Dhurandhar 2 OTT Release:'ಧುರಂಧರ್ 2' ಓಟಿಟಿಗೆ ಎಂಟ್ರಿ? ನೆಟ್‌ಫ್ಲಿಕ್ಸ್, ಅಮೆಜಾನ್, ಜಿಯೋ ಎಲ್ಲಿ ನೋಡ್ಬಹುದು?
ಈ ವರ್ಷ ಫಸ್ಟ್ ಹಾಫ್ ಮುಗಿಯುವುದರೊಳಗೆ ಬಾಲಿವುಡ್‌ಗೆ ಭರ್ಜರಿ ಯಶಸ್ಸು ಸಿಕ್ಕಿದೆ. ಅದಕ್ಕೆ ಪ್ರಮುಖ ಕಾರಣ ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ. 'ಧುರಂಧರ್' ಮೊದಲ ಭಾಗ ಬಾಲಿವುಡ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿತ್ತು. ಅದೇ ಬೆನ್ನಲ್ಲೇ ಪಾರ್ಟ್ 2 ರಿಲೀಸ್ ಆಗಿತ್ತು. ಇದೂ ಕೂಡ ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿದೆ.
ಬಾಲಿವುಡ್‌ನ 'ಧುರಂಧರ್: ದಿ ರಿವೆಂಜ್' ಸಿನಿಮಾ ಥಿಯೇಟರ್‌ಗಳಲ್ಲಿ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ, ದಾಖಲೆ ಬರೆದಿದೆ. ಕಳೆದ 30 ದಿನಗಳಿಂದ ಈ ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡಿದೆ. ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಬಾಲಿವುಡ್ ದಿಗ್ಗಜರಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಅವರಂತಹ ಸ್ಟಾರ್ ನಟರ ದಾಖಲೆಗಳನ್ನು ಮುರಿದು ಹಾಕಿದೆ. ಥಿಯೇಟರ್‌ಗಳಲ್ಲಿ ಈ ಮಟ್ಟಿಗೆ ಸದ್ದು ಮಾಡಿರೋ 'ಧುರಂಧರ್ 2' ಈಗ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ.

ರಣ್‌ವೀರ್ ಸಿಂಗ್ 'ಧುರಂಧರ್ 2' ಯಾವ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್ ಆಗುತ್ತಿದೆ? ಎಂದು ರಿಲೀಸ್ ಆಗುತ್ತೆ? ಅನ್ನೋ ಮಾಹಿತಿಯನ್ನು ತಿಳಿಯುವುದಕ್ಕೂ ಮುನ್ನ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಅಂತ ನೋಡುವುದಾರೇ, ಈ ಸಿನಿಮಾ ಭಾರತದಲ್ಲಿ ₹1316 ಕೋಟಿ (Gross) ಕಲೆಕ್ಷನ್ ಮಾಡಿದೆ. ಇನ್ನು ₹1099 ಕೋಟಿ ಕಲೆಕ್ಷನ್ (Net) ಆಗಿದೆ. ಇನ್ನು ಓವರ್‌ಸೀಸ್ ಬಾಕ್ಸಾಫೀಸ್ ಕಲೆಕ್ಷನ್ ₹417 ಕೋಟಿ ಎಂದು ಹೇಳಲಾಗಿದೆ.
'ಧುರಂಧರ್ 2' ದೇಶ ಹಾಗೂ ವಿದೇಶದ ಒಟ್ಟು ಬಾಕ್ಸಾಫೀಸ್ ಕಲೆಕ್ಷನ್ ಸುಮಾರು ₹1734 ಕೋಟಿ ಎಂದು ಹಲವು ಮೂಲಗಳು ಈಗಾಗಲೇ ವರದಿ ಮಾಡಿವೆ. ಇನ್ನೇನು ಆಮಿರ್ ಖಾನ್ ನಟನೆಯ 'ದಂಗಲ್' ಹಾಗೂ ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ 2'ಯ ಬಾಕ್ಸಾಫೀಸ್ ದಾಖಲೆಯನ್ನು ಹಿಂದಿಕ್ಕೆ ಹಾಕಬಹುದೆಂಬ ನಿರೀಕ್ಷೆಯಿತ್ತು. ಆದರೂ ಇಷ್ಟು ದೊಡ್ಡ ದಾಖಲೆಯನ್ನು ಇತ್ತೀಚೆಗೆ ಬಾಲಿವುಡ್‌ನ ಯಾವುದೇ ಸಿನಿಮಾ ಮಾಡಿಲ್ಲ ಅನ್ನೋದು ಅಷ್ಟೇ ಸತ್ಯ.
ರಣ್‌ವೀರ್ ಸಿಂಗ್, ಸಾರಾ ಅರ್ಜುನ್ ಜೊತೆ ಸಂಜಯ್ ದತ್, ಅಕ್ಷಯ್ ಖನ್ನಾ, ಆರ್.ಮಾಧವನ್, ಅರ್ಜುನ್ ರಾಂಪಾಲ್ ಹಾಗೂ ರಾಕೇಶ್ ಬೇಡಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದಿತ್ಯ ಧಾರ್ ನಿರ್ದೇಶಿಸಿ, ನಿರ್ಮಿಸಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಬರೆದಿದೆ. ಆದಿತ್ಯ ಧಾರ್ ಜೊತೆ ಲೋಕೇಶ್ ಧಾರ್, ಜ್ಯೋತಿ ದೇಶಪಾಂಡೆ ಕೂಡ ಸಿನಿಮಾಗೆ ಹಣ ಹೂಡಿಕೆ ಮಾಡಿದ್ದಾರೆ. ಕಳೆದ ತಿಂಗಳು ಯುಗಾದಿ ಅಂದರೆ, ಮಾರ್ಚ್ 19ಕ್ಕೆ 'ಧುರಂಧರ್ 2' ಸಿನಿಮಾ ರಿಲೀಸ್ ಆಗಿತ್ತು.

ಇಲ್ಲಿವರೆಗೂ ಬಾಕ್ಸಾಫೀಸ್‌ನಲ್ಲಿ ಗದ್ದಲ ಎಬ್ಬಿಸಿದ್ದ 'ಧುರಂಧರ್ 2' ಇದೀಗ ಓಟಿಟಿಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದೆ. ಬಾಲಿವುಡ್ ನಿಯಮಗಳ ಪ್ರಕಾರ ಹಾಗೂ ಸಿನಿಮಾ ತಂಡದೊಂದಿಗಿನ ಒಡಂಬಡಿಕೆಯ ಪ್ರಕಾರ ಬಿಡುಗಡೆಯಾದ 8 ವಾರಗಳ ಬಳಿಕ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಬೇಕು. ಸದ್ಯ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಜಿಯೋ ಹಾಟ್‌ಸ್ಟಾರ್‌ನಲ್ಲಿ 'ಧುರಂಧರ್ 2' ಬಿಡುಗಡೆಯಾಗಲಿದೆ. ಅಷ್ಟೇ ಅಲ್ಲದೆ, ಮೇ 14ರಂದು ಪ್ರೀಮಿಯರ್ ಆಗಲಿದೆ ಎಂದು ಹೇಳಲಾಗುತ್ತಿದೆ.
'ಧುರಂಧರ್ 2' ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಇದು ದೇಶಾದ್ಯಂತ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾಗಳಲ್ಲಿ ಒಂದಾಗಿದೆ. ಹೀಗಾಗಿ ಓಟಿಟಿಯಲ್ಲಿ ಈ ಸಿನಿಮಾಗೆ ರೆಸ್ಪಾನ್ಸ್ ಹೇಗಿರುತ್ತೆ? ಅನ್ನೋ ಕುತೂಹಲವಿದೆ. ದೇಶ ಹಾಗೂ ವಿದೇಶದಲ್ಲಿ ಸಿನಿಮಾ ವೀಕ್ಷಣೆ ಮಾಡುವವರ ಸಂಖ್ಯೆ ಹೇಗಿರುತ್ತೆ? ಹೊಸ ದಾಖಲೆ ಬರೆಯುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications
