'ಫ್ಯಾಮಿಲಿ ಮ್ಯಾನ್ 2' ಬಂದು ಎರಡು ವರ್ಷ ಆಯ್ತು.. ಸೀಸನ್ 3 ಕಥೆಯೇನು? 'ಸರ್ಪ್ರೈಸ್' ಎಂದಿದ್ದೇಕೆ ಈ ನಟ?
ಓಟಿಟಿಯ ಶಾರುಖ್ ಖಾನ್ ಅಂತಲೇ ಸದ್ದು ಮಾಡಿರುವ ನಟ ಮನೋಜ್ ಬಾಜಪೇಯಿ. ಸಿನಿಮಾಗೂ ಜೈ.. ಇತ್ತ ಓಟಿಟಿಗೂ ಸೈ ಎನ್ನುವ ನಟನೀತ. ಭಾರತೀಯ ಚಿತ್ರರಂಗ ಕಂಡ ಅತ್ಯದ್ಭುತ ನಟನ ವೆಬ್ ಸೀರಿಸ್ 'ದಿ ಫ್ಯಾಮಿಲಿ ಮ್ಯಾನ್' ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ.
ಈಗಾಗಲೇ 'ದಿ ಫ್ಯಾಮಿಲಿ ಮ್ಯಾನ್' ಹಾಗೂ 'ದಿ ಫ್ಯಾಮಿಲಿ ಮ್ಯಾನ್ 2' ಎರಡು ಸೀಸನ್ ಬಂದಿದೆ. ಅಮೆಜಾನ್ ಪ್ರೈಂನಲ್ಲಿ ಅತೀ ಹೆಚ್ಚು ಜನಪ್ರಿಯತೆ ಕಂಡ ಹಿಂದಿ ವೆಬ್ ಸೀರಿಸ್ ಕೂಡ ಇದೇನೆ. ಹೀಗಾಗಿ ಓಟಿಟಿ ಪ್ರಿಯರು ಮೂರನೇ ಸೀರಿಸ್‌ಗಾಗಿ ಎದುರು ನೋಡುತ್ತಿದ್ದಾರೆ. ಆದರೆ, ಫ್ಯಾಮಿಲಿ ಮ್ಯಾನ್ ಟೀಮ್ ಇನ್ನೂ ಸುಳಿವು ಬಿಟ್ಟು ಕೊಟ್ಟಿಲ್ಲ.

'ದಿ ಫ್ಯಾಮಿಲಿ ಮ್ಯಾನ್ 3' ಬರುತ್ತಾ? ಇಲ್ವಾ? ಅನ್ನೋದೂ ಕೂಡ ಈ ವೆಬ್ ಸೀರಿಸ್ ಅಭಿಮಾನಿಗಳಿಗೆ ಗೊತ್ತಿಲ್ಲ. ಇದೇ ಗೊಂದಲದಲ್ಲಿ ಇರುವಾಗಲೇ ನಟ ಮನೋಜ್ ಬಾಜಪೇಯಿ 'ದಿ ಫ್ಯಾಮಿಲಿ ಮ್ಯಾನ್ 3' ಸೀರಿಸ್ ಬಗ್ಗೆ ಚಿಕ್ಕದೊಂದು ಸುಳಿವು ಬಿಟ್ಟು ಕೊಟ್ಟಿದ್ದಾರೆ. ಇದು ಓಟಿಟಿ ಪ್ರಿಯರಿಗೆ ಖಂಡಿತಾ ಕಿಕ್ ಕೊಡುತ್ತೆ.
ಮನೋಜ್ ಬಾಜಪೇಯಿ ಓಟಿಟಿಯ ಸೂಪರ್‌ಸ್ಟಾರ್. ಕೆಲವೇ ತಿಂಗಳ ಹಿಂದಷ್ಟೇ ತೆರೆಕಂಡಿದ್ದ 'ಸಿರ್ಫ್ ಏಕ್ ಬಂದಾ ಕಾಫಿ ಹೇ' ಸಿನಿಮಾವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಇದೇ ಯಶಸ್ಸಿನ ಬೆನ್ನಲ್ಲೇ ಮನೋಜ್ ಬಾಜಪೇಯಿ ನಟಿಸಿದ ಮತ್ತೊಂದು 'ಜೊರಮ್' ರಿಲೀಸ್‌ಗೆ ರೆಡಿಯಾಗಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ.

ಈ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಮನೋಜ್ ಬಾಜಪೇಯಿಗೆ 'ದಿ ಫ್ಯಾಮಿಲಿ ಮ್ಯಾನ್ 3' ಸಿನಿಮಾ ಬಗ್ಗೆ ಕೇಳಲಾಗಿತ್ತು. ಈ ಬಗ್ಗೆ ಮನೋಜ್ ಬಾಜಪೇಯಿ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. " ನೀವು ಕೇಳುತ್ತಿರುವ ಪ್ರಶ್ನೆ ಏನು ಅಂತ ನನಗೆ ಗೊತ್ತು. ದಿ ಫ್ಯಾಮಿಲಿ ಮ್ಯಾನ್ ಸೀಸನ್ 3 ಯಾವಾಗ ಶುರುವಾಗುತ್ತೆ? ಅನ್ನೋದೇ ನಿಮ್ಮ ಪ್ರಶ್ನೆ. ನನಗೂ ಅದಕ್ಕೆ ಉತ್ತರ ಬೇಕಿದೆ. ಸೀಸನ್ 2 ಸ್ಟ್ರೀಮಿಂಗ್ ಆಗಿ ಎರಡು ವರ್ಷಗಳಾಗಿವೆ. ಈ ಸೀರಿಸ್‌ನ ಅಭಿಮಾನಿಗಳಿಗೆ ಹೇಳುವುದೇನಂದೆ ಇದೊಂದು ದೊಡ್ಡ ಫ್ರ್ಯಾಂಚೈಸಿ ಆಗಿ ಹೊರ ಹೊಮ್ಮಲಿದೆ" ಎಂದು ಮನೋಜ್ ಬಾಜಪೇಯಿ ಮಾಧ್ಯಮವೊಂದರಲ್ಲಿ ಹೇಳಿದ್ದಾರೆ.
ಇಷ್ಟೇ ಅಲ್ಲದೆ 'ದಿ ಫ್ಯಾಮಿಲಿ ಮ್ಯಾನ್ 3' ಸೀರಿಸ್ ಪ್ರಗತಿಯಲ್ಲಿದೆ ಅನ್ನೋ ಬಗ್ಗೆನೂ ಸುಳಿವು ಕೊಟ್ಟಿದ್ದಾರೆ. " ಫ್ಯಾಮಿಲಿ ಮ್ಯಾನ್ ಸೀಸನ್ 3 ಖಂಡಿತಾ ಆಗುತ್ತೆ. ಸದ್ಯಕ್ಕಿದು ಪ್ರಗತಿಯಲ್ಲಿದೆ. ನಿರ್ದೇಶಕರಾದ ರಾಜ್ ಮತ್ತು ಡಿಕೆ ಧಾವಂತದಲ್ಲಿ 3ನೇ ಸೀರಿಸ್ ಮಾಡುವುದಕ್ಕೆ ರೆಡಿಯಿಲ್ಲ. ಸೀಸನ್ 1 ರಿಂದ ಸೀಸನ್ 2ವರೆಗೆ ಮೂರು ವರ್ಷ ತೆಗೆದುಕೊಂಡಿದೆ. ನಮಗೆ ಸೀಸನ್ 3ಗಾಗಿ ಅಷ್ಟು ಸಮಯವನ್ನಾದರೂ ಕೊಡಿ. ಸೀಸನ್ 3 ಮೂಲಕ ಮತ್ತೆ ಬರುತ್ತಿದ್ದೇವೆ ಅಂದರೆ, ನಿಮಗೆ ಸೀಸನ್ 2 ಹಾಗೇನೆ ದೊಡ್ಡ ಸರ್ಪ್ರೈಸ್ ಇರುತ್ತೆ" ಎಂದು ಮನೋಜ್ ಬಾಜಪೇಯಿ ಮಾಹಿತಿ ಹಂಚಿಕೊಂಡಿದ್ದಾರೆ.
ಸದ್ಯ ಮನೋಜ್ ಬಾಜಪೇಯಿ 'ಜೊರಮ್' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಸಿನಿಮಾದ ಪಾತ್ರ ನಾನು ಇದೂವರೆಗೂ ನಟಿಸಿರುವ ಅತೀ ಕಷ್ಟದ ಪಾತ್ರಗಳಲ್ಲೊಂದು ಎಂದು ಮನೋಜ್ ಬಾಜಪೇಯಿ ಹೇಳಿದ್ದಾರೆ.


Click it and Unblock the Notifications











