'ಏಕಂ' ವೆಬ್ ಸೀರಿಸ್ ರಿಲೀಸ್‌ಗೆ ಎಲ್ಲೆಡೆ ನಿರಾಸೆ, ಅದೇ ನೆಪ, ಅದೇ ಸಬೂಬು; ರಕ್ಷಿತ್ ಶೆಟ್ಟಿ ಕಟ್ಟಿ ನಿರ್ಧಾರವೇನು?
ಸ್ಯಾಂಡಲ್‌ವುಡ್‌ನಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹೊಸ ಆಲೋಚನೆಗಳನ್ನು ಮಾಡುತ್ತಲೇ ಇರುತ್ತಾರೆ. ಹೊಸ ಹೊಸ ಪ್ರಯೋಗಗಳಿಗೆ ಕೈ ಹಾಕುತ್ತಲೇ ಇರುತ್ತಾರೆ. ಕೇವಲ ನಟನಾಗಿ ಮಾತ್ರ ಅಷ್ಟೇ ಅಲ್ಲ. ನಿರ್ದೇಶಕನಾಗಿ, ನಿರ್ಮಾಪಕನಾಗಿಯೂ ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇಂತಹದ್ದೇ ಒಂದು ಪ್ರಯತ್ನ 'ಏಕಂ' ವೆಬ್ ಸೀರಿಸ್.
ಎಲ್ಲಾ ಭಾಷೆಯವರು ಓಟಿಟಿಗಾಗಿ ವೆಬ್ ಸೀರಿಸ್‌ಗಳನ್ನು ಮಾಡುತ್ತಾರೆ. ಆದರೆ, ಕನ್ನಡದವರು ಮಾತ್ರ ಗಂಭೀರವಾಗಿ ಇಂತಹದ್ದೊಂದು ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ. ಆಗಾಗ ಒಂದೊಂದು ವೆಬ್ ಸೀರಿಸ್ ಬಂದಿದ್ದರೂ, ಅದು ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಆ ವೇಳೆ ಗಂಭೀರವಾಗಿ ವೆಬ್ ಸೀರಿಸ್‌ಗೆ ಕೈ ಹಾಕಿದವರು ರಕ್ಷಿತ್ ಶೆಟ್ಟಿ ಮತ್ತು ಅವರ ತಂಡ. ಅದುವೇ 'ಏಕಂ'.

ಸುಮಾರು ನಾಲ್ಕು ವರ್ಷಗಳ ಹಿಂದೆ ನಿರ್ಮಾಣಕ್ಕೆ ಮುಂದಾಗಿದ್ದ ಈ ವೆಬ್ ಸೀರಿಸ್ ಬಿಡುಗಡೆಗೆ ರಕ್ಷಿತ್ ಶೆಟ್ಟಿ ಸಿಕ್ಕಾಪಟ್ಟೆ ಹರಸಾಹಸ ಪಟ್ಟಿದ್ದಾರೆ. ಆದರೆ, ಓಟಿಟಿಗಳಲ್ಲಿ ಬಿಡುಗಡೆಯಾಗಿಲ್ಲ. ಪ್ರಕಾಶ್ ರಾಜ್, ರಾಜ್ ಬಿ ಶೆಟ್ಟಿ, ಶೈನ್ ಶೆಟ್ಟಿ ಅಂತ ನಟರು ಇದ್ದರೂ, ಈ ಸೀರಿಸ್ ಅನ್ನು ಓಟಿಟಿಯಲ್ಲಿ ರಿಲೀಸ್ ಸಾಧ್ಯವಾಗಿಲ್ಲ. ಹೀಗಾಗಿ ತಾವೇ ಹೊಸ ಹಾದಿಯನ್ನು ಕಂಡುಕೊಂಡಿದ್ದಾರೆ. www.ekamtheseries.com ಮೂಲಕ ವೀಕ್ಷಣೆಗೆ ಅವಕಾಶ ನೀಡುತ್ತಿದ್ದಾರೆ. ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದು ಮಾಹಿತಿ ಹಂಚಿಕೊಂಡಿದ್ದಾರೆ. ಅದು ಹೀಗಿದೆ.
"2020 ಜನವರಿ, ಅಥವಾ ಫೆಬ್ರವರಿಯೇ? ನೆನಪು ಮಬ್ಬಾಗಿದೆ! ಇರಲಿ... 'ಪರಂವಃ' ಹಾಗು 'ಜರ್ನಿಮ್ಯಾನ್ ಫಿಲ್ಮ್ಸ್' ಒಟ್ಟಿಗೆ 'ಏಕಂ' ಮಾಡಲು ಹೊರಟಿದ್ದು ಅಂದು. ಏನೋ ಹೊಸತೊಂದನ್ನು ಮಾಡುವ ಉತ್ಸಾಹ ನಮ್ಮಲ್ಲಿ. ಕನ್ನಡದಲ್ಲೊಂದು ವೆಬ್ ಸೀರೀಸ್ ಹೊರಬರಲು ಇದೇ ಸೂಕ್ತ ಸಮಯ ಎಂದೆನಿಸಿತ್ತು. ಆದರೆ ಅದೇ ಸಮಯಕ್ಕೆ ಕೊವಿಡ್ ವಕ್ಕರಿಸಿತು. ಜಗತ್ತೇ ತಲೆ ಕೆಳಗಾದ ಸಮಯ. ನಮ್ಮಲ್ಲೂ ಆತಂಕ, ಅನಿಶ್ಚಿತತೆ. ಆದರೂ ಹಿಂದೆ ಸರಿಯದೆ ಮುನ್ನುಗ್ಗಿದೆವು.
ಕಟ್ ಟು ಅಕ್ಟೋಬರ್ 2021. 'ಏಕಂ'ನ ಫೈನಲ್ ಕಟ್ ನೋಡಿದೆ. ಖುಷಿ ಆಯಿತು. ಹೆಮ್ಮೆ ಎನಿಸಿತು. ಇದನ್ನ ಜಗತ್ತಿಗೆ ತೋರಿಸಬೇಕೆನಿಸಿತು. ಅದಾಗಿ ಇಂದಿಗೆ ಬರೋಬ್ಬರಿ ಎರಡೂವರೆ ವರ್ಷಗಳು! 'ಏಕಂ' ಅನ್ನು ಹೊರ ತರಲು ಪಟ್ಟ ಶ್ರಮ ಅಷ್ಟಿಷ್ಟಲ್ಲ! ಎಲ್ಲೆಡೆ ನಿರಾಸೆ, ಅದೇ ನೆಪ, ಅದೇ ಸಬೂಬು! ಯಾವುದೇ ಕೃತಿಯ ಅರ್ಹತೆಯನ್ನ ನಿರ್ಧರಿಸುವ ಅವಕಾಶ ಹಾಗು ಹಕ್ಕು ಪ್ರೇಕ್ಷಕರಿಗಿರಬೇಕು ಎಂದು ನಾನು ಭಾವಿಸುತ್ತೇನೆ.
ಹಾಗಾಗಿ ಏಕಂ ಅನ್ನು ನಾವು ನಮ್ಮದೇ ಆದ ವೇದಿಕೆಯಲ್ಲಿ ನಿಮ್ಮ ಮುಂದೆ ತರಲು ನಿಶ್ಚಯಿಸಿದ್ದೇವೆ. 'ಏಕಂ' ನಿಮಗೆ ಇಷ್ಟವಾಗಬಹುದು, ಇಷ್ಟವಾಗದೇ ಇರಬಹುದು. ಆದರೆ, ಈ ಪ್ರಯತ್ನವನ್ನು ನಿರ್ಲಕ್ಷಿಸುವಂತಿಲ್ಲ ಎಂಬುದನ್ನು ನಾನು ಬಲವಾಗಿ ನಂಬಿದ್ದೇನೆ. 'ಏಕಂ' ಒಂದು ಶ್ಲಾಘನೀಯ ಪ್ರಯತ್ನ. ಇದನ್ನು ನಾವು ಎಷ್ಟು ಪ್ರೀತಿಯಿಂದ ಮಾಡಿದ್ದೇವೋ, ಅಷ್ಟೇ ಪ್ರೀತಿಯಿಂದ ನೀವು ನಮ್ಮ ಈ ಪ್ರಯತ್ನವನ್ನು ಸ್ವೀಕರಿಸುತ್ತೀರಿ ಅಂತ ಆಶಿಸುತ್ತೇನೆ" ಎಂದು ರಕ್ಷಿತ್ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.
ಸದ್ಯ 'ಏಕಂ' ಸೀಸನ್ 1 ಕರಾವಳಿ ವೆಬ್ ಸೀರಿಸ್ ಇದೇ ಜುಲೈ 13ರಂದು ರಿಲೀಸ್ ಆಗುತ್ತಿದೆ.


Click it and Unblock the Notifications











