ರಿಲೀಸ್ ಆಗಿ ತಿಂಗಳಾಗುವುದರೊಳಗೆ ಓಟಿಟಿಗೆ ಬರುತ್ತೆ 'ಸರಿಪೋದ ಶನಿವಾರಂ'; ಇಷ್ಟೊಂದು ಬೇಗ ಯಾಕೆ?
ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾ 'ಸರಿಪೋದ ಶನಿವಾರಂ' ಕಳೆದ ತಿಂಗಳು ರಿಲೀಸ್ ಆಗಿತ್ತು. ಆಗಸ್ಟ್ 29ರಂದು ಅದ್ದೂರಿಯಾಗಿ ಬಿಡುಗಡೆ ಮಾಡಲಾಗಿತ್ತು. ಎಂದಿನಂತೆ ನಾನಿ ಕರ್ನಾಟಕಕ್ಕೆ ಬಂದು ತಮ್ಮ ಸಿನಿಮಾವನ್ನು ಪ್ರಚಾರ ಕೂಡ ಮಾಡಿದ್ದರು. ಫಸ್ಟ್ ಡೇ ಫಸ್ಟ್ ಶೋನೇ ಈ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು.
'ಸರಿಪೋದ ಶನಿವಾರಂ' ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಟಾಲಿವುಡ್ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಹಿಟ್ ಅಂತಾನೂ ಸಾಬೀತಾಗಿದೆ. ಆದರೂ, ತಿಂಗಳು ಕಳೆಯುವುದರೊಳಗೆ ಈ ಸಿನಿಮಾ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಇನ್ನು ಐದು ದಿನಗಳಲ್ಲಿಯೇ ಈ ಸಿನಿಮಾ ಓಟಿಟಿಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದೆ.

'ಅಂಟೆ ಸುಂದರಾನಿಕಿ' ಸಿನಿಮಾ ಮೂಲಕ ಮತ್ತೆ ನ್ಯಾಚುರಲ್ ಸ್ಟಾರ್ ನಾನಿ ಹಾಗೂ ನಿರ್ದೇಶಕ ವಿವೇಕ್ ಅಥ್ರೆಯ ಜೋಡಿ ಒಂದಾಗಿದೆ. ಈ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದರೂ ಕೇವಲ ತಿಂಗಳ ಒಳಗೆ ಓಟಿಟಿಗೆ ಎಂಟ್ರಿ ಕೊಡುತ್ತಿರುವುದು ಆಶ್ಚರ್ಯಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗಿದ್ದರೆ, 'ಸರಿಪೋದ ಶನಿವಾರಂ' ಸಿನಿಮಾ ರಿಲೀಸ್ ಆಗಿ ತಿಂಗಳು ಕಳೆಯುವುದರೊಳಗೆ ರಿಲೀಸ್ ಆಗುತ್ತಿರುವು ಯಾಕೆ? ಎಲ್ಲಿ? ಯಾವಾಗ ರಿಲೀಸ್ ಆಗುತ್ತೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಸರಿಪೋದ ಶನಿವಾರಂ' ಸಿನಿಮಾ ಕಥೆ ಕೂಡ ಇಂಟ್ರೆಸ್ಟಿಂಗ್ ಆಗಿದೆ. ಸಿನಿಮಾದ ಹೀರೊ ಸೂರ್ಯನಿಗೆ (ನಾನಿ) ಬಹುಬೇಗನೇ ಕೋಪ ಬಂದು ಬಿಡುತ್ತೆ. ಅದನ್ನು ಕಂಟ್ರೋಲ್ ಮಾಡುವುದಕ್ಕೆ ಅವನ ಅಮ್ಮ ಒಂದು ಸಲಹೆಯನ್ನು ಕೊಟ್ಟಿರುತ್ತಾರೆ. ವಾರದಲ್ಲಿ ಒಂದು ದಿನ ತನ್ನ ಕೋಪವನ್ನೆಲ್ಲ ಹೊರಹಾಕುವುದಕ್ಕೆ ತಾಯಿ ನೀಡಿದ ಸಲಹೆಯಂತೆ ನಡೆಯುತ್ತಿರುತ್ತೆ. ಅಮ್ಮ ಅಗಲಿದ ಬಳಿಕ ಅದೇ ದಿನವನ್ನು ತನ್ನ ಕೋಪ ಹೊರ ಹಾಕುವುದನ್ನು ರೂಢಿ ಮಾಡಿಕೊಳ್ಳುತ್ತಾನೆ. ಈ ವೇಳೆ ಪೊಲೀಸ್ ಅಧಿಕಾರಿ ವಿರುದ್ಧ ದ್ವೇಷ ಕಟ್ಟಿಕೊಳ್ಳುತ್ತಾನೆ. ಆಮೇಲೆ ಏನಾಗುತ್ತೆ ಅನ್ನೋದೇ 'ಸರಿಪೋದ ಶನಿವಾರಂ' ಸಿನಿಮಾ.
ಈ ಸಿನಿಮಾದಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಜೊತೆ ಎಸ್ ಜೆ ಸೂರ್ಯ, ಪ್ರಿಯಾಂಕಾ ಅರುಲ್ ಮೋಹನ್, ಅಭಿರಾಮಿ, ಅದಿತಿ ಬಾಲನ್, ಪಿ ಸಾಯಿ ಕುಮಾರ್, ಮುರಳಿ ಶರ್ಮಾ ಹಾಗೂ ಅಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರನ್ನು ಒಳಗೊಂಡ 'ಸರಿಪೋದ ಶನಿವಾರಂ' ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಹಾಗೂ ಡ್ರಾಮವನ್ನು ನೋಡಬಹುದು. ಹಾಗೇ ನಾನಿಯ ಕಾಮಿಡಿ ಸೆನ್ಸ್ ಕೂಡ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. ತೆಲುಗಿನಲ್ಲಿ ನಿರ್ಮಾಣಗೊಂಡಿರುವ 'ಸರಿಪೋದಾ ಶನಿವಾರಂ' ಸಿನಿಮಾವನ್ನು ಕನ್ನಡದಲ್ಲೂ ನೋಡಬಹುದು. ಹಾಗೇ ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ನೋಡಬಹುದಾಗಿದೆ.
'ಸರಿಪೋದಾ ಶನಿವಾರಂ' ಸಿನಿಮಾವನ್ನು ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್ ಮಾಡಲು ಮುಂದಾಗಿದೆ. ಇದೇ ಸೆಪ್ಟೆಂಬರ್ 26ರಿಂದ 'ಸರಿಪೋದಾ ಶನಿವಾರಂ' ಸಿನಿಮಾವನ್ನು ನೋಡಬಹುದು. ಈ ವಿಷಯವನ್ನು ಸ್ವತ: ನೆಟ್‌ಫ್ಲಿಕ್ಸ್ ಇಂಡಿಯಾ ತನ್ನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಹೊಚ್ಚ ಹೊಸ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಮಾಸ್ ಆಡಿಯನ್ಸ್‌ಗೆ ಈ ಸಿನಿಮಾ ಸಖತ್ ಮನರಂಜನೆ ಕೊಡೋದಂತೂ ಗ್ಯಾರಂಟಿ.
ಪಕ್ಕಾ ತೆಲುಗು ಮಸಾಲ ಸಿನಿಮಾವನ್ನು ನೋಡಬೇಕು ಅಂತ ಬಯಸುವ ಓಟಿಟಿ ಪ್ರಿಯರಿಗೆ ಸೆಪ್ಟೆಂಬರ್ 26ರಿಂದ ಮಸ್ತ್ ಮನರಂಜನೆ ಸಿಗಲಿದೆ. ಆದರೆ, ಈ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದರೂ ಇಷ್ಟು ಬೇಗ ಯಾಕೆ ರಿಲೀಸ್ ಆಗುತ್ತಿದೆ ಅನ್ನೋದು ಅಚ್ಚರಿ ಮೂಡಿಸಿದೆ. ಎಕ್ಸ್‌ಪರ್ಟ್‌ಗಳ ಪ್ರಕಾರ, ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದರೂ, ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಜಾದು ಮಾಡಿಲ್ಲ. ಕೇವಲ 61 ಕೋಟಿ ರೂಪಾಯಿ ಗಳಿಸಿತಷ್ಟೇ. ಈ ಕಾರಣಕ್ಕೆ ತಿಂಗಳು ಆಗುವುದರೊಳಗೆ ಸಿನಿಮಾವನ್ನು ಓಟಿಟಿಗೆ ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದಾರೆ.


Click it and Unblock the Notifications











