ಓಟಿಟಿಗೆ ಎಂಟ್ರಿ ಕೊಟ್ಟ ಹೃತಿಕ್ ರೋಷನ್; ಪ್ರಮುಖ ಪಾತ್ರದಲ್ಲಿ ಗರ್ಲ್‌ಫ್ರೆಂಡ್ ಸಬಾ-'ಪೃಥ್ವಿ' ನಾಯಕಿ ಪಾರ್ವತಿ
ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಓಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ತೆರೆಕಂಡ 'ವಾರ್ 2' ಬಾಕ್ಸಾಫೀಸ್‌ನಲ್ಲಿ ಸೋತ ಬಳಿಕ ಹೃತಿಕ್ ರೋಷನ್ ಓಟಿಟಿ ಕಡೆಗೂ ಮುಖ ಮಾಡಿದ್ದಾರೆ. ಓಟಿಟಿ ದೈತ್ಯ ಅಮೆಜಾನ್ ಪ್ರೈಂ ವಿಡಿಯೋ ಜೊತೆ ಹೃತಿಕ್ ಕೈ ಜೋಡಿದ್ದು, ಬಾಲಿವುಡ್ ಮಂದಿಯ ಕಣ್ಣು ಈ ಜಂಟಿ ಪ್ರಾಜೆಕ್ಟ್ ಮೇಲಿದೆ. ಹೃತಿಕ್ ರೋಷನ್ ಎಂಟ್ರಿ ಓಟಿಟಿ ಪ್ರಿಯರಲ್ಲಿ ಹೊಸ ಹುರುಷು ಹುಟ್ಟಾಕಿದೆ.
ಹೃತಿಕ್ ರೋಷನ್ ಭಾರತದ ಜನಪ್ರಿಯ ಓಟಿಟಿ ವೇದಿಕೆಯೊಂದಿಗೆ ಕೈ ಜೋಡಿಸಿದ್ದು ಸಿನಿಮಾ ಮಂದಿಯ ಕಣ್ಣು ಅರಳುವಂತೆ ಮಾಡಿದೆ. ಹಾಗಂತ ಹೃತಿಕ್ ರೋಷನ್ ಓಟಿಟಿ ನಟನಾಗಿ ಎಂಟ್ರಿ ಕೊಡುತ್ತಿಲ್ಲ. ಬದಲಾಗಿ ನಿರ್ಮಾಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮೆಜಾನ್ ಪ್ರೈಂ ವಿಡಿಯೋ 'ಸ್ಟೋರ್ಮ್' (Storm) ಅಂತ ಹೆಸರಿಟ್ಟುಕೊಂಡು ಶುರು ಮಾಡಿರುವ ಈ ವೆಬ್ ಸೀರಿಸ್ ಈಗಾಗಲೇ ಚರ್ಚೆಯನ್ನು ಹುಟ್ಟಾಕಿದೆ.

ಹೃತಿಕ್ ರೋಷನ್ ತಮ್ಮ ನಿರ್ಮಾಣ ಸಂಸ್ಥೆಯ ಒಂದು ಭಾಗವಾಗಿರುವ ಫಿಲ್ಮ್‌ಕ್ರಾಫ್ಟ್ ಪ್ರೊಡಕ್ಷನ್ಸ್ ಅಡಿಯಲ್ಲಿ ಬರುವ HRX ಫಿಲ್ಮ್ಸ್ ಈ ವೆನ್ ಸೀರಿಸ್ ಅನ್ನು ನಿರ್ಮಾಣ ಮಾಡುತ್ತಿದೆ. ಈ ವೆಬ್ ಸೀರಿಸ್ ಅನ್ನು ಅಜಿತ್ ಪಾಲ್ ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ಈ ವೆಬ್ ಸೀರಿಸ್‌ನಲ್ಲಿ ಹೃತಿಕ್ ರೋಷನ್ ಗೆಳತಿ ಸಬಾ ಅಜಾದ್ ಕೂಡ ನಟಿಸುತ್ತಿರೋದು ಗಮನ ಸೆಳೆದಿದೆ.
ಹೃತಿಕ್ ರೋಷನ್ ನಿರ್ಮಿಸುತ್ತಿರುವ 'ಸ್ಟೋರ್ಮ್' ವೆಬ್ ಸೀರಿಸ್ ಇತ್ತೀಚೆಗೆ ಮುಂಬೈನಲ್ಲಿ ಲಾಂಚ್ ಆಗಿದೆ. ಈ ಸಿನಿಮಾಗೆ ಕೆಲಸ ಮಾಡುತ್ತಿರುವ ಇಡೀ ತಂಡ ಒಟ್ಟಿಗೆ ಕಾಣಿಸಿಕೊಂಡಿದೆ. ಹೃತಿಕ್ ರೋಷನ್ ಜೊತೆಯಲ್ಲಿ ಈ ಸಿನಿಮಾಗೆ ಕೆಲಸ ಮಾಡುತ್ತಿರುವ ಕಲಾವಿದರು ಹಾಗೂ ತಾಂತ್ರಿಕ ತಂಡ ಭಾಗಿಯಾಗಿತ್ತು. ಅದರ ಫೋಟೊಗಳನ್ನು ಹೃತಿಕ್ ರೋಷನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
'ಸ್ಟೋರ್ಮ್' ವೆಬ್ ಸೀರಿಸ್‌ಗೆ ಅಜಿತ್ ಪಾಲ್ ಸಿಂಗ್, ಫ್ರಾಂಕೋಯಿಸ್ ಲುನೆಲ್, ಸ್ವಾತಿ ದಾಸ್ ಕಥೆಯನ್ನು ಹೆಣೆಯುತ್ತಿದ್ದಾರೆ. ಒಂದು ಕಡೆ ಹೃತಿಕ್ ರೋಷನ್ ನಿರ್ಮಾಣ ಸಂಸ್ಥೆ ವೆಬ್ ಸೀರಿಸ್ ಹಿಂದೆ ನಿಂತಿದ್ದು ತಂಡಕ್ಕೆ ಬಲ ಕೊಟ್ಟಿದ್ದರೆ, ಇನ್ನೊಂದು ಕಡೆ ಸಿನಿಮಾದ ಸ್ಟಾರ್ ಕಾಸ್ಟ್ ಗಮನ ಸೆಳೆಯುತ್ತಿದೆ. ಪುನೀತ್ ರಾಜ್‌ಕುಮಾರ್ ಜೊತೆ 'ಪೃಥ್ವಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಪಾರ್ವತಿ ತಿರುವೊತ್ತು ಈ ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ. ಸದ್ಯ ಇನ್ನೂ ಇವರ ಪಾತ್ರದ ಬಗ್ಗೆ ರಿವೀಲ್ ಆಗಿಲ್ಲ.
ಹಾಗೇ ಹೃತಿಕ್ ರೋಷನ್ ಗರ್ಲ್‌ಫ್ರೆಂಡ್ ಸಬಾ ಅಜಾದ್ ಕೂಡ ಈ ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ. ಈ ವಿಷಯ ಬಾಲಿವುಡ್ ಮಂದಿಯ ಗಮನ ಸೆಳೆದಿದೆ. ಇನ್ನು ಇವರೊಂದಿಗೆ ಅಲಯಾ, ಸೃಷ್ಠಿ ಶ್ರೀವತ್ಸವ್, ರಮಾ ಶರ್ಮಾ, ಆಶಿಶ್ ವಿದ್ಯಾರ್ಥಿ ಸೇರಿದಂತೆ ಹಲವರು ಈ ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ. ಮೇಲ್ನೋಟಕ್ಕೆ ಇರೊಂದು ಮಹಿಳಾ ಪ್ರಧಾನ ವೆಬ್ ಸೀರಿಸ್ ಇರಬಹುದೆಂಬ ಗುಮಾನಿ ಇದೆ.
ಅಮೇಜಾನ್ ಪ್ರೈಮ್ ಜೊತೆ ಭಾಗಿಯಾಗಿದ್ದ ತಂಡದ ಫೋಟೊಗಳನ್ನು ಶೇರ್ ಮಾಡಿಕೊಂಡಿ ಹೃತಿಕ್ ರೋಷನ್, ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ " ಈ ಪ್ರತಿಭಾವಂತರೊಂದಿಗೆ ಹೊಸ ಅಧ್ಯಾಯ ಹಾಗೂ ಅದ್ಭುತ ಜರ್ನಿ ಮುಂದಿದೆ. ಅಮೇಜಾನ್ ಪ್ರೈಂ ತಂಡದೊಂದಿಗೆ ಸಂಜೆಯನ್ನು ಕಳೆದಿದ್ದು ಅದ್ಭುತವಾಗಿತ್ತು" ಎಂದು ಹೃತಿಕ್ ರೋಷನ್ ಬರೆದುಕೊಂಡಿದ್ದಾರೆ. ಹಾಗೇ "ನಾನು ಓಟಿಟಿಗೆ ನಿರ್ಮಾಪಕನಾಗಿ ಎಂಟ್ರಿ ಕೊಡುವುದಕ್ಕೆ ಸ್ಟೋರ್ಮ್ ಒಂದೊಳ್ಳೆ ಅವಕಾಶ. ಅಸಾಧಾರಣವಾದ ಕಥೆಗಳಿಗೆ ಜೀವ ತುಂಬುವುದನ್ನು ಸಾಬೀತು ಮಾಡಿರುವ ಪ್ರೈಂ ವಿಡಿಯೋ ಜೊತೆ ಕೈ ಜೋಡಿಸುತ್ತಿರುವುದಕ್ಕೆ ಖುಷಿಯಿದೆ" ಎಂದು ಹೃತಿಕ್ ರೋಷನ್ ಹೇಳಿದ್ದಾರೆ.


Click it and Unblock the Notifications











