Kesari 2 Review:ಈ ಸಿನಿಮಾ ನೋಡಿದರೇ ಕೋಪದಲ್ಲಿ ರಕ್ತ ಕುದಿಯುತ್ತೆ; ಮತ್ತೆ ಗೆದ್ದನೇ ಕಿಲಾಡಿ ಕುಮಾರ್!
ಐಪಿಎಲ್ ಸೀಸನ್‌ನಲ್ಲಿ ಜನರನ್ನು ಥಿಯೇಟರ್‌ಗೆ ಕರೆಸುವುದು ಕಷ್ಟ. ಹೈ ವೋಲ್ಟೇಜ್ ಮ್ಯಾಚ್ ನೋಡುವುದರ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಇಂತಹ ಸಮಯದಲ್ಲಿ ರೊಚ್ಚಿಗೆದ್ದು ಸಿನಿಮಾಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಅದರಲ್ಲಿ ಅಕ್ಷಯ್ ಕುಮಾರ್, ಆರ್. ಮಾಧವನ್ ಹಾಗೂ ಅನನ್ಯಾ ಪಾಂಡೆ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಕೇಸರಿ ಚಾಪ್ಟರ್ 2' ಕೂಡ ಒಂದು.
ಇತ್ತೀಚೆಗೆ ಅಕ್ಷಯ್ ಕುಮಾರ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿದೆ. ಇನ್ನೇನು ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಕಥೆ ಮುಗೀತು ಎನ್ನುವಾಗಲೇ ಮತ್ತೆ ಸಿಡಿದೆದ್ದಿದ್ದಾರೆ. 'ಕೇಸರಿ ಚಾಪ್ಟರ್ 2' ನಲ್ಲಿ ಅಕ್ಷಯ್ ಕುಮಾರ್ ಮತ್ತೆ ಗೆಲುವಿನ ರುಚಿ ನೋಡಲಿದ್ದಾರೆ. ಅನನ್ಯಾ ಪಾಂಡೆ, ಆರ್. ಮಾಧವನ್ ಪಾತ್ರಗಳು ಪ್ರೇಕ್ಷಕನಿಗೆ ಥ್ರಿಲ್ ಕೊಡುತ್ತವೆ.

'ಕೇಸರಿ ಚಾಪ್ಟರ್ 2' ಜಲಿಯನ್‌ವಾಲಾ ಬಾಗ್‌ನ ಕರಾಳ ಇತಿಹಾಸದ ಮೇಲೆ ಬೆಳಕು ಚೆಲ್ಲಿದೆ. ಈ ಹತ್ಯಾಕಾಂಡ ದೇಶದ ಜನರ ಮೇಲೆ ಯಾವ ರೀತಿ ಪರಿಣಾಮ ಬೀರಿತು ಎಂಬುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಅಕ್ಷಯ್ ಕುಮಾರ್, ಅನನ್ಯ ಪಾಂಡೆ ಹಾಗೂ ಆರ್. ಮಾಧವನ್ ಮೂವರು ಈ ಸಿನಿಮಾದ ಹೈಲೈಟ್. ಹಾಗಿದ್ದರೆ, 'ಕೇಸರಿ ಚಾಪ್ಟರ್ 2' ಸಿನಿಮಾದ ಕಥೆಯೇನು? ಯಾರ ಅಭಿನಯ ಹೇಗಿದೆ? ನಿರ್ದೇಶನ ಹೇಗಿದೆ? ತಿಳಿಯಲು ಮುಂದೆ ಓದಿ.
'ಕೇಸರಿ 2' ಕಥೆಯೇನು?
ಜಲಿಯನ್‍ವಾಲಾ ಬಾಗ್ ಅಥವಾ ಅಮೃತಸರ ಹತ್ಯಾಕಾಂತ 'ಕೇಸರಿ ಚಾಪ್ಟರ್ 2'ನ ಮೂಲ. ಬ್ರಿಟಿಷರ ವಿರುದ್ಧ ಶಾಂತಿಯುತ ಹೋರಾಟ ಮಾಡುವುದಕ್ಕೆ ಜಲಿಯನ್‌ವಾಲಾ ಬಾಗ್‌ನಲ್ಲಿ ಜನರು ಸೇರಿರುತ್ತಾರೆ. ಕಫ್ಯೂ ವಿಧಿಸಿದ್ದ ಕಾರಣ ಬ್ರಿಟಿಷರ ಜನರಲ್ ರೆಗಿನಾಲ್ಡ್ ಡೈಯರ್ ಅಲ್ಲಿ ನೆರೆದಿದ್ದವರ ಮೇಲೆ ಮನಸೋ ಇಚ್ಚೆ ಗುಂಡಿನ ಸುರಿಮಳೆಯನ್ನೇ ಸುರಿಸಲಾಗುತ್ತೆ. ಸಾವಿರಾರು ಜನರು ಸಾವನ್ನಪ್ಪುತ್ತಾರೆ. ಈ ಕೇಸ್ ಅನ್ನು ಕೇರಳ ಮೂಲದ ಶಂಕರನ್ ನಾಯರ್ (ಅಕ್ಷಯ್ ಕುಮಾರ್) ಬ್ರಿಟಿಷರ ಪರವಾಗಿ ವಾದಿಸಿ ಗೆಲ್ಲುತ್ತಾರೆ. ಈ ಕಾರಣಕ್ಕೆ ಬ್ರಿಟಿಷರು ಬಿರುದು ನೀಡುವುದರ ಜೊತೆಗೆ ವೈಸ್‌ರಾಯ್ ಕೌನ್ಸಿಲ್‌ನಲ್ಲಿ ಸದಸ್ಯತ್ವನ್ನು ನೀಡುತ್ತಾರೆ. ಇದೇ ವೇಳೆ ಸಿಕ್ ಕ್ರಾಂತಿಕಾರಿಯ ಮಗ ಶಂಕರನ್ ನಾಯರ್‌ಗೆ ಅಸಲಿ ಸಂಗತಿಯನ್ನು ಮನವರಿಕೆ ಮಾಡಿಕೊಡುತ್ತಾನೆ. ಯುವ ವಕೀಲೆ ದಿಲ್ರೀತ್ ಗಿಲ್ ಈ ಜನಪ್ರಿಯ ವಕೀಲನ ಹೋರಾಟಕ್ಕೆ ಬೆಂಬಲ ನೀಡುತ್ತಾಳೆ. ಇಲ್ಲಿಂದ ಶಂಕರನ್ ನಾಯರ್ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ವಿರುದ್ಧ ಧ್ವನಿ ಎತ್ತುವುದಕ್ಕೆ ಶುರು ಮಾಡುತ್ತಾರೆ. ಈ ಕೋರ್ಟ್ ರೂಮ್ ಫೈಟ್‌ನಲ್ಲಿ ಶಂಕರನ್ ನಾಯರ್‌ಗೆ ಎದುರಾಳಿಯಾಗಿ ನಿಲ್ಲುವುದು ಮೆಕೆನ್ಲಿ (ಆರ್. ಮಾಧವನ್).
ಅಕ್ಷಯ್ ಕುಮಾರ್ Vs ಮಾಧವನ್
ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ವಿರುದ್ಧ ಶಂಕರನ್ ನಾಯರ್ (ಅಕ್ಷಯ್ ಕುಮಾರ್) ತಿರುಗಿ ಬಿದ್ದಾಗ ಎದುರಾಗುವುದು ಮೆಕೆನ್ಲಿ (ಆರ್. ಮಾಧವನ್). ಇವರಿಬ್ಬರ ನಡುವಿನ ಮುಖಾಮುಖಿ ಸಿನಿಮಾದ ಹೈಲೈಟ್. ಇಲ್ಲಿ ಅಕ್ಷಯ್ ಕುಮಾರ್, ಆರ್.ಮಾಧವನ್ ಪಾತ್ರಗಳಿಗೆ ಬಿಲ್ಡಪ್ ಕೊಡುವುದಕ್ಕೆ ಸಮಯವನ್ನು ವ್ಯರ್ಥ ಮಾಡಿಲ್ಲ. ಶಂಕರನ್ ಹಾಗೂ ಮೆಕೆನ್ಲಿ ನಡುವಿನ ವಾದ ವಿವಾದಗಳು ಪ್ರೇಕ್ಷಕನಿಗೆ ಥ್ರಿಲ್ ಕೊಡುತ್ತವೆ. ಸಿನಿಮಾದ ಮೊದಲಾರ್ಧಕ್ಕಿಂತ ದ್ವಿತೀಯಾರ್ಧ ಸಖತ್ ಆಗಿದೆ. ಥಿಯೇಟರ್‌ನಲ್ಲಿ ಪ್ರೇಕ್ಷಕರು ಶಿಳ್ಳೆ ಹಾಕುವುದು ನಿಮ್ಮ ಕಿವಿಗಳಿಗೆ ಕೇಳಿಸುತ್ತೆ.

ಯಾರ ನಟನೆ ಹೇಗಿದೆ?
ಶಂಕರನ್ ನಾಯರ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅದ್ಭುತ ಅಭಿನಯ ನೀಡಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಅಕ್ಷಯ್ ಈ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರಿಗೆ ಇಷ್ಟ ಆಗುತ್ತಾರೆ. ಮೆಕೆನ್ಲಿ ಪಾತ್ರದಲ್ಲಿ ಆರ್.ಮಾಧವನ್ ಸಿಕ್ಕಾಪಟ್ಟೆ ಟಫ್ ಅಂತ ಅನಿಸುತ್ತಾರೆ. ನೆಗೆಟಿವ್ ಪಾತ್ರ ಆಗಿದ್ದರೂ ಮಾಧವನ್ ನಟನೆ ಇಷ್ಟ ಆಗುತ್ತೆ. ಇವರಿಬ್ಬರ ಜಟಾಪಟಿ ಪ್ರೇಕ್ಷಕರಿಗೆ ಕಿಕ್ ಕೊಡುತ್ತೆ. ಇವರೊಂದಿಗೆ ಯುವ ವಕೀಲೆ ದಿಲ್ರೀತ್ ಗಿಲ್ ಪಾತ್ರದಲ್ಲಿ ಅನನ್ಯಾ ಪಾಂಡೆ ಕೂಡ ಇಷ್ಟ ಆಗುತ್ತಾರೆ.
ಪ್ಲಸ್ ಏನು?
'ಕೇಸರಿ 2' ಸಿನಿಮಾ ಪ್ರೇಕ್ಷಕರಲ್ಲಿ ಹುದುಗಿದ್ದ ದೇಶ ಪ್ರೇಮವನ್ನು ಬಡಿದೆಬ್ಬಿಸುತ್ತೆ. ಈ ಸಿನಿಮಾದ ಮೊದಲ 10 ರಿಂದ 15 ನಿಮಿಷ ಪ್ರೇಕ್ಷಕರುಗೆ ಅದ್ಭುತ ಅಂತ ಅನಿಸುತ್ತೆ. ಕೋರ್ಟ್ ರೂಮ್ ಸೀನ್‌ಗಳನ್ನು ಸಖತ್ ಆಗಿಯೇ ಕಟ್ಟು ಕೊಟ್ಟಿಕೊಡುವಲ್ಲಿ ನಿರ್ದೇಶಕ ಕರಣ್ ಸಿಂಗ್ ತ್ಯಾಗಿ ಗೆದ್ದಿದ್ದಾರೆ. ಸಿನಿಮಾದ ದ್ವಿತೀಯಾರ್ಧದಲ್ಲಿ ಸಿನಿಪ್ರಿಯರ ಮನಸ್ಸು ಗೆಲ್ಲುತ್ತಾರೆ. ದೇಶಭಕ್ತಿ ಹಾಗೂ ಸೆಂಟಿಮೆಂಟ್ ಈ ಸಿನಿಮಾದ ಪ್ರಮುಖ ಅಂಶ ಅಂತ ಹೇಳಬಹುದು.
ಮೈನಸ್ ಏನು?
'ಕೇಸರಿ 2' ಸಿನಿಮಾದ ಮೊದಲಾರ್ಧ ಸ್ವಲ್ಪ ನಿಧಾನಗತಿಯಲ್ಲಿ ಸಾಗುತ್ತೆ ಅಂತ ಅನಿಸುತ್ತೆ. ಆದರೆ, ಪ್ರೀ ಇಂಟರ್‌ವಲ್‌ನಿಂದ ಸಿನಿಮಾ ವೇಗವನ್ನು ಪಡೆದುಕೊಳ್ಳುತ್ತೆ. ಕೆಲವು ದೃಶ್ಯಗಳನ್ನು ಜನರು ನಿರೀಕ್ಷೆ ಮಾಡುತ್ತಾರೆ. ಆದರೆ, ಮನಸ್ಸಿನಲ್ಲಿ ದೇಶ ಪ್ರೇಮ ಲೈನ್ ಕೂಡ ಸಾಗುತ್ತಿರುವುದರಿಂದ ಹೆಚ್ಚು ಪರಿಣಾಮಕಾರಿ ಅಂತ ಅನಿಸುವುದಿಲ್ಲ. ಫಸ್ಟ್ ಹಾಫ್ ಕಡೆಗೆ ಹೆಚ್ಚು ಗಮನ ಹರಿಸಿದ್ದರೆ, ಇನ್ನೂ ಅದ್ಭುತ ಸಿನಿಮಾ ಆಗುತ್ತಿತ್ತು.
ಕೊನೆಯಲ್ಲೇ ಏನು?
'ಕೇಸರಿ ಚಾಪ್ಟರ್ 2' ಬಹಳ ದಿನಗಳ ಬಳಿಕ ಅಕ್ಷಯ್ ಕುಮಾರ್ ಒಂದೊಳ್ಳೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ನೋಡಬಾರದು ಎನ್ನುವುದಕ್ಕೆ ಕಾರಣ ಏನೂ ಇಲ್ಲ. ದೇಶ ಕಂಡ ಅತೀ ಭೀಕರ ಹತ್ಯಾಕಾಂಡದ ಹಲವು ಮಜಲುಗಳನ್ನು ಇಲ್ಲಿ ರೋಚಕವಾಗಿ ತೋರಿಸಲಾಗಿದೆ. ಈ ಸಿನಿಮಾವನ್ನು ಆರಾಮಾಗಿ ನೋಡಬಹುದು. ದೇಶಭಕ್ತರಿಗೆ ಈ ಸಿನಿಮಾ ಅದ್ಭುತ ಅನಿಸದೇ ಇರುವುದಿಲ್ಲ.


Click it and Unblock the Notifications











