ನಯನತಾರಾ 'ಅನ್ನಪೂರಣಿ' ವಿವಾದ: ಕ್ಷಮೆ ಕೇಳಿದ ಜೀ ಸ್ಟುಡಿಯೋ, ಸಿನಿಮಾ ಕಿತ್ತಾಕಿದ ನೆಟ್‌ಫ್ಲಿಕ್ಸ್
ದಕ್ಷಿಣ ಭಾರತದ ಸೂಪರ್‌ಸ್ಟಾರ್ ನಯನತಾರಾ ನಟನೆಯ 'ಅನ್ನಪೂರಣಿ' ಸಿನಿಮಾ ವಿವಾದಕ್ಕೆ ಸಿಕ್ಕಿಕೊಂಡಿದೆ. ಈ ಸಿನಿಮಾದ ಕೆಲವು ದೃಶ್ಯಗಳು ಹಾಗೂ ಸಂಭಾಷಣೆ ಹಿಂದೂ ಭಾವನೆಗಳಿಗೆ ಧಕ್ಕೆಯನ್ನು ಉಂಟು ಮಾಡಿದೆ ಎಂದು ಸಂಘಟನೆಗಳು ಆರೋಪ ಮಾಡಿವೆ.
ದಿನದಿಂದ ದಿನಕ್ಕೆ ಈ ಸಿನಿಮಾ ವಿವಾದ ತೀವ್ರಗೊಳ್ಳುತ್ತಿದ್ದಂತೆ ನೆಟ್‌ಫ್ಲಿಕ್ಸ್ ಸಂಸ್ಥೆ ಸಿನಿಮಾವನ್ನು ತನ್ನ ವೇದಿಕೆಯಿಂದ ಕಿತ್ತಾಗಿದೆ. ಹಾಗೇ 'ಅನ್ನಪೂರಣಿ' ಸಿನಿಮಾದ ನಿರ್ಮಾಣ ಸಂಸ್ಥೆ ಜೀ ಸ್ಟುಡಿಯೋ ಹಿಂದೂಗಳ ಭಾವನೆಗಳಿಗೆ ಧಕ್ಕೆ ಮಾಡಿದ್ದಕ್ಕೆ ಕ್ಷಮೆಯಾಚಿಸಿದೆ.

ನಯನತಾರಾ ನಟನೆಯ ತಮಿಳು ಸಿನಿಮಾ 'ಅನ್ನಪೂರಣಿ' ಡಿಸೆಂಬರ್ 1ರಂದು ರಿಲೀಸ್ ಆಗಿತ್ತು. ಬಿಡುಗಡೆಯಾದ 28 ದಿನಗಳ ಬಳಿಕ ಅಂದರೆ, ಡಿಸೆಂಬರ್ 29ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಮಾಡಲಾಗಿತ್ತು. ಇಲ್ಲಿಂದ ಈ ಸಿನಿಮಾ ವಿವಾದ ಸುಳಿಯಲ್ಲಿ ಸಿಕ್ಕಿಕೊಂಡಿದೆ. ಹಿಂದೂ ವಿರೋಧಿ ದೃಶ್ಯಗಳು ಈ ಸಿನಿಮಾದಲ್ಲಿ ಇವೆ ಅನ್ನೋ ಕಾರಣಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
'ಅನ್ನಪೂರಣಿ' ಸಿನಿಮಾದಲ್ಲಿ ರಾಮನನ್ನು ಮಾಂಸ ಭಕ್ಷಕ ಎಂದು ಹೇಳುವ ದೃಶ್ಯವಿತ್ತು. ಹಾಗೇ ಹಿಂದೂ ಪೂಜಾರಿಯ ಮಗಳು ಬಿರಿಯಾನಿ ಮಾಡುವಾಗ ನಮಾಜ್ ಮಾಡುವ ದೃಶ್ಯವಿದೆ. ಇಂತಹ ಕೆಲವು ದೃಶ್ಯಗಳು ಹಿಂದೂ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ಚಿತ್ರತಂಡ ಹಾಗೂ ನಿರ್ಮಾಣ ಸಂಸ್ಥೆಯ ವಿರುದ್ಧ ದೂರು ದಾಖಲಾಗಿತ್ತು.
ತಮಿಳು ಸಿನಿಮಾ 'ಅನ್ನಪೂರಣಿ' ನಟಿ ನಯನತಾರಾ, ಸಿನಿಮಾದ ಹೀರೋ ಜೈ, ನಾಡ್ ಸ್ಟುಡಿಯೋದ ನಿಲೇಶ್ ಕೃಷ್ಣ, ಜತಿನ್ ಸೇತಿ,ಟ್ರಿಡೆಂಡ್ ಆರ್ಟ್ಸ್‌ನ ಆ ರವೀಂದ್ರನ್, ಜೀ ಸ್ಟುಡಿಯೋದ ಪುನೀತ್ ಗೊಯೆಂಕಾ, ನೆಟ್‌ಫ್ಲಿಕ್ಸ್‌ನ ಶಾರೀಕ್ ಪಟೇಲ್, ಮೋನಿಕಾ ಶೇರ್ಗಿಲ್ ಅವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ವರದಿಯಾಗಿದೆ.

'ಅನ್ನಪೂರಣಿ' ಸಿನಿಮಾ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ನೆಟ್‌ಫಿಕ್ಸ್ ತನ್ನ ವೇದಿಕೆಯಿಂದ ಸಿನಿಮಾವನ್ನು ತೆಗೆದು ಹಾಕಿದೆ. ಹಾಗೇ ಜೀ ಸ್ಟುಡಿಯೋ ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದೆ. ಈ ಸಿನಿಮಾವನ್ನು ಹಿಂದೂ ಹಾಗೂ ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆ ಮಾಡುವ ಉದ್ದೇಶದಿಂದ ಮಾಡಿಲ್ಲ ಎಂದು ಹೇಳಿಕೊಂಡಿದೆ.
ಇಷ್ಟೇ ಅಲ್ಲದೆ ಜಿ ಸ್ಟುಡಿಯೋ ವಿಶ್ವ ಹಿಂದೂ ಪರಿಷತ್‌ಗೆ ಪತ್ರ ಬರೆದಿದ್ದು, ಈ ಸಿನಿಮಾದ ವಿವಾದಾತ್ಮಕ ದೃಶ್ಯಗಳನ್ನು ತೆಗೆದು ಹಾಕುವವರೆಗೂ ನೆಟ್‌ಫಿಕ್ಸ್‌ನಲ್ಲಿ ಪ್ರಸಾರ ಆಗುವುದಿಲ್ಲ ಎಂದು ಹೇಳಿದೆಯೆಂದು ವರದಿ ಮಾಡಿದೆ.


Click it and Unblock the Notifications











