Indian-2 OTT: ನಿರೀಕ್ಷೆ ಹುಸಿಗೊಳಿಸಿದ ಸೇನಾಪತಿ ತಾತ; ತಿಂಗಳಿಗೂ ಮುನ್ನ ಓಟಿಟಿಗೆ 'ಇಂಡಿಯನ್-2'!
ಕಮಲ್ ಹಾಸನ್ ನಟನೆಯ 'ಇಂಡಿಯನ್-2' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಿದೆ. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 28 ವರ್ಷಗಳ ಹಿಂದೆ ಪ್ರೀಕ್ವೆಲ್ ನೋಡಿ ಇಷ್ಟಪಟ್ಟವರಿಗೆ ಸೀಕ್ವೆಲ್ ಅಷ್ಟಾಗಿ ಇಷ್ಟವಾಗುತ್ತಿಲ್ಲ. ಇದೆಲ್ಲದರ ನಡುವೆ ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಚರ್ಚೆ ಶುರುವಾಗಿದೆ.
ಸೂಪರ್ ಹಿಟ್ ಸಿನಿಮಾಗಳ ಸರದಾರ ಶಂಕರ್ ನಿರ್ದೇಶನದ ಸಿನಿಮಾ ಅಂದ್ರೆ ಸಹಜವಾಗಿಯೇ ನಿರೀಕ್ಷೆ ಮೂಡುತ್ತದೆ. ಇನ್ನು ಕಮಲ್- ಶಂಕರ್ ಜೋಡಿ 'ಇಂಡಿಯನ್' ಸಿನಿಮಾ ಮಾಡಿ ಗೆದ್ದಿದ್ದರು. ಅವರಿಬ್ಬರು ಮತ್ತೆ ಒಂದಾಗಿದ್ದಾರೆ. ಸೂಪರ್ ಹಿಟ್ ಸಿನಿಮಾ ಸೀಕ್ವೆಲ್ ಮಾಡುತ್ತಿದ್ದಾರೆ ಎಂದಾಗ ಭಾರೀ ಹೈಪ್ ಕ್ರಿಯೇಟ್ ಆಗಿದ್ದು ಸುಳ್ಳಲ್ಲ. ಬಹಳ ತಡವಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಆದರೆ ಚಿತ್ರ ನೋಡಿದವರು ಬೇಸರಗೊಂಡಿದ್ದಾರೆ. ಈ ಸಿನಿಮಾ ಮಾಡದೇ ಇದ್ದಿದ್ದರೆ ಚೆನ್ನಾಗಿತ್ತು ಎನ್ನುತ್ತಿದ್ದಾರೆ.

ಹಿಂದಿನ ಸಿನಿಮಾದಂತೆ ಇಲ್ಲೂ ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ಸೇನಾಪತಿ ತಾತ ಹೋರಾಡುತ್ತಾನೆ. ಈ ಬಾರಿ ಯುವ ಜನತೆಯನ್ನು ತಮ್ಮ ಹೋರಾಟದಲ್ಲಿ ಸೇರಿಸಿಕೊಂಡಿದ್ದಾನೆ. ಆದರೆ ಈ ಹಿಂದಿನ ಸಿನಿಮಾದಲ್ಲಿ ಎಮೋಷನ್, ದೇಶಭಕ್ತಿ ಇಲ್ಲಿ ಮಿಸ್ ಆಗಿದೆ. ಅದೇ ಕಾರಣಕ್ಕೆ ಸಿನಿಮಾ ಪ್ರೇಕ್ಷಕನಿಗೆ ಇಷ್ಟವಾಗುತ್ತಿಲ್ಲ. ಇನ್ನುಳಿದಂತೆ ಅದ್ಧೂರಿ ಮೇಕಿಂಗ್, ಕಣ್ಣು ಕುಕ್ಕುವ ವಿಷ್ಯುವಲ್ಸ್ ಚಿತ್ರದಲ್ಲಿದೆ. ಆದರೆ ಅದ್ಯಾವುದು ಕೂಡ ಸಿನಿಮಾವನ್ನು ಗೆಲ್ಲಿಸಲು ಸಹಕಾರಿಯಾಗಿಲ್ಲ.
ಕಮಲ್ ಹಾಸನ್ ಸಾಧ್ಯವಾದಷ್ಟು ನಟಿಸೋ ಪ್ರಯತ್ನ ಮಾಡಿದ್ದಾರೆ. ರಿಸ್ಕಿ ಸ್ಟಂಟ್ಸ್ ಟ್ರೈ ಮಾಡಿದ್ದಾರೆ. ಆದರೆ ಅತಿಯಾದ ಮೇಕಪ್ ಕಮಲ್ ಅಭಿನಯಕ್ಕೆ ತೊಡಕಾಗಿದೆ. ಇನ್ನುಳಿದಂತೆ ಸಿನಿಮಾ ಸ್ಕ್ರೀನ್‌ಪ್ಲೇ ಹಾಗೂ ಎಮೋಷನಲ್ ಅಂಶಗಳು ಅಷ್ಟಾಗಿ ವರ್ಕ್ ಆಗಿಲ್ಲ. ಹೆಚ್ಚು ಕಮ್ಮಿ 3 ಗಂಟೆ ಸಿನಿಮಾ ಬೋರ್ ಎನಿಸುತ್ತದೆ. ವಿಪರ್ಯಾಸ ಅಂದ್ರೆ 'ಇಂಡಿಯನ್-2' ನೋಡುವುದೇ ಕಷ್ಟ ಎಂದು ಕೆಲವರು ಹೇಳುತ್ತಿದ್ದರೆ ಪಾರ್ಟ್- ಸಿನಿಮಾ ಸಿದ್ಧಪಡಿಸಿದೆ ಚಿತ್ರತಂಡ. ಹೌದು 'ಇಂಡಿಯನ್-3' ಮುಂದಿನ ವರ್ಷ ತೆರೆಗೆ ಬರಲಿದೆ.

'ಇಂಡಿಯನ್-2' ಕ್ಲೈಮ್ಯಾಕ್ಸ್ ಬಳಿಕ 'ಇಂಡಿಯನ್-3' ಚಿತ್ರದ ಟ್ರೈಲರ್ ಸಹ ಪ್ರಸಾರ ಮಾಡಿದ್ದಾರೆ. ಟ್ರೈಲರ್ ಕೊಂಚಮಟ್ಟಿಗೆ ಭರವಸೆ ಮೂಡಿಸಿದೆ. ಅದನ್ನು ನೇರವಾಗಿ ಹೇಳುವುದು ಬಿಟ್ಟು ನಡುವೆ ಈ 'ಇಂಡಿಯನ್-2' ಯಾಕೆ ಬೇಕಿತ್ತು ಎಂದು ಕೆಲವರು ಕೇಳುತ್ತಿದ್ದಾರೆ. ಈ ಚಿತ್ರದಲ್ಲಿ ತಮಿಳುನಾಡಿನ ಭ್ರಷ್ಟಾಚಾರದ ಕಥೆ ಹೇಳಿರುವ ತಂಡ ಮುಂದೆ ಇಡೀ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧದ ಕಥೆ ಹೇಳಲು ಬರುತ್ತಿದೆ.
ಅಂದಹಾಗೆ 'ಇಂಡಿಯನ್-2' ಡಿಜಿಟಲ್ ಸ್ಟ್ರೀಮಿಂಗ್ ರೈಟ್ಸ್ ನೆಟ್‌ಫ್ಲಿಕ್ಸ್ ಪಾಲಾಗಿದೆ. ಸಾಮಾನ್ಯವಾಗಿ 45 ದಿನಗಳ ಬಳಿಕ ಸಿನಿಮಾ ಓಟಿಟಿಗೆ ಬರುತ್ತದೆ. ಈ ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡುತ್ತಿದ್ದರೆ 20 ದಿನಕ್ಕೆ ಸ್ಮಾಲ್ ಸ್ಕ್ರೀನ್‌ಗೆ ಬರುವ ಸಾಧ್ಯತೆಯಿದೆ. ಆಗಸ್ಟ್ 15ಕ್ಕೆ ಸ್ವಾತಂತ್ರ ದಿನಾಚರಣೆ ಸಂಭ್ರಮದಲ್ಲಿ 'ಇಂಡಿಯನ್-2' ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುತ್ತದೆ ಎನ್ನುವ ಚರ್ಚೆ ನಡೆಯುತ್ತಿದೆ. ಹೇಳಿಕೇಳಿ ಇದು ದೇಶಪ್ರೇಮದ ಸಿನಿಮಾ. ಹಾಗಾಗಿ ಅದಕ್ಕಿಂತ ಒಳ್ಳೆ ಸಮಯ ಸಿಗಲ್ಲ ಎನ್ನುವ ಲೆಕ್ಕಾಚಾರ ನಡೀತಿದೆ.
ಶಂಕರ್ ಸತತ ಸೋಲುಗಳಿಂದ ಕಂಗೆಟ್ಟಿದ್ದಾರೆ. ಇತ್ತ 'ವಿಕ್ರಂ' ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದರು. ಇವರಿಬ್ಬರ ಕಾಂಬೋ ಮ್ಯಾಜಿಕ್ ಮಾಡುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಇನ್ನು ರಾಮ್‌ಚರಣ್ ನಟನೆಯ 'ಗೇಮ್ ಚೇಂಜರ್' ಚಿತ್ರಕ್ಕೂ ನಿರ್ದೇಶಕರು ಆಕ್ಷನ್ ಕಟ್ ಹೇಳಿದ್ದಾರೆ. 'ಇಂಡಿಯನ್-2' ಸಿನಿಮಾ ನೋಡಿ ರಾಮ್‌ಚರಣ್ ಫ್ಯಾನ್ಸ್ ಆತಂಕಗೊಂಡಿದ್ದಾರೆ.


Click it and Unblock the Notifications