₹320 ಕೋಟಿ ಗಳಿಸಿದ 'ಅಮರನ್' ಓಟಿಟಿ ಎಂಟ್ರಿ ಮುಹೂರ್ತ; ಅಲ್ಲು ಅರ್ಜುನ್ 'ಪುಷ್ಪ 2'ಗೆ ಟಕ್ಕರ್
2024ರಲ್ಲಿ ತಮಿಳು ಚಿತ್ರಕ್ಕೆ ಬಿಗ್ ಹಿಟ್ ಕೊಟ್ಟ ಸಿನಿಮಾ 'ಅಮರನ್'. ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ನಟನೆಯ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ದೊಡ್ಡ ಹಿಟ್‌ಗಾಗಿ ಕಾದು ಕೂತಿದ್ದ ತಮಿಳು ಚಿತ್ರರಂಗಕ್ಕೆ 'ಅಮರನ್' ಬಾಕ್ಸಾಫೀಸ್‌ನಲ್ಲಿ ಸರ್ಪ್ರೈಸ್ ಕೊಟ್ಟಿದೆ. ಸಿನಿಮಾ ರಿಲೀಸ್ ಆಗಿ ನಾಲ್ಕು ವಾರಗಳಾಗಿದ್ದರೂ ಇನ್ನೂ ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
'ಅಮರನ್' ಅಶೋಕ ಚಕ್ರ ಪಡೆದ ವೀರ ಯೋಧ ಮೇಜರ್ ಮುಕುಂದ್ ವರದರಾಜನ್ ಜೀವನ ಕುರಿತ ಸಿನಿಮಾ. ಈ ಸಿನಿಮಾ ಅಕ್ಟೋಬರ್ 31ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಫಸ್ಟ್ ಡೇ ಫಸ್ಟ್ ಶೋನಿಂದಲೇ 'ಅಮರನ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ಜೋಡಿಯನ್ನು ಮೆಚ್ಚಿಕೊಂಡಿದ್ದರು.

ಕಮಲ್ ಹಾಸನ್ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ 'ಅಮರನ್'ಗೆ ಹಣ ಹೂಡಿಕೆ ಮಾಡಿದೆ. ಬಿಡುಗಡೆಯಾಗಿ ನಾಲ್ಕು ವಾರ ಕಳೆದಿದ್ದು ಈ ಸಿನಿಮಾ ಚಿತ್ರಮಂದಿರದಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ. ಅಷ್ಟರಲ್ಲೇ ಓಟಿಟಿಗೆ ಲಗ್ಗೆ ಇಡುತ್ತಿದೆ. ಐದು ವಾರಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದ ಈ ಸಿನಿಮಾ ಓಟಿಟಿಯಲ್ಲೂ ದಾಖಲೆ ದಾಖಲೆ ಮಾಡುತ್ತಾ? ಅನ್ನೋದನ್ನು ನೋಡಬೇಕಿದೆ.
'ಅಮರನ್' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ಕಾಂಬಿನೇಷನ್ ಸಿನಿಮಾವನ್ನು ರಾಜ್‌ಕುಮಾರ್ ಪೆರಿಯಸ್ವಾಮಿ ನಿರ್ದೇಶನ ಮಾಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಸೆಣಸಾಡಿ ವೀರ ಮರಣವನ್ನಪ್ಪಿದ ತಮಿಳುನಾಡಿನ ಮೇಜರ್ ಮುಕುಂದ್ ವರದರಾಜ್ ಕುರಿತ ಸಿನಿಮಾ ಇದ್ದಾಗಿತ್ತು. ತಮಿಳುನಾಡು ಹಾಗೂ ದಕ್ಷಿಣ ಭಾರತದ ಬಹುತೇಕ ಭಾಷೆಗಳಲ್ಲಿ ಈ ಸಿನಿಮಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸಾಫೀಸ್‌ನಲ್ಲಿ ಸುಮಾರು 320 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆಯನ್ನು ಬರೆದಿದೆ.

ಐದು ವಾರಗಳಲ್ಲೇ ಓಟಿಟಿಗೆ
'ಅಮರನ್' ಸಿನಿಮಾ ರಿಲೀಸ್ ಆಗಿ ಐದು ವಾರಗಳ ಅಂತರದಲ್ಲಿ ಓಟಿಟಿಗೆ ಲಗ್ಗೆ ಇಡುತ್ತಿದೆ. ನೆಟ್‌ಫ್ಲಿಕ್ಸ್ ಸಂಸ್ಥೆ ಈ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಬಿಡುಗಡೆಗೂ ಮುನ್ನವೇ ಐದು ವಾರಗಳ ಅಗ್ರಿಮೆಂಟ್ ಅನ್ನು ಚಿತ್ರತಂಡದೊಂದಿಗೆ ಮಾಡಿಕೊಂಡಿತ್ತು ಎನ್ನಲಾಗಿದೆ. ಈಗ ಒಪ್ಪಂದದ ಪ್ರಕಾರ ಡಿಸೆಂಬರ್ 5ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ ಎಂದು ವರದಿಯಾಗಿದೆ. ಥಿಯೇಟರ್‌ನಲ್ಲಿ ನೋಡದೇ ಇರುವವರು ಓಟಿಟಿಯಲ್ಲಿ ಸಿನಿಮಾ ವೀಕ್ಷಿಸಬಹುದು.
'ಪುಷ್ಪ 2'ಗೆ ಪೈಪೋಟಿ
ಅಲ್ಲು ಅರ್ಜುನ್ ನಟನೆಯ ಸಿನಿಮಾ 'ಪುಷ್ಪ 2' ಸಿನಿಮಾ ಕೂಡ ಡಿಸೆಂಬರ್ 5 ರಂದು ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಐದು ಪ್ರಮುಖ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ದಿನ ತಮಿಳಿನ ಬ್ಲಾಕ್ ಬಸ್ಟರ್ ಸಿನಿಮಾ 'ಅಮರನ್' ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. 'ಪುಷ್ಪ 2' ದಾಖಲೆ ಬರೆಯುವ ಒತ್ತಡದಲ್ಲಿದ್ದರೆ, 'ಅಮರನ್' ಒಟಿಟಿಯಲ್ಲಿ ದಾಖಲೆ ಬರೆಯುವ ಉತ್ಸಾಹದಲ್ಲಿದೆ.
4ನೇ ಬಿಗ್ ಓಪನಿಂಗ್ ಪಡೆದ ಸಿನಿಮಾ
'ಅಮರನ್' ಮೊದಲ ದಿನ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದು 2024ರಲ್ಲಿ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ನಾಲ್ಕನೇ ಸಿನಿಮಾ ಆಗಿದೆ. 'ಅಮರನ್' ಭಾರತದ ಅಷ್ಟೇ ಅಲ್ಲದೆ ವಿದೇಶದಲ್ಲಿಯೂ ಉತ್ತಮ ಕಲೆಕ್ಷನ್ ಮಾಡಿದೆ. ಹಾಗೇ ಈ ಸಿನಿಮಾ ವಿವಾದಕ್ಕೂ ಸಿಲುಕಿತ್ತು. ತಮಿಳಗ 'ಮಕ್ಕಳ್ ಜನನಾಯಗ ಕಾಟ್ಚಿ' ಸದಸ್ಯರು ಮುಸ್ಲಿಂ ಜನಾಂಗವನ್ನು ಕೆಟ್ಟದಾಗಿ ತೋರಿಸಿದ್ದಾರೆಂದು ಪ್ರತಿಭಟನೆಯನ್ನು ಮಾಡಿದ್ದರು.
Disclaimer: ಅಮರನ್ ರಿಲೀಸ್ ಡೇಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್‌ಫ್ಲಿಕ್ಸ್ ಇನ್ನೂ ಅಧಿಕೃತವಾಗಿ ಹೇಳಬೇಕಿದೆ.


Click it and Unblock the Notifications











