Dhanush Film OTT: ರಿಲೀಸ್ ಆಗಿ 7 ವರ್ಷಗಳ ಬಳಿಕ ಓಟಿಟಿಗೆ ಬರ್ತಿದೆ ಧನುಷ್ ಸಿನಿಮಾ: ಎಲ್ಲಿ? ಯಾವಾಗ?
ಸೂಪರ್‌ಸ್ಟಾರ್ ರಜನಿಕಾಂತ್ ಮಾಜಿ ಅಳಿಯ ಧನುಷ್ ಸಿನಿಮಾಗಳಿಗೆ ಓಟಿಟಿಯಲ್ಲಿ ಭಾರಿ ಬೇಡಿಕೆಯಿದೆ. ಅದಕ್ಕೆ ರಿಲೀಸ್ ಆದ ಒಂದೆರಡು ತಿಂಗಳುಗಳಿಗೆ ಧನುಷ್ ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತವೆ. ಆದರೆ, ಇನ್ನೊಂದು ಸಿನಿಮಾ ಏಳು ವರ್ಷದಿಂದ ಓಟಿಟಿ ರಿಲೀಸ್ ಆಗಿ ಕಾದಿತ್ತು. ಇಷ್ಟು ವರ್ಷ ಓಟಿಟಿಗೆ ಲಗ್ಗೆ ಇಡುವುದಕ್ಕೆ ಪರದಾಡಿದ್ದ ಆ ಧನುಷ್ ಸಿನಿಮಾ ಯಾವುದು ಅಂತೀರಾ?
ಹೌದು, ಧನುಷ್ ನಟಿಸಿದ ಒಂದು ಸಿನಿಮಾ ಮೇ 30, 2018ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಧನುಷ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸ್ಕ್ರೀನ್‌ಪ್ಲೇ ರೈಟರ್, ಆಕ್ಟರ್ ಹಾಗೂ ಡೈರೆಕ್ಟರ್ ಆಗಿ ಗುರುತಿಸಿಕೊಂಡಿರುವ ಕೆನಡಾದ ಕೇನ್ ಸ್ಕಾಟ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಧನುಷ್ ಜೊತೆಗೆ ಬಹುತೇಕ ವಿದೇಶಿ ನಟ, ನಟಿಯರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅದುವೇ 'ದಿ ಎಕ್ಸ್‌ಟ್ರಾರ್ಡಿನರಿ ಜರ್ನಿ ಆಫ್ ದಿ ಫಕೀರ್'.

ಫ್ರೆಂಚ್ ಕಾದಂಬರಿಯನ್ನು ಆಧರಿಸಿ ನಿರ್ಮಿಸಲಾಗಿದ್ದ 'ದಿ ಎಕ್ಸ್‌ಟ್ರಾರ್ಡಿನರಿ ಜರ್ನಿ ಆಫ್ ದಿ ಫಕೀರ್' ಸಿನಿಮಾ 2018ರಲ್ಲಿ ಫ್ರಾನ್ಸ್, ಭಾರತ, ಅಮೆರಿಕ, ಕೆನಡಾ ಹಾಗೂ ಸಿಂಗಾಪುರದಲ್ಲಿ ರಿಲೀಸ್ ಮಾಡಲಾಗಿತ್ತು. 2019ರಲ್ಲಿ ಮಲೇಷ್ಯಾದಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಸಿನಿಮಾದಲ್ಲಿ ಧನುಷ್ ಅಜಾತ ಶತ್ರು ಲವಾಶ್ ಪಟೇಲ್ ಅನ್ನುವ ಪಾತ್ರದಲ್ಲಿ ನಟಿಸಿದ್ದರು. ಇದೇ ಸಿನಿಮಾ ಈಗ ಏಳು ವರ್ಷಗಳ ಬಳಿಕ ಓಟಿಟಿಗೆ ಬರುವುದಕ್ಕೆ ರೆಡಿಯಾಗಿದೆ.
ಅಜಾತಶತ್ರು ಲವಾಶ್ ಪಟೇಲ್ ಪಾತ್ರದಲ್ಲಿ ನಟಿಸಿರುವ ಧನುಷ್ ಮ್ಯಾಜಿಕ್ ಮಾಡುವ ಮಾಂತ್ರಿಕನಾಗಿ ಕಾಣಿಸಿಕೊಂಡಿದ್ದಾರೆ. ಮುಂಬೈನ ಬೀದಿಗಳಲ್ಲಿ ಮ್ಯಾಜಿಕ್ ಮಾಡುತ್ತಾ ಜನರಲ್ಲಿ ತನಗೆ ವಿಶೇಷ ಪವರ್ ಇದೆ ಅಂತ ನಂಬಿಸುತ್ತಾ ಜೀವನ ಸಾಗಿಸುತ್ತಿರುತ್ತಾನೆ. ಅಪರಾಧದ ಮೇಲೆ ನಾಲ್ಕು ವರ್ಷ ಜೈಲುವಾಸ ಅನುಭವಿಸ ಬೇಕಿರುವ ಮೂವರು ಮಕ್ಕಳಿಗೆ ತನ್ನ ಕಥೆಯನ್ನು ಹೇಳಿ ಮನ ಪರಿವರ್ತನೆ ಮಾಡುವ ಧನುಷ್ ಪಾತ್ರ ನೋಡುಗರ ಮನೆ ಸೆಳೆಯುತ್ತೆ.
ಫ್ರಾನ್ಸ್‌ನ ಜನಪ್ರಿಯ ಕಾದಂಬರಿಯನ್ನು ಆಧರಿಸಿದ 'ದಿ ಎಕ್ಸ್‌ಟ್ರಾರ್ಡಿನರಿ ಜರ್ನಿ ಆಫ್ ದಿ ಫಕೀರ್' ಸಿನಿಮಾ ಥಿಯೇಟರ್‌ನಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಆದರೂ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಬಾಕ್ಸಾಫೀಸ್ ದುರಂತ ಅನ್ನೋ ಹಣೆ ಪಟ್ಟಿಯನ್ನು ಹೊರಬೇಕಾಗಿಯ್ತು. ಧನುಷ್‌ಗೆ ಈ ಸಿನಿಮಾ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಅದೂ ಈ ಸಿನಿಮಾ ಮೂಲಕ ಈಡೇರಲಿಲ್ಲ.
ಈಗ ಏಳು ವರ್ಷಗಳ ಬಳಿಕ 'ದಿ ಎಕ್ಸ್‌ಟ್ರಾರ್ಡಿನರಿ ಜರ್ನಿ ಆಫ್ ದಿ ಫಕೀರ್' ವರ್ಲ್ಡ್ ಓಟಿಟಿ ಪ್ರೀಮಿಯರ್ ಆಗುತ್ತಿದೆ. ಆಹಾ ವಿಡಿಯೋ ಓಟಿಟಿಯಲ್ಲಿ ವೇದಿಕೆಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗಿತ್ತಿದೆ. ಇಂದು (ಮಾರ್ಚ್ 3) ಆಹಾ ವಿಡಿಯೋ ಓಟಿಟಿ ಪ್ಲಾಟ್‌ಫಾರ್ಮ್ ತನ್ನ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಿದೆ. ಆದರೆ, ಯಾವಾಗ ಅನ್ನೋದನ್ನು ಮಾತ್ರ ರಿವೀಲ್ ಮಾಡಿಲ್ಲ. ಶೀಘ್ರದಲ್ಲಿಯೇ ರಿಲೀಸ್ ಅಂತ ಹೇಳಿಕೊಂಡಿದೆ.
'ದಿ ಎಕ್ಸ್‌ಟ್ರಾರ್ಡಿನರಿ ಜರ್ನಿ ಆಫ್ ದಿ ಫಕೀರ್' ಸಿನಿಮಾವನ್ನು ಯಾವಾಗ ಸ್ಟ್ರೀಮಿಂಗ್ ಮಾಡುತ್ತೆ ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಇಂಗ್ಲಿಷ್ ಭಾಷೆಯಲ್ಲಿ ನಿರ್ಮಾಣ ಆಗಿದ್ದ ಈ ಸಿನಿಮಾವನ್ನು ಭಾರತ, ಫ್ರಾನ್ಸ್, ಇಟಲಿ, ಬೆಲ್ಟಿಯಂ ಸೇರಿದಂತೆ ಹಲವೆಡೆ ರಿಲೀಸ್ ಮಾಡಲಾಗಿತ್ತು. ಫ್ರಾನ್ಸ್‌ನಲ್ಲಿ ಫ್ರೆಂಚ್ ಸಬ್‌ಟೈಟಲ್ ಹಾಕಿ ರಿಲೀಸ್ ಮಾಡಿದ್ದರೆ, ಧನುಷ್ ಜನಪ್ರಿಯತೆ ಇರುವ ಕಡೆ ತಮಿಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗಿತ್ತು.


Click it and Unblock the Notifications











