4 ಭಾಷೆಯ 'ಕಾಂತಾರ ಚಾಪ್ಟರ್ 1' ಓಟಿಟಿಗೆ ಎಂಟ್ರಿ; ಆದರೆ, ಹಿಂದಿ ಮಾತ್ರ ಯಾಕಿಲ್ಲ? ಪಿವಿಆರ್-ಐನಾಕ್ಸ್ ಪಾತ್ರವೇನು?
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ ಚಾಪ್ಟರ್ 1' ರಿಲೀಸ್ ಆಗಿ ಐದನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ಮೂರು ವಾರ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಇತ್ತೀಚೆಗಷ್ಟೇ ಈ ಸಿನಿಮಾ 25 ದಿನಗಳನ್ನು ಪೂರೈಸಿತ್ತು. ಇನ್ನೇನು 50 ದಿನಗಳು ದಾಟಬಹುದೆಂಬ ನಿರೀಕ್ಷೆಯಿತ್ತು. ಅಷ್ಟರಲ್ಲಿಯೇ ಸಿನಿಮಾ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ.
'ಕಾಂತಾರ ಚಾಪ್ಟರ್ 1' ಇದೇ ಅಕ್ಟೋಬರ್ 31ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಆದರೆ, ಹಿಂದಿಯಲ್ಲಿ ಮಾತ್ರ ಸ್ಪ್ರೀಮಿಂಗ್ ಆಗುತ್ತಿಲ್ಲ. ಅದಕ್ಕೆ ಕಾರಣವೇನು? ಹಿಂದಿ ವರ್ಷನ್ ಅನ್ನು ಬಿಟ್ಟು ಉಳಿದ ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿರೋದ್ಯಾಕೆ?

ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಹಾಗೂ ಮಲಯಾಳಂ ನಟ ಜಯರಾಂ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಕಾಂತಾರ ಚಾಪ್ಟರ್ 1' ದೇಶದಾದ್ಯಂತ ಸದ್ದು ಮಾಡಿತ್ತು. ಬಾಕ್ಸಾಫೀಸ್‌ನಲ್ಲಿ ವಿಶ್ವದಾದ್ಯಂತ ಸುಮಾರು ₹830 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ 2025ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಪಟ್ಟಿ ಸೇರಿಕೊಂಡಿದೆ. ಅಷ್ಟೇ ಅಲ್ಲದೆ ಅಕ್ಟೋಬರ್ 31ರಂದು ವಿಶ್ವದಾದ್ಯಂತ ಇಂಗ್ಲಿಷ್ ವರ್ಷನ್ ರಿಲೀಸ್ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅದೇ ದಿನ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅದರಲ್ಲೂ ಹಿಂದಿ ವರ್ಷನ್ ಮಿಸ್ ಆಗಿದ್ದು ಏಕೆ? ಇದರಲ್ಲಿ ಪಿವಿಆರ್-ಐನಾಕ್ಸ್ ಪಾತ್ರವೇನು? ತಿಳಿಯುವುದಕ್ಕೆ ಮುಂದೆ ಓದಿ.
ಹಿಂದಿ ವರ್ಷನ್ ರಿಲೀಸ್ ಯಾಕಿಲ್ಲ?
'ಕಾಂತಾರ ಚಾಪ್ಟರ್ 1' ಹಿಂದಿ ಏರಿಯಾಗಳಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. 2022ರಲ್ಲಿ ತೆರೆಕಂಡ 'ಕಾಂತಾರ' ಸಿಕ್ಕಿರುವ ರೆಸ್ಪಾನ್ಸ್ 'ಕಾಂತಾರ ಚಾಪ್ಟರ್ 1'ಕ್ಕೂ ಸಿಕ್ಕಿದೆ. ಹೀಗಿರುವಾಗ ಓಟಿಟಿ ಸ್ಟ್ರೀಮಿಂಗ್‌ನಲ್ಲಿ ಹಿಂದಿ ವರ್ಷನ್ ಮಿಸ್ ಆಗಿದ್ದು ಸಿನಿಪ್ರಿಯರಿಗೆ ಅಚ್ಚರಿ ಹುಟ್ಟಿಸಿರುವುದು ನಿಜ. ಅದಕ್ಕೆ ಕಾರಣ ಹೊಂಬಾಳೆ ಫಿಲ್ಮ್ಸ್ ಪಿವಿಆರ್ ಹಾಗೂ ಐನಾಕ್ಸ್ ಜೊತೆ ರಿಲೀಸ್‌ಗೂ ಮುನ್ನ ಮಾಡಿಕೊಂಡಿರುವ ಒಪ್ಪಂದ ಎನ್ನಲಾಗುತ್ತಿದೆ.
ಏನದು ಒಪ್ಪಂದ?
'ಕಾಂತಾರ ಚಾಪ್ಟರ್ 1' ಬಿಡುಗಡೆಗೂ ಮುನ್ನ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹಾಗೂ ಪಿವಿಆರ್-ಐನಾಕ್ಸ್ ನಡುವೆ ಒಪ್ಪಂದ ಆಗಿತ್ತು. ಹಿಂದಿ ವರ್ಷನ್ ಅನ್ನು 8 ವಾರಗಳ ವರೆಗೂ ಓಟಿಟಿಗೆ ಬಿಡುಗಡೆ ಮಾಡುವಂತಿಲ್ಲ. ಉಳಿದ ನಾಲ್ಕು ವರ್ಷನ್ ಅನ್ನು ನಾಲ್ಕು ವಾರಗಳ ಬಳಿಕ ರಿಲೀಸ್ ಮಾಡಬಹುದೆಂಬ ಒಡಂಬಡಿಕೆ ಆಗಿತ್ತು. ಹೀಗಾಗಿ 8 ವಾರಗಳ ವರೆಗೂ 'ಕಾಂತಾರ ಚಾಪ್ಟರ್ 1' ಹಿಂದಿ ವರ್ಷನ್ ಓಟಿಟಿಗಯಲ್ಲಿ ರಿಲೀಸ್ ಆಗುವುದಿಲ್ಲ.

ಬಾಲಿವುಡ್ ಮೂಲಗಳ ಪ್ರಕಾರ ಹಿಂದಿ ಫಿಲ್ಮ್ಸ್ ಮೇಕರ್ಸ್ ಎಲ್ಲಾ ಸೇರಿ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಹಿಂದಿಯ ಯಾವುದೇ ಸಿನಿಮಾ ರಿಲೀಸ್ ಆದರೂ 8 ವಾರಗಳ ಬಳಿಕ ಓಟಿಟಿಗೆ ಬರಬೇಕು. ಅಲ್ಲಿವರೆಗೂ ಓಟಿಟಿಗೆ ಬಿಡುವಂತಿಲ್ಲ. ಹೀಗಾಗಿ 'ಕಾಂತಾರ ಚಾಪ್ಟರ್ 1' ಹಿಂದಿ ವರ್ಷನ್ 8 ವಾರಗಳ ಬಳಿಕವೇ ಓಟಿಟಿಗೆ ಲಗ್ಗೆ ಇಡಲಿದೆ. ಇದು ಉಳಿದ ಭಾಷೆಗಳಲ್ಲೂ ಆಗಬೇಕೆಂದು ಹಲವು ಮಂದಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಇಂಗ್ಲಿಷ್ ವರ್ಷನ್ ಕಥೆಯೇನು?
ಇತ್ತ ಓಟಿಟಿಯಲ್ಲಿ 'ಕಾಂತಾರ ಚಾಪ್ಟರ್ 1' ಸ್ಟ್ರೀಮಿಂಗ್ ಆಗುತ್ತಿದ್ದರೆ, ಅತ್ತ ಇಂಗ್ಲಿಷ್ ವರ್ಷನ್ ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಈ ಸಿನಿಮಾಗೆ ಓಟಿಟಿಯಲ್ಲಿ ಹೇಗೆ ರೆಸ್ಪಾನ್ಸ್ ಸಿಗುತ್ತೆ? ಇಂಗ್ಲಿಷ್ ವರ್ಷನ್ ಅನ್ನು ವಿಶ್ವದಾದ್ಯಂತ ಹೇಗೆ ಸ್ವೀಕರಿಸುತ್ತಾರೆ? ಅನ್ನೋದನ್ನು ಸಿನಿಮಾ ಮಂದಿ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.


Click it and Unblock the Notifications











