ಜೂನ್ ತಿಂಗಳಿನಲ್ಲಿ ಮೈಕ್ರೋ-ಡ್ರಾಮಾ ಸರಣಿಗಳದ್ದೇ ಹವಾ; ರಿಲೀಸ್ ಆಗ್ತಿರೋ ಸೀರಿಸ್‌ಗಳು ಇವೇನೆ
ಭಾರತದ ಜನಪ್ರಿಯ ದೇಶಿ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಾದ ಶೇರ್‌ಚಾಟ್ ಹಾಗೂ ಮೋಜ್ ಈ ತಿಂಗಳು ಭರ್ಜರಿ ಮನರಂಜನೆ ನೀಡುವುದಕ್ಕೆ ಹೊರಟಿದೆ. ತನ್ನ ಒಡೆತನದ 'ಕ್ವಿಕ್ ಟಿವಿ' ಜೂನ್ ತಿಂಗಳಲ್ಲಿ ತನ್ನ ಹೊಚ್ಚ ಹೊಸ ಹೈ-ಇಂಟೆನ್ಸಿಟಿ ಮೈಕ್ರೋ-ಡ್ರಾಮಾ ಒರಿಜಿನಲ್ಸ್ (Micro-drama originals) ಸೀರಿಸ್ ಅನ್ನು ಅನೌನ್ಸ್ ಮಾಡಿದೆ.
ಈಗೀಗ ವೆಬ್ ಸೀರಿಸ್‌ಗಳಿಗಿಂತ ಮೈಕ್ರೋ ಡ್ರಾಮಾ ಸೀರಿಸ್‌ಗಳಿಗೆ ಭಾರೀ ಮನ್ನಣೆ ಸಿಗುತ್ತಿದೆ. ಬದಲಾಗುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ ಹೊಸ ತಲೆಮಾರಿನ ನೆಚ್ಚಿನ ಸೀರಿಸ್ ಇದು. ಇದನ್ನು ಅರಿತ ಸಂಸ್ಥೆಗಳು ಮೈಕ್ರೋ ಡ್ರಾಮಾ ಮೇಲೆ ಕಣ್ಣಿಟ್ಟಿವೆ. ಟೆಲಿವಿಷನ್ ಮತ್ತು ಡಿಜಿಟಲ್ ಲೋಕದ ತಾರೆಯರು ಮೈಕ್ರೋ-ಡ್ರಾಮಾಗಳತ್ತ ಮುಖ ಮಾಡುತ್ತಿದ್ದಾರೆ.

ಕ್ವಿಕ್ ಟಿವಿ ಕೂಡ ಅದ್ಭುತ ಕಥೆಗಳನ್ನು ನೀಡುವ ಮೂಲಕ ಜನಪ್ರಿಯ ವೇದಿಕೆಯಾಗಿ ಹೊರಹೊಮ್ಮಿದೆ. ಇನ್ನು ಜೂನ್ ತಿಂಗಳ ಈ ಹೊಸ ಸರಣಿಯಲ್ಲಿ ದ್ರೋಹ, ಸೇಡು, ಪ್ರೀತಿ, ಕೌಟುಂಬಿಕ ಸಾಗಾ ಮತ್ತು ಸಸ್ಪೆನ್ಸ್ ಒಳಗೊಂಡ ವಿಭಿನ್ನ ಕಥೆಗಳಿವೆ. ಕಿರುತೆರೆಯ ಹೆಸರಾಂತ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜೂನ್ ತಿಂಗಳಲ್ಲಿ ರಿಲೀಸ್ ಆಗಲಿರೋ ಮೈಕ್ರೋ-ಡ್ರಾಮಾಗಳು
'ದಿ ಫ್ಯಾಮಿಲಿ ಮ್ಯಾನ್' ಖ್ಯಾತಿಯ ಉಜ್ವಲ್ ಚೋಪ್ರಾ, 'ಖತ್ರೋನ್ ಕೆ ಖಿಲಾಡಿ 5' ಖ್ಯಾತಿಯ ರಾಜ್‌ನೀಶ್ ದುಗ್ಗಲ್, ಪಿಯೂಷ್ ಸಹದೇವ್, ಝಾನ್ ಖಾನ್ ಮತ್ತು 'ಬಿಗ್ ಬಾಸ್ 16' ಖ್ಯಾತಿಯ ಗೌತಮ್ ವಿಗ್ ಸೇರಿದಂತೆ ಹಲವು ಪ್ರಮುಖ ತಾರೆಯರು ಈ ಹೊಸ ಸೀರಿಸ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೂನ್‌ನಲ್ಲಿ ರಿಲೀಸ್ ಆಗಲಿರುವ ಮೈಕ್ರೋ ಡ್ರಾಮಾಗಳ ಲಿಸ್ಟ್ ಇಲ್ಲಿದೆ.
ಭುಲಾ ದಿಯಾ ತುಝೆ (Bhula Dia Tujhe)
ರಾಜ್‌ನೀಶ್ ದುಗ್ಗಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸೀರಿಸ್ ಜೂನ್ ತಿಂಗಳಲ್ಲಿ ಪ್ರಸಾರ ಆಗಲಿದೆ. ಇದರಲ್ಲಿ 'ಆರ್ಯನ್' ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಾನು ಸರ್ವಸ್ವವನ್ನೂ ತ್ಯಾಗ ಮಾಡಿದ ಜನರಿಂದಲೇ ದ್ರೋಹಕ್ಕೊಳಗಾಗಿ, ವರ್ಷಗಳ ಕಾಲ ಕ್ರೂರ ಬಂಧನದಲ್ಲಿದ್ದ ಆರ್ಯನ್ ಅದರಿಂದ ಹೇಗೆ ಮರಳಿ ಬರುತ್ತಾನೆ. ತನ್ನ ಜೀವನವನ್ನು ನಾಶಪಡಿಸಿದವರ ಪಿತೂರಿಯನ್ನು ಬಯಲಿಗೆಳೆದು ತನ್ನದನ್ನು ಮರಳಿ ಪಡೆದುಕೊಳ್ಳುತ್ತಾನೆ ಎಂಬುದು ಕಥೆ.
ಟ್ರಿಂಗ್ ಟ್ರಿಂಗ್ (Tring Tring):
ಈ ಸೀರಿಸ್‌ನಲ್ಲಿ ಉಜ್ವಲ್ ಚೋಪ್ರಾ 'ತೇಜಸ್ವಿ' ಎಂಬ ಪ್ರಾಮಾಣಿಕ ವ್ಯಕ್ತಿಯಾಗಿ ನಟಿಸಿದ್ದಾರೆ. ಈ ಸರಣಿಯು ಟೈಮ್ ಬೆಂಡಿಂಗ್ ಹಿನ್ನೆಲೆ ಹೊಂದಿದ್ದು ಟ್ವಿಸ್ಟ್ ಅನ್ನು ನಿರೀಕ್ಷಿಸಬಹುದು. ಭಾರತದ ಶರವೇಗದ ಷೇರು ಮಾರುಕಟ್ಟೆಯ ಹಿನ್ನೆಲೆಯಲ್ಲಿ ಮಗನು ನಿಗೂಢ ಫೋನ್ ಕರೆಯ ಮೂಲಕ ತಂದೆಯ ಹಣೆಬರಹವನ್ನು ಬದಲಾಯಿಸಲು ಪ್ರಯತ್ನಿಸುವ ಕುತೂಹಲಕಾರಿ ಕಥೆಯಾಗಿದೆ.
ಜಿಂದಾ ಹೂನ್ ಮೈ (Zinda Hoon Main)
ರೋಹಿತ್ ಚೌಧರಿ ನಟನೆಯ ಈ ಸೀರಿಸ್‌ನಲ್ಲಿ ಸತ್ತಿದ್ದಾನೆಂದು ಘೋಷಣೆ ಮಾಡಲ್ಪಟ್ಟ ವ್ಯಕ್ತಿಯೊಬ್ಬ ವರ್ಷಗಳ ನಂತರ ಮರಳಿ ಬರುತ್ತಾನೆ. ತನ್ನ ಕಳುವಾದ ಗುರುತನ್ನು ಮತ್ತೆ ಪಡೆದುಕೊಳ್ಳಲು, ತನ್ನ ಜೀವನವನ್ನು ಧ್ವಂಸಗೊಳಿಸಿದ ದ್ರೋಹವನ್ನು ಜಗತ್ತಿಗೆ ಸಾರುವುದಕ್ಕೆ ಹೋರಾಡುವ ಕಥೆಯಾಗಿದೆ.
ಬಾಗಿ (Baaghi)
ಅಂಕಿತ್ ರಾಜ್ 'ವಿಜಯ್ ಬಗ್ಗಾ' ಎಂಬ ಮಾಜಿ ಡಾನ್ ಪಾತ್ರದಲ್ಲಿ ನಟಿಸಿರುವ ಆಕ್ಷನ್ ಮತ್ತು ಎಮೋಷನಲ್ ಥ್ರಿಲ್ಲರ್ ಸರಣಿ ಇದು. ವರ್ಷಗಳ ಜೈಲು ವಾಸದ ನಂತರ ತನ್ನ ಮುರಿದು ಹೋದ ಕುಟುಂಬವನ್ನು ಒಟ್ಟುಗೂಡಿಸಲು ಪ್ರಯತ್ನಿಸುವ ಈತನನ್ನು, ತನ್ನ ಪ್ರೀತಿಪಾತ್ರರಿಗೆ ಅಪಾಯ ಬಂದಾಗ ಮತ್ತೊಮ್ಮೆ ಹಿಂಸಾಚಾರದ ಜಗತ್ತಿಗೆ ಹೇಗೆ ಎಳೆದೊಯ್ಯುತ್ತದೆ ಎಂಬುವುದೇ ಕಥೆ.
ಡಿಟೆಕ್ಟಿವ್ ಔರ್ ಹಸೀನಾ (Detective Aur Haseena)
ಝಾನ್ ಖಾನ್ ಮತ್ತು ಕಾಜಲ್ ಚೌಹಾಣ್ ನಟಿಸಿರುವ ಈ ಸಸ್ಪೆನ್ಸ್ ರೋಮ್ಯಾಂಟಿಕ್ ಥ್ರಿಲ್ಲರ್ 'ಡಿಟೆಕ್ಟಿವ್ ಔರ್ ಹಸೀನಾ'. ಪತ್ತೇದಾರಿ ಅಭಿನವ್ ಹಾಗೂ ತನ್ನ ಕುಟುಂಬದ ನಾಶದ ಹಿಂದಿನ ಸತ್ಯವನ್ನು ಹುಡುಕುತ್ತಿರುವ ಈಶಾ ಎಂಬ ಯುವತಿಯ ಸುತ್ತ ಸಾಗುತ್ತೆ. ನಿಗೂಢ ಭೇಟಿಯಿಂದ ಆರಂಭವಾಗುವ ಇವರ ಪಯಣ ದ್ರೋಹ, ಪಿತೂರಿ ಮತ್ತು ಅನಿರೀಕ್ಷಿತ ಪ್ರೀತಿಯ ಕಡೆಗೆ ಎಳೆದೊಯ್ಯುತ್ತೆ.
ಬಾಹುಬಲಿ ಕಾ ಬಲಿದಾನ್ (Bahubali Ka Balidan)
ಫ್ಯಾಂಟಸಿ-ಆಕ್ಷನ್ ಡ್ರಾಮಾ ಪ್ರಾಚೀನ ಗುರುಕುಲಗಳ ಜಗತ್ತನ್ನು ಆಧರಿಸಿದ 'ಬಾಹುಬಲಿ ಕಾ ಬಲಿದಾನ್' ಜೂನ್ ಅಂತ್ಯದ ವೇಳೆಗೆ ಬಿಡುಗಡೆಯಾಗಲಿದೆ. ಗೌತಮ್ ವಿಗ್ ಇಲ್ಲಿ 'ಆರ್ಯನ್' ಎಂಬ ನಿಷ್ಠಾವಂತ ಯೋಧನ ಪಾತ್ರದಲ್ಲಿ ನಟಿಸಿದ್ದಾರೆ. ತಾನು ರಕ್ಷಿಸಿದ ಜನರಿಂದಲೇ ದ್ರೋಹಿ ಎಂದು ಹಣೆಪಟ್ಟಿ ಕಟ್ಟಿಸಿಕೊಂಡ ನಂತರ ನಡೆಸುವ ಸಂಘರ್ಷವೇ ಕಥೆ.


Click it and Unblock the Notifications