ದುಡ್ಡು ಕೊಟ್ಟು ನೋಡಿದ್ದಾಯ್ತು.. 'ಯುವ' ಸಿನಿಮಾವನ್ನು ಉಚಿತವಾಗಿ ನೋಡೋದ್ಯಾವಾಗ?
ಅಣ್ಣಾವ್ರ ಕುಟುಂಬದಿಂದ ಮತ್ತೊಬ್ಬ ಸದಸ್ಯ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಗಿದೆ. 'ಕೆಜಿಎಫ್', 'ಕಾಂತಾರ'ದಂತಹ ಮೆಗಾ ಸಿನಿಮಾಗಳನ್ನು ಕೊಟ್ಟಿರೋ ಹೊಂಬಾಳೆ ಫಿಲ್ಮ್ಸ್ ಯುವ ರಾಜ್‌ಕುಮಾರ್ ಮೊದಲ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಮಾರ್ಚ್ ಕೊನೆಯ ವಾರದಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಅಂದುಕೊಂಡಿದ್ದಕ್ಕಿಂತ ಬೇಗನೇ ಓಟಿಟಿಗೆ ಎಂಟ್ರಿ ಕೊಟ್ಟಿತ್ತು.
ಅಮೆಜಾನ್ ಪ್ರೈಮ್‌ನಲ್ಲಿ ಏಪ್ರಿಲ್ 19ರಂದು 'ಯುವ' ಸಿನಿಮಾ ಎಂಟ್ರಿ ಕೊಟ್ಟಿತ್ತು. ಆದರೆ, ಈ ಸಿನಿಮಾವನ್ನು ಉಚಿತವಾಗಿ ನೋಡುವುದಕ್ಕೆ ಅವಕಾಶವಿರಲಿಲ್ಲ. 'ಯುವ' ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ನೋಡಬೇಕು ಅಂದರೂ ಹಣವನ್ನು ಕೊಟ್ಟು ಸಿನಿಮಾವನ್ನು ನೋಡಬೇಕಿತ್ತು. 'ರೆಂಟಲ್ ಓನ್ಲಿ' ಒಪ್ಪಂದದ ಮೇರೆಗೆ ಪ್ರೈಂ ವಿಡಿಯೋದಲ್ಲಿ ರಿಲೀಸ್ ಮಾಡಲಾಗಿತ್ತು.

ಒಂದು ವಾರ ಈ ಒಪ್ಪಂದ ಪ್ರಕಾರವೇ ಪ್ರದರ್ಶನ ಮಾಡಲಾಗುತ್ತಿತ್ತು. ಇನ್ನು ಕೆಲವೇ ದಿನಗಳಲ್ಲಿ ಉಚಿತವಾಗಿ 'ಯುವ' ಸಿನಿಮಾವನ್ನು ತೋರಿಸುವುದಕ್ಕೆ ಅಮೆಜಾನ್ ಪ್ರೈಂ ನಿರ್ಧರಿಸಿದೆ. ಸಂತೋಷ್ ಆನಂದ್‌ರಾಮ್ ನಿರ್ದೇಶಿಸಿದ ಈ ಸಿನಿಮಾ ಬಿಡುಗಡೆಯಾಗದ ಮೂರು ವಾರಗಳ ಬಳಿಕ ಓಟಿಟಿಗೆ ಲಗ್ಗೆಯನ್ನು ಒಟ್ಟಿತ್ತು. ಈಗ ಓಟಿಟಿ ಪ್ರಿಯರು ಉಚಿತವಾಗಿ ಸಿನಿಮಾ ನೋಡುವ ಡೇಟ್ ಅನ್ನು ರಿವೀಲ್ ಮಾಡಲಾಗಿದೆ.
ರಾಘವೇಂದ್ರ ರಾಜ್‌ಕುಮಾರ್ ದ್ವಿತೀಯ ಪುತ್ರ ಯುವ ರಾಜ್‌ಕುಮಾರ್ ಅಭಿನಯದ ಮೊದಲ ಸಿನಿಮಾ 'ಯುವ'. ಏಪ್ರಿಲ್ 19ಕ್ಕೆ ಓಟಿಟಿಗೆ ಲಗ್ಗೆ ಇಟ್ಟಿದ್ದ ಈ ಸಿನಿಮಾವನ್ನು ನೋಡುವುದಕ್ಕೆ 349 ರೂಪಾಯಿ ಕೊಡಬೇಕಿತ್ತು. ಹೆಚ್ಚು ಕಡಿಮೆ ಒಂದು ವಾರದ ಬಳಿಕ ಅಮೆಜಾನ್ ಪ್ರೈಂ ಉಚಿತವಾಗಿ 'ಯುವ' ತೋರಿಸುವುದಕ್ಕೆ ಮುಂದಾಗಿದ್ದು, ಏಪ್ರಿಲ್ 26 ರಿಂದ ಸ್ಟ್ರೀಮಿಂಗ್ ಆಗಲಿದೆ.

ಪುನೀತ್ ರಾಜ್‌ಕುಮಾರ್ ಅಗಲಿಕೆ ಬಳಿಕ ರಾಜ್‌ಕುಮಾರ್ ಕುಟುಂಬದಿಂದ ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಹೀಗಾಗಿ ಯುವ ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ದವು. 'ಯುವ' ರಿಲೀಸ್ ಆಗುತ್ತಿದ್ದಂತೆ ದೊಡ್ಮನೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಯುವ ರಾಜ್‌ಕುಮಾರ್ ಆಕ್ಷನ್ ಹಾಗೂ ಡ್ಯಾನ್ಸ್‌ಗೆ ಫಿದಾ ಆಗಿದ್ದರು. ಈಗ ಥಿಯೇಟರ್‌ನಲ್ಲಿ ಸಿನಿಮಾ ನೋಡದವರಿಗೆ ಓಟಿಟಿಯಲ್ಲಿ ನೋಡುವ ಅವಕಾಶ ಸಿಗುತ್ತಿದೆ.
'ಯುವ' ಫ್ಯಾಮಿಲಿ ಯೂತ್ ಸಿನಿಮಾ. ಮೊದಲ ಸಿನಿಮಾದಲ್ಲೇ ಕುಸ್ತಿಪಟು ಆಗಿ ಕಾಣಿಸಿಕೊಂಡಿದ್ದಾರೆ. ಸನ್ನಿವೇಶವೊಂದರಲ್ಲಿ ಕುಸ್ತಿಯಿಂದ ಅಮಾನತಿಗೆ ಒಳಗಾಗುವ ಯುವ ಧೂಮಪಾನ, ಮಧ್ಯಪಾನದಲ್ಲಿ ಮುಳುಗಿ ಹೋಗುತ್ತಾನೆ. ಜೊತೆಗೆ ಸ್ಥಳೀಯ ವಿದ್ಯಾರ್ಥಿಗಳೊಂದಿಗೆ ಕಿತ್ತಾಟಕ್ಕೆ ಇಳಿಯುತ್ತಾನೆ. ಇದೇ ಸಮಯದಲ್ಲಿ ಮನೆಯಲ್ಲಿ ದುರಂತ ನಡೆದು, ಸಂಸಾರವನ್ನು ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತೆ. ಕುಟುಂಬವನ್ನು ಸರಿದೂಗಿಸಿಕೊಂಡು, ತನ್ನ ಕನಸನ್ನು ನನಸು ಮಾಡಿಕೊಂಡು ಹೇಗೆ ಮುಂದಕ್ಕೆ ಸಾಗುತ್ತಾನೆ ಅನ್ನೋದೆ ಸಿನಿಮಾದ ಕಥೆ. ಇನ್ನೂ ಈ ಸಿನಿಮಾ ನೋಡದವರು ಏಪ್ರಿಲ್ 26ಕ್ಕೆ ಫ್ರೀಯಾಗಿ ಪ್ರದರ್ಶನ ಕಾಣುತ್ತಿದೆ.
ಯುವ ರಾಜ್‌ಕುಮಾರ್ ಜೊತೆಗೆ ಸಪ್ತಮಿ ಗೌಡ, ಗೋಪಾಲಕೃಷ್ಣ ದೇಶಪಾಂಡೆ, ಅಚ್ಯುತ್ ಕುಮಾರ್, ಸುಧಾರಾಣಿ, ಹಾಗೂ ಹಿತಾ ಚಂದ್ರಶೇಖರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಯುವ ಗುಂಗಿನಲ್ಲೇ ಯುವ ರಾಜ್‌ಕುಮಾರ್ ಎರಡನೇ ಸಿನಿಮಾವನ್ನು ಇನ್ನೂ ಅನೌನ್ಸ್ ಮಾಡಿಲ್ಲ. ನಿನ್ನೆ (ಏಪ್ರಿಲ್ 23)ರಂದು ಘೋಷಣೆ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅದು ನಡೆದಿಲ್ಲ. ಹೀಗಾಗಿ ಯುವ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.


Click it and Unblock the Notifications











