Thug Life OTT: ದಿಢೀರ್ ಓಟಿಟಿಗೆ ಬಂತು 'ಥಗ್ ಲೈಫ್'; ಕಮಲ್‌ಗೆ ಭಾರೀ ಮುಖಭಂಗ
ಮಣಿರತ್ನಂ ನಿರ್ದೇಶನದ 'ಥಗ್ ಲೈಫ್' ಸಿನಿಮಾ ತಿಂಗಳಿಗೂ ಮುನ್ನ ಓಟಿಟಿಗೆ ಬಂದಿದೆ. ಯಾವುದೇ ಸುಳಿವು ನೀಡದೇ ಏಕಾಏಕಿ ಚಿತ್ರವನ್ನು ಓಟಿಟಿಯಲ್ಲಿ ರಿಲೀಸ್ ಮಾಡಿದ್ದಾರೆ. ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು ಕಮಲ್ ಹಾಸನ್. ಆದರೆ ಅವಕಾಶ ಸಿಕ್ಕರೂ ಸಿನಿಮಾ ಕರ್ನಾಟಕದಲ್ಲಿ ತೆರೆಗೆ ಬರಲಿದೆ.
ಜೂನ್ 5ಕ್ಕೆ ತೆರೆಗೆ ಬಂದಿದ್ದ 'ಥಗ್ ಲೈಫ್' ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಸಿಕ್ಕಿತ್ತು. ಮಣಿ- ಕಮಲ್ ಮ್ಯಾಜಿಕ್ ನಡೆಯಲಿಲ್ಲ. ತಮಿಳು ಪ್ರೇಕ್ಷಕರೇ ಸಿನಿಮಾ ನೋಡಿ ಬೇಸರಗೊಂಡು ಟ್ರೋಲ್ ಮಾಡಿದ್ದರು. ಸಿನಿಮಾ ಹೀನಾಯವಾಗಿ ಸೋತಿತ್ತು. 8 ವಾರಗಳ ಬಳಿಕ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲು ಒಪ್ಪಂದವಾಗಿತ್ತು. ಆದರೆ 4 ವಾರ ಕಳೆಯುವ ಮುನ್ನ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ.

ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು ಎಂದು ಕಮಲ್ ಹಾಸನ್ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ಕನ್ನಡ ಪರ ಸಂಘಟನೆಗಳು ಬಿಡಲಿಲ್ಲ. ಬಳಿಕ ಕಮಲ್ ಹೈಕೋರ್ಟ್ ಮೆಟ್ಟಿಲೇರಿದ್ದರೂ ಪ್ರಯೋಜನವಾಗಲಿಲ್ಲ. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಜಯ ಸಿಕ್ಕಿತ್ತು. ಸರ್ಕಾರವೇ ಸಿನಿಮಾ ಬಿಡುಗಡೆಗೆ ಅನುವು ಮಾಡಿಕೊಡಬೇಕು ಎಂದು ಕೋರ್ಟ್ ಹೇಳಿತ್ತು. ಆದರೆ ಅದಾಗಲೇ ಸೋತಿದ್ದ ಸಿನಿಮಾವನ್ನು ಕರ್ನಾಟಕದಲ್ಲಿ ಕಮಲ್ ಬಿಡುಗಡೆ ಮಾಡಲಿಲ್ಲ. ಇದೀಗ ನೇರವಾಗಿ ಓಟಿಟಿಗೆ ಬಂದಿದೆ.
'ನಾಯಗನ್' ಬಳಿಕ 'ಥಗ್ ಲೈಫ್' ಚಿತ್ರಕ್ಕಾಗಿ ಕಮಲ್ ಹಾಗೂ ಮಣಿರತ್ನಂ ಒಂದಾಗಿದ್ದರು. ಇಬ್ಬರೂ ಸೇರಿ ಚಿತ್ರಕ್ಕೆ ಹಣ ಹೂಡಿದ್ದರು. ಆದರೆ ಸಿನಿಮಾ ಮಾತ್ರ ಗೆಲ್ಲಲಿಲ್ಲ. ಸಿಂಬು ಚಿತ್ರದ ಮತ್ತೊಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ತ್ರಿಶಾ ಹಾಗೂ ಅಭಿರಾಮಿ ಚಿತ್ರದ ತಾರಾಗಣದಲ್ಲಿದ್ದಾರೆ. ಅಂದಾಜು 130 ಕೋಟಿ ರೂ.ಗೆ ನೆಟ್‌ಫ್ಲಿಕ್ಸ್ ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿತ್ತು ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಸಿನಿಮಾ ಸೋತಿದ್ದರಿಂದ ಆ ಮೊತ್ತವನ್ನು ತಗ್ಗಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಅಲ್ಲೂ ಕೂಡ ಕಮಲ್ ಹಾಸನ್‌ಗೆ ಹಿನ್ನಡೆಯಾದಂತೆ ಆಗಿದೆ.
ಭದ್ರತೆ ಜೊತೆ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿತ್ತು. ಇನ್ನು ಸರ್ಕಾರ ಕೂಡ ಒಪ್ಪಿಕೊಂಡಿತ್ತು. ಆದರೆ ಕನ್ನಡಪರ ಸಂಘಟನೆಗಳು ಮಾತ್ರ ತಣ್ಣಗಾಗಲಿಲ್ಲ. ಇದೆಲ್ಲದರ ನಡುವೆ ಸಿನಿಮಾ ಬಿಡುಗಡೆಗೆ ಕರ್ನಾಟಕದ ವಿತರಕರು ಒಪ್ಪಲಿಲ್ಲ. ಸಿನಿಮಾ ಬಿಡುಗಡೆ ಮಾಡಿದರೂ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಸುಮ್ಮನಾಗಿದ್ದರು. ಬೇರೆ ದಾರಿ ಕಾಣದೇ ಅನಿವಾರ್ಯವಾಗಿ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವಂತಾಗಿದೆ.
ತಮಿಳು ಜೊತೆಗೆ ತೆಲುಗು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಗಳಿಗೆ 'ಥಗ್ ಲೈಫ್' ಸಿನಿಮಾ ಡಬ್ ಆಗಿ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಓಟಿಟಿಯಲ್ಲಿ ಸಿನಿಮಾ ನೋಡಿದವರು ಕೂಡ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ಈ ಗ್ಯಾಂಗ್‌ಸ್ಟರ್ ಚಿತ್ರಕ್ಕೆ ಮಣಿರತ್ನಂ ಜೊತೆ ಸೇರಿ ಕಮಲ್ ಹಾಸನ್ ಕಥೆ ಬರೆದಿದ್ದಾರೆ.
ಎ. ಆರ್ ರಹಮಾನ್ ಸಂಗೀತ 'ಥಗ್ ಲೈಫ್' ಚಿತ್ರಕ್ಕಿದೆ. ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಆಗಿತ್ತು ಎನ್ನುವ ಮಾತುಗಳು ಕೇಳಿಬಂದಿತ್ತು. ಗ್ಯಾಂಗ್‌ಸ್ಟರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ 50 ಕೋಟಿ ರೂ. ಕೂಡ ಕಲೆಕ್ಷನ್ ಮಾಡದೇ ನಿರಾಸೆ ಮೂಡಿಸಿತ್ತು. ಇದೆಲ್ಲದರ ನಡುವೆ ಅಂದುಕೊಂಡಿದ್ದಕ್ಕಿಂತ ಬೇಗ ಸಿನಿಮಾ ಓಟಿಟಿಗೆ ಬರುವಂತಾಗಿದೆ. ಕಮಲ್ ಹಾಗೂ ಮಣಿ ಕಾಂಬಿನೇಷನ್ ಸಿನಿಮಾ ಎನ್ನುವ ಕಾರಣಕ್ಕೆ ನೆಟ್‌ಫ್ಲಿಕ್ಸ್ ಭಾರೀ ಮೊತ್ತ ನೀಡಿ ರೈಟ್ಸ್ ಖರೀದಿಸಿತ್ತು. ಆದರೆ ಎಲ್ಲರ ನಿರೀಕ್ಷೆ ಸುಳ್ಳಾಗಿತ್ತು.


Click it and Unblock the Notifications











