ಭಾರತದಲ್ಲಿ ಹೆಚ್ಚುತ್ತಿದೆ ಮೈಕ್ರೋಡ್ರಾಮಾ ಕ್ರೇಜ್; ಕನ್ನಡದಲ್ಲೂ ಚುಟುಕು ವೆಬ್ ಸೀರಿಸ್.. ನೀವು ನೋಡಿದ್ದೀರಾ?
ಜನರು ಸೋಶಿಯಲ್ ಮೀಡಿಯಾಗೆ ದಾಸರಾಗಿದ್ದಾರೆ. ಮೊಬೈಲ್ ಹಿಡಿದು ರೀಲ್ಸ್ ನೋಡುವುದಕ್ಕೆ ಶುರುವಿಟ್ಟುಕೊಂಡರೆ, ಮುಗಿದೇ ಹೋಯ್ತು. ಗಂಟೆಗಳ ಲೆಕ್ಕವೇ ಇಲ್ಲದೆ ರೀಲ್ಸ್ ನೋಡುತ್ತಾ ಕೂತುಬಿಡುತ್ತಾರೆ. ಇನ್ನೊಂದು ಕಡೆ ಭಾರತದಲ್ಲಿ ಒಟಿಟಿ ಕ್ರೇಜ್ ಕೂಡ ಹೆಚ್ಚಾಗಿದೆ. ವೀಕೆಂಡ್‌ನಲ್ಲಿ ಹೊಸ ಹೊಸ ಸಿನಿಮಾ ಹಾಗೂ ವೆಬ್ ಸೀರಿಸ್ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ.
ಒಂದು ಲೆಕ್ಕಾಚಾರದ ಪ್ರಕಾರ, ಮಾನವ ಗಮನದ ವ್ಯಾಪ್ತಿ ಕೇವಲ 8 ಸೆಕೆಂಡ್‌ಗಳಿಗಿಂತಲೂ ಕಮ್ಮಿ. ಅಂದರೆ, ಒಂದು ಗೋಲ್ಡ್ ಫಿಶ್‌ಗಿಂತಲೂ ಕಮ್ಮಿ. ಈ ಅಂಕಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಗತ್ತಿನ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮೈಕ್ರೋಡ್ರಾಮಾಗಳನ್ನು ಸೃಷ್ಟಿಸುತ್ತಿವೆ. ವಿಶ್ವದ ಪ್ರಮುಖ ದೇಶಗಳಲ್ಲಿ ಈ ಮೈಕ್ರೋಡ್ರಾಮಾದ ಕ್ರೇಜ್ ವ್ಯಾಪಕವಾಗಿ ಬೆಳೆಯುತ್ತಿದೆ.

ಚೀನಾ, ಕೊರಿಯಾ ಹಾಗೂ ಯುಎಸ್‌ಎಗಳಲ್ಲಿ ಈಗಾಗಲೇ ಮೈಕ್ರೋಡ್ರಾಮಾಗಳ ಕ್ರೇಜ್ ವ್ಯಾಪಕವಾಗಿ ಹಬ್ಬಿದೆ. ಅಷ್ಟೇ ಅಲ್ಲದೆ 2024ರಲ್ಲಿ ಬಿಲಿಯನ್ ಡಾಲರ್ ಲೆಕ್ಕದಲ್ಲಿ ಬ್ಯುಸಿನೆಸ್ ಮಾಡುತ್ತಿದೆ. ಇದೇ ಮೈಕ್ರೋಡ್ರಾಮಗಳು ಭಾರತಕ್ಕೂ ಲಗ್ಗೆ ಇಟ್ಟಿದ್ದು, ಒಂದೆರೆಡು ನಿಮಿಷದಲ್ಲಿ ವೀಕ್ಷಕರಿಗೆ ವೆಬ್ ಸೀರಿಸ್ ಅನುಭವವನ್ನು ನೀಡುತ್ತಿದೆ. ಹಾಗಂತ ಹಿಂದಿ, ತೆಲುಗು, ತಮಿಳು ಭಾಷೆಯಲ್ಲಷ್ಟೇ ಅಲ್ಲ ಕನ್ನಡದಲ್ಲೂ ಪ್ರಯೋಗಗಳು ಶುರುವಾಗಿವೆ. ಹಾಗಿದ್ದರೆ, ಮೈಕ್ರೋಡ್ರಾಮಾ ಎಂದರೆ ಏನು? ಇಷ್ಟೊಂದು ಸದ್ದು ಮಾಡುತ್ತಿರುವುದು ಯಾಕೆ?
ಮುಂದೆ ಓದಿ
ಭಾರತಕ್ಕೂ ಲಗ್ಗೆ ಇಟ್ಟ ಮೈಕ್ರೋಡ್ರಾಮ
ಚೀನಾದಲ್ಲಿ ಹುಟ್ಟಿದ ಮೈಕ್ರೋಡ್ರಾಮ ಸೀರಿಸ್
ಮೈಕ್ರೋಡ್ರಾಮಾಗಳ ನಿರ್ಮಾಣಕ್ಕೆ ಫಿಲ್ಮ್ ಮೇಕರ್ಸ್ ಆಸಕ್ತಿ
2030ರ ಹೊತ್ತಿಗೆ 11.91 ಬಿಲಿಯನ್ ಡಾಲರ್ ಗಳಿಕೆಗೆ ಗುರಿ
ಏನಿದು ಮೈಕ್ರೋಡ್ರಾಮಾ?
ಈಗಿನ ಬ್ಯುಸಿ ದಿನಗಳಲ್ಲಿ ಜನರು ಮೂರು ಗಂಟೆಗಳ ಸಿನಿಮಾ ಇರಲಿ, 10 ನಿಮಿಷಗಳ ವಿಡಿಯೋವನ್ನು ನೋಡವಷ್ಟು ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ಒಂದೇ ಕಂಟೆಂಟ್ ಮೇಲೆ ಐದು ನಿಮಿಷಕ್ಕಿಂತಲೂ ಹೆಚ್ಚು ಸಮಯವನ್ನು ಕಳೆಯುವುದಕ್ಕೆ ಇಷ್ಟ ಪಡುವುದಿಲ್ಲ. ಇನ್‌ಸ್ಟಾಗ್ರಾಂ ರೀಲ್ಸ್, ಯೂಟ್ಯೂಬ್ ಶಾರ್ಟ್‌ಗಳ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ವೀಕ್ಷಕರ ಈ ಮನಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ರೀಲ್ಸ್ ಮಾದರಿಯಲ್ಲಿ (ವರ್ಟಿಕಲ್) ವೆಬ್ ಸೀರಿಸ್ ಅನ್ನು ಜನರಿಗೆ ತಲುಪಿಸುವ ಪ್ರಯತ್ನ ನಡೆದಿದೆ. ಕೇವಲ ಒಂದೆರಡು ನಿಮಿಷದಲ್ಲಿ ಸೀರಿಸ್‌ಗಳನ್ನು ತೋರಿಸಲಾಗುತ್ತೆ. ಇದಕ್ಕೆ ಮೈಕ್ರೋಡ್ರಾಮಾ ಎಂದು ಹೆಸರು ನೀಡಲಾಗಿದೆ. ಮೊದಲು ಚೀನಾದಲ್ಲಿ ಶುರುವಾಗಿದ್ದ ಈ ಮೈಕ್ರೋಡ್ರಾಮಾಗಳು ದಕ್ಷಿಣ ಕೊರಿಯಾದಲ್ಲಿ ಜನಪ್ರಿಯವಾಯಿತು. ಈಗ ಅಮೆರಿಕದಲ್ಲೂ ಕ್ರೇಜ್ ಹೆಚ್ಚಾಗಿದೆ.
ಭಾರತದಲ್ಲೂ ಮೈಕ್ರೋಡ್ರಾಮಾ ಹವಾ
ಮೈಕ್ರೋಡ್ರಾಮಾಗಳು ಭಾರತಕ್ಕೂ ಎಂಟ್ರಿ ಕೊಟ್ಟಿದೆ. ಈಗಾಗಲೇ ಹಲವು ಪ್ಲಾಟ್‌ಫಾರ್ಮ್‌ಗಳು ವ್ಯಾಪಾರದ ಅವಕಾಶಗಳನ್ನು ಕಳಿಸುವ ಪ್ರಯತ್ನಕ್ಕೆ ಮುಂದಾಗಿದೆ. ಇಂಕ್42 ವರದಿಯ ಪ್ರಕಾರ, ಕುಕು ಟಿವಿ ಹಾಗೂ ಸಾಗಾದಂತಹ ಸ್ಟಾರ್ಟ್ ಅಪ್‌ಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 2024ರಲ್ಲಿ ಆರಂಭವಾದ ಕುಕು ಟಿವಿ ಇಲ್ಲಿವರೆಗೆ ಒಂದು ಕೋಟಿ ಡೌನ್‌ಲೋಡ್ ಆಗಿದೆ. ಅದೇ ರೀಲ್ ಸಾಗಾ 2025ರಲ್ಲಿ ಆರಂಭ ಆಗಿದ್ದು, ಒಂದು ಸಾವಿರ ಮಂದಿ ಡೌನ್‌ಲೋಡ್ ಆಗಿವೆ ಎಂದು ವರದಿ ಮಾಡಲಾಗಿದೆ.

ಕನ್ನಡದಲ್ಲೂ ಮೈಕ್ರೋ ಡ್ರಾಮಾ ಎಂಟ್ರಿ
ಭಾರತದ ಓಟಿಟಿ ವೇದಿಕೆಗಳಲ್ಲೊಂದಾದ ಜೀ 5 ಕೂಡ ಮೈಕ್ರೊಡ್ರಾಮಾ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದೆ. ಸದ್ಯ 'ಬುಲೆಟ್' ಎನ್ನುವ ಆಪ್ ಅನ್ನು ಆರಂಭಿಸಿದೆ. ಸದ್ಯ ಇದು ಬೀಟಾ ವರ್ಷನ್ ಆಗಿದ್ದು, ಪ್ರಯೋಗಗಳನ್ನು ಆರಂಭಿಸಿದೆ. ಕನ್ನಡದಲ್ಲಿ ಕೆಲವು ಮೈಕ್ರೊಡ್ರಾಮಾಗಳು ಆರಂಭಿಸಿದೆ. 'ಮೋಸಗಾತಿ ಐ ಲವ್ ಯು', ' ಮಿಂಚು', 'ಮ್ಯಾರೇಜ್ ಡೀಲ್', 'ಲಕ್ಕಿ ಲಕ್ಷ್ಮಿ', ಅದೇ ಕಣ್ಣು' ಅಂತಹ ಮೈಕ್ರೊಡ್ರಾಮಗಳು ಪ್ಲೇ ಆಗುತ್ತಿವೆ. ಒಂದು ನಿಮಿಷದಲ್ಲಿ ಒಂದೊಂದು ಎಪಿಸೋಡ್ ಅನ್ನು ವರ್ಟಿಕಲ್ ವರ್ಷನ್‌ನಲ್ಲಿ ಸ್ಟ್ರೀಮಿಂಗ್ ಮಾಡಲಾಗುತ್ತಿದೆ. ಸದ್ಯಕ್ಕೆ ಅಧಿಕೃತವಾಗಿ ಇದು ಲಾಂಚ್ ಆಗಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಇದು ಅಧಿಕೃತವಾಗಿ ಲಾಂಚ್ ಆಗುತ್ತಿದೆ.
"ಮೈಕ್ರೊಡ್ರಾಮಾಗಳು ಚೀನಾ, ಕೊರಿಯಾದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿವೆ. ಅದನ್ನು ಈಗ ಭಾರತದಲ್ಲೂ ಪ್ರಯೋಗ ಮಾಡಲಾಗುತ್ತಿದೆ. ರೀಲ್‌ಗಳ ಜಮಾನದಲ್ಲಿ ಮೈಕ್ರೊಡ್ರಾಮಾಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿವೆ. ಸದ್ಯ ಕನ್ನಡದಲ್ಲೂ ಮೈಕ್ರೊಡ್ರಾಮಗಳನ್ನು ನಿರ್ಮಾಣ ಮಾಡುವುದಕ್ಕೆ ಫಿಲ್ಮ್ ಮೇಕರ್ಸ್ ಆಸಕ್ತಿ ತೋರಿಸುತ್ತಿದ್ದಾರೆ. ಬುಲೆಟ್ ಆಪ್ ಅಧಿಕೃತವಾಗಿ ಲಾಂಚ್ ಆದ್ಮೇಲೆ ಬೇಡಿಕೆ ಮತ್ತಷ್ಟು ಹೆಚ್ಚಾಗಬಹುದು" ಎಂದು ಮೂಲಗಳು ಅಭಿಪ್ರಾಯ ಪಟ್ಟಿವೆ.
ಮೈಕ್ರೊಡ್ರಾಮಾ ಮಾರ್ಕೆಟ್ ಹೇಗಿದೆ ?
2024ರಲ್ಲಿ ಮೈಕ್ರೋಡ್ರಾಮಾಗಳಿಗೆ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದವು. ಈ ವೇಳೆ 6.54 ಬಿಲಿಯನ್ ಡಾಲರ್‌ನಷ್ಟು ವಹಿವಾಟನ್ನು ಮಾಡಿತ್ತು. ಅದೇ 2025ರಲ್ಲಿ ಇದು 7.21 ಬಿಲಿಯನ್ ಡಾಲರ್‌ಗೆ ಏರಿಕೆ ಆಯ್ತು. ಸದ್ಯ ಮೈಕ್ರೊಡ್ರಾಮಾಗಳು 2030ರ ಹೊತ್ತಿಗೆ 11.91 ಬಿಲಿಯನ್‌ನಷ್ಟು ವಹಿವಾಟು ನಡೆಸಲಿದೆ ಎಂದು ಹಲವು ವರದಿಗಳಲ್ಲಿ ಹೇಳಲಾಗಿದೆ.
ಕೊನೆಯಲ್ಲಿ..
ಕನ್ನಡ ಚಿತ್ರರಂಗಕ್ಕೆ ಇದೊಂದು ಒಳ್ಳೆಯ ಅವಕಾಶ. ಕಂಟೆಂಟ್ ಇಟ್ಟುಕೊಂಡು ಮೈಕ್ರೊಡ್ರಾಮಗಳನ್ನು ಕ್ರಿಯೇಟ್ ಮಾಡಬಹುದು. ಹೆಚ್ಚು ಹಣದ ಅವಶ್ಯಕತೆ ಇಲ್ಲ. ದೊಡ್ಡ ದೊಡ್ಡ ಸೆಟ್‌ಗಳು ಬೇಕಾಗಿಲ್ಲ. ಸೂಪರ್‌ಸ್ಟಾರ್‌ಗಳ ಅವಶ್ಯಕತೆಯಿಲ್ಲ. ಕೋಟಿ ಲೆಕ್ಕದಲ್ಲಿ ಬಜೆಟ್ ಅನ್ನು ಹೂಡಿಕೆ ಮಾಡಬೇಕಿಲ್ಲ. ಹೀಗಾಗಿ ಸ್ಯಾಂಡಲ್‌ವುಡ್ ಫಿಲ್ಮ್ ಮೇಕರ್ಸ್ ಇದೊಂದು ಉತ್ತಮ ಅವಕಾಶ. ಕ್ವಾಲಿಟಿ ಮೈಕ್ರೊಡ್ರಾಮಾಗಳ ಮೂಲಕ ಮತ್ತೆ ಕನ್ನಡ ಚಿತ್ರರಂಗವನ್ನು ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡುವಂತೆ ಮಾಡಬಹುದಾಗಿದೆ.


Click it and Unblock the Notifications











