ಥಿಯೇಟರ್‌ನಲ್ಲಿ ಗೆದ್ದ ಸಿನಿಮಾ ಓಟಿಟಿಯಲ್ಲಿ ನಿರಾಸೆ ಮಾಡಿದ್ದು ಯಾಕೆ? ಅಂತಹದ್ದೇನಾಯ್ತು?
ದಕ್ಷಿಣ ಭಾರತದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. 'ಅರ್ಜುನ್ ರೆಡ್ಡಿ' ಸಿನಿಮಾ ಬಳಿಕ ಸಂದೀಪ್ ರೆಡ್ಡಿ ವಂಗಾ ಬಾಲಿವುಡ್‌ನಲ್ಲಿ ಸೆಟಲ್ ಆದಂತೆ ಕಾಣುತ್ತಿದೆ. ಇದೇ ಸಿನಿಮಾ ರಿಮೇಕ್ ಮಾಡಿ ಗೆದ್ದಿದ್ದರು. ಈಗ 'ಅನಿಮಲ್' ಮೂಲಕ ರಣ್‌ಬೀರ್ ಕಪೂರ್ ವೃತ್ತಿ ಬದುಕಿನ ಮೆಗಾ ಸಿನಿಮಾ ಕೊಟ್ಟು ಸ್ಟಾರ್ ಡೈರೆಕ್ಟರ್ ಪಟ್ಟಿಗೆ ಸೇರಿದ್ದಾರೆ.
'ಅನಿಮಲ್' 2023ಯಲ್ಲಿ ತೆರೆಕಂಡ ಮೆಗಾ ಸಿನಿಮಾಗಳಲ್ಲಿ ಒಂದು. ಕಳೆದ ವರ್ಷ ಡಿಸೆಂಬರ್ 1ರಂದು ತೆರೆಕಂಡಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಘರ್ಜಿಸಿತ್ತು. ವಿಶ್ವದಾದ್ಯಂತ ಈ ಸಿನಿಮಾಗೆ ನೆಗೆಟಿವ್ ಕಮೆಂಟ್‌ಗಳು ಬಂದರೂ, ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. 'ಅನಿಮಲ್' ವರ್ಲ್ಡ್‌ವೈಟ್ ಸುಮಾರು 915 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಇದೇ ಚಿತ್ರಮಂದಿರದಲ್ಲಿ ಘರ್ಜಿಸಿದ ಬಳಿಕ 'ಅನಿಮಲ್' ಓಟಿಟಿಗೆ ಲಗ್ಗೆ ಇಟ್ಟಿದೆ. ಜನವರಿ 26ರಂದು ನೆಟ್‌ಫ್ಲಿಕ್ಸ್‌ನಲ್ಲಿ ಐದು ಭಾಷೆಗಳಲ್ಲಿ ಸ್ಟ್ರೀಮಿಂಗ್ ಶುರು ಮಾಡಿದೆ. ಒಟಿಟಿಯಲ್ಲಿ 'ಅನಿಮಲ್' ನೋಡಬಹುದು ಅನ್ನೋ ಖುಷಿಯಲ್ಲಿ ಇದ್ದವರಿಗೆ ಈ ಸಿನಿಮಾ ನಿರಾಸೆ ಮಾಡಿದೆ. ಅದಕ್ಕೆ ಕಾರಣವೇನು? ಥಿಯೇಟರ್‌ನಲ್ಲಿ ಗೆದ್ದ ಸಿನಿಮಾ ಓಟಿಟಿಯಲ್ಲಿ ನಿರಾಸೆ ಮಾಡಿದ್ದು ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..
'ಅನಿಮಲ್' ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗುವಾಗಲೇ ದೊಡ್ಡ ಸಿನಿಮಾ ಅನ್ನೋ ಅಪಸ್ವರ ಎದ್ದಿತ್ತು. ಸುಮಾರು 3 ಗಂಟೆ 21 ನಿಮಿಷಗಳಷ್ಟು ಉದ್ದವಿತ್ತು. ಆದರೂ, ಈ ಸಿನಿಮಾವನ್ನು ಪ್ರೇಕ್ಷಕರು ವೀಕ್ಷಿಸಿದ್ದರು. ಸಿನಿಮಾದಲ್ಲಿ ಹಿಂಸೆ ಹೆಚ್ಚಿದೆ ಅಂತ ಕೆಲವರು ಚಕಾರವೆತ್ತಿದರೇ ವಿನ:, ಸಿನಿಮಾ ರನ್‌ಟೈಮ್ ಉದ್ದವಿದೆ ಅಂತ ವಿರೋಧ ವ್ಯಕ್ತಪಡಿಸಿದವರು ತುಂಬಾನೇ ವಿರಳ. ಆದರೆ ಓಟಿಟಿಯಲ್ಲಿ ರಿಲೀಸ್ ಆಗುತ್ತೆ ಅಂತ ಅನೌನ್ಸ್ ಮಾಡಿದ ವೇಳೆ ಇಷ್ಟು ಉದ್ದದ ಸಿನಿಮಾಗೆ ಕತ್ತರಿ ಹಾಕಿದ ದೃಶ್ಯವನ್ನು ಸೇರಿಸಿ ರಿಲೀಸ್ ಆಗುತ್ತೆ ಅನ್ನೋ ಸುದ್ದಿ ಹಬ್ಬಿತ್ತು.
3 ಗಂಟೆ 21 ನಿಮಿಷವಿದ್ದ ಸಿನಿಮಾಗೆ ಸುಮಾರು 24 ನಿಮಿಷಗಷ್ಟು ಕತ್ತರಿ ಹಾಕಿದ ದೃಶ್ಯಗಳನ್ನು ಸೇರ್ಪಡೆಯಾಗುತ್ತವೆ ಎಂದು ನಿರೀಕ್ಷೆ ಮಾಡಲಾಗಿತ್ತು. ಬಳಿಕ ರಶ್ಮಿಕಾ ಮಂದಣ್ಣ ನಟಿಸಿದ 8 ನಿಮಿಷಗಳ ದೃಶ್ಯವನ್ನು ಸೇರಿಸಲಾಗಿದೆ ಎಂಬ ಸುದ್ದಿ ಹಬ್ಬಿಸಲಾಗಿತ್ತು. ಇದೇ ನಿರೀಕ್ಷೆಯಲ್ಲಿದ್ದ ವೀಕ್ಷಕರಿಗೀಗ ನಿರಾಸೆ ಆಗಿದೆ. ಯಾಕಂದ್ರೆ, 'ಅನಿಮಲ್' ಸಿನಿಮಾದ ಥಿಯೇಟರ್ ರನ್‌ಟೈಮ್ ಎಷ್ಟಿತ್ತೋ ಅಷ್ಟೇ ಓಟಿಟಿ ವರ್ಷನ್‌ನಲ್ಲಿದೆ. ಹೀಗಾಗಿ ವೀಕ್ಷಕರಿಗೆ ನಿರಾಸೆ ವ್ಯಕ್ತಪಡಿಸಿದ್ದಾರೆ.

'ಅನಿಮಲ್' ಸಿನಿಮಾದಲ್ಲಿ ಕತ್ತರಿ ಹಾಕಿದ ದೃಶ್ಯಗಳನ್ನು ರಿಲೀಸ್ ಮಾಡಿಲ್ಲ. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನಿರಾಸೆಯನ್ನು ಹೊರಹಾಕುತ್ತಿದ್ದಾರೆ. ಆದರೆ, ಈ ಬಗ್ಗೆ 'ಅನಿಮಲ್' ತಂಡ ಆಗಲಿ, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅಗಲಿ, ನೆಟ್‌ಫ್ಲಿಕ್ಸ್ ಆಗಲಿ ಪ್ರತಿಕ್ರಿಯೆ ನೀಡಿಲ್ಲ. ಬಹುಬೇಡಿಕೆಯ ಮೇರೆಗೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ದೃಶ್ಯಗಳನ್ನು ಸೇರಿಸಬಹುದು.
ಇತ್ತೀಚೆಗೆ ಬಿಗ್ ಬಜೆಟ್ ಸಿನಿಮಾಗಳ ನಿರ್ಮಾಪಕರು ಅನಗತ್ಯವಾಗಿ ಹೈಪ್ ಮಾಡುತ್ತಿದ್ದಾರೆ ಅನ್ನೋ ಆರೋಪ ಬಂದಿದೆ. ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗುವ ವೇಳೆನೂ ಕತ್ತರಿ ಹಾಕಿದ ದೃಶ್ಯವನ್ನು ಸೇರಿಸಿ ರಿಲೀಸ್ ಮಾಡಲಾಗುತ್ತೆ ಅನ್ನೋ ಸುದ್ದಿ ಹಬ್ಬಿತ್ತು. ಆದರೆ, ಆಗಲೂ ಕೂಡ ಹೆಚ್ಚುವರಿ ದೃಶ್ಯಗಳನ್ನು ಸೇರಿಸಿರಲಿಲ್ಲ. ಈಗ 'ಅನಿಮಲ್' ತಂಡ ಕೂಡ ಹೀಗೆ ಮಾಡಿದೆ ಅನ್ನೋ ಆರೋಪ ಕೇಳಿ ಬರುತ್ತಿದೆ.


Click it and Unblock the Notifications











