ಭರ್ಜರಿ ಮೊತ್ತಕ್ಕೆ 'ಸು ಫ್ರಮ್ ಸೋ' ಓಟಿಟಿ ಹಕ್ಕುಗಳ ಮಾರಾಟ; ಎಷ್ಟಕ್ಕೆ ಸೇಲ್ ಆಯ್ತು? ಎಲ್ಲಿ ನೋಡ್ಬಹುದು?
'ಸು ಫ್ರಮ್ ಸೋ' ಕನ್ನಡ ಚಿತ್ರರಂಗಕ್ಕೆ ಜೀವ ಕಳೆ ಕೊಟ್ಟ ಸಿನಿಮಾ. ಬಹುತೇಕ ಹೊಸ ಪ್ರತಿಭೆಗಳ ಈ ಸಿನಿಮಾ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದೆ. ಕಂಟೆಂಟ್ ಇಟ್ಕೊಂಡು ಸಿನಿಮಾ ಮಾಡಿದರೆ, ಯಾರೇ ನಟಿಸಿದರೂ ಗೆಲ್ಲುತ್ತೆ ಅನ್ನೋದನ್ನು ಪ್ರೂವ್ ಮಾಡಿದೆ. ಹೀಗಾಗಿ ಬೇರೆ ಭಾಷೆಗಳಲ್ಲಿಯೂ ಈ ಸಿನಿಮಾಗೆ ಬೇಡಿಕೆ ಇತ್ತು. ಮಲಯಾಳಂ ಹಾಗೂ ತೆಲುಗಿನಲ್ಲಿ ಈ ಸಿನಿಮಾ ಡಬ್ ಆಗಿ ರಿಲೀಸ್ ಆಗಿದ್ದರೆ, ಇನ್ನು ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ರಿಮೇಕ್ ಆಗುತ್ತಿದೆ.
ಕಳೆದ ಎರಡೂವರೆ ವರ್ಷಗಳಿಂದ ಕನ್ನಡ ಚಿತ್ರರಂಗ ಸೊರಗಿ ಹೋಗಿತ್ತು. ಈಗ 'ಸು ಫ್ರಮ್ ಸೋ' ಕಳೆ ಬರುವಂತೆ ಮಾಡಿದೆ. ಹೀಗಾಗಿ ಓಟಿಟಿ ಹಾಗೂ ಡಿಜಿಟಲ್ ಹಕ್ಕುಗಳಿಗೂ ಬಾರೀ ಬೇಡಿಕೆ ಬಂದಿದೆ. ಥಿಯೇಟರ್‌ಗಳಲ್ಲಿ ಇನ್ನೂ ಸದ್ದು ಮಾಡುತ್ತಿರುವ ಈ ಸಿನಿಮಾವನ್ನು ಕೊಂಡು ಕೊಳ್ಳುವುದಕ್ಕೆ ಓಟಿಟಿ ವೇದಿಕೆಗಳು ಹಾಗೂ ಮನರಂಜನಾ ವಾಹಿನಿಗಳು ಮುಗಿಬಿದ್ದಿದ್ದವು. ಕೊನೆಗೂ ಒಳ್ಳೆಯ ಮೊತ್ತಕ್ಕೆ 'ಸು ಫ್ರಮ್ ಸೋ'ದ ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳು ಸೇಲ್ ಆಗಿವೆ.

'ಸು ಫ್ರಮ್ ಸೋ' ಬಾಕ್ಸಾಫೀಸ್‌ನಲ್ಲಿ ಚಿಂದಿ ಕಲೆಕ್ಷನ್ ಮಾಡುತ್ತಿದೆ. ನಿರಂತರ ನಾಲ್ಕು ವಾರಗಳ ಕಾಲ ಎಂತಹ ದೊಡ್ಡ ಸಿನಿಮಾಗಳು ಬಂದರೂ ಥಿಯೇಟರ್‌ನಿಂದ ಕದಲಲಿಲ್ಲ. ಬಾಕ್ಸಾಫೀಸ್ ದೋಚುವುದನ್ನು ನಿಲ್ಲಿಸಲಿಲ್ಲ. ಈ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಅಬ್ಬರಿಸುತ್ತಿರುವುದನ್ನು ನೋಡಿ ಸಿನಿಮಾ ಮಂದಿ ದಂಗಾಗಿ ಹೋಗಿದ್ದರು. ಈಗ ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್ ಆಗಿವೆ ಎಂಬ ಸುದ್ದಿ ಹರಿದಾಡುತ್ತಿದೆ.
'ಸು ಫ್ರಮ್ ಸೋ' ಖರೀದಿಸಿದ್ಯಾರು?
ರಾಜ್ ಬಿ ಶೆಟ್ಟಿ ಹಾಗೂ ಸ್ನೇಹಿತರು ಸೇರಿ ನಿರ್ಮಿಸಿರುವ 'ಸು ಫ್ರಮ್ ಸೋ' ಬಾಕ್ಸಾಫೀಸ್‌ನಲ್ಲೇ ಏನೋ ಭರ್ಜರಿ ಕಲೆಕ್ಷನ್ ಆಗಿದೆ. ಕನ್ನಡದ ಗಲ್ಲಾ ಪಟ್ಟಿಗೆಯಲ್ಲಿ ಈ ಸಿನಿಮಾ ದಾಖಲೆ ಬರೆದ ಸಿನಿಮಾಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಖರೀದಿ ಮಾಡುವುದಕ್ಕೆ ಸಂಸ್ಥೆಗಳು ಮುಂದಾಗಿದ್ದವು. ಕೊನೆಗೂ ಈ ಪೈಪೋಟಿಯಲ್ಲಿ ಜಿಯೋ ಸ್ಟಾರ್ ಸಂಸ್ಥೆ ಅಡಿಯಲ್ಲಿ ಬರುವ ಜಿಯೋ ಹಾಟ್‌ಸ್ಟಾರ್ ಹಾಗೂ ಕಲರ್ಸ್ ಕನ್ನಡ 'ಸು ಫ್ರಮ್ ಸೋ' ಸಿನಿಮಾವನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ.

ಸೇಲ್ ಆದ ಮೊತ್ತ ಎಷ್ಟು?
ಕನ್ನಡ ಸಿನಿಮಾ 'ಸು ಫ್ರಮ್ ಸೋ' ಭಾರೀ ಮೊತ್ತಕ್ಕೆ ಸೇಲ್ ಆಗಿದೆ. ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಖರೀದಿ ಮಾಡುವುದಕ್ಕೆ ದೊಡ್ಡ ದೊಡ್ಡ ಸಂಸ್ಥೆಗಳು ಕ್ಯೂನಲ್ಲಿ ನಿಂತಿದ್ದವು. ಜೀ 5, ಅಮೆಜಾನ್ ಪ್ರೈಂ ವಿಡಿಯೋ, ಜಿಯೋ ಹಾಟ್‌ಸ್ಟಾರ್ ಪೈಪೋಟಿ ನಡೆಸಿದ್ದವು. ಕೊನೆಗೂ ಈ ಸಿನಿಮಾ ₹7 ಕೋಟಿಗೆ ಜಿಯೋ ಹಾಟ್‌ಸ್ಟಾರ್‌ಗೆ ಸೇಲ್ ಆಗಿದೆ. ಕನ್ನಡ, ತೆಲುಗು, ಮಲಯಾಳಂ ಭಾಷೆಯ ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಸೇರಿ ಈ ಮೊತ್ತಕ್ಕೆ ಖರೀದಿ ಮಾಡಲಾಗಿದೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ.
ಹಿಂದಿ-ತಮಿಳು ಹಕ್ಕುಗಳು ಪ್ರತ್ಯೇಕ
'ಸು ಫ್ರಮ್ ಸೋ' ಸಿನಿಮಾ ಹಿಂದಿ ಹಾಗೂ ತಮಿಳು ಭಾಷೆಗೆ ಡಬ್ ಆಗಿಲ್ಲ. ಆದರೆ, ಈ ಸಿನಿಮಾ ಈ ಎರಡೂ ಭಾಷೆಗಳಲ್ಲೂ ರಿಮೇಕ್ ಆಗುತ್ತಿದೆ. ಈಗಾಗಲೇ ಹಿಂದಿಯ ರಿಮೇಕ್ ರೈಟ್ಸ್ ಅನ್ನು ಖರೀದಿ ಮಾಡಲಾಗಿದೆ. ಮತ್ತೊಂದು ಕಡೆ ತಮಿಳು ಭಾಷೆಯ ರಿಮೇಕ್ ಹಕ್ಕನ್ನ ಶಿವಣ್ಣನ ಮ್ಯಾನೇಜರ್ ರಾಜ್‌ಕುಮಾರ್ ಖರೀದಿ ಮಾಡಿದ್ದಾರೆ. ತಮಿಳಿಗೆ ರಿಮೇಕ್ ಮಾಡುವ ಆಲೋಚನೆ ಇಟ್ಟುಕೊಂಡಿದ್ದಾರೆ. ಆದರೆ, ಎರಡೂ ಭಾಷೆಗಳಿಗೆ ಎಷ್ಟು ಮೊತ್ತಕ್ಕೆ ಸೇಲ್ ಆಗಿದೆ ಅನ್ನೋದು ಇನ್ನೂ ರಿವೀಲ್ ಆಗಿಲ್ಲ.
ಬಾಕ್ಸಾಫೀಸ್‌ನಲ್ಲಿ ₹100 ಕೋಟಿ
ರಾಜ್ ಬಿ ಶೆಟ್ಟಿ 'ಸು ಫ್ರಮ್ ಸೋ' ಸಿನಿಮಾವನ್ನು ನಿರ್ಮಾಣ ಮಾಡಿ ದೊಡ್ಡ ಮೊತ್ತವನ್ನು ಜೇಬಿಗೆ ಇಳಿಸಿದ್ದಾರೆ. ಸಿನಿಮಾ ರಿಲೀಸ್ ಆಗಿ 25 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿರುವ ಈ ಸಿನಿಮಾ ಗಲ್ಲಾಪಟ್ಟೆಗೆಯಲ್ಲಿ ಈಗಾಗಲೇ 100 ಗಡಿ ದಾಟಿ, 125 ಕೋಟಿಯತ್ತ ಮುನ್ನುತ್ತಿದೆ. ಈಗ ಓಟಿಟಿ ಹಾಗೂ ಸ್ಯಾಟಲೈಟ್ ಎರಡು ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್ ಆಗಿರುವುದೋ ಚಿತ್ರತಂಡಕ್ಕೆ ಬೋನಸ್ ಆಗಿದೆ.


Click it and Unblock the Notifications











