ಓಟಿಟಿಗೆ ಸದ್ದಿಲ್ಲದೆ ಬಂತು ಕನ್ನಡದ ಮತ್ತೊಂದು ಸಿನಿಮಾ; ಎಲ್ಲಿ ನೋಡಬಹುದು?
ಸಿನಿಪ್ರಿಯರು ಥಿಯೇಟರ್‌ನಲ್ಲಿ ಸಿನಿಮಾ ನೋಡುವುದಕ್ಕಿಂತ ಓಟಿಟಿಯಲ್ಲಿ ನೋಡುವುದೇ ಹೆಚ್ಚಾಗಿದೆ. ಆದರೆ, ಇತ್ತೀಚೆಗೆ ಕನ್ನಡದ ಸಿನಿಮಾ ಮಂದಿ ಚಿತ್ರಮಂದಿರಕ್ಕೂ ಜನರು ಬರುತ್ತಿಲ್ಲ. ಓಟಿಟಿ ವೇದಿಕೆಗಳು ಕೂಡ ಸಿನಿಮಾವನ್ನು ಖರೀದಿ ಮಾಡುತ್ತಿಲ್ಲ ಎಂದು ಒಂದೇ ಕಣ್ಣಲ್ಲಿ ನೀರು ಹಾಕುತ್ತಿದ್ದರು. ಆದರೆ, ಕಳೆದ ಕೆಲವು ದಿನಗಳಿಂದ ಕನ್ನಡದ ಸಿನಿಮಾಗಳು ಒಂದೊಂದಾಗಿಯೇ ಸದ್ದಿಲ್ಲದೆ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ.
ಇತ್ತೀಚೆಗೆ ಡಾಲಿ ಧನಂಜಯ್ ನಿರ್ಮಿಸಿದ್ದ ಸಿನಿಮಾ 'ವಿದ್ಯಾಪತಿ' ಓಟಿಟಿಗೆ ಎಂಟ್ರಿ ಕೊಟ್ಟಿತ್ತು. ಅದರ ಹಿಂದೆನೇ ಧನ್ವೀರ್ ನಟಿಸಿರುವ 'ವಾಮನ' ಲಗ್ಗೆ ಇಟ್ಟಿದೆ. ಈಗ ಈ ವಾರ ಮುಗಿಯುವುದರೊಳಗೆ ಮತ್ತೊಂದು ಕನ್ನಡ ಸಿನಿಮಾ ಸದ್ದೇ ಮಾಡದೆ ಓಟಿಟಿಗೆ ಎಂಟ್ರಿ ಕೊಟ್ಟಿದೆ. ಹಾಗಂತ ಇದು ಕನ್ನಡದಲ್ಲಿ ಬರುವ ರೆಗ್ಯೂಲರ್ ಸಿನಿಮಾ ಅಲ್ಲ. ಅದೇ ಕಮರ್ಷಿಯಲ್ ಸಿನಿಮಾಗಳನ್ನು ನೋಡಿ ಬೇಸರವಾದವರಿಗೆ ಈ ಸಿನಿಮಾ ಇಷ್ಟ ಆಗಬಹುದು.

ಅಂದ್ಹಾಗೆ ಅಮೆಜಾನ್ ಪ್ರೈಂ ವಿಡಿಯೋಗೆ ಲಗ್ಗೆ ಇಟ್ಟಿರುವ ಸಿನಿಮಾದಲ್ಲಿ ಹೊಸಬರು ಇಲ್ಲ. ಪ್ರಮುಖ ಪಾತ್ರದಲ್ಲಿ ಹರಿಪ್ರಿಯ, ಕಿಶೋರ್ ಅಂತ ದಿಗ್ಗಜರೇ ನಟಿಸಿದ್ದಾರೆ. ಇದೊಂದು 13ನೇ ಶತಮಾನದಲ್ಲಿ ನಡೆಯುವ ಕಥೆ. ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಇಬ್ಬರು ಪ್ರಮುಖ ಕಲಾವಿದರು ವಿಶಿಷ್ಟವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಿದ್ದರೆ, ಆ ಸಿನಿಮಾ ಯಾವುದು? ವಿಶೇಷತೆ ಏನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಈಗಾಗಲೇ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸ್ಪ್ರೀಮಿಂಗ್ ಆಗುತ್ತಿರುವ ಸಿನಿಮಾದ ಹೆಸರು 'ಅಮೃತ ಮತಿ'. ಇದು 13ನೇ ಶತಮಾನದ ಕಥೆ. ಕನ್ನಡದ ಖ್ಯಾತ ಕವಿ ಜನ್ನನ ಕುರಿತಾದ ಸಿನಿಮಾ. ಜನ್ನನ 'ಯಶೋಧರ ಚರಿತೆ' ಎನ್ನುವ ಕಾವ್ಯ ಪ್ರಸಂಗವನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಈ ಸಿನಿಮಾದಲ್ಲಿ ಮೂಲ ಕಥನವನ್ನು ಮರುಸೃಷ್ಟಿ ಮಾಡಿ ನಿರೂಪಣೆ ಮಾಡಿರುವುದೇ ವಿಶೇಷ. ಕನ್ನಡ ಸಾಹಿತ್ಯದಲ್ಲಿ ಮರುಸೃಷ್ಟಿ ಮಾಡುವ ಪರಂಪರೆಯಿದೆ. ಈ ಸಿನಿಮಾ ಕೂಡ ಅದರ ಮುಂದುವರಿದ ಭಾಗವಾಗಿದೆ. ಅಂದ್ಹಾಗೆ ಈ ಸಿನಿಮಾವನ್ನು ಕನ್ನಡ ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ಕನ್ನಡದ ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನ ಮಾಡುವುದರ ಜೊತೆಗೆ ಚಿತ್ರಕತೆ, ಸಂಭಾಷಣೆ ಮತ್ತು ಸಾಹಿತ್ಯ ಕೂಡ ಇವರದ್ದೇ. ಈ ಚಿತ್ರದಲ್ಲಿ ಹರಿಪ್ರಿಯ 'ಅಮೃತ ಮತಿ'ಯ ಪಾತ್ರದಲ್ಲಿಯೂ, ಬಹುಭಾಷಾ ನಟ ಕಿಶೋರ್ 'ಯಶೋಧರ'ನ ಪಾತ್ರದಲ್ಲಿಯೂ ನಟಿಸಿದ್ದಾರೆ. ಇವರೊಂದಿಗೆ ಹಿರಿಯ ನಟ ಸುಂದರರಾಜ್, ಪ್ರಮೀಳಾ ಜೋಷಾಯ್, ತಿಲಕ್, ಅಂಬರೀಶ್ ಸಾರಂಗಿ, ವತ್ಸಲಾ ಮೋಹನ್, ಸುಪ್ರಿಯಾ ರಾವ್ ಸೇರಿದಂತೆ ಹಲವು ಮಂದಿ ನಟಿಸಿದ್ದಾರೆ.
ಸುಮಾರು ನಾಲ್ಕು ವರ್ಷಗಳ ಹಿಂದೆ ಈ ಸಿನಿಮಾ ಹಲವು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗಿಯಾಗಿತ್ತು. ಅಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಕೂಡ ಗೆದ್ದುಕೊಂಡು ಬಂದಿತ್ತು. ನಟಿ ಹರಿಪ್ರಿಯಾಗೆ ಹಾಲಿವುಡ್ ಅಂತಾರಾಷ್ಟ್ರೀಯ ಮಟ್ಟದ ಗೋಲ್ಡನ್ ಏಜ್ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತ್ತು. ಲಾಸ್ ಏಂಜಲಿಸ್‌ನಲ್ಲಿ ನಡೆದಿದ್ದ ಸನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಇನ್ನು ಸ್ಕ್ರೀನ್‌ಪ್ಲೇಗೆ ಬರಗೂರು ರಾಮಚಂದ್ರಪ್ಪ ಅವರು ಪ್ರಶಸ್ತಿಯನ್ನು ಗೆದ್ದಿದ್ದರು. ಅಟ್ಲಾಂಟ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ಅಮೃತಮತಿ' ವಿದೇಶಿ ಭಾಷಾ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ. ಇಲ್ಲಿವರೆಗೂ ಸುಮಾರು 10ಕ್ಕೂ ಅಧಿಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
'ಅಮೃತ ಮತಿ'ಗೆ ಸುರೇಶ್ ಅರಸು ಸಂಕಲನ, ನಾಗರಾಜ್ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ತ್ರಿಭುವನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಇಂಚರ ಪುಟ್ಟಣ್ಣ ಪ್ರೊಡಕ್ಷನ್‌ನಲ್ಲಿ ಸಿನಿಮಾ ನಿರ್ಮಾಣ ಆಗಿದ್ದು, 'ಅಮೃತ ಮತಿ' ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿ ವೇದಿಕೆಯಲ್ಲಿ ರಿಲೀಸ್ ಆಗಿದೆ. ಓಟಿಟಿ ಪ್ರಿಯರು ಈ ಸಿನಿಮಾವನ್ನು ನೋಡಬಹುದಾಗಿದೆ.


Click it and Unblock the Notifications











