ಹರ್ಷದ್ ಮೆಹ್ತಾ, ತೆಲಗಿ ಆಯ್ತು.. ಈಗ ಸುಬ್ರತಾ ರಾಯ್ ಮೇಲೆ ಕಣ್ಣು; ಓಟಿಟಿಯಲ್ಲಿ ಮತ್ತೊಂದು 'ಸ್ಕಾಮ್'
ಓಟಿಟಿಯಲ್ಲಿ ವೆಬ್ ಸಿರೀಸ್‌ಗಳಿಗೇನು ಕಮ್ಮಿಯಿಲ್ಲ. ವಾರಕ್ಕೆ ಒಂದೊಂದು ಕತೆಯನ್ನು ಹೊತ್ತು ವೆಬ್ ಸೀರಿಸ್‌ಗಳು ಲಗ್ಗೆ ಇಡುತ್ತವೆ. ಇತ್ತೀಚೆಗಿನ ವರ್ಷಗಳಲ್ಲಿ ಕೆಲವು ಸೀರಿಸ್‌ಗಳು ವೀಕ್ಷಕರ ಗಮನ ಸೆಳೆದು ಬಿಟ್ಟಿವೆ. ಮತ್ತೊಂದು ಸೀಸನ್‌ಗಾಗಿ ಕಾದು ಕೂರುವಂತಹ ವೀಕ್ಷಕರ ವರ್ಗ ಹುಟ್ಟಿಕೊಂಡಿದೆ.
ಈ ಹಿಂದೆ ಸೋನಿ ಲೈವ್‌ನಲ್ಲಿ ಸ್ಕ್ಯಾಮ್ ಸಿರೀಸ್‌ಗಳು ಪ್ರಸಾರ ಆಗಿವೆ. ಭಾರತದಲ್ಲಿ ಅತೀ ದೊಡ್ಡ ಹಗರಣಗಳ ರೂವಾರಿಗಳ ಚರಿತ್ರೆಯನ್ನು ಈ ಸೀರಿಸ್ ಬಿಚ್ಚಿಡುತ್ತಿವೆ. ಮೊದಲು 2020ರಲ್ಲಿ ಪ್ರಸಾರಗೊಂಡಿದ್ದ 'ಸ್ಕ್ಯಾಮ್ 1992 ಹರ್ಷದ್ ಮೆಹ್ತಾ ಸ್ಟೋರಿ'ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. 1992ರಲ್ಲಿ ಭಾರತದ ಶೇರು ಮಾರುಕಟ್ಟೆಯಲ್ಲಾದ ಅತೀ ದೊಡ್ಡ ಹಗರಣದ ರೂವಾರಿಯಾಗಿ ಹರ್ಷದ್ ಮೆಹ್ತಾ ಕತೆಯನ್ನು ಬಿಚ್ಚಿಡಲಾಗಿತ್ತು.

'ಸ್ಕ್ಯಾಮ್ 1992 ಹರ್ಷದ್ ಮೆಹ್ತಾ ಸ್ಟೋರಿ' ಓಟಿಟಿ ಕ್ಷೇತ್ರದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಈ ಯಶಸ್ಸಿನ ಬೆನ್ನಲ್ಲೇ ದೇಶದ ಮತ್ತೊಂದು ದೊಡ್ಡ ಹಗರಣ 'ಸ್ಕ್ಯಾಮ್ 2003: ದಿ ತೆಲಗಿ ಸ್ಟೋರಿ' 2023ರಲ್ಲಿ ಪ್ರಸಾರ ಆಗಿತ್ತು. ಈ ಎರಡೂ ಸ್ಕ್ಯಾಮ್ ಸೀರಿಸ್‌ಗಳು ಸೋನಿ ಲೈವ್‌ಗೆ ದೊಡ್ಡ ವೀಕ್ಷಕರ ಸಂಖ್ಯೆಯನ್ನು ತಂದುಕೊಟ್ಟಿತ್ತು. ಈ ಬೆನ್ನಲ್ಲೇ ಮತ್ತೊಂದ ಸ್ಕ್ಯಾಮ್ ಅನ್ನು ಹೊತ್ತು ಬರುತ್ತಿದೆ.
ಅದುವೇ, 'ಸ್ಕ್ಯಾಮ್ 2010: ದಿ ಸುಬ್ರತಾ ರಾಯ್ ಸಾಗ'. ಇದು ಉದ್ಯಮಿ ಸುಬ್ರತಾ ರಾಯ್ ಅವರ ಬದುಕು, ಹಗರಣದ ಕುರಿತು ಬೆಳಕು ಚೆಲ್ಲಲಿದೆ. ಇದು ತಮಲ್ ಬಂಡೋಪಾಧ್ಯಾಯ ಬರೆದ 'ಸಹರಾ: ದಿ ಅನ್‌ಟೋಲ್ಡ್ ಸ್ಟೋರಿ' ಕೃತಿಯನ್ನು ಆಧರಿಸಿದೆ. ಈ ಸೋನಿ ಲೈವ್ ಸೀರಿಸ್ ಅನ್ನು ಅಪ್ಲೌಸ್ ಎಂಟರ್‌ಟೈನ್ಮೆಂಟ್, ಸ್ಟುಡಿಯೋ ನೆಕ್ಸ್ಟ್ ನಿರ್ಮಾಣ ಮಾಡುತ್ತಿದ್ದು, ಹನ್ಸಲ್ ಮೆಹ್ತಾ ನಿರ್ದೇಶನ ಮಾಡುತ್ತಿದ್ದಾರೆ.

'ಸ್ಕ್ಯಾಮ್ 1992 ಹರ್ಷದ್ ಮೆಹ್ತಾ ಸ್ಟೋರಿ', 'ಸ್ಕ್ಯಾಮ್ 2003: ದಿ ತೆಲಗಿ ಸ್ಟೋರಿ' ಎರಡೂ ಸೀರಿಸ್‌ಗಳಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಾಗಿ ಹನ್ಸಲ್ ಮೆಹ್ತಾ ಮೂರನೇ ಚಾಪ್ಟರ್ 'ಸ್ಕ್ಯಾಮ್ 2010: ದಿ ಸುಬ್ರತಾ ರಾಯ್ ಸಾಗ' ಅನೌನ್ಸ್ ಮಾಡಿದ್ದಾರೆ. ಇನ್ನೂ ಈ ಸೀರಿಸ್‌ನಲ್ಲಿ ಯಾರೆಲ್ಲ ನಟಿಸುತ್ತಾರೆ ಅನ್ನುವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.
1976ರಲ್ಲಿ 'ಸಹರಾ ಫೈನಾನ್ಸ್' ಅನ್ನುವ ಚಿಟ್ ಫಂಡ್ ಕಂಪನಿಯನ್ನು ಮುನ್ನೆಡೆಸುತ್ತಿದ್ದರು. ಅದನ್ನು 1978ರಲ್ಲಿ ಸುಬ್ರತಾ ರಾಯ್ 'ಸಹರಾ ಇಂಡಿಯಾ ಪರಿವಾರ್' ಅಂತ ಬದಲಾಯಿಸಿದರು. ಬಂಗಾಳ ಮೂಲದ ಸುಬ್ರತಾ ರಾಯ್ ಬಹುಬೇಗನೇ ಬೇರೆ ಬೇರೆ ಕ್ಷೇತ್ರಕ್ಕೆ ಕೈ ಹಾಕಿ ಯಶಸ್ವಿಯಾದರು. ಟೌನ್‌ಶಿಪ್, ವಿಮಾನಯಾನ, ಸಿನಿಮಾ, ಮಾಧ್ಯಮ ಸೇರಿದಂತೆ ಹಲವು ಉದ್ಯಮಗಳನ್ನು ಆರಂಭಿಸಿದ್ದರು.
2004ರ ವೇಳೆ ಸುಬ್ರತಾ ರಾಯ್ ಕಂಪನಿ ಸಹರಾ ಹೆಮ್ಮರವಾಗಿ ಬೆಳೆದು ನಿಂತಿತ್ತು. ಈ ವೇಳೆ ಇಂಡಿಯನ್ ರೈಲ್ವೆ ಬಿಟ್ಟರೆ, ಅತಿ ಹೆಚ್ಚು ಸಿಬ್ಬಂದಿಗಳನ್ನು ಹೊಂದಿರುವ ಕಂಪನಿ ಸಹರಾ ಗ್ರೂಪ್ ಎಂದು ಟೈಮ್ ಮ್ಯಾಗಜೀನ್ ವರದಿ ಮಾಡಿತ್ತು. ಹಾಗೇ 2012ರಲ್ಲಿ ಅತೀ ಪ್ರಭಾವಿ ಉದ್ಯಮಿ ಸುಬ್ರತಾ ರಾಯ್ ಎಂದು ಇಂಡಿಯಾ ಟುಡೇ ವರದಿ ಮಾಡಿತ್ತು.
ಅಷ್ಟೇ ಯಾಕೆ ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಯೋಜಕರೂ ಆಗಿದ್ದರು. ಈ ಮಟ್ಟಕ್ಕೆ ಬೆಳೆದಿದ್ದ ಸುಬ್ರತಾ ರಾಯ್ ಹಲವು ಹರಣಗಳು ಹೊರಬಂದಿದ್ದವು. 2000ದ ಹೊತ್ತಿಗೆ ಚಿಟ್ ಫಂಡ್‌ನಲ್ಲಿ ನಕಲಿ ಹೂಡಿಕೆದಾರರ ಬಗ್ಗೆ ಆರೋಪ ಹೊತ್ತಿದ್ದರು. 2014ರಲ್ಲಿ ಇವರನ್ನು ಬಂಧಿಸಲಾಗಿತ್ತು. ಸುಬ್ರತಾ ರಾಯ್ ಮೇಲೆ ಸುಮಾರು 25 ಸಾವಿರ ಕೋಟಿ ರೂಪಾಯಿ ಹಗರಣದ ಆರೋಪವಿದೆ.


Click it and Unblock the Notifications











