ಓಟಿಟಿಯಲ್ಲಿ ತೆರೆಕಂಡಿದ್ದ ಶಿವಣ್ಣನ 'ಭಜರಂಗಿ 2' ವೀಕ್ಷಕರಿಂದ ಭಾರಿ ಮೆಚ್ಚುಗೆ: 3 ದಿನದ ಸಾಧನೆ ಏನು?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ನಿರ್ದೇಶಕ ಹರ್ಷ ಕಾಂಬಿನೇಷನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತವೆ. ಈಗಾಗಲೇ ಭಜರಂಗಿ, ಭಜರಂಗಿ 2, ವಜ್ರಕಾಯ ಸಿನಿಮಾಗಳು ಗಲ್ಲಿಪೆಟ್ಟಿಯಲ್ಲಿ ಸದ್ದು ಮಾಡಿವೆ. ಇಬ್ಬರಿಗೂ ಈ ಮೂರು ಸಿನಿಮಾಗಳೂ ಗೆಲುವಿನ ರುಚಿಯನ್ನು ತೋರಿಸಿವೆ. ಕೆಲವು ದಿನಗಳ ಹಿಂದಷ್ಟೇ ಒಟಿಟಿಯಲ್ಲಿ ಪ್ರದರ್ಶನಗೊಂಡಿದ 'ಭಜರಂಗಿ 2'ಗೆ ವೀಕ್ಷಕರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಶಿವಣ್ಣ, ಭಾವನಾ ಮೆನನ್ 'ಭಜರಂಗಿ 2'ದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಅಕ್ಟೋಬರ್ 29ರಂದು 'ಭಜರಂಗಿ 2' ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಚಿತ್ರಮಂದಿರದಲ್ಲಿ 50 ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡ ಬಳಿಕ ಜೀ5 ಓಟಿಟಿ ವೇದಿಕೆಯಲ್ಲಿ 'ಭಜರಂಗಿ 2' ಪ್ರದರ್ಶನ ಕಂಡಿತ್ತು. ಸ್ವತ: ಶಿವರಾಜ್‌ಕುಮಾರ್ ಜೀ 5ನಲ್ಲಿ ಈ ಸಿನಿಮಾವನ್ನು ನೋಡುವಂತೆ ವೀಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದರು. ಅದಕ್ಕೆ 'ಭಜರಂಗಿ 2' ಮೂರು ದಿನಗಳಲ್ಲಿಯೇ ದೊಡ್ಡ ಸಾಧನೆಯನ್ನೇ ಮಾಡಿದೆ.

ಒಟಿಟಿಯಲ್ಲಿ 'ಭಜರಂಗಿ 2' ಮ್ಯಾಜಿಕ್
ಶಿವಣ್ಣ ಹಾಗೂ ಹಾಗೂ ಎ. ಹರ್ಷ ಕಾಂಬಿನೇಷನ್‌ನ ಸಿನಿಮಾ 'ಭಜರಂಗಿ 2' ಥಿಯೇಟರ್‌ನಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಸಿನಿಮಾದ ಕತೆ, ಶಿವಣ್ಣನ ಅಭಿನಯ, ಹರ್ಷ ನಿರ್ದೇಶನಕ್ಕೆ ಪ್ರೇಕ್ಷಕರು ಉಘೇ ಉಘೇ ಎಂದಿದ್ದರು. ಸಿನಿಮಾದ ಗ್ರಾಫಿಕ್ಸ್ ಬಗ್ಗೆ ಸಿನಿಪ್ರಿಯರು ಹೊಗಳಿಕೊಂಡಾಡಿದ್ದರು. 50 ದಿನಗಳ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಂಡ 'ಭಜರಂಗಿ 2' ಡಿಸೆಂಬರ್ 23ರಂದು ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡಲಾಗದೆ ಇದ್ದವರು ಒಟಿಟಿಯಲ್ಲಿ ಸಿನಿಮಾ ನೋಡುತ್ತಿದ್ದಾರೆ. ಹೀಗಾಗಿ 'ಭಜರಂಗಿ 2' ಒಟಿಟಿಯಲ್ಲೂ ಗೆದ್ದು ಬೀಗಿದೆ.

3 ದಿನದಲ್ಲಿಯೇ ದಾಖಲೆ ಬರೆದ 'ಭಜರಂಗಿ 2'
'ಭಜರಂಗಿ 2' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾದ ಬಳಿಕ ಜನರು ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಹೀಗಾಗಿ ಜೀ 5 ಶಿವಣ್ಣನ ಸಿನಿಮಾ ಮೂರು ದಿನಗಳಲ್ಲಿ ಮಾಡಿದ ಸಾಧನೆಯನ್ನು ಬಿಡುಗಡೆ ಮಾಡಿದೆ. ಅದೇನಂದರೆ, ಕೇವಲ ಮೂರು ದಿನಗಳಲ್ಲಿ 'ಭಜರಂಗಿ 2' ಸಿನಿಮಾವನ್ನು ಜನರು 5 ಕೋಟಿಗೂ ಅಧಿಕ ನಿಮಿಷಗಳ ಕಾಲ ವೀಕ್ಷಣೆ ಮಾಡಿದ್ದಾರೆ. ಇದು ಕನ್ನಡ ಸಿನಿಮಾದ ಮಟ್ಟಿಗೆ ದೊಡ್ಡ ದಾಖಲೆ ಎಂದು ಸ್ವತಃ ಜೀ 5 ಸಂಸ್ಥೆ ಘೋಷಣೆ ಮಾಡಿದೆ. " ಕನ್ನಡ ಸಿನಿಮಾವೊಂದು ಇಷ್ಟು ಕಡಿಮೆ ಸಮಯದಲ್ಲಿ 5 ಕೋಟಿಗೂ ಅಧಿಕ ನಿಮಿಷಗಳು ವೀಕ್ಷಣೆ ಪಡೆದಿರುವುದು ಇದೇ ಮೊದಲು ಎಂದು ಜೀ 5 ಸಂಸ್ಥೆಯವರೇ ಹೇಳಿದ್ದಾರೆ. ಇದು ಖುಷಿಕೊಡುವ ವಿಚಾರ. ಒಟಿಟಿಯಲ್ಲಿ ಒಂದೊಂದು ನಿಮಿಷಕ್ಕೂ ಹಣವಿದೆ. ಇಡೀ ಸಿನಿಮಾ 126 ನಿಮಿಷವಿದೆ. ಇನ್ನು 5 ಕೋಟಿಗೂ ಅಧಿಕ ನಿಮಿಷ ವೀಕ್ಷಣೆ ಪಡೆದಿದೆ ಅಂದರೆ, ನೀವೇ ಲೆಕ್ಕ ಹಾಕಿ." ಅಂತ ನಿರ್ದೇಶಕ ಎ. ಹರ್ಷ ಫಿಲ್ಮಿ ಬೀಟ್ ಜೊತೆ ಹರ್ಷ ವ್ಯಕ್ತಪಡಿಸಿದ್ದಾರೆ.

ಥಿಯೇಟರ್‌ನಲ್ಲೂ ಸದ್ದು ಮಾಡಬೇಕಿತ್ತು 'ಭಜರಂಗಿ 2'
"ಜೀ 5 ಸಂಸ್ಥೆ 'ಭಜರಂಗಿ 2' ಸಿನಿಮಾಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ಫುಲ್ ಖುಷಿಯಾಗಿದ್ದಾರೆ. ಇದು ಪಕ್ಕಾ ಥಿಯೇಟರ್‌ನಲ್ಲಿ ಓಡಬೇಕಿದ್ದ ಸಿನಿಮಾ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಪ್ಪು ಸರ್ ಟ್ರಾಜಿಡಿಯಿಂದ ಇಡೀ ರಾಜ್ಯವೇ ದುಃಖದಲ್ಲಿತ್ತು. ಹೀಗಾಗಿ ಚಿತ್ರಮಂದಿರದಲ್ಲಿ ಮೊದಲ ವಾರ ಅಷ್ಟಾಗಿ ಗಳಿಕೆ ಸಾಧ್ಯವಾಗಿರಲಿಲ್ಲ. ಅದೇ ಎರಡನೇ ವಾರ ಸಿನಿಮಾ ಚೆನ್ನಾಗಿ ಓಡಿದೆ. ನಿರ್ಮಾಪಕ ಜಯಣ್ಣ ಸಿನಿಮಾ ಬಿಡುಗಡೆಗೂ ಮುನ್ನವೇ ಲಾಭದಲ್ಲಿದ್ದರು. ಹಿಂದಿ ರೈಟ್ಸ್ 5.5 ಕೋಟಿ, ಒಟಿಟಿಗೆ 9 ಕೋಟಿಗೆ, ತೆಲುಗು, ಮಲಯಾಳಂ, ತಮಿಳು ಭಾಷೆಗಳು ಹಕ್ಕುಗಳು ಸೇಲ್ ಆಗಿದ್ದವು. ಹೀಗಾಗಿ ನಿರ್ಮಾಪಕರು ಸೇಫ್ ಆಗಿದ್ದರು. ಥಿಯೇಟರ್ ಜೊತೆಗೆ ಒಟಿಟಿಯಲ್ಲೂ ದಾಖಲೆ ಮಾಡಿರುವುದು ಇಡೀ ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ." ಅಂತ ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ ನಿರ್ದೇಶಕ ಎ ಹರ್ಷ.

'ಭಜರಂಗಿ 2'ಗೆ ಅಪ್ಪು ಅಗಲಿಕೆಯ ನೋವು
'ಭಜರಂಗಿ 2' ಸಿನಿಮಾ ಅಕ್ಟೋಬರ್ 29ರಂದು ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಶಿವರಾಜ್‌ಕುಮಾರ್ ಬೆಳ್ಳಂಬೆಳಗ್ಗೆನೇ ಸಿನಿಮಾ ನೋಡಿ ಬಂದಿದ್ದರು. ಬೆಂಗಳೂರಿನಲ್ಲಿ ಅಭಿಮಾನಿಗಳಿಗಾಗಿ ಏರ್ಪಡಿಸಿದ್ದ ವಿಶೇಷ ಶೋನಲ್ಲಿ ಎಲ್ಲೆಲ್ಲಿತ್ತೋ ಅಲ್ಲಿಗೆಲ್ಲಾ ಶಿವರಾಜ್‌ಕುಮಾರ್ ಭೇಟಿ ನೀಡಿದ್ದರು. ಮಾರ್ನಿಂಗ್ ಶೋ ಆರಂಭ ಆಗುತ್ತಿದ್ದಂತೆ ಇನ್ನೇನು ಮುಗಿಯಬೇಕು ಅನ್ನುವಷ್ಟರಲ್ಲಿ ಪುನೀತ್ ರಾಜ್‌ಕುಮಾರ್ ನಿಧನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತ್ತು. ಹೀಗಾಗಿ 'ಭಜರಂಗಿ 2' ಥಿಯೇಟರ್‌ನಲ್ಲಿ ಮಾಡಲಾಗದ ಸಾಧನೆಯನ್ನು ಒಟಿಟಿಯಲ್ಲಿ ಮಾಡಿದೆ.


Click it and Unblock the Notifications











