Max OTT Release: ಕಿಚ್ಚನ 'ಮ್ಯಾಕ್ಸ್' ಒಂದೇ ದಿನ ಓಟಿಟಿ ಹಾಗೂ ಟಿವಿಯಲ್ಲಿ ರಿಲೀಸ್; ಎಲ್ಲಿ-ಯಾವಾಗ?
ಸಹಜವಾಗಿ ಸೂಪರ್‌ಸ್ಟಾರ್ ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಟ್ಟ ಬಳಿಕ ಮೊದಲು ಓಟಿಟಿಯಲ್ಲಿ ರಿಲೀಸ್ ಆಗುತ್ತೆ. ಆ ನಂತರ ಟಿವಿಯಲ್ಲಿ ಪ್ರಸಾರ ಆಗುತ್ತೆ. ಆದರೆ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾದ ವಲ್ಡ್ ಟೆಲಿವಿಷನ್ ಪ್ರೀಮಿಯರ್ ಡೇಟ್ ಮೊದಲು ಅನೌನ್ಸ್ ಆಗಿತ್ತು. ಈ ಕಾರಣಕ್ಕೆ 'ಮ್ಯಾಕ್ಸ್' ಓಟಿಟಿ ರಿಲೀಸ್ ಡೇಟ್ ಬಗ್ಗೆ ಗೊಂದಲ ಹುಟ್ಟಿಕೊಂಡಿತ್ತು.
ಆದ್ರೀಗ 'ಮ್ಯಾಕ್ಸ್' ಸಿನಿಮಾದ ಓಟಿಟಿಯಲ್ಲಿ ಯಾವಾಗ ರಿಲೀಸ್ ಆಗುತ್ತೆ ಅನ್ನೋದು ಕೂಡ ಅನೌನ್ಸ್ ಆಗಿದೆ. ಜೀ ಕನ್ನಡದಲ್ಲಿ 'ಮ್ಯಾಕ್ಸ್' ಪ್ರಸಾರ ಆಗುತ್ತಿರುವುದನ್ನು ತಿಳಿದಿದ ಕಿಚ್ಚ ಅಭಿಮಾನಿಗಳಿಗೆ ಓಟಿಟಿಯಲ್ಲಿ ಯಾವಾಗ ಸ್ಟ್ರೀಮಿಂಗ್ ಆಗುತ್ತೆ ಅನ್ನೋದು ತಿಳಿದುಕೊಳ್ಳುವ ಕುತೂಹಲವಿತ್ತು. ಅದಕ್ಕೀಗ ಜೀ 5 ಒಟಿಟಿ ವೇದಿಕೆ ತೆರೆ ಎಳೆದಿದೆ. ಮ್ಯಾಕ್ಸ್ ಇನ್ನೇ ಇದೇ ವಾರ ಓಟಿಟಿಯಲ್ಲೂ ಸ್ಟ್ರೀಮಿಂಗ್ ಆಗಲಿದೆ.

2024ರ ಡಿಸೆಂಬರ್ 25ರಂದು ಕ್ರಿಸ್‌ಮಸ್ ಹಬ್ಬಕ್ಕೆ ರಿಲೀಸ್ ಆಗಿದ್ದ 'ಮ್ಯಾಕ್ಸ್' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಕಿಚ್ಚನ ಮ್ಯಾನರಿಸಂಗೆ ಸಿನಿ ಪ್ರಿಯರು ಶಿಳ್ಳೆಗಳನ್ನು ಹೊಡೆದಿದ್ದರು. ಇನ್ನು ಒಂದು ರಾತ್ರಿಯಲ್ಲಿ ನಡೆಯುವ ಕಥೆ ಅನ್ನೋದೇ ಕಿಚ್ಚನ ಅಭಿಮಾನಿಗಳು ಥ್ರಿಲ್ ಕೊಟ್ಟಿತ್ತು. ಹೀಗಾಗಿ 'ಮ್ಯಾಕ್ಸ್' ಬಾಕ್ಸಾಫೀಸ್‌ನಲ್ಲಿ ಮ್ಯಾಕ್ಸಿಮಂ ಸೌಂಡ್ ಮಾಡಿದ್ದು ಮಾತ್ರ ಸುಳ್ಳಲ್ಲ. ಈ ಟಿವಿ ಹಾಗೂ ಓಟಿಟಿಯಲ್ಲಿ ಒಂದೇ ದಿನ ಸ್ಟ್ರೀಮಿಂಗ್ ಆಗುತ್ತಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ. ಅಷ್ಟಕ್ಕೂ ಓಟಿಟಿಯಲ್ಲಿ ಯಾವಾಗ ಸ್ಟ್ರೀಮಿಂಗ್ ಅನ್ನೋದನ್ನು ನೋಡುವುದಾರೆ.
'ವಿಕ್ರಾಂತ್ ರೋಣ' ತೆರೆಕಂಡ ಬಳಿಕ ಎರಡೂವರೆ ವರ್ಷಗಳ ನಂತರ ಕಿಚ್ಚ ಸುದೀಪ್ ಸಿನಿಮಾ ರಿಲೀಸ್ ಆಗಿತ್ತು. ಬಾಕ್ಸಾಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಅಂತ ಸಾಬೀತಾದ ಬಳಿಕ ಒಟಿಟಿಗೆ ಎಂಟ್ರಿ ಕೊಡುವುದಕ್ಕೆ ದಿನಾಂಕ ನಿಗದಿಯಾಗಿದೆ. ಹಾಗಂತ 'ಮ್ಯಾಕ್ಸ್' ಸಿನಿಮಾ ಕೇವಲ ಓಟಿಟಿಯಲ್ಲಿ ಮಾತ್ರ ಟಿವಿಯಲ್ಲಿ ಪ್ರಸಾರ ಆಗಲಿದೆ. ಒಂದೇ ದಿನ ಟಿವಿ ಹಾಗೂ ಓಟಿಟಿಯಲ್ಲಿ ರಿಲೀಸ್ ಆಗಿ ಮ್ಯಾಕ್ಸಿಮಂ ಮನರಂಜನೆ ಕೊಡುವುದಕ್ಕೆ ಸಜ್ಜಾಗಿದೆ.

ತಮಿಳಿನ ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಸಿನಿಮಾ ಕನ್ನಡ ಅಷ್ಟೇ ಅಲ್ಲದೆ ತೆಲುಗು, ತಮಿಳು ಭಾಷೆಯಲ್ಲೂ ರಿಲೀಸ್ ಆಗಿತ್ತು. 'ಮ್ಯಾಕ್ಸ್' ಜೀ ಕನ್ನಡದಲ್ಲಿ ಇದೇ ತಿಂಗಳೂ 15 ರಂದು ರಾತ್ರಿ 7.30ಕ್ಕೆ ಪ್ರಸಾರವಾಗುತ್ತಿದೆ. ಹಾಗೇ ಇದೇ ದಿನ ಜೀ 5 ಓಟಿಟಿಯಲ್ಲಿಯೂ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಕಿಚ್ಚನ ಸಿನಿಮಾ ಬಿಡುಗಡೆಗೂ ಮುನ್ನವೇ ಜೀ ಸಂಸ್ಥೆ ಟಿವಿ ಹಾಗೂ ಓಟಿಟಿಯ ಸ್ಟ್ರೀಮಿಂಗ್ ಹಕ್ಕುಗಳನ್ನು ಖರೀದಿ ಮಾಡಿತ್ತು.
'ಮ್ಯಾಕ್ಸ್' ಚಿತ್ರಮಂದಿರದಲ್ಲಿ ಅದ್ಭುತ ಕಲೆಕ್ಷನ್ ಮಾಡಿ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿಕೊಂಡಿದೆ. ಹಾಗೇ ಒಟಿಟಿಯಲ್ಲಿ ರೆಸ್ಪಾನ್ಸ್ ಹೇಗಿರುತ್ತೆ? ಟಿವಿಯಲ್ಲಿ 'ಮ್ಯಾಕ್ಸ್' ಮ್ಯಾಕ್ಸಿಮಂ ಟಿಆರ್‌ಪಿ ಗಳಿಸುತ್ತಾ? ಅನ್ನೋದನ್ನು ಸಿನಿಮಾ ಮಂದಿ ಎದುರು ನೋಡುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಸುದೀಪ್ ಮ್ಯಾಕ್ಸ್ ಉರ್ಫ್ ಅರ್ಜುನ್ ಮಹಾಕ್ಷಯ್ ಪಾತ್ರದಲ್ಲಿ ನಟಿಸಿದ್ದಾರೆ. ಪದೇ ಪದೇ ಸಸ್ಪೆಂಡ್ ಆಗಿರುವ ಪೊಲೀಸ್ ಅಧಿಕಾರಿ ಪೊಲೀಸ್ ಸ್ಟೇಷನ್ ಒಂದಕ್ಕೆ ವರ್ಗಾವಣೆ ಮಾಡಲಾಗುತ್ತೆ. ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳವ ಮುನ್ನವೇ ಒಂದು ಘಟನೆ ನಡೆಯುತ್ತೆ. ಅದನ್ನು ಬೆಳಕಾಗುವುದರೊಳಗೆ ಹೇಗೆ ಸರಿ ಪಡಿಸುತ್ತಾರೆ ಅನ್ನೋದೇ ಕಥೆ.
'ಮ್ಯಾಕ್ಸ್' ಸಿನಿಮಾವನ್ನು ತಮಿಳಿನ ಕಲೈಪುಲಿ ಎಸ್ ಧಾನು ಹಾಗೂ ಕಿಚ್ಚ ಸುದೀಪ್ ನಿರ್ಮಾಣ ಮಾಡಿದ್ದರು. ಮ್ಯಾಕ್ಸ್ ಪಾತ್ರದಲ್ಲಿ ಸುದೀಪ್ ನಟಿಸಿದ್ದರೆ, ಇವರೊಂದಿಗೆ ವರಲಕ್ಷ್ಮೀ ಶರತ್ ಕುಮಾರ್, ಉಗ್ರಂ ಮಂಜು, ಸುಕೃತಾ ವಾಗ್ಲೆ, ಸಂಯುಕ್ತಾ ಹೊರನಾಡು, ವಿಜಯ್ ಚೆಂಡೂರು, ಶರತ್ ಲೋಹಿತಾಶ್ವ, ಸುಧಾ ಬೆಳವಾಡಿ ಹಾಗೂ ತೆಲುಗು ನಟ ಸುನೀಲ್ ಸೇರಿದಂತೆ ಹಲವಾರು ನಟರು ಕಾಣಿಸಿಕೊಂಡಿದ್ದಾರೆ.


Click it and Unblock the Notifications











