Panchayat 4 Trailer: ಬಹು ನಿರೀಕ್ಷಿತ ವೆಬ್ ಸೀರಿಸ್‌ಗೆ ಜೈ ಎಂದ ಫ್ಯಾನ್ಸ್; ಯಾವಾಗ ರಿಲೀಸ್?
ಓಟಿಟಿ ವೇದಿಕೆಗಳಲ್ಲಿ ಸಿನಿಮಾಗಳಷ್ಟೇ ಬೇಡಿಕೆ ಇರೋದು ವೆಬ್ ಸೀರಿಸ್. ಅದರಲ್ಲೂ ಕೆಲವು ವೆಬ್ ಸೀರಿಸ್‌ಗಳು ಸೀಸನ್‌ಗಳ ಮೇಲೆ ಸೀಸನ್ ಬಂದರೂ ಜನರಿಗೆ ಬೋರ್ ಹೊಡೆಸಿಲ್ಲ. ಹೀಗಾಗಿ ಇಂತಹ ವೆಬ್ ಸೀರಿಸ್‌ಗಳು ಬಿಡುಗಡೆಯಾಗುವುದನ್ನೇ ಕಾಯುತ್ತಿರುತ್ತಾರೆ. ಅಂತಹದರಲ್ಲಿ ಒಂದು 'ಪಂಚಾಯತ್' ಸೀಸನ್ 4. ಹಿಂದಿ ಭಾಷೆಯ ಈ ವೆಬ್ ಸೀರಿಸ್‌ಗೆ ವಿಶ್ವದಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.
ಹಾಗಂತ 'ಪಂಚಾಯತ್' ಕ್ರೈಂ-ಥ್ರಿಲ್ಲರ್ ಅಲ್ಲ. ಸದ್ಯಕ್ಕೆ ಟ್ರೆಂಡಿಂಗ್‌ನಲ್ಲಿ ಇರುವ ಕೋರ್ಟ್ ರೂಮ್ ಡ್ರಾಮ ಅಲ್ಲ. ತನಿಖೆಯನ್ನು ಆಧರಿಸಿದ ಸಸ್ಪೆನ್ಸ್ ಕಥೆಯಲ್ಲ. ಇಲ್ಲವೇ ಆಕ್ಷನ್ ಸೀರಿಸ್ ಅಲ್ಲ. ಇದೊಂದು ಉತ್ತರ ಭಾರತದ ಹಳ್ಳಿಯೊಂದರ ಕತೆ. ಅಲ್ಲಿನ ಜನರು, ಅವರ ಒಗ್ಗಟ್ಟು, ರಾಜಕೀಯದ ಸುತ್ತಮುತ್ತ ಸಾಗುವ ಈ ವೆಬ್ ಸೀರಿಸ್‌ನ ಮೂರು ಸೀಸನ್‌ಗಳು ರಿಲೀಸ್ ಆಗಿವೆ. ಈಗ ನಾಲ್ಕನೇ ಸೀಸನ್ ರಿಲೀಸ್ ರೆಡಿಯಾಗಿದೆ.

'ಪಂಚಾಯತ್' ಸೀಸನ್ 4 ಅನ್ನು ಕಣ್ತುಂಬಿ ಕೊಳ್ಳುವುದಕ್ಕೆ ಓಟಿಟಿ ಪ್ರೇಮಿಗಳು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಸದ್ಯ ಈ ವೆಬ್ ಸೀರಿಸ್‌ನ ಟ್ರೈಲರ್ ರಿಲೀಸ್ ಆಗಿದೆ. ಇದನ್ನು ನೋಡಿದ ಮೇಲಂತೂ ವೀಕ್ಷಕರ ಕಾತುರ ಮತ್ತಷ್ಟು ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಟ್ರೈಲರ್‌ಗೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ. ಅಷ್ಟಕ್ಕೂ ಸೀಸನ್ 4ರ ಹೈಲೈಟ್ ಏನು? ಯಾವಾಗ? ಎಲ್ಲಿ ರಿಲೀಸ್ ಆಗುತ್ತೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಅಮೆಜಾನ್ ಪ್ರೈಮ್ ವೀಡಿಯೋದ ಮೋಸ್ಟ್ ಎಕ್ಸ್‌ಪೆಕ್ಟೆಡ್ ವೆಬ್ ಸೀರಿಸ್ 'ಪಂಚಾಯತ್' ಸೀಸನ್ 4. ಬಾಲಿವಡ್ ನಟಿ ನೀನಾ ಗುಪ್ತಾ, ಜಿತೇಂದ್ರ ಕುಮಾರ್, ರಘುಬೀರ್ ಯಾದವ್ ಸೇರಿದಂತೆ ಹಲವು ಕಲಾವಿದರು ಈ ವೆಬ್ ಸೀರಿಸ್‌ನಲ್ಲಿದ್ದಾರೆ. ಬಹುತೇಕ ಮಂದಿ ಕಳೆದ ಮೂರು ಸೀಸನ್‌ನಲ್ಲಿ ಇದ್ದವರೇ ಮುಂದುವರೆದಿದ್ದಾರೆ. ಟ್ರೈಲರ್ ನೋಡಿದರೆ, ಕಳೆದ ಮೂರು ಸೀಸನ್‌ಗಳಿಗಿಂತ ನಾಲ್ಕನೇ ಸೀಸನ್ ಮತ್ತಷ್ಟು ರೋಚಕ ಎನಿಸುತ್ತಿದೆ. ಯಾಕಂದ್ರೆ, ಇದೇ ಪಂಚಾಯ್ತಿಗೆ ಈಗ ಚುನಾವಣೆ ನಡೆಯುತ್ತಿದೆ.
'ಪಂಚಾಯತ್ ಸೀಸನ್ 4'ರಲ್ಲಿ ಚುನಾವಣೆಯೇ ಹೈಲೈಟ್. ಈ ಬಾರಿ ಎರಡು ಪ್ರಮುಖ ಪಾತ್ರಗಳು ಚುನಾವಣೆಗೆ ಸ್ಪರ್ಧಿಸಲಿವೆ. ಮಂಜು ದೇವಿ (ನೀನಾ ಗುಪ್ತಾ) ಹಾಗೂ ಕ್ರಾಂತಿ ದೇವಿ (ಸುನಿತಾ ರಾಜ್‌ವರ್) ನಡುವೆ ಪಂಚಾಯ್ತಿಯ ಅಧ್ಯಕ್ಷ ಪದವಿಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಕಳೆದ ಮೂರು ಸೀಸನ್‌ನಲ್ಲೂ ಈ ಎರಡು ಕುಟುಂಬಗಳ ನಡುವೆ ವೈನಸ್ಸು, ಪೈಪೋಟಿ ಇದ್ದೇ ಇದೆ. ಅದು ಈ ಬಾರಿ ಚುನಾವಣೆವರೆಗೂ ಬಂದು ನಿಂತಿದೆ. ಪಂಚಾಯ್ತಿಯ ಮುಂದಿನ ಪ್ರದಾನ್ (ಅಧ್ಯಕ್ಷ) ಯಾರು? ಅನ್ನೋದೇ ಈ ಸೀಸನ್‌ನ ಹೈಲೈಟ್.
ಚುನಾವಣೆ ಕಾವಿನ ಮಧ್ಯೆ ಅಭಿಷೇಕ್ ( ಜಿತೇಂದ್ರ ಕುಮಾರ್) ಹಾಗೂ ರಿಂಕಿ (ಸಾನ್ವಿಕಾ) ಲವ್ ಸ್ಟೋರಿ ಕೂಡ ನಡೆಯುತ್ತಿದೆ. ಒಂದ್ಕಡೆ ಪೊಲಿಟಿಕಲ್ ಡ್ರಾಮಾ. ಇನ್ನೊಂದು ಕಡೆ ಲವ್ ಸ್ಟೋರಿ ಎರಡೂ ಒಟ್ಟೊಟ್ಟಿಗೆ ನಡೆಯುತ್ತಿದೆ. ಹಿಂದಿ ಸೀರಿಸ್ ಆಗಿದ್ದರೂ, ಭಾರತದಾದ್ಯಂತ ಈ ಸೀರಿಸ್‌ಗೆ ಫ್ಯಾನ್ಸ್ ಇದ್ದಾರೆ. ಹೀಗಾಗಿ 'ಪಂಚಾಯತ್ ಸೀಸನ್ 4' ಕುತೂಹಲವನ್ನು ಕೆರಳಿಸಿದೆ. ಅಂದ್ಹಾಗೆ ಈ ವೆಬ್ ಸೀರಿಸ್ ಅನ್ನು ದೀಪಕ್ ಕುಮಾರ್ ಹಾಗೂ ಅಕ್ಷಕ್ ವಿಜ್ವರ್ಗೀಯ ಆಕ್ಷನ್ ಕಟ್ ಹೇಳಿದ್ದಾರೆ. ದಿ ವೈರಲ್ ಫಿವರ್ ಈ ವೆಬ್ ಸೀರಿಸ್ ಅನ್ನು ನಿರ್ಮಾಣ ಮಾಡಿದೆ.
'ಪಂಚಾಯತ್ ಸೀಸನ್ 4' ವೆಬ್ ಸೀರಿಸ್‌ನಲ್ಲಿ ಜಿತೇಂದ್ರ ಕುಮಾರ್, ನೀನಾ ಗುಪ್ತಾ, ರಘುಬೀರ್ ಯಾದವ್, ಫೈಸಲ್ ಮಲ್ಲಿಕ್, ಚಂದನ್ ರಾಯ್, ಸಾನ್ವಿಕಾ, ದುರ್ಗೇಶ್ ಕುಮಾರ್, ಸುನಿತಾ ರಾಜ್‌ವರ್ ಹಾಗೂ ಪಂಕಜ್ ಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೆಬ್ ಸೀರಿಸ್ ಜುಲ್ 2 ರಂದು ರಿಲೀಸ್ ಆಗಬೇಕಿತ್ತು. ಆದರೆ, ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದರಿಂದ ಈ ವೆಬ್ ಸೀರಿಸ್ ಅನ್ನು ಇದೇ ತಿಂಗಳ 24ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಅಮೆಜಾನ್ ಪ್ರೈಂ ವಿಡಿಯೋ ಓಟಿಟಿ ವೇದಿಕೆಯಲ್ಲಿ ಜೂನ್ 24ರಂದು 'ಪಂಚಾಯತ್ ಸೀಸನ್ 4' ಗ್ರ್ಯಾಂಡ್ ರಿಲೀಸ್ ಆಗುತ್ತಿದೆ.


Click it and Unblock the Notifications











