OTT News:'ಅಂತರರಾಷ್ಟ್ರೀಯ ನ್ಯಾಯ ದಿನ'ದಂದು ಓಟಿಟಿಯಲ್ಲಿ ನೋಡಬಹುದಾದ ಕೋರ್ಟ್ ರೂಮ್ ಡ್ರಾಮಾ ಸಿನಿಮಾ ಇವೇನೆ
ಜುಲೈ 17ರಂದು ಅಂತರರಾಷ್ಟ್ರೀಯ ನ್ಯಾಯ ದಿನವನ್ನಾಗಿ ಆಚರಿಸಲಾಗುತ್ತೆ. 1998, ಜುಲೈ 17ರಂದು ರೋಮ್ ಶಾಸನವನ್ನು ಅಳವಡಿಸಿಕೊಂಡ ದಿನ. ಈ ದಿನ ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಕ್ರಿಮಿನಲ್ ನ್ಯಾಯಾಲಯವನ್ನು ಸ್ಥಾಪನೆ ಮಾಡುವುದಕ್ಕೆ ಕಾರಣವಾಯ್ತು. ಈ ಮೂಲಕ ಅಂತರರಾಷ್ಟ್ರೀಯ ಮಟ್ಟದ ಅಪರಾಧಗಳನ್ನು ತಡೆಯುವ ಉದ್ದೇಶಕ್ಕೆ ವೇದಿಕೆ ಆಯ್ತು. ಯುದ್ಧಾಪರಾಧಗಳು, ಮಾನವೀಯತೆ ಹಾಗೂ ನರಮೇಧದಂತಹ ಅಪರಾಧಗಳನ್ನು ಎದುರಿಸುವ ಸಲುವಾಗಿ ಸ್ಥಾಪನೆ ಮಾಡಲಾಗಿದೆ.
ಇತ್ತೀಚೆಗೆ ಮನರಂಜನಾ ಕ್ಷೇತ್ರದಲ್ಲಿಯೂ ಕೋರ್ಟ್ ಸನ್ನಿವೇಶಗಳನ್ನು ಹೆಚ್ಚಾಗಿ ನೋಡಬಹುದು. ಅದರಲ್ಲೂಓಟಿಟಿಗಳಲ್ಲಿ ಕೋರ್ಟ್ ರೂಮ್ ಡ್ರಾಮಾಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ವೀಕ್ಷಕರಿಗೆ ಕೋರ್ಟ್ ಹಿನ್ನೆಲೆಯುಳ್ಳ ಸಿನಿಮಾಗಳು ಇಷ್ಟ ಆಗುತ್ತಿವೆ. ಹೀಗಾಗಿ ಹೆಚ್ಚೆಚ್ಚು ಸಿನಿಮಾಗಳು ವೆಬ್ ಸೀರಿಸ್‌ಗಳು ನಿರ್ಮಾಣ ಆಗುತ್ತಿವೆ. ಈ ವಿಶೇಷ ದಿನದಂದು ಓಟಿಟಿಯಲ್ಲಿ ನೋಡಬಹುದಾದ ಕೋರ್ಟ್ ರೂಮ್ ಡ್ರಾಮಗಳ ಪಟ್ಟಿ ಇಲ್ಲಿದೆ.

'ಕೇಸರಿ ಚಾಪ್ಟರ್ 2'
ಅಕ್ಷಯ್ ಕುಮಾರ್, ಆರ್.ಮಾಧವನ್ ಹಾಗೂ ಅನನ್ಯಾ ಪಾಂಡೆ ನಟಿಸಿದ 'ಕೇಸರಿ ಚಾಪ್ಟರ್ 2' ಕೆಲವು ತಿಂಗಳ ಹಿಂದಷ್ಟೇ ರಿಲೀಸ್ ಆಗಿತ್ತು. ಭಾವನಾತ್ಮಕ ಸನ್ನಿವೇಶಗಳನ್ನು ಇಟ್ಟಿಕೊಂಡು ಕೋರ್ಟ್ ರೂಮ್ ಡ್ರಾಮಾವನ್ನು ಹೆಣೆಯಲಾಗಿತ್ತು. ಅಮೃತಸರದಲ್ಲಿ ಏಪ್ರಿಲ್ 13, 1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನೈಜ ಘಟನೆಯನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗಿತ್ತು. ಈ ಹತ್ಯಾಕಾಂಡದಲ್ಲಿ ಜೀವ ಕಳೆದುಕೊಂಡವರ ಪರ ಕೋರ್ಟ್‌ನಲ್ಲಿ ವಾದ ಮಂಡಿಸಿ ನ್ಯಾಯ ಒದಗಿಸಿದ್ದ ಸಿ.ಶಂಕರನ್ ನಾಯರ್ ಹಿನ್ನೆಲೆಯಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಜನಮೆಚ್ಚುಗೆ ಗಳಿಸಿದ್ದ ಈ ಸಿನಿಮಾ ಓಟಿಟಿಯಲ್ಲೂ ಸದ್ದು ಮಾಡುತ್ತಿದೆ. ಈ ಸಿನಿಮಾವನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ ನೋಡಬಹುದಾಗಿದೆ.
'ಜೈ ಭೀಮ್'
ತಮಿಳು ನಾಡಿನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಸಿನಿಮಾ 'ಜೈ ಭೀಮ್'. ಇಲ್ಲಿನ ಗ್ರಾಮೀಣ ಪ್ರದೇಶದಲ್ಲಿರುವ ಜಾತಿ ಭೇದ-ಭಾವ ಹಾಗೂ ಪೊಲೀಸರ ಕೃತ್ಯವನ್ನು ಈ ಸಿನಿಮಾದಲ್ಲಿ ಬಿಂಬಿಸಲಾಗಿದೆ. ಪೊಲೀಸರು ಕಳ್ಳತನದ ಸುಳ್ಳು ಆರೋಪ ಹೊರಿಸಿದ್ದ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ಕಾಣೆಯಾಗಿರುತ್ತಾನೆ. ಆತನಿಗಾಗಿ ಹೋರಾಡುವ ಕಥೆಯೇ 'ಜೈ ಭೀಮ್'. ಭಾರತೀಯ ಚಿತ್ರರಂಗ ಮೋಸ್ಟ್ ಪವರ್‌ಫುಲ್ ಕೋರ್ಟ್ ಡ್ರಾಮಾ ಎಂದು ವಿಮರ್ಶಕರು ಪಟ್ಟಿ ಮಾಡಿದ್ದಾರೆ. ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಪ್ರೈಂ ವಿಡಿಯೋದಲ್ಲಿ ಲಭ್ಯವಿದೆ.

'ಜಾಲಿ ಎಲ್‌ಎಲ್‌ಬಿ'
ಬಾಲಿವುಡ್‌ನ ಮತ್ತೊಂದು ಕೋರ್ಟ್ ರೂಮ್ ಡ್ರಾಮಾ 'ಜಾಲಿ ಎಲ್‌ಎಲ್‌ಬಿ'. 2013ರಲ್ಲಿ ತೆರೆಕಂಡಿದ್ದ ಈ ಸಿನಿಮಾವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದರು. ಅರ್ಷದ್ ವರ್ಸಿ ಹಾಗೂ ಬೊಮನ್ ಇರಾನಿ ನಟಿಸಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಜಗದೀಶ್ ತ್ಯಾಗಿ ಪಾತ್ರದಲ್ಲಿ ನಟಿಸಿದ್ದ ಅರ್ಷದ್ ವರ್ಸಿ ಶ್ರೀಮಂತ ಕುಟುಂಬದ ಹಿಟ್ ಅಂಡ್ ರನ್ ಕೇಸ್ ವಿರುದ್ಧ ವಾದ ಮಂಡಿಸಿ ಗೆಲ್ಲುವ ಬ್ಲಾಕ್ ಕಾಮಿಡಿ ಲೀಗಲ್ ಡ್ರಾಮಾ ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.
'ವಾಶಿ'
ಟೊವಿನೋ ಥಾಮಸ್ ಹಾಗೂ ಕೀರ್ತಿ ಸುರೇಶ್ ನಟನೆಯ ಮಲಯಾಳಂ ಸಿನಿಮಾ 'ವಾಶಿ'. ಈ ಸಿನಿಮಾ ಸೂಕ್ಷ್ಮ ಲೈಂಗಿಕ ಅಪರಾಧ ಕೇಸ್ ಹಿನ್ನೆಲೆಯಲ್ಲಿ ಸಾಗುತ್ತೆ. ಈ ಸಿನಿಮಾದ ಹೈಲೈಟ್ ಅಂದರೆ, ಕೋರ್ಟ್ ರೂಮ್‌ನ ವಾದಗಳು, ವೈಯಕ್ತಿಕ ಮೌಲ್ಯಗಳನ್ನು ತೋರಿಸಲಾಗಿದೆ. ಇದರ ಜೊತೆಗೆ ಈ ಕೇಸ್‌ನಿಂದ ದಂಪತಿಗಳಾಗಿರುವ ಟೋವಿನೋ ಥಾಮಸ್ ಹಾಗೂ ಕೀರ್ತಿ ಸುರೇಶ್ ರೊಮ್ಯಾಂಟಿಕ್ ಲೈಫ್ ಹೇಗೆ ಹದಗೆಡುತ್ತೆ ಅನ್ನೋದನ್ನು ಬಿಂಬಿಸಲಾಗಿದೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.
'ಕೋರ್ಟ್: ಸ್ಟೇಟ್ vs ಎ ನೋಬಡಿ'
ತೆಲುಗು ಸಿನಿಮಾ 'ಕೋರ್ಟ್; ಸ್ಟೇಟ್ vs ಎ ನೋಬಡಿ' ಇತ್ತೀಚೆಗೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಪ್ರಿಯದರ್ಶಿನಿ ಪುಲಿಕೊಂಡ, ಸಾಯಿ ಕುಮಾರ್, ರೋಹಿಣಿ, ಹರ್ಷವರ್ಧನ್ ಸೇರಿದಂತೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಪೋಕ್ಸೋ ಕಾಯ್ದೆಯ ದುರ್ಬಳಕೆಯನ್ನು ಇಟ್ಟುಕೊಂಡು ಹೆಣೆಯಾಗಿದ್ದ ಕಥೆಯಾಗಿತ್ತು. ರಾಮ್ ಜಗದೀಶ್ ಅದೇ ಚೊಚ್ಚಲ ಬಾರಿಗೆ ನಿರ್ದೇಶಿಸಿದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹಿಟ್ ಅಂತ ಸಾಬೀತಾಗಿದೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ಇವುಗಳೊಂದಿಗೆ ಕೆಲವು ಕ್ರಿಮಿನಲ್ ಜಸ್ಟಿಸ್ ಅಂತ ವೆಬ್ ಸೀರಿಸ್‌ಗಳು ವೀಕ್ಷಕರಿಗೆ ಕಿಕ್ ಕೊಟ್ಟಿವೆ.


Click it and Unblock the Notifications











