Ghost on Zee5: ರಿಲೀಸ್ ಆದ ಒಂದೇ ತಿಂಗಳಿಗೆ ಶಿವಣ್ಣನ 'ಘೋಸ್ಟ್' ಓಟಿಟಿಗೆ.. ಎಲ್ಲಿ? ಯಾವಾಗ?
'ಜೈಲರ್' ಬಳಿಕ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದ ಶಿವಣ್ಣನ 'ಘೋಸ್ಟ್' ಸಿನಿಮಾ ದಸರಾ ಹಬ್ಬಕ್ಕೆ ರಿಲೀಸ್ ಆಗಿತ್ತು. ಅಕ್ಟೋಬರ್ 19ರಂದು ನಾಲ್ಕು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಇದೇ ವೇಳೆ ದಳಪತಿ ವಿಜಯ್ ಸಿನಿಮಾ 'ಲಿಯೋ', ಬಾಲಕೃಷ್ಣ ಸಿನಿಮಾ 'ಭಗವಂತ್ ಕೇಸರಿ' ಕೂಡ ಬಿಡುಗಡೆಯಾಗಿತ್ತು.
ಕನ್ನಡದಲ್ಲಿ ಅತೀ ಹೆಚ್ಚು ಚರ್ಚೆಯಲ್ಲಿದ್ದ ಶಿವರಾಜ್‌ಕುಮಾರ್ ಸಿನಿಮಾ 'ಘೋಸ್ಟ್' ಇನ್ನೇನು ಕೆಲವೇ ದಿನಗಳಲ್ಲಿ ಓಟಿಟಿಗೆ ಲಗ್ಗೆ ಇಡಲಿದೆ. ಇಲ್ಲಿವರೆಗೂ ರಿಲೀಸ್ ಆಗಬಹುದು ಎಂದು ಊಹೆ ಮಾಡಿದ್ದವರಿಗೆ ಜೀ 5 ಓಟಿಟಿ ಪ್ಲಾಟ್‌ಫಾರ್ಮ್ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ.

'ಘೋಸ್ಟ್' ಸಿನಿಮಾ ಬಿಡುಗಡೆಗೂ ಮುನ್ನವೇ ಡಿಜಿಟಲ್ ರೈಟ್ಸ್ ಮಾರಾಟ ಆಗಿತ್ತು. ಒಡಂಬಡಿಕೆಯಂತೆಯೇ ಈ ಸಿನಿಮಾ ನವೆಂಬರ್ 17ರಂದು ಜೀ 5ನಲ್ಲಿ ಪ್ರೀಮಿಯರ್ ಆಗುತ್ತಿದೆ. ಈ ವಿಷಯವನ್ನು ಜೀ 5 ಸಂಸ್ಥೆ ಅಧಿಕೃತವಾಗಿ ಅನೌನ್ಸ್ ಮಾಡಿದೆ. ಈ ಮೂಲಕ ಇನ್ನು ಮೂರು ದಿನಗಳಲ್ಲಿ ವೀಕ್ಷಕರು 'ಘೋಸ್ಟ್' ಸಿನಿಮಾವನ್ನು ಓಟಿಟಿಯಲ್ಲಿ ನೋಡಬಹುದು.
ಎರಡು ದಿನಗಳ ಹಿಂದಷ್ಟೇ(ನವೆಂಬರ್ 12) 'ಘೋಸ್ಟ್' ಸಿನಿಮಾ ರಿಲೀಸ್ ಆಗಿ 25 ದಿನಗಳನ್ನು ಪೂರೈಸಿದೆ. ಇದಾದ 5 ದಿನಗಳಲ್ಲಿಯೇ ಸಿನಿಮಾ ಓಟಿಟಿಗೆ ಲಗ್ಗೆ ಇಡುತ್ತಿದೆ. ನಿರ್ದೇಶಕ ಶ್ರೀನಿ ಹೆಣೆದ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಶಿವಣ್ಣ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಥಿಯೇಟರ್‌ನಲ್ಲೂ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿತ್ತು.
'ಘೋಸ್ಟ್' ಸಿನಿಮಾದ ಡಿಜಿಟಲ್ ಹಕ್ಕುಗಳು ಕೂಡ ಉತ್ತಮ ಮೊತ್ತಕ್ಕೆ ಮಾರಾಟ ಆಗಿತ್ತು. ಚಿತ್ರತಂಡದ ಮಾಹಿತಿ ಪ್ರಕಾರ,'ಘೋಸ್ಟ್' ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕುಗಳು ಎಲ್ಲಾ ಭಾಷೆಗಳಿಂದ 19.5 ಕೋಟಿ ರೂಪಾಯಿಗೆ ಸೇಲ್ ಆಗಿತ್ತು. ಜೀ ಸಂಸ್ಥೆ ಕನ್ನಡ ಹಾಗೂ ತೆಲುಗು ವರ್ಷನ್ ಅನ್ನು 12 ಕೋಟಿ ರೂಪಾಯಿಗೆ ಖರೀದಿ ಮಾಡಿದೆ ಎಂದು ಹೇಳಲಾಗಿತ್ತು. ಹಿಂದಿ 6 ಕೋಟಿ ರೂಪಾಯಿ, ಮಲಯಾಳಂ 50 ಲಕ್ಷ ರೂಪಾಯಿ, ತಮಿಳು 1 ಕೋಟಿ ರೂಪಾಯಿಗೆ ಸೇಲ್ ಆಗಿದೆ.
ಇನ್ನು ಶಿವಣ್ಣ ನಟಿಸಿದ 'ಘೋಸ್ಟ್' ಸಿನಿಮಾ ಬಾಕ್ಸಾಫೀಸ್‌ನಲ್ಲೂ ಉತ್ತಮ ಗಳಿಕೆ ಕಂಡಿದೆ. ಕರ್ನಾಟಕದಲ್ಲಿ ಈ ಸಿನಿಮಾ ಸುಮಾರು 26 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ ಎನ್ನಲಾಗಿದೆ. ಅಂದಾಜು 20 ಕೋಟಿ ರೂಪಾಯಿಯಲ್ಲಿ ನಿರ್ಮಿಸಿದ್ದ 'ಘೋಸ್ಟ್' ನಿರ್ಮಾಪಕ ಸಂದೇಶ್ ನಾಗರಾಜ್ ಲಾಭದಲ್ಲಿ ಇದ್ದಾರೆ ಅನ್ನೋ ಮಾತು ವಿತರಕರ ವಲಯದಲ್ಲಿ ಓಡಾಡುತ್ತಿದೆ.
'ಘೋಸ್ಟ್' ಇದೇ ನವೆಂಬರ್ 17ರಿಂದ ಜೀ 5ನಲ್ಲಿ ಪ್ರೀಮಿಯರ್ ಕಾಣುತ್ತಿದೆ. ಹೀಗಾಗಿ ಓಟಿಟಿ ವೇದಿಕೆಯಲ್ಲಿ ಹೇಗೆ ಸದ್ದು ಮಾಡುತ್ತೆ ಅನ್ನೋ ಕುತೂಹಲವಿದೆ. ಒಟಿಟಿ ವೇದಿಕೆ ಕನ್ನಡದ ಸಿನಿಮಾಗಳನ್ನು ಖರೀದಿ ಮಾಡಲು ಹಿಂದೇಟು ಹಾಕುತ್ತಿದೆ ಅನ್ನೋ ಮಾತಿದೆ. ಈ ಸಿನಿಮಾ ಓಟಿಟಿಯಲ್ಲಿ ಸದ್ದು ಮಾಡಿದರೆ, ಮತ್ತೆ ಕನ್ನಡ ಚಿತ್ರರಂಗ ಎದ್ದು ನಿಲ್ಲಬಹುದು ಅನ್ನೋ ನಿರೀಕ್ಷೆಯಿದೆ.


Click it and Unblock the Notifications











