ಈ ತಿಂಗಳ ಕೊನೆಯಲ್ಲಿ ಓಟಿಟಿಗೆ ಲಗ್ಗೆ ಇಡುತ್ತೆ ಈ ಕನ್ನಡ ಸಿನಿಮಾ; ಯಾವುದದು?
ಓಟಿಟಿ ಪ್ರಿಯರಿಗೆ ಹಬ್ಬವೋ ಹಬ್ಬ. ಪ್ರತಿ ವೀಕೆಂಡ್‌ನಲ್ಲಿ ಥಿಯೇಟರ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತೋ ಇಲ್ಲವೋ ಆದರೆ, ಓಟಿಟಿಯಲ್ಲಿ ಮಾತ್ರ ಒಂದಲ್ಲ ಒಂದು ರಿಲೀಸ್ ಆಗುತ್ತೆ. ಈ ತಿಂಗಳ ಕೊನೆಯಲ್ಲಿ ಮತ್ತೊಂದು ಕನ್ನಡ ಸಿನಿಮಾ ರಿಲೀಸ್ ಆಗುತ್ತಿದೆ. ಅದಕ್ಕೆ ವೇದಿಕೆ ರೆಡಿಯಾಗುತ್ತಿದೆ. ಅಂದ್ಹಾಗೆ, ಇದು ರೆಗ್ಯೂಲರ್ ಸಿನಿಮಾ ಅಲ್ಲ. ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದು ಬಂದಿರುವ ಈ ಸಿನಿಮಾ ತಿಂಗಳ ಕೊನೆಯಲ್ಲಿ ರಿಲೀಸ್ ಆಗಲಿದೆ.
ಅಂದ್ಹಾಗೆ ಈ ಸಿನಿಮಾದ ಹೆಸರು 'ಮೈ ಹೀರೋ'. ಅವಿನಾಶ್ ವಿಜಯಕುಮಾರ್ ನಿರ್ಮಿಸಿ, ನಿರ್ದೇಶಿಸಿರುವ 'ಮೈ ಹೀರೊ' ಕಳೆದ ವರ್ಷ ರಿಲೀಸ್ ಆಗಿ ಮೆಚ್ಚುಗೆಗೆ ಗಳಿಸಿತ್ತು. ಅಷ್ಟೇ ಅಲ್ಲದೇ ಪ್ರಪಂಚದ ಪ್ರಸಿದ್ದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೂ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದಿದೆ. ಈಗ ಇದೇ ಸಿನಿಮಾ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ರಿಲೀಸ್ ಆಗುತ್ತಿದೆ.

'ಮೈ ಹೀರೋ' ಕನ್ನಡ ಚಿತ್ರರಂಗದ ಮಟ್ಟಿಗೆ ವಿಶೇಷ ಸಿನಿಮಾ. ಯಾಕಂದ್ರೆ, ಈ ಸಿನಿಮಾದಲ್ಲಿ ಹಾಲಿವುಡ್ ನಟರೂ ಕೂಡ ನಟನೆ ಮಾಡಿದ್ದಾರೆ. ಕನ್ನಡದ ನಿರ್ದೇಶಕ ಹಾಲಿವುಡ್ ಕಲಾವಿದರನ್ನು ಕರೆದುಕೊಂಡು ಸದ್ದು ಮಾಡಿದ್ದರು. ಥಿಯೇಟರ್‌ನಲ್ಲಿ ಈ ಸಿನಿಮಾ ನೋಡುವುದನ್ನು ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದು.
ಹಾಲಿವುಡ್ನ ಸ್ಟಾರ್ ನಟಿ ಜ್ಯೂಲಿಯಾ ರಾಬರ್ಟ್ಸ್ ಅವರ ಸಹೋದರ ಎರಿಕ್ ರಾಬರ್ಟ್ಸ್ 'ಮೈ ಹೀರೋ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಎರಿಕ್ ರಾಬರ್ಟ್ಸ್ 'ರನ್‍ಅವೇ ಟ್ರೈನ್', 'ದಿ ಸ್ಪೆಷಲಿಸ್ಟ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವಂತಹ ಜನಪ್ರಿಯ ನಟ. ಇಂತಹ ಕನ್ನಡದಲ್ಲಿ ಸಿನಿಮಾದಲ್ಲಿ ನಟಿಸಿರುವುದೇ ಇದರ ಹೈಲೈಟ್. ಮತ್ತೊಬ್ಬ ಹಾಲಿವುಡ್ ನಟ ಜಿಲಾಲಿ ರಜ್ ಕಲ್ಲಹ್ ಕೂಡಾ ಈ ಸಿನಿಮಾದಲ್ಲಿ ನಟಿಸಿರುವುದು ವಿಶೇಷ.
ಕನ್ನಡದಿಂದ ಪ್ರಕಾಶ್ ಬೆಳವಾಡಿ ನಟಿಸಿದ್ದಾರೆ. ಇವರದ್ದು ಜಿಲ್ಲಾಧಿಕಾರಿಯ ಪಾತ್ರ. ಇನ್ನು ಪುರೋಹಿತನ ಪಾತ್ರದಲ್ಲಿ ದತ್ತಣ್ಣ ನಟಿಸಿದ್ದಾರೆ. ನಟಿ ಅಂಕಿತಾ ಅಮರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಬಾಲ ನಟ ವೇದಿಕ್ 'ಮೈ ಹೀರೋ' ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೇ ನಿರಂಜನ್ ದೇಶಪಾಂಡೆ, ಅಂಕಿತ ಅಮರ್, ತನುಜಾ ಕೃಷ್ಣಪ್ಪ, ನವೀನ್ ಬೊಂದೇಲ್ ಅವರನ್ನು ನೋಡಬಹುದು. ಹೀಗಾಗಿ ಈ ಸಿನಿಮಾ ಈಗ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಮೇ 30ರಿಂದ ವೀಕ್ಷಿಸಬಹುದಾಗಿದೆ.
ಇನ್ನು ಸಿನಿಮಾವನ್ನು ರಂಗಭೂಮಿಯ ಕಲಾವಿದ ಅವಿನಾಶ್ ವಿಜಯಕುಮಾರ್ ನಿರ್ದೇಶನ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆಯನ್ನು ಇಟ್ಟುಕೊಂಡು ಚಿತ್ರಕಥೆಯನ್ನು ರಚಿಸಲಾಗಿತ್ತು. ಹಳ್ಳಿಗಳಲ್ಲಿರುವ ಜಾತಿ ಪದ್ಧತಿಯನ್ನು ಇಟ್ಟುಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಇದು ಕಂಪ್ಲೀಟ್ ಕಂಟೆಂಟ್ ಬೇಸ್ಡ್ ಸಿನಿಮಾ.
ಅಂತರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿದೆ. ಸುಮಾರು 10ಕ್ಕೂ ಅಧಿಕ ಚಿತ್ರೋತ್ಸವಗಳಲ್ಲಿ ಈ ಸಿನಿಮಾವನ್ನು ಪ್ರದರ್ಶನ ಮಾಡಲಾಗಿದ್ದು, ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದೆ. ಇನ್ನು 'ಮೈ ಹೀರೋ' ಸಿನಿಮಾಗೆ ಗಗನ್ ಬಡೇರಿಯಾ ಸಂಗೀತ ನಿರ್ದೇಶನ ಹಾಗೂ ವೀನಸ್ ನಾಗರಾಜ್ ಅವರ ಛಾಯಾಗ್ರಹಣವಿದೆ.


Click it and Unblock the Notifications











