ಓಟಿಟಿಯಲ್ಲಿ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್ ' ಭರ್ಜರಿ ರೆಸ್ಪಾನ್ಸ್; 20 ದಿನಗಳಲ್ಲೇ ಸಾಧಿಸಿದ್ದೇನು?
ವಿಜಯ್ ರಾಘವೇಂದ್ರ ನಟಿಸಿದ 'ಸೀತಾರಾಮ್ ಬೆನೊಯ್'ಗೆ ಸಿಕ್ಕಾಪಟ್ಟೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಆ ಜೋಷ್‌ನಲ್ಲಿಯೇ ಅದೇ ತಂಡ ಪಾರ್ಟ್ 2 ಅನ್ನು ಹೊತ್ತು ತಂದಿತ್ತು. ಅದುವೇ 'ಸೆಕೆಂಡ್ ಕೇಸ್ ಆಫ್ ಸೀತಾರಾಂ'. ಅದೀಗ ಓಟಿಟಿಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಥಿಯೇಟರ್‌ನಲ್ಲಿ ಪ್ರೇಕ್ಷಕರು ನಿರೀಕ್ಷೆ ಮಾಡಿದಷ್ಟು ದೊಡ್ಡ ಮಟ್ಟಕ್ಕೆ ವೀಕ್ಷಿಸಿರಲಿಲ್ಲ. ಆದ್ರೀಗ ಈ ಸಿನಿಮಾಗೆ ಓಟಿಟಿಯಲ್ಲಿ ಒಳ್ಳೆಉ ರೆಸ್ಪಾನ್ಸ್ ಸಿಕ್ಕಿದೆ.
'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಬಿಡುಗಡೆಗೂ ಮುನ್ನ ತುಣುಕುಗಳಿಂದಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಾಕಿತ್ತು. ಹೀಗಾಗಿ ಈ ವರ್ಷದ ಆರಂಭದ ತಿಂಗಳಲ್ಲಿ ಅಂದರೆ, ಫೆಬ್ರವರಿ 20ರಂದು ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಮೊದಲ ಪಾರ್ಟ್ ಕೂಡ ಓಟಿಟಿಯಲ್ಲಿ ಒಳ್ಳೆಯ ಪ್ರತಿಕ್ರಿಯೆಯನ್ನು ಗಿಟ್ಟಿಸಿಕೊಂಡಿದ್ದರಿಂದ ಸೆಕೆಂಡ್ ಪಾರ್ಟ್ ಥಿಯೇಟರ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಬಹುದೆಂಬ ನಿರೀಕ್ಷೆಯಿತ್ತು.

ಆದರೆ, ಚಿತ್ರತಂಡ ನಿರೀಕ್ಷೆ ಮಾಡಿದಷ್ಟು ಪ್ರತಿಕ್ರಿಯೆ ಥಿಯೇಟರ್‌ನಲ್ಲಿ ಸಿಗಲಿಲ್ಲ. 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ತಮಿಳಿನಲ್ಲಿಯೂ ಬಿಡುಗಡೆಯಾಗಿತ್ತು. ಒಂದು ಲೆಕ್ಕದಲ್ಲಿ ನೋಡುವುದಾದರೇ, ಕನ್ನಡದಲ್ಲಿ ಸಿಕ್ಕ ಪ್ರಕ್ರಿಯೆಗಿಂತ ತಮಿಳಿನಲ್ಲಿ ಒಂದು ಹಂತಕ್ಕೆ ಹೆಚ್ಚು ಸಿಕ್ಕಿತ್ತು ಎಂದು ಹೇಳುವವರು ಇದ್ದಾರೆ. ಆದರೆ, ಕನ್ನಡ ವರ್ಷನ್ ಮಾತ್ರ ಥಿಯೇಟರ್‌ಗಿಂತ ಓಟಿಟಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಅದಕ್ಕೆ ಈ ಮೈಲಿಗಲ್ಲು ಒಂದೊಳ್ಳೆ ಸಾಕ್ಷಿ.
ಹೌದು, 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಏಪ್ರಿಲ್ 17ರಂದು ಓಟಿಟಿಗೆ ಲಗ್ಗೆ ಇಟ್ಟಿದ್ದ ಈ ಸಿನಿಮಾ 20 ದಿನಗಳಲ್ಲಿ ಅದ್ಭುತ ಸಾಧನೆಯನ್ನು ಮಾಡಿದೆ. ಕೇವಲ 20 ದಿನಗಳಲ್ಲಿ ಸುಮಾರು 100 ಮಿಲಿಯನ್ ನಿಮಿಷಗಳಷ್ಟು ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ಮೂಲಕ ಮೊದಲ ಪಾರ್ಟ್‌ಗೆ ಪ್ರತಿಕ್ರಿಯೆ ಸಿಕ್ಕಂತೆ ಸೆಕೆಂಡ್ ಪಾರ್ಟ್‌ಗೂ ಸಿಕ್ಕಿದೆ.
2021ರಲ್ಲಿ 'ಸೀತಾರಾಮ್ ಬೆನೊಯ್' ರಿಲೀಸ್ ಆಗಿತ್ತು. ಹಾಗಂತ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಮೊದಲ ಪಾರ್ಟ್‌ಗೂ ಯಾವುದೇ ಸಂಬಂಧವಿಲ್ಲ. ಇನ್ನೊಂದು ಊರಲ್ಲಿ, ಮತ್ತೊಂದು ಕೇಸ್ ಅನ್ನು ಬೆನ್ನತ್ತಿ ಹೋಗುವ ಕಥೆಯಿದು. ಪೊಲೀಸ್ ಅಧಿಕಾರಿ ಸೀತಾರಾಮ್ ಬಿನೋಯ್ (ವಿಜಯ್ ರಾಘವೇಂದ್ರ) ಆನೆಗುಡ್ಡ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾನೆ. ಅಲ್ಲಿ ದರೋಡೆಕೋರರು ಕಮ್ಮಿ ಆದರು ಅಂದುಕೊಳ್ಳುವಾಗಲೇ ಸರಣಿ ಹತ್ಯೆಗಳು ಆರಂಭ ಆಗುತ್ತವೆ. ಈ ಕೇಸ್‌ನ ಹಿಂದೆ ಬೀಳುವ ಸೀತಾರಾಮ್ ಬಿನೋಯ್ ರೋಚಕ ಕ್ಷಣಗಳನ್ನು ಕಟ್ಟಿ ಕೊಡುತ್ತಾನೆ.
ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ, ಗೋಪಾಲ್ ಕೃಷ್ಣ ದೇಶಪಾಂಡೆ, ಉಷಾ ಭಂಡಾರಿ ಮುಂತಾದವರು ನಟಿಸಿದ್ದಾರೆ. ಸಿನಿಮಾದ ಮೊದಲ ಭಾಗವನ್ನು ನಿರ್ದೇಶನ ಮಾಡಿದ್ದ ದೇವಿ ಪ್ರಸಾದ್ ಶೆಟ್ಟಿಯೇ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಾತ್ವಿಕ್ ಹೆಬ್ಬಾರ್ ಮತ್ತು ದೇವಿಪ್ರಸಾದ್ ಶೆಟ್ಟಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಹೇಮಂತ್ ಆಚಾರ್ಯ ಕ್ಯಾಮರಾ ವರ್ಕ್ ಇದ್ದರೆ, ನವನೀತ್ ಶಾಮ್ ಸಂಗೀತ ನೀಡಿದ್ದಾರೆ.
'ಸೀತಾರಾಮ್ ಬೆನೊಯ್' ಬಳಿಕ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಕೂಡ ಓಟಿಟಿಯಲ್ಲಿ ಸದ್ದು ಮಾಡುತ್ತಿದೆ. ಕನ್ನಡದಲ್ಲಿ ತನಿಖೆಯನ್ನು ಆಧರಿಸಿದ ಸಿನಿಮಾಗಳ ಕಮ್ಮಿಯಾದ ಬೆನ್ನಲ್ಲೇ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಮತ್ತೆ ಫಿಲ್ಮ್ ಮೇಕರ್ಸ್‌ಗೆ ಹೊಸ ಹುರುಷು ನೀಡಿದೆ. ಕಂಟೆಂಟ್ ಸಿನಿಮಾಗಳು ಥಿಯೇಟರ್‌ಗಳಲ್ಲಿ ಅಲ್ಲದೇ ಹೋದರೂ, ಓಟಿಟಿಯಲ್ಲಿ ಸದ್ದು ಮಾಡುತ್ತಿದೆ.


Click it and Unblock the Notifications
