ಪುತ್ತಾರಾ? ಇಲ್ಲ ಮುಂದಕ್ಕೆ ಹೋಗುತ್ತಾ? ಅನ್ನೋ ಪ್ರಶ್ನೆ ಎದ್ದಿದೆ.
ಸದ್ಯ ಕನ್ನಡ ಸಿನಿಮಾಗಳನ್ನು ಹೆಚ್ಚಾಗಿ ಖರೀದಿ ಮಾಡುತ್ತಿರುವ ಓಟಿಟಿ ವೇದಿಕೆ ಅಂದರೆ ಜೀ 5. ಕನ್ನಡ ಸಿನಿಮಾಗಳಿಗೆ ಜೀ 5ನಲ್ಲಿ ಉತ್ತಮ ಪ್ರತಿಕ್ರಿಯೆ ಕೂಡ ಸಿಗುತ್ತಿದೆ. ಒಂದು ವೇಳೆ 'ಕಾಟೇರ' ಥಿಯೇಟರ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದರೆ, ಜೀ 5 ಕೂಡ ಸ್ಟ್ರೀಮಿಂಗ್ ಡೇಟ್ ಅನ್ನು ಮುಂದಕ್ಕೆ ಹಾಕಲು ಒಪ್ಪುತ್ತಾ? ನಿರ್ಮಾಪಕರು ಒಪ್ಪದೇ ಇದ್ದರೆ ಏನಾಗುತ್ತೆ? ಅನ್ನೋದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬಹುದು.


Click it and Unblock the Notifications











