Year Ender 2024: ಭಾರತದಲ್ಲಿ ಸದ್ದು ಮಾಡಿದ ಕೊರಿಯನ್ ಡ್ರಾಮಾಗಳಿವು; ಯಾಕಷ್ಟು ಫೇಮಸ್ ಆಯ್ತು?
ಕೊರಿಯನ್ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ಭಾರತದಲ್ಲಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಕೊರಿಯನ್ ಭಾಷೆಯಲ್ಲಿ ನಿರ್ಮಾಣ ಆಗಿದ್ದರೂ, ಇಂಗ್ಲಿಷ್‌ಗೆ ಡಬ್ ಆಗಿ ರಿಲೀಸ್ ಆಗುತ್ತಿರುವ ಕಂಟೆಂಟ್ ಅನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಹಾಲಿವುಡ್ ಸಿನಿಮಾಗಳು ಲಗ್ಗೆ ಇಟ್ಟಂತೆ ಈಗ ನಿಧಾನವಾಗಿ ಕೊರಿಯನ್ ಸೀರೀಸ್‌ಗಳು ಸದ್ದು ಮಾಡುವುದಕ್ಕೆ ಶುರು ಮಾಡಿವೆ.
ಕೊರಿಯನ್ ಸೀರೀಸ್‌ಗಳು ಭಾರತದಲ್ಲಿ ಯಾವ ಮಟ್ಟಿಗೆ ಫೇಮಸ್ ಆಗಿದೆ ಅಂದರೆ, ಭಾರತಿಯರು ತಮ್ಮ ಮಕ್ಕಳಿಗೆ ಅಲ್ಲಿನ ಸೂಪರ್‌ಸ್ಟಾರ್‌ಗಳ ಹೆಸರನ್ನು ಇಟ್ಟು ಸಂಭ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭಾರತೀಯರ ಹೆಸರುಗಳು ಕೊರಿಯನ್ ಪದಗಳು ಕಾಣಿಸಿಕೊಂಡರೂ ಅಚ್ಚರಿ ಪಡಬೇಕಾಗಿಲ್ಲ.

ಹಿಂದೆಂದಿಗಿಂತಲೂ 2024ರಲ್ಲಿ ಓಟಿಟಿ ವೇದಿಕೆಗಳಲ್ಲಿ ಕೊರಿಯನ್ ಕಂಟೆಂಟ್‌ಗೆ ಬೇಡಿಕೆ ಹೆಚ್ಚಿತ್ತು. ನೆಟ್‌ಫ್ಲಿಕ್ಸ್, ಪ್ರೈಂ ವಿಡಿಯೋ, ಡಿಸ್ನಿ ಹಾಟ್‌ಸ್ಟಾರ್, ಅಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆ-ಡ್ರಾಮಾ ಸದ್ದು ಮಾಡಿವೆ. ಈ ವರ್ಷ ಭಾರತೀಯರ ಮನಗೆದ್ದ ಟಾಪ್ 5 ಕೊರಿಯನ್ ಡ್ರಾಮಾಗಳು ಇಲ್ಲಿವೆ.
1. ವೆನ್ ದಿ ಫೋನ್ ರಿಂಗ್ಸ್
2024ರಲ್ಲಿ ಅತೀ ಹೆಚ್ಚು ಸದ್ದು ಮಾಡಿದ ಕೊರಿಯನ್ ಡ್ರಾಮಾದಲ್ಲಿ 'ವೆನ್ ದಿ ಫೋನ್ ರಿಂಗ್ಸ್' ಕೂಡ ಒಂದು. ಉದಯೋನ್ಮುಖ ರಾಜಕೀಯ ವ್ಯಕ್ತಿ ಹಾಗೂ ಆತನ ಪತ್ನಿಯ ಸುತ್ತ ಸಾಗುವ ಕಥೆ ಇದಾಗಿದೆ. ಒಮ್ಮೆ ಅಪಹರಣಗಾರನ ಕರೆ ಬಂದಾಗ ಇವರ ಬದುಕಿನಲ್ಲಿ ಏನೆಲ್ಲ ಬದಲಾಗುತ್ತೆ ಅನ್ನೋದು ಈ ಕೊರಿಯನ್ ಡ್ರಾಮಾದ ಕಥೆ. 'ವೆನ್ ದಿ ಫೋನ್ ರಿಂಗ್ಸ್'ನಲ್ಲಿ ಯೂ ಯಿಯೋನ್-ಸಿಯೋಕ್, ಚೇ ಸೂ-ಬಿನ್, ಹಿಯೋ ನಾಮ್-ಜುನ್, ಮತ್ತು ಜಾಂಗ್ ಗ್ಯು-ರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.
2. 'ದಿ ಜಡ್ಜ್ ಫ್ರೆಮ್ ಹೆಲ್'
ಭಾರತದಲ್ಲಿ ಸದ್ದು ಮಾಡಿದ ಮತ್ತೊಂದು ಕೊರಿಯನ್ ಡ್ರಾಮ್ 'ದಿ ಜಡ್ಜ್ ಫ್ರೆಮ್ ಹೆಲ್'. ಸಮಾಜದಲ್ಲಿ ತಪ್ಪು ಮಾಡಿದವರನ್ನು ನರಕಕ್ಕೆ ಕಳಿಸುವುದಕ್ಕಾಗಿ ಜಡ್ಜ್ ರೂಪದಲ್ಲಿ ಬಂದ ಸುಂದರಿ ಒಂದು ಕಡೆ. ಆಕೆಯ ಹಾದಿಯನ್ನು ಬದಲು ಹೊರಟ ಪತ್ತೆದಾರಿ ಇನ್ನೊಂದು ಕಡೆ. ಇಬ್ಬರ ನಡುವಿನ ಸನ್ನಿವೇಶಗಳು 'ದಿ ಜಡ್ಜ್ ಫ್ರೆಮ್ ಹೆಲ್'ನ ಒನ್ ಲೈನ್ ಸ್ಟೋರಿ. ಇದರಲ್ಲಿ ಪಾರ್ಕ್ ಶಿನ್-ಹೈ, ಕಿಮ್ ಜಾ-ಯಂಗ್, ಮತ್ತು ಕಿಮ್ ಯಂಗ್-ಓಕೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.
3. ಲವ್ ನೆಕ್ಟ್ ಡೋರ್
2024ರಲ್ಲಿ ಸದ್ದು ಮಾಡಿದ ಮತ್ತೊಂದು ಕೊರಿಯನ್ ಡ್ರಾಮಾ 'ಲವ್ ನೆಕ್ಟ್ ಡೋರ್'. ಇಬ್ಬರು ಬಾಲ್ಯದ ಗೆಳೆಯರು ಹಲವು ವರ್ಷಗಳ ಬಳಿಕ ಮತ್ತೆ ಮುಖಾ ಮುಖಿಯಾಗುತ್ತಾರೆ. ಅಲ್ಲಿಂದ ಇಬ್ಬರ ನಡುವೆ ಪ್ರೀತಿ ಹುಟ್ಟುತ್ತೆ. ಇದೇ ಎಳೆಯನ್ನೇ ಇಟ್ಟುಕೊಂಡು ಪ್ರೇಕ್ಷಕರ ಗಮನ ಸೆಳೆದಿದ್ದಾರೆ. 'ಲವ್ ನೆಕ್ಟ್ ಡೋರ್'ನಲ್ಲಿ ಕೊರಿಯಾದ ಜನಪ್ರಿಯ ನಟರಾದ ಜಂಗ್ ಹೇ-ಇನ್, ಜಂಗ್ ಸೋ-ಮಿನ್, ಮತ್ತು ಕಿಮ್ ಜಿ-ಯುನ್ ನಟಿಸಿದ್ದಾರೆ. ಇದು ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.
4. ಮ್ಯಾರಿ ಮೈ ಹಸ್‌ಬೆಂಡ್
'ಮ್ಯಾರಿ ಮೈ ಹಸ್‌ಬೆಂಡ್' ಈ ವರ್ಷ ಭಾರತದಲ್ಲಿ ಸದ್ದು ಮಾಡಿದ ಮತ್ತೊಂದು ಕೆ-ಡ್ರಾಮಾ. ಇದರ ನಾಯಕಿ ತನ್ನ ಪತಿ ಆಕೆಯ ಗೆಳತಿಯೊಂದಿಗೆ ಅಫೇರ್ ಇಟ್ಟುಕೊಂಡಿದ್ದಕ್ಕೆ ಸಾಯಿಸುತ್ತಾಳೆ. ಅದೇ ವೇಳೆ ಆಕೆಗೆ 10 ವರ್ಷಗಳ ಹಿಂದೆ ಹೋಗಿ ತಮ್ಮ ಹಣೆಬರಹವನ್ನು ಬದಲಾಯಿಸಿಕೊಳ್ಳುವ ಅವಕಾಶ ಸಿಗುತ್ತೆ. ಮುಂದೆ ಈ ಕಥೆ ಹೇಗೆ ಸಾಗುತ್ತೆ ಅನ್ನೋದೇ ಇಂಟ್ರೆಸ್ಟಿಂಗ್. ಪಾರ್ಕ್ ಮಿನ್-ಯಂಗ್, ನಾ ಇನ್-ವೂ ಮತ್ತು ಲೀ ಯಿ-ಕ್ಯುಂಗ್ 'ಮ್ಯಾರಿ ಮೈ ಹಸ್‌ಬೆಂಡ್'ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಲಭ್ಯವಿದೆ.
5. ಲವ್‌ಲಿ ರನ್ನರ್
ಕೊರಿಯಾದ ಮತ್ತೊಂದು ಫ್ಯಾಂಟಸಿ ಡ್ರಾಮಾ 'ಲವ್‌ಲಿ ರನ್ನರ್'. 2024ರಲ್ಲಿ ಭಾರತದಲ್ಲಿ ಸದ್ದು ಮಾಡಿದ ಕೊರಿಯನ್ ಡ್ರಾಮಾವಿದು. ಇದಕ್ಕೆ ಐಎಂಡಿಬಿ 8.6/10 ಕೊಟ್ಟಿದೆ. 'ಲವ್‌ಲಿ ರನ್ನರ್' ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.


Click it and Unblock the Notifications











