ಸಾರಾ ಅಲಿಖಾನ್‌ಗೆ ತಾಯಿಯಾಗಲು ಸಿದ್ಧ: ಕರಣ್ ಪ್ರಶ್ನೆಗೆ ಮಲತಾಯಿ ಕರೀನಾ ಟಕ್ಕರ್
ಕಾಫಿ ವಿತ್ ಕರಣ್ ಟಾಕ್ ಶೋ ಮತ್ತೆ ಆರಂಭ ಆಗಿದೆ. ಈಗಾಗಲೇ ರಣ್‌ವೀರ್ ಸಿಂಗ್, ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್, ಅನನ್ಯಾ ಪಾಂಡೇ ಅಂತಹ ಬಾಲಿವುಡ್ ಸ್ಟಾರ್‌ಗಳು ಅತಿಥಿಗಳಾಗಿ ಬಂದು ಹೋಗಿದ್ದಾರೆ. ಈ ಶೋಗೆ ಬರೋ ಅತಿಥಿಗಳಿಗೆ ಕರಣ್ ಜೋಹರ್ ಕೇಳುವ ಪ್ರಶ್ನೆಗಳು ಕೆಲವೊಮ್ಮೆ ಸಂಕಷ್ಟಕ್ಕೆ ತಂದೊಡ್ಡುತ್ತವೆ.
ಈ ಹಿಂದಿನ ಸೀಸನ್‌ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿ ಸ್ವತ: ಕರಣ್ ಜೋಹರ್ ಸಂಕಷ್ಟ ಸಿಲುಕಿದ್ದರು. ಈಗ ಡಿಸ್ನಿ+ಹಾಟ್ ಸ್ವಾರ್‌ನಲ್ಲಿ ನಾಲ್ಕನೇ ಎಪಿಸೋಡ್ ಸ್ಟ್ರೀಮಿಂಗ್ ಆಗುತ್ತಿದೆ. ಅಲಿಯಾ ಭಟ್ ಹಾಗೂ ಕರೀನಾ ಕಪೂರ್ ಖಾನ್ ಅತಿಥಿಗಳಾಗಿ ಕಾಫಿ ವಿತ್ ಕರಣ್ ಟಾಕ್ ಶೋಗೆ ಬಂದಿದ್ದಾರೆ.

ಕರಣ್ ಜೋಹರ್ ಎಂದಿನಂತೆ ಕರೀನಾ ಕಪೂರ್ ಮುಂದೆ ಸವಾಲಿನ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದರು. ಅದೇನಂದ್ರೆ, "ನೀವು ಸಾರಾ ಖಾನ್ ನಟಿಸುವ ಸಿನಿಮಾ ಅಮ್ಮನ ಪಾತ್ರದಲ್ಲಿ ನಟಿಸುತ್ತೀರಾ?" ಎಂದು ಪ್ರಶ್ನೆ ಮಾಡಿದ್ದರು. ಆ ಪ್ರಶ್ನೆಗೆ ಕರೀನಾ ಕಪೂರ್ ಕೊಟ್ಟ ಉತ್ತರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಕಾಫಿ ವಿತ್ ಕರಣ್ ಶೋನಲ್ಲಿ ಕರಣ್ ಜೋಹರ್ ಬಾಲಿವುಡ್ ನಟ-ನಟಿಯರ ಬಗ್ಗೆ ವೃತ್ತಿ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಓಪನ್ ಆಗಿ ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವೊಮ್ಮೆ ಈ ಪ್ರಶ್ನೆಗಳು ವಿವಾದಕ್ಕೆ ಸಿಲುಕಿದ್ದೂ ಇದೆ. ಈ ಬಾರಿ ಕರೀನಾ ಕಪೂರ್ ಖಾನ್ ರಾಪಿಡ್ ಫೈರ್ ರೌಂಡ್‌ನಲ್ಲಿ "ಸಾರಾ ಅಲಿ ಖಾನ್‌ಗೆ ತಾಯಿ ಆಗಿ ನಟಿಸಲು ರೆಡಿ ಇದ್ದೀರಾ?" ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಕರೀನಾ ಪ್ರಬುದ್ಧರಾಗಿ ಉತ್ತರ ಕೊಟ್ಟಿದ್ದಾರೆ.

2012ರಲ್ಲಿ ಕರೀನಾ ಕಪೂರ್-ಸೈಫ್ ಅಲಿ ಖಾನ್‌ರನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಸೈಫ್ ಅಲಿ ಖಾನ್‌ಗೆ ಇದಕ್ಕೂ ಮುನ್ನ ಬಾಲಿವುಡ್ ಅಮೃತಾ ಸಿಂಗ್ ಜೊತೆ ವಿವಾಹವಾಗಿತ್ತು. ಇವರಿಗೆ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸಾರಾ ಅಲಿ ಖಾನ್ ಈಗಾಗಲೇ ಬಾಲಿವುಡ್‌ನ ಜನಪ್ರಿಯ ನಟಿ ಎನಿಸಿಕೊಂಡಿದ್ದಾರೆ.
ಹೀಗಾಗಿ ಕರೀನಾ ಕಪೂರ್ ಖಾನ್‌ಗೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸಂಬಂಧದಲ್ಲಿ ಮಗಳಾಗುತ್ತಾರೆ. ಈ ಕಾರಣಕ್ಕೆ ಕರಣ್ ಜೋಹರ್ ರಾಪಿಡ್ ಫೈರ್ ರೌಂಡ್‌ನಲ್ಲಿ " ಸಾರಾಗೆ ತಾಯಿ ಆಗಿ ನಟಿಸುತ್ತೀರಾ" ಎಂದು ಪ್ರಶ್ನೆ ಹಾಕಿದ್ದರು. ಇದಕ್ಕೆ ಕರೀನಾ ಕೊಟ್ಟ ಉತ್ತರಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
" ನಾನೊಬ್ಬ ನಟಿ. ನಾನು ಎಲ್ಲಾ ವಯಸ್ಸಿನ ಪಾತ್ರಗಳನ್ನು ಮಾಡಬಲ್ಲೆ. ನೀವೇನು ಹೇಳಕ್ಕೆ ಆಗೋದಿಲ್ಲ" ಎಂದು ಕರೀನಾ ಕಪೂರ್ ಪ್ರತಿಕ್ರಿಯೆ ನೀಡಿದ್ದರು. ಆಗ ಕರಣ್ " ಹಾಗಿದ್ರೆ, ನೀವು ತಾಯಿಯಾಗಿ ನಟಿಸಲು ಓಪನ್ ಆಗಿದ್ದೀರ?" ಎಂದು ಮರು ಪ್ರಶ್ನೆ ಹಾಕಿದ್ದರು. ಆಗ " ನಟನೆ ವಿಚಾರಕ್ಕೆ ಬಂದರೆ ನಾನು ಯಾವಾಗಲೂ ಓಪನ್ ಆಗಿದ್ದೇನೆ" ಎಂದು ಕರೀನಾ ಕಪೂರ್ ಪ್ರತಿಕ್ರಿಯೆ ನೀಡಿದ್ದರು.


Click it and Unblock the Notifications











