Sweet Kaaram Coffee OTT: ವೆಬ್ ಸೀರಿಸ್‌ನಲ್ಲಿ ಜೂಲಿ ಲಕ್ಷ್ಮಿ.. ಮೂರು ತಲೆಮಾರಿನ ಮಹಿಳೆಯರ ರೋಡ್ ಕಹಾನಿ ರಿಲೀಸ್ ಯಾವಾಗ?
ಥಿಯೇಟರ್‌ಗಳಿಗೆ ಜನ ಬರುತ್ತಿಲ್ಲ ಅನ್ನೋ ಒಂದೇ ಕೂಗು ಕೇಳಿ ಬರುತ್ತಿದೆ. ಅದೇ ಇನ್ನೊಂದು ಕಡೆ ಓಟಿಟಿ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳಿಂದ ನೋಡುಗರನ್ನು ಸೆಳೆಯುತ್ತಲೇ ಇದೆ. ಪ್ರತಿವಾರ ಹೊಚ್ಚ ಹೊಸ ಕಂಟೆಂಟ್‌ಗಳನ್ನು ವೀಕ್ಷಕರ ಮುಂದಿಡುತ್ತಿದೆ.
ಬಾಲಿವುಡ್‌ನಲ್ಲಿ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳನ್ನು ನೋಡುವವರ ಸಂಖ್ಯೆ ಹೆಚ್ಚಿದೆ. ಈ ಬೆನ್ನಲ್ಲೇ ಓಟಿಟಿ ವೇದಿಕೆಗಳು ದಕ್ಷಿಣ ಭಾರತದಲ್ಲೂ ವೆಬ್ ಸೀರಿಸ್ ನಿರ್ಮಾಣ ಮಾಡುವುದಕ್ಕೆ ಮುಂದಾಗಿದೆ. ಸದ್ಯ ಅಮೆಜಾನ್ ಪ್ರೈಂನಲ್ಲಿ ಕೂಡ ತಮಿಳಿನಲ್ಲಿ ಹೊಚ್ಚ ಹೊಸ ವೆಬ್ ಸೀರಿಸ್ ಅನ್ನು ಸ್ಟ್ರೀಮಿಂಗ್ ಮಾಡುವುದಕ್ಕೆ ಸಜ್ಜಾಗಿದೆ.

ಹಿರಿಯ ನಟಿ ಜೂಲಿ ಲಕ್ಷ್ಮಿ, ಮಧು ಹಾಗೂ ಶಾಂತಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ವೆಬ್ ಸೀರಿಸ್ ಸಿನಿಪ್ರಿಯರ ಆಸಕ್ತಿಯನ್ನು ಹೆಚ್ಚಿಸುತ್ತಿದೆ. ಮೂವರು ಮಹಿಳೆಯ ರೋಡ್ ಜರ್ನಿಯಲ್ಲಿ ಏನೇನಿರುತ್ತೆ? ಅನ್ನೋದನ್ನು ನೋಡುವುದಕ್ಕೆ ಓಟಿಟಿ ಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಅಂದ್ಹಾಗೆ ಈ ವೆಬ್ ಸೀರಿಸ್‌ನ ಹೆಸರು 'ಸ್ವೀಟ್ ಖಾರಂ ಕಾಫಿ'.
'ಸ್ವೀಟ್ ಖಾರಂ ಕಾಫಿ' ಕಹಾನಿಯೇನು?
'ಸ್ವೀಟ್ ಖಾರಂ ಕಾಫಿ' ತಮಿಳಿನಲ್ಲಿ ನಿರ್ಮಾಣ ಆಗಿರೋ ಈ ವೆಬ್ ಸೀರಿಸ್ ಕುತೂಹಲ ಕೆರಳಿಸುತ್ತಿರುವುದಕ್ಕೆ ಕಾರಣವಿದೆ. ಇದೊಂದು ಮಹಿಳಾ ಪ್ರಧಾನ ಕಥೆಯುಳ್ಳ ವೆಬ್ ಸೀರಿಸ್. ಮೂವರು ವಿಭಿನ್ನ ತಲೆಮಾರಿನ ಮಹಿಳೆಯರು ರೋಡ್ ಟ್ರಿಪ್ ಹೊರಡುವ ಕಥೆಯೇ ಈ ವೆಬ್ ಸೀರಿಸ್‌ನ ಕಥೆ.
ಜೂಲಿ ಲಕ್ಷ್ಮಿ, ಮಧು ಹಾಗೂ ಶಾಂತಿ ಮೂರು ವಿಭಿನ್ನ ತಲೆಮಾರಿನ ಆ ಮೂವರು ಮಹಿಳೆಯರು. ಈ ತಮಿಳು ವೆಬ್ ಸೀರಿಸ್ ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಗೆ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಮುಂದಿನ ತಿಂಗಳು ಜುಲೈ 6 ರಂದು ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಬೆಜೋಯ್ ನಂಬಿಯಾರ್, ಕೃಷ್ಣ ಮಾರಿಮುತ್ತು ಮತ್ತು ಸ್ವಾತಿ ರಘುರಾಮನ್ ಈ ಮೂವರು ವೆಬ್ ಸೀರಿಸ್ ಅನ್ನು ನಿರ್ದೇಶನ ಮಾಡಿದ್ದಾರೆ.
8 ಎಪಿಸೋಡ್‌ಗಳಲ್ಲಿ ಪ್ರಸಾರ
ಜುಲೈ 6ರಂದು 'ಸ್ವೀಟ್ ಖಾರಂ ಕಾಫಿ' ಸರಣಿ 8 ಎಪಿಸೋಡ್‌ಗಳಲ್ಲಿ ಪ್ರಸಾರ ಆಗಲಿದೆ. ಇದರಲ್ಲಿ ಈ ಮೂವರು ಮಹಿಳೆಯರು ಕಳೆದು ಹೋದ ತಮ್ಮ ಗುರುತನ್ನು, ಸ್ವಾಭಿಮಾನವನ್ನು ಹಾಗೂ ಬದುಕುವ ಪ್ರೇರಣೆಯನ್ನು ಮರಳಿ ಪಡೆಯಲು ಯತ್ನಿಸುವದನ್ನೇ ಭಾವನಾತ್ಮಕವಾಗಿ ತೋರಿಸಿದ್ದಾರೆ. ಈ ವೆಬ್ ಸೀರಿಸ್ ಮೂಲಕ ಮಹಿಳೆಯರನ್ನು ಸೆಳೆಯುವುದಕ್ಕೆ ಅಮೆಜಾನ್ ಪ್ರೈಂ ಸ್ಕೆಚ್ ಹಾಕಿದೆ.
"ಪ್ರೈಮ್ ವಿಡಿಯೋದಲ್ಲಿ ನಾವು ಪ್ರತಿ ಕಥೆಯ ಮೌಲ್ಯವನ್ನು ಆಳವಾಗಿ ಗಮನಿಸುತ್ತೇವೆ. ಇದೂವರೆಗೂ ಎಲ್ಲಾ ಬಾರದ ಕಥೆಗಳನ್ನು ತರುವುದು ನಮ್ಮ ಜವಾಬ್ದಾರಿ. ಅದರಲ್ಲೂ ಮಹಿಳಾ ಬರಹಗಾರರು, ಕಲಾವಿದರು ಪ್ರಸ್ತುತ ಪಡಿಸಿದ ಕಥೆಗಳ ಮೂಲಕಸ ನಮ್ಮ ವೀಕ್ಷಕರನ್ನು ರಂಜಿಸುವುದು ನಮಗೆ ಮುಖ್ಯ. ನಾವು ನೀಡುವ ಕಂಟೆಂಟ್ ವೈವಿದ್ಯಮಯವಾಗಿರಬೇಕು. ಸಾಂಸ್ಕೃತಿಕ ಹಾಗೂ ಪ್ರಾದೇಶಿಕವಾಗಿರಬೇಕು. 'ಸ್ವೀಟ್ ಖಾರಂ ಕಾಫಿ' ಇಡೀ ಕುಟುಂಬ ಒಟ್ಟಾಗಿ ಕೂತು ವೀಕ್ಷಿಸುವ ವೆಬ್ ಸೀರಿಸ್" ಎಂದು ಪ್ರೈಮ್ ವಿಡಿಯೋ ಇಂಡಿಯಾದ ಕಂಟೆಂಟ್ ಹೆಡ್ ಅಪರ್ಣಾ ಪುರೋಹಿತ್ ಹೇಳುತ್ತಾರೆ.
240 ದೇಶಗಳಲ್ಲಿ ಸ್ಟ್ರೀಮಿಂಗ್
'ಸ್ವೀಟ್ ಖಾರಂ ಕಾಫಿ' ಸುಮಾರು 240 ದೇಶಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಕಂಟೆಂಟ್ ಕೇವಲ ಭಾರತದ ವೀಕ್ಷಕರಿಗಷ್ಟೇ ಸೀಮಿತವಲ್ಲ. ಇದು ಇಡೀ ವಿಶ್ವಕ್ಕೆ ಮೀಸಲಾದ ಕಥೆ ಎಂದು ತಂಡ ಹೇಳಿಕೊಂಡಿದೆ. ಹೀಗಾಗಿ ಸುಮಾರು 240 ದೇಶಗಳಲ್ಲಿ 'ಸ್ವೀಟ್ ಖಾರಂ ಕಾಫಿ'ಯನ್ನು ವೀಕ್ಷಿಸಬಹುದಾಗಿದೆ.
ಬಹಳ ದಿನಗಳ ಬಳಿಕ ಜೂಲಿ ಲಕ್ಷ್ಮಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ ಹಿರಿಯ ನಟಿ ಮಧು ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಂಡಿರೋದು ಓಟಿಟಿ ಪ್ರಿಯರ ಕುತೂಹಲವನ್ನು ದುಪ್ಪಟ್ಟು ಮಾಡಿರೋದಂತೂ ನಿಜ. ಸದ್ಯ ಜುಲೈ 6ರ ಬಳಿಕ ಈ ವೆಬ್ ಸೀರಿಸ್ ವೀಕ್ಷಿಸಿದ ಬಳಿಕ ವೀಕ್ಷಕರು ಏನಂತಾರೆ ಅನ್ನೋ ಕುತೂಹಲವಿದೆ.


Click it and Unblock the Notifications











