ಮೈಕ್ರೋ ಡ್ರಾಮ ಲೋಕದಲ್ಲಿ ಹೊಸ ಕ್ರಾಂತಿ; ಜಿಯೋಹಾಟ್‌ಸ್ಟಾರ್ 'ತಡ್ಕಾ'ಗೆ 100 ಮಿಲಿಯನ್ ಸಬ್‌ಸ್ಕ್ರೈಬರ್
ಜಗತ್ತಿನಲ್ಲಿ ಮೈಕ್ರೋ ಡ್ರಾಮಾ ಹೊಸ ಕ್ರಾಂತಿಯನ್ನೇ ಸೃಷ್ಟಿಸುತ್ತಿದೆ. ಮನರಂಜನೆಯನ್ನು ಬಯಸುವ ಜನರು ಕಿರು ಸರಣಿಯ ಕಡೆಗೆ ಹೆಚ್ಚು ಒಲವನ್ನು ತೋರುತ್ತಿದ್ದಾರೆ. ಹಾಗೇ ಭಾರತದಲ್ಲೂ ಮೈಕ್ರೋ ಸರಣಿಗೆ ಬೇಡಿಕೆ ಹೆಚ್ಚಿದೆ. ಒಂದರಿಂದ ಒಂದೂವರೆ ನಿಮಿಷಗಳಲ್ಲಿ ಮುಗಿದು ಹೋಗುವ ಈ ಸರಣಿಗೆ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹೀಗಾಗಿ ಓಟಿಟಿ ವೇದಿಕೆಗಳು ಮೈಕ್ರೋ ಡ್ರಾಮಾ ಮೇಲೆ ಹೆಚ್ಚು ಗಮನ ಹರಿಸಿವೆ.
ಭಾರತದ ಓಟಿಟಿ ಮತ್ತು ಸ್ಟ್ರೀಮಿಂಗ್ ಜಗತ್ತಿನಲ್ಲಿ ಜಿಯೋಹಾಟ್‌ಸ್ಟಾರ್‌ನ 'ತಡ್ಕಾ' ಸದ್ದು ಮಾಡುತ್ತಿದೆ. ಪ್ರೀಮಿಯಂ ಮೈಕ್ರೋ-ಕಂಟೆಂಟ್ ಸೆಕ್ಷನ್‌ನಲ್ಲಿ 'ತಡ್ಕಾ' ಹೊಸ ಕ್ರಾಂತಿಯನ್ನೇ ಮಾಡಿದೆ. ಇದೂವರೆಗೂ ಬರೋಬ್ಬರಿ 100 ಮಿಲಿಯನ್ ಅಂದರೆ, 10 ಕೋಟಿ ಸಬ್‌ಸ್ಕ್ರೈಬರ್ ಅನ್ನು ಹೊಂದಿದೆ. ಇಷ್ಟೊಂದು ಯಶಸ್ಸು ಸಿಕ್ಕಿದ್ದು, ಮೈಕ್ರೋ ಡ್ರಾಮಾ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಮೈಲಿಗಲ್ಲು ಮೈಕ್ರೋ ಡ್ರಾಮವನ್ನು ಮುಖ್ಯವಾಹಿನಿಯ ಮನರಂಜನೆಯನ್ನಾಗಿ ಗುರುತಿಸಿದೆ.

ಎರಡೂವರೆ, ಮೂರು ಗಂಟೆಯ ಸಿನಿಮಾಗಳು ಹಾಗೂ ವೆಬ್ ಸೀರಿಸ್ ಓಟಿಟಿಯಲ್ಲಿ ಸಂಚಲನ ಸೃಷ್ಟಸುತ್ತಿವೆ. ಈ ಮಧ್ಯೆ ಮೊಬೈಲ್ ಸ್ನೇಹಿಯಾಗಿರುವ ಮೈಕ್ರೋ ಡ್ರಾಮಾ ನೋಡುವುದಕ್ಕೆ ಭಾರತದ ಪ್ರೇಕ್ಷಕರು ಮನ ಸೋತಿದ್ದಾರೆ. ಮೈಕೋ ಡ್ರಾಮಾ ಬಿಡುಗಡೆಯಾದ ಅಲ್ಪಾವಧಿಯಲ್ಲೇ ಪ್ರತಿ ವೀಕ್ಷಕರ ದೈನಂದಿನ ವೀಕ್ಷಣಾ ಸಮಯ ಸುಮಾರು 5 ಪಟ್ಟು ಹೆಚ್ಚಾಗಿದ್ದು, ಎಲ್ಲಾ ವಯೋಮಾನದ ಮತ್ತು ಎಲ್ಲಾ ಪ್ರಾಂತ್ಯಗಳ ಜನರು ವೀಕ್ಷಿಸುತ್ತಿದ್ದಾರೆಂದು ಜೊಯೋಹಾಟ್‌ಸ್ಟಾರ್ ಹೇಳಿಕೊಂಡಿದೆ.
ಹೆಚ್ಚಿದ ಮೈಕ್ರೊ ಡ್ರಾಮಾ ಕ್ರೇಜ್
ಭಾರತದಲ್ಲಿ ಮೈಕ್ರೋ ಡ್ರಾಮಾ ಕ್ರೇಜ್ ಹೆಚ್ಚಾಗಿದೆ. ಅದರಲ್ಲೂ ಜಿಯೊಹಾಟ್‌ಸ್ಟಾರ್‌ನ 'ತಡ್ಕಾ' ಕ್ರೇಜ್ ದೇಶದ ಮೂಲೆ ಮೂಲೆಗೂ ಹರಡುತ್ತಿದೆ. ಯುವ ಪೀಳಿಗೆಯ ಮೊದಲ ಆಯ್ಕೆ 'ತಡ್ಕಾ' ಆಗಿದೆ ಎಂದು ಜಿಯೋ ಹೇಳಿಕೊಂಡಿದೆ. 'ತಡ್ಕಾ'ಗೆ ಸಿಕ್ಕಿರೋ ಒಟ್ಟು ವೀಕ್ಷಕರಲ್ಲಿ 42% ಕ್ಕಿಂತಲೂ ಹೆಚ್ಚು 24 ವರ್ಷದೊಳಗಿನ ಯುವಕರೇ ಆಗಿದ್ದಾರೆ. ಹಾಗಂತ ಕೇವಲ ನಗರ ಪ್ರದೇಶದವರಷ್ಟೇ ಅಲ್ಲ, ಗ್ರಾಮೀಣ ಭಾಗದಲ್ಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮೆಟ್ರೋ ನಗರಗಳು, 2ನೇ ಹಂತದ ನಗರಗಳು ತಲಾ 40% ರಷ್ಟು ವಾಚ್ ಟೈಮ್‌ನಲ್ಲಿ ಕೊಡುಗೆ ನೀಡಿದೆ.
ದೇಶಾದ್ಯಂತ ಮೈಕ್ರೊ ಕಂಟೆಂಟ್‌ಗೆ ಬೇಡಿಕೆ
ಇನ್ನು ದೇಶಾದ್ಯಂತ ಮೈಕ್ರೋ ಡ್ರಾಮಾಗೆ ಬೇಡಿಕೆ ಹೆಚ್ಚಾಗಿದೆ. ಚುಟುಕು ಸರಣಿಗಳನ್ನು ನೋಡುವವರ ಸಂಖ್ಯೆ ಹೆಚ್ಚಾಗಿದೆ. ಮುಂಬೈ, ದೆಹಲಿ, ಲಕ್ನೋ, ಇಂದೋರ್, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ಬೇಡಿಕೆ ಹೆಚ್ಚಿದೆ. ಭಾರತದಾದ್ಯಂತ ಪ್ರತಿಭಾವಂತ ಕ್ರಿಯೇಟರ್ಸ್‌ಗೆ ದೊಡ್ಡ ವೇದಿಕೆಯನ್ನು ಕಲ್ಪಿಸಿದೆ.

ಏನಿದು 'ತಡ್ಕಾ' (TADKA)?
ಜಿಯೋಹಾಟ್‌ಸ್ಟಾರ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿಯೇ ಲಭ್ಯವಿರುವ 'ತಡ್ಕಾ', ಮೊಬೈಲ್ ಬಳಸುವವರ ದೈನಂದಿನ ಬಿಡುವಿನ ವೇಳೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. 30 ರಿಂದ 60 ಸೆಕೆಂಡ್‌ಗಳ ವರ್ಟಿಕಲ್ ಎಪಿಸೋಡ್ ಗಮನ ಸೆಳೆಯುತ್ತಿವೆ. ರೋಮಾನ್ಸ್, ಡ್ರಾಮಾ, ಥ್ರಿಲ್ಲರ್, ಕಾಮಿಡಿ, ಕ್ರೀಡೆ ಮತ್ತು ಯುವಕರು ಕಥೆಗಳು ಸೇರಿದಂತೆ 100 ಕ್ಕೂ ಹೆಚ್ಚು ಒರಿಜಿನಲ್ ಸರಣಿಗಳು ಇಲ್ಲಿವೆ. ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಈ ವೆಬ್ ಸೀರಿಸ್ ಲಭ್ಯವಿದೆ.
ಭವಿಷ್ಯದಲ್ಲಿ ಏನು?
ಜಿಯೋಸ್ಟಾರ್‌ನ ಮೈಕ್ರೋ ಕಂಟೆಂಟ್ ವಿಭಾಗದ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಅಂಬುಜ್ ಕಶ್ಯಪ್ ಮೈಕ್ರೋ ಡ್ರಾಮಾ ಬಗ್ಗೆ ಹೀಗಂತಾರೆ. "100 ಮಿಲಿಯನ್ ಬಳಕೆದಾರರನ್ನು ತಲುಪಿರುವುದು ಕೇವಲ ತಡ್ಕಾ ಸಾಧನೆಯಲ್ಲ, ಇದು ಭಾರತೀಯ ಸ್ಟ್ರೀಮಿಂಗ್ ಲೋಕದ ದೊಡ್ಡ ಬದಲಾವಣೆಯ ಮುನ್ಸೂಚನೆ. ಮೈಕ್ರೋ ಡ್ರಾಮಾ ಸಾಂಪ್ರದಾಯಿಕ ಸ್ವರೂಪಗಳನ್ನು ಮೀರಿ ಬೆಳೆಯುತ್ತಿದೆ. ಪ್ರೀಮಿಯಂ ಮೈಕ್ರೋ-ಕಂಟೆಂಟ್ ಈಗ ಒಂದು ಪ್ರಮುಖ ಮನರಂಜನಾ ವಿಭಾಗವಾಗಿ ಹೊರಹೊಮ್ಮುತ್ತಿದೆ. ಭವಿಷ್ಯದಲ್ಲಿ ಬಲಿಷ್ಠ ಕಥೆಗಳು, ತಾಂತ್ರಿಕ ಆವಿಷ್ಕಾರಗಳು ಮತ್ತು ಕ್ರಿಯೇಟರ್ಸ್ ಕಮ್ಯುನಿಟಿ ಮೂಲಕ ಮೈಕ್ರೋ ಕಂಟೆಂಟ್ ಅನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತೇವೆ" ಎಂದಿದ್ದಾರೆ. ಒಟ್ನಲ್ಲಿ ಮೈಕ್ರೋ-ಕಂಟೆಂಟ್ ಮೂಲಕ ಭಾರತದಲ್ಲಿ ಡಿಜಿಟಲ್ ಮನರಂಜನೆಯ ಮುಂದಿನ ಹೊಸ ಅಧ್ಯಾಯ ಶುರುವಾಗಿದೆ.


Click it and Unblock the Notifications
