ಶಾರುಖ್,ಸಲ್ಮಾನ್,ರಣ್‌ಬೀರ್, ಇಮ್ರಾನ್ ಹಾಶ್ಮಿಯನ್ನೂ ಮೀರಿಸಿ ಟ್ರೆಂಡ್ ಆಗ್ತಿರೋ ರಾಘವ್ ಜುಯಲ್ ಯಾರು?
ಹೆಚ್ಚು ಕಡಿಮೆ 15 ವರ್ಷಗಳ ಹಿಂದಿನ ಕಥೆ. ಉತ್ತರಾಖಂಡದ ದೆಹರಾದೂನ್‌ನ ಹುಡುಗನೊಬ್ಬ ಹಿಂದಿಯ ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ 3'ಗೆ ಆಡಿಷನ್ ಕೊಟ್ಟಿದ್ದ. ಆದರೆ, ಈತನ ಡ್ಯಾನ್ಸ್ ಮಾಡುವ ಶೈಲಿ ಅಂದಿನ ಜಡ್ಜ್‌ಗಳಿಗೆ ಇಷ್ಟ ಆಗಿರಲಿಲ್ಲ. ಹೀಗಾಗಿ ಆಯ್ಕೆಯಾದ 18 ಮಂದಿಯಲ್ಲಿ ಈತ ಇರಲಿಲ್ಲ. ಆದರೆ, ಆಡಿಷನ್ ವೇಳೆ ಈ ಹಾಕಿದ ಹೆಜ್ಜೆಯ ವಿಡಿಯೋವನ್ನು ಪ್ರಸಾರ ಮಾಡಲಾಗಿತ್ತು. ಅದು ದಿಢೀರನೇ ವೈರಲ್ ಆಗುವುದಕ್ಕೆ ಶುರುವಾಗಿತ್ತು.
ಈ ಪ್ರತಿಭೆಯ ಹೊಸ ಪ್ರಕಾರದ ಡ್ಯಾನ್ಸ್ ಮಾಸ್ಟರ್‌ಗಳಿಗೆ ಇಷ್ಟ ಆಗಿರಲಿಲ್ಲ. ಆದರೆ, ಶೋ ಆರಂಭ ಆಗುತ್ತಿದ್ದಂತೆ ದೆಹರಾದೂನ್‌ನ ಈ ಹುಡುಗ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗುವುದಕ್ಕೆ ಶುರುವಾಗಿತ್ತು. 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ 3'ಗೆ ಈತ ಬರಲೇಬೇಕು ಅಂತ ವೀಕ್ಷಕರೇ ಪಟ್ಟು ಹಿಡಿದು ಕೂತರು. ಅವರ ಒತ್ತಾಯದ ಮೇರೆಗೆ ಆ ಶೋಗೆ ಗ್ರ್ಯಾಂಡ್ ಮಾಸ್ಟರ್ ಆಗಿದ್ದ ಬಾಲಿವುಡ್‌ನ ಲೆಜೆಂಡ್ ಮಿಥುನ್ ಚಕ್ರವರ್ತಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು.

ಇದೊಂದು ಅವಕಾಶ ಇಂದು ಇಡೀ ಬಾಲಿವುಡ್ ಹೊಗಳಿ ಕೊಂಡಾಡುವಂತೆ ಮಾಡಿದೆ. ಆತನ ಹೆಸರು ರಾಘವ್ ಜುಯಲ್. ಡ್ಯಾನ್ಸರ್ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ರಾಘವ್ ಜುಯಲ್ ರಿಯಾಲಿಟಿ ಶೋನಲ್ಲಿ ನಿರೂಪಕನಾಗಿ ಭಾರೀ ಯಶಸ್ಸು ಕಂಡಿದ್ದರು. ಡ್ಯಾನ್ಸ್ ಶೋನಲ್ಲಿ ಹಾಸ್ಯದ ಹೊನಲನ್ನೇ ಹರಿಸಿದ್ದರು. ಈಗ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್ದೇಶಿಸಿದ ಚೊಚ್ಚಲ ವೆಬ್ ಸೀರಿಸ್‌ನಲ್ಲಿ ಮಿಂಚಿದ್ದಾರೆ. ಸಿನಿಪ್ರೇಮಿಗಳು ರಾಘವ್ ಜುಯಲ್ ಹಾಸ್ಯ ಪ್ರಜ್ಞೆಗೆ ಫಿದಾ ಆಗಿದ್ದಾರೆ. ಹಾಗಿದ್ದರೆ, 15 ವರ್ಷಗಳಲ್ಲಿ ರಾಘವ್ ಜುಯಲ್ ಮಾಡಿದ ಮೋಡಿ ಏನು?
'ಕಿಂಗ್ ಆಫ್ ಸ್ಲೋ ಮೋಷನ್'
ರಾಘವ್ ಜುಯಲ್ ಒಬ್ಬ ಬಹುಮುಖ ಪ್ರತಿಭೆ. ಡ್ಯಾನ್ಸರ್, ಕೊರಿಯೋಗ್ರಾಫರ್, ಆಂಕರ್, ಆಕ್ಟರ್ ಹೀಗೆ ಬೆಳೆಯುತ್ತಾ ಹೋಗುತ್ತೆ. ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ರಾಘವ ಜುಯಲ್ ಸ್ಟಾರ್ ಆಗಿ ಮಿಂಚಿದ್ದಾರೆ. ಭಾರತದಲ್ಲಿ ಸ್ಲೋ ಮೋಷನ್ ಡ್ಯಾನ್ಸ್ ಅನ್ನು ಪರಿಚಯಿಸಿದ ಹೆಗ್ಗಳಿಕೆ ಈತನದ್ದು. ಈತನನ್ನು 'ಕಿಂಗ್ ಆಫ್ ಸ್ಲೋ ಮೋಷನ್' ಎಂದು ಕರೆಯಲಾಗುತ್ತೆ. ಡ್ಯಾನ್ಸ್ ರಿಯಾಲಿಟಿ ಶೋನಿಂದ ಆ ಮಟ್ಟಿಗೆ ಹೆಸರು ಗಳಿಸಿಕೊಂಡು ಇಂದು ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.
ಕೈ ಹಿಡಿದ ರಿಯಾಲಿಟಿ ಶೋ
ರಾಘವ್ ಜುಯಲ್ ಡ್ಯಾನ್ಸ್‌ನಲ್ಲಿ ತರಬೇತಿಯನ್ನೇನು ಪಡೆದವನಲ್ಲ. ತನ್ನ ಪ್ರತಿಭೆಯಿಂದಲೇ ಡ್ಯಾನ್ಸ್ ಕಲಿತು ದೇಶಾದ್ಯಂತ ಜನಪ್ರಿಯನಾಗಿದ್ದಾನೆ. ಡ್ಯಾನ್ಸ್ ಜೊತೆ ನಟನೆಯಲ್ಲೂ ಮಿಂಚುತ್ತಿದ್ದಾನೆ. ಈತನ ಕಾಮಿಡಿ ಟೈಮಿಂಗ್‌ಗೆ ಕ್ಲೀನ್ ಬೋಲ್ಡ್ ಆದವರು ಅದೆಷ್ಟು ಮಂದಿನೋ? ರಿಯಲಿಟಿ ಶೋನಲ್ಲಿ ಡ್ಯಾನ್ಸ್ ಆಗಿ ಎಂಟ್ರಿಕೊಟ್ಟಿದ್ದ ರಾಘವ್ ಜುಯಲ್, ಬಳಿಕ ನಿರೂಪಕನಾಗಿ ಮಿಂಚಿದರು. ಸ್ಟೇಜ್ ಮೇಲೆ ತನ್ನ ಕಾಮಿಡಿ ಟೈಮಿಂಗ್‌ನಿಂದ ನಗಿಸುತ್ತಾ ಅತಿಥಿಗಳಾಗಿ ಬರುವ ಬಾಲಿವುಡ್ ಸೆಲೆಬ್ರಿಟಿಗಳ ಗಮನ ಸೆಳೆದಿದ. ಶಾರುಖ್ ಖಾನ್, ಸಲ್ಮಾನ್ ಖಾನ್, ಹೃತಿಕ್ ರೋಷನ್, ರಣ್‌ಬೀರ್ ಕಪೂರ್, ರಣ್‌ವೀರ್ ಸಿಂಗ್, ವರುಣ್ ಧವನ್, ಶ್ರದ್ಧಾ ಕಪೂರ್, ಸೋನಾಕ್ಷಿ ಸಿನ್ಹಾ ಸೇರಿದಂತೆ ಬಾಲಿವುಡ್ ಸ್ಟಾರ್‌ಗಳು ಈತನಿಗೆ ಫ್ಯಾನ್ ಆಗಿಬಿಟ್ಟರು.

'ಕಿಲ್'ನಲ್ಲಿ ನೆಗೆಟಿವ್ ಶೇಡ್
ರಿಯಾಲಿಟಿ ಶೋನಲ್ಲಿ ನಿರೂಪಕನಾಗಿ ಮಿಂಚಿದ ರಾಘವ ಜುಯಲ್‌ಗೆ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿತ್ತು. 'ಎಬಿಸಿಡಿ 2', 'ಸ್ಟ್ರೀಟ್ ಡ್ಯಾನ್ಸರ್ 3ಡಿ', 'ಬಹುತ್ ಹುವಾ ಸಮ್ಮಾನ್' ಅಂತ ಸಿನಿಮಾಗಳಲ್ಲಿ ನಟಿಸಿದ್ದರೂ ದೊಡ್ಡ ಮಟ್ಟಕ್ಕೆ ಹೆಸರು ಬರಲಿಲ್ಲ. 2024ರಲ್ಲಿ ತೆರೆಕಂಡಿದ್ದ 'ಕಿಲ್' ಸಿನಿಮಾದಲ್ಲಿ ನೆಗೆಟಿವ್ ಶೇಡ್‌ನಲ್ಲಿ ನಟಿಸಿ ರಾಘವ್ ಜುಯಲ್ ಗೆದ್ದು ಬಿಟ್ಟರು. ಇಲ್ಲಿಂದ ಬಾಲಿವುಡ್ ಮಂದಿಯ ಕಣ್ಣು ರಾಘವ್ ಜುಯಾಲ್ ಮೇಲೆ ಬೀಳುವುದಕ್ಕೆ ಶುರುವಾಯ್ತು. ಈಗ ಆರ್ಯನ್ ಖಾನ್ ನಿರ್ದೇಶಿಸಿದ 'ದಿ ಬ್ಯಾಡ್ ಆಫ್ ಬಾಲಿವುಡ್'ನಲ್ಲಿ ಯುವಕರ ಫೇವರಿಟ್ ಎನಿಸಿಕೊಂಡಿದ್ದಾರೆ.
ಬ್ಯಾಡ್ ಆಫ್ ಬಾಲಿವುಡ್ಸ್‌ನಲ್ಲಿ ಟ್ರೆಂಡಿಂಗ್
ಆರ್ಯನ್ ಖಾನ್ ನಿರ್ದೇಶಿಸಿದ 'ದಿ ಬ್ಯಾಡ್ ಆಫ್ ಬಾಲಿವುಡ್'ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವೆಬ್ ಸೀರಿಸ್ ಅನ್ನು ವೀಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಸಾಕಷ್ಟು ಪಾತ್ರಗಳು ಬಂದು ಹೋಗಿವೆ. ಬಾಲಿವುಡ್‌ನ ಸ್ಟಾರ್ ನಟರ ಹಿಂಡೇ ಕಾಣಿಸಿಕೊಂಡಿದೆ. ಆದರೆ, ಟ್ರೆಂಡ್ ಆಗುತ್ತಿರೋದು ಇದೇ ರಾಘವ್ ಜುಯಲ್. ಪರ್ವೇಜ್ ಪಾತ್ರದಲ್ಲಿ ರಾಘವ್ ಚಿಂದಿ ಉಡಾಯಿಸಿದ್ದಾರೆ. ಅದರಲ್ಲೂ ಇಮ್ರಾನ್ ಹಾಶ್ಮಿ ಜೊತೆಗಿನ ದೃಶ್ಯಗಳು ವೈರಲ್ ಆಗುತ್ತಿವೆ. ಬಾಲಿವುಡ್‌ನಲ್ಲಿ ರಾಘವ್ ಸ್ಟಾರ್ ಆಗಿ ಮಿಂಚಿಸುತ್ತಿದ್ದಾರೆ.


Click it and Unblock the Notifications











