ಐಪಿಎಲ್ ಇತಿಹಾಸದಲ್ಲೇ ದಾಖಲೆ ಬರೆದ ಆರ್‌ಸಿಬಿ-ಪಂಜಾಬ್ ಕಿಂಗ್ಸ್ ಪಂದ್ಯ; ಮಾಡಿದ ರೆಕಾರ್ಡ್‌ಗಳೇನು ಗೊತ್ತೇ?
ಐಪಿಎಲ್ 2025 ಅನ್ನು ಪ್ರಸಾರ ಮಾಡಿದ್ದ ಜಿಯೋಸ್ಟಾರ್ ಸಂಸ್ಥೆ ಹೊಸ ಇತಿಹಾಸವನ್ನೇ ಬರೆದಿದೆ. ಟಿವಿ ಹಾಗೂ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಸ ದಾಖಲೆಯನ್ನು ಸೃಷ್ಟಿ ಮಾಡಿರುವುದಾಗಿ ಸಂಸ್ಥೆ ಅಧಿಕೃತವಾಗಿ ಹೇಳಿಕೊಂಡಿದೆ. ಐಪಿಎಲ್ ಇತಿಹಾಸದಲ್ಲೇ 18ನೇ ಸೀಸನ್ ಅತೀ ಹೆಚ್ಚು ವೀವ್ಸ್ ಹಾಗೂ ವೀಕ್ಷಣಾ ಸಮಯವನ್ನು ಪಡೆದುಕೊಂಡಿದೆ. ಟಿವಿ ಹಾಗೂ ಡಿಜಿಟಲ್ ವೇದಿಕೆಗಳಲ್ಲಿ ಏನೆಲ್ಲ ಸಾಧನೆಗಳನ್ನು ಮಾಡಿದೆ ಎಂದು ಅಂಶ ಅಂಶಗಳನ್ನು ನೀಡಿದೆ.
ಮೂರು ತಿಂಗಳ ಈ ಕ್ರಿಕೆಟ್ ಹಬ್ಬ ಅದ್ಧೂರಿಯಾಗಿಯೇ ಆರಂಭ ಆಗಿತ್ತು. ಜಿಯೋ ಹಾಟ್‌ಸ್ಟಾರ್ ಓಟಿಟಿ ವೇದಿಕೆ ಹಾಗೂ ಸ್ಟಾರ್‌ಸ್ಟೋರ್ಟ್ಸ್ ಚಾನೆಲ್‌ಗಳಲ್ಲಿ ಕ್ರಿಕೆಟ್ ಪಂದ್ಯಗಳು ಪ್ರಸಾರ ಆಗಿದ್ದವು. ಈ ಬಾರಿ ಕ್ರಿಕೆಟ್ ಪ್ರೇಮಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಅತೀ ಹೆಚ್ಚು ಸಮಯ ವೀಕ್ಷಣೆ ಮಾಡಿದ್ದು, ಐಪಿಎಲ್ ಇತಿಹಾಸದಲ್ಲಿಯೇ ದಾಖಲೆ ಎನ್ನಲಾಗಿದೆ.

ಇನ್ನು ಜಿಯೋ ಸ್ಟಾರ್‌ನ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿರುವ ಜಿಯೋಹಾಟ್‌ಸ್ಟಾರ್ ಸುಮಾರು 23.1 ಬಿಲಿಯನ್ ವೀವ್ಸ್ ಪಡೆದುಕೊಂಡಿದೆ. ಹಾಗೇ ಸುಮಾರು 384.6 ಬಿಲಿಯನ್ ನಿಮಿಷಗಳ ಕಾಲ ಐಪಿಎಲ್ ಪಂದ್ಯಗಳನ್ನ ವೀಕ್ಷಣೆ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಸುಮಾರು ಶೇ.29ರಷ್ಟು ಏರಿಕೆಯಾಗಿದೆ. ಕನೆಕ್ಟೆಡ್ ಟಿವಿಯಿಂದಲೂ ಶೇ.49ರಷ್ಟು ಏರಿಕೆಯಾಗಿದೆ ಎಂದು ಜಿಯೋಸ್ಟಾರ್ ಹೇಳಿಕೊಂಡಿದೆ.
ಇನ್ನು ಟಿವಿಯಲ್ಲೂ ದಾಖಲೆ ಮಂದಿ ಐಪಿಎಲ್ ಪಂದ್ಯಗಳನ್ನು ವೀಕ್ಷಣೆ ಮಾಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಐಪಿಎಲ್ ಪಂದ್ಯಗಳನ್ನು ಪ್ರಸಾರ ಮಾಡಲಾಗಿತ್ತು. ಇದರಿಂದ ಸುಮಾರು 456 ಬಿಲಿಯನ್ ನಿಮಿಷಗಳ ಕಾಲ ವೀಕ್ಷಕರಿ ಐಪಿಎಲ್ ಪಂದ್ಯಗಳನ್ನು ವೀಕ್ಷಣೆ ಮಾಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಅತೀ ಹೆಚ್ಚು ರೇಟಿಂಗ್ ಪಡೆದುಕೊಂಡಿದೆ ಎಂದು ವರದಿ ನೀಡಿದೆ. ಈ ಅಂಕಿ ಅಂಶಗಳು ಬಾರ್ಕ್ (BARC)ನೀಡಿದ 2+ ಏಜ್ ಗ್ರೂಪ್‌ನಿಂದ ಆಧರಿಸಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪಂದ್ಯವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಪಂದ್ಯ ಜೂನ್ 3ರಂದು ನಡೆದಿತ್ತು. ಈ ಪಂದ್ಯಕ್ಕೆ ಅತೀ ಹೆಚ್ಚು ಪ್ರತಿಕ್ರಿಯೆ ಸಿಕ್ಕಿದೆ. ಇದೊಂದೇ ಪಂದ್ಯವನ್ನು ಜಿಯೋಸ್ಟಾರ್ ಎಲ್ಲಾ ವೇದಿಕೆಗಳಿಂದ ಸುಮಾರು 31.7 ಬಿಲಿಯನ್ ನಿಮಿಷಗಳಷ್ಟು ಕಾಲ ವೀಕ್ಷಕರು ವೀಕ್ಷಣೆಯನ್ನು ಮಾಡಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿಯೇ ಅತೀ ಹೆಚ್ಚು ವೀಕ್ಷಣೆ ಪಡೆದ ಪಂದ್ಯವಾಗಿದೆ.

ಇನ್ನು ಟಿವಿಯಲ್ಲಿ ಈ ಪಂದ್ಯವನ್ನು ಸುಮಾರು 169 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. 15 ಬಿಲಿಯನ್ ನಿಮಿಷಗಳ ಕಾಲ ವೀಕ್ಷಣೆ ಮಾಡಿದ್ದಾರೆಂದು ಬಾರ್ಕ್ (BARC) ಅಂಕಿ ಅಂಶಗಳನ್ನು ನೀಡಿದೆ. ಇನ್ನು ಜಿಯೋಹಾಟ್‌ಸ್ಟಾರ್ 892 ಮಿಲಿಯನ್ ವಿಡಿಯೋ ವೀವ್ಸ್ ಬಂದಿದೆ ಎನ್ನಲಾಗಿದೆ. ಹಾಗೇ 16.74 ಬಿಲಿಯನ್ ನಿಮಿಷಗಳನ್ನು ವೀಕ್ಷಣೆ ಮಾಡಲಾಗಿದೆ.
ಈ ಸಾಧನೆಯ ಬಗ್ಗೆ ಸ್ಪೋರ್ಟ್ಸ್ ಮತ್ತು ಲೈವ್ ಎಕ್ಸ್‌ಪೀರಿಯನ್ಸಸ್, ಜಿಯೋಸ್ಟಾರ್‌ನ ಸಿಇಒ- ಸಂಜೋ ಗುಪ್ತಾ ಪ್ರತಿಕ್ರಿಯೆ ನೀಡಿದ್ದಾರೆ. "ಈ ವಿಶಿಷ್ಟ ಅಂಕಿ ಸಂಖ್ಯೆಗಳು ಕ್ರಿಕೆಟ್ ಅಭಿಮಾನಿಗಳಿಗೆ ನಾವು ಪ್ರಾಮಾಣಿಕವಾಗಿ ನೀಡುತ್ತಿರುವ ಬದ್ಧತೆಯೂ ಹೌದು. ಹಾಗೇ ಐಪಿಎಲ್ ಇನ್ನೂ ದೊಡ್ಡ ಆಸ್ತಿಯಾಗಿ ಹೇಗೆ ಬೆಳೆಯಬಹುದು ಎಂಬುವುದಕ್ಕೆ ಇದು ಸಾಕ್ಷಿಯಾಗಿದೆ. ಈ ಸೀಸನ್‌ನಲ್ಲಿ ನಾವು ಎರಡು ಪ್ರಮುಖ ಗುರಿಗಳನ್ನು ಹೊಂದಿದ್ದೆವು. ಒಂದು ಐಪಿಎಲ್‌ನಿಂದ ದೂರವಿದ್ದ ವೀಕ್ಷಕರನ್ನು ಸೆಳೆಯುವುದು. ಮತ್ತೊಂದು ಐಪಿಎಲ್ ಅನ್ನು ಭಕ್ತಿಯಿಂದ ವೀಕ್ಷಿಸುತ್ತಿರುವ ಅಭಿಮಾನಿಗಳಿಗೆ ಒಂದೊಳ್ಳೆಯ ವೀಕ್ಷಣಾ ಅನುಭವವನ್ನು ನೀಡುವುದು. ಅದರಲ್ಲಿ ಯಶಸ್ವಿಯಾಗಿದ್ದೇವೆ" ಎಂದು ಹೇಳಿದ್ದಾರೆ.


Click it and Unblock the Notifications











