Mana Shankara Varaprasad Garu Review:ಕಥೆ ಅಷ್ಟಕ್ಕಷ್ಟೇ..ವರಪ್ರಸಾದ್-ವೆಂಕಿ ಗೌಡ ಎಂಟ್ರಿನೇ ಕಿಕ್ಕು
ಟಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿರೋ ನಿರ್ದೇಶಕ ಅನಿಲ್ ರವಿಪುಡಿ ಮತ್ತೊಂದು ಸಿನಿಮಾ ರಿಲೀಸ್ ಆಗಿದೆ. 'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ, ವಿಕ್ಟರಿ ವೆಂಕಟೇಶ್, ಕ್ಯಾಥರೀನ್ ಟ್ರೆಸಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇಂದು (ಜನವರಿ 12) ವಿಶ್ವದಾದ್ಯಂತ ರಿಲೀಸ್ ಆಗಿದೆ.
ಬಾಲಿವುಡ್‌ನ ಹಿರಿಯ ನಟಿ ಜರೀನಾ ವಹಾಬ್, ಸಚಿನ್ ಖೇಡೆಕರ್, ಶರತ್ ಸಕ್ಸೇನಾ, ಹರ್ಷವರ್ಧನ್, ಅಭಿನವ್ ಗೋಮಠಂ ಮತ್ತು ರಘು ಬಾಬು ಅಂತಹ ಜನರು ಈ ಸಿನಿಮಾದಲ್ಲಿ ನಟಿಸಿರೋದು ಪ್ರಮುಖ ಆಕರ್ಷಣೆಯಾಗಿದೆ. ಅನಿಲ್ ರಾವಿಪೂಡಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ರೆ, ಸಾಹು ಗಾರಾಪಾಟಿ ಮತ್ತು ಸುಸ್ಮಿತಾ ಕೊನಿಡೇಲಾ ಹಣ ಹೂಡಿದ್ದಾರೆ.

ಇನ್ನು ತಾಂತ್ರಿಕ ವರ್ಗದಲ್ಲಿ ಸಮೀರ್ ರೆಡ್ಡಿ ಕ್ಯಾಮೆರಾ, ತಮ್ಮಿರಾಜು ಸಂಕಲನ ಜವಾಬ್ದಾರಿ ಹೊತ್ತಿದ್ದಾರೆ. ಹಾಗೇ ಭೀಮ್ಸ್ ಸಿಸಿರೋಲಿಯೋ ಸಂಗೀತದ ಜೊತೆಗೆ ಎ.ಎಸ್. ಪ್ರಕಾಶ್ ಆರ್ಟ್ ಸಿನಿಮಾವನ್ನು ಮತ್ತಷ್ಟು ಕಲರ್‌ಫುಲ್ ಆಗಿಸಿದೆ. ಹಾಗಿದ್ದರೆ, ಚಿರಂಜೀವಿ ನಟಿಸಿದ 'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾದ ಕಥೆಯೇನು? ಸಿನಿಮಾ ಪ್ಲಸ್ ಪಾಯಿಂಟ್ ಏನು? ಮೈನಸ್ ಪಾಯಿಂಟ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
ವರಪ್ರಸಾದನ ಕಥೆಯೇನು?
ಈ ಸಿನಿಮಾದ ಕಥೆ ಗಿರಕಿ ಕೊಡೆಯೋದು NIA ಅಧಿಕಾರಿ ಶಂಕರ ವರಪ್ರಸಾದ್ (ಚಿರಂಜೀವಿ) ಅವರ ಸುತ್ತ. ಕೇಂದ್ರ ಗೃಹ ಸಚಿವ (ಶರತ್ ಸಕ್ಸೇನಾ) ರಕ್ಷಣೆ ವರಪ್ರಸಾದ್ ಜವಾಬ್ದಾರಿ. ಖ್ಯಾತ ಉದ್ಯಮಿಯಾಗಿರುವ ಜಿವಿಆರ್ (ಸಚಿನ್ ಖೇಡೆಕರ್) ಅವರ ಪುತ್ರಿ ಶಶಿ ರೇಖಾ (ನಯನತಾರಾ)ರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಪ್ರೀತಿಸಿ ಮದುವೆಯಾದರೂ, ಇವರ ಜೀವನ ಅಂದುಕೊಂಡಂತೆ ಸಾಗುವುದಿಲ್ಲ. ಇವರಿಗೆ ಇಬ್ಬರು ಮಕ್ಕಳಿದ್ದರೂ ನಾನಾ ಕಾರಣಗಳಿಂದ ವಿಚ್ಛೇದನ ಪಡೆಯುತ್ತಾರೆ. ಆದರೆ, ವರಪ್ರಸಾದ್‌ಗೆ ಮಕ್ಕಳಿಂದ ದೂರವಿರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರ ಪ್ರೀತಿಯನ್ನು ಮತ್ತೆ ಗಳಿಸಲು ವರಪ್ರಸಾದ್ ನಿರ್ಧರಿಸಿ, ತಮ್ಮ ಮಾಜಿ ಪತ್ನಿಯ ಮನೆಯಲ್ಲೇ ನೆಲಸುತ್ತಾರೆ. ಇಲ್ಲಿ ಅಸಲಿ ಕಥೆ ಆರಂಭ ಆಗುತ್ತೆ.
NIA ಅಧಿಕಾರಿ ಶಂಕರ್ ವರಪ್ರಸಾದ್ ಬಿಲಿಯನೇರ್ ಶಶಿ ರೇಖಾಳ ಪ್ರೀತಿ ಗಳಿಸಿದ್ದೇಗೆ? ಉದ್ಯಮಿಯ ಮಗಳು ಒಬ್ಬ ಸಾಮಾನ್ಯ ಅಧಿಕಾರಿಯನ್ನು ಮದುವೆ ಆಗಿದ್ದೇಕೆ? ಪ್ರೀತಿಸಿ ಮದುವೆಯಾದ್ಮೇಲೆ ವಿಚ್ಛೇದನ ನೀಡಿದ್ದೇಕೆ? ಮಕ್ಕಳು ಮತ್ತು ಮಗಳ ಪ್ರೀತಿಯನ್ನು ಮರಳಿ ಪಡೆಯುವ ಅವರ ಪ್ರಯತ್ನಗಳು ಯಶಸ್ಸಾಗುತ್ತಾ? ಈ ಕೌಟುಂಬಿಕ ಕಾಳಗದಲ್ಲಿ ವೆಂಕಿ ಗೌಡ (ವೆಂಕಟೇಶ್) ಎಂಟ್ರಿ ಕೊಟ್ಟಿದ್ದೇಕೆ? ಈ ಎಲ್ಲಾ ಪ್ರಶ್ನೆಗಳಿಗೂ ಈ ಸಿನಿಮಾದಲ್ಲಿ ಉತ್ತರ ಸಿಗುತ್ತೆ.
ಪರ್ಫಾಮೆನ್ಸ್ ಹೇಗಿದೆ?
ಇನ್ನು ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ, ಶಂಕರ ವರಪ್ರಸಾದ್ ಪಾತ್ರದಲ್ಲಿ ಚಿರಂಜೀವಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆ ಕೊಡುತ್ತಾರೆ. ಚಿರಂಜೀವಿಯನ್ನು ಹಾಸ್ಯ, ವಿನೋದ, ಭಾವನಾತ್ಮಕ ಹಾಗೂ ಮಾಸ್ ಅವತಾರದಲ್ಲಿ ನೋಡಬಹುದು. ಫಸ್ಟ್‌ಹಾಫ್‌ನಲ್ಲಿ ಹಾಸ್ಯದ ಸನ್ನಿವೇಶಗಳಲ್ಲಿ ನಗಿಸಿದರೆ, ಇನ್ನು ಸೆಕೆಂಡ್‌ಹಾಫ್‌ನಲ್ಲಿ ಸೆಂಟಿಮೆಂಟ್ ದೃಶ್ಯಗಳಲ್ಲಿ ಇಷ್ಟ ಆಗುತ್ತಾರೆ. ಗಂಭೀರ ಪಾತ್ರದಲ್ಲಿ ನಯನತಾರಾ ಅಚ್ಚುಕಟ್ಟಾಗಿ ನಟಿಸಿದ್ದಾರೆ. ಇನ್ನು ವೆಂಕಟೇಶ್ ಸ್ಪೆಷಲ್ ಎಂಟ್ರಿಯೇ ಅಟ್ರ್ಯಾಕ್ಷನ್. ಚಿರಂಜೀವಿ ಮತ್ತು ವೆಂಕಟೇಶ್ ಇರೋವವರೆಗೂ ತೆರೆಯ ಮೇಲೆ ಸುನಾಮಿ ಸೃಷ್ಟಿಯಾಗುತ್ತೆ.

ವರಪ್ರಸಾದ್ ಪ್ಲಸ್‌ಪಾಯಿಂಟ್ ಏನು?
'ಮನ ಶಂಕರ ವರಪ್ರಸಾದ್ ಗಾರು' ಕಥೆ-ಚಿತ್ರಕಥೆಯಲ್ಲಿ ಹೊಸತನವಿಲ್ಲ. ತುಂಬಾ ಸಿಂಪಲ್ ಆಗಿದೆ ಎನಿಸುತ್ತೆ. ಆದರೆ, ಜಿರಂಜೀವಿ ಅಭಿಮಾನಿಗಳು ಹಾಗೂ ಮಾಸ್ ಪ್ರೇಕ್ಷಕರ ನಾಡಿಮಿಡಿತ ಅರಿತಿರುವ ನಿರ್ದೇಶಕ ಅನಿಲ್ ರಾವಿಪೂಡಿ ಪಕ್ಕಾ ಎಂಟರ್‌ಟೈನರ್ ಸಿನಿಮಾವನ್ನು ರೆಡಿ ಮಾಡಿದ್ದಾರೆ. ಈ ಸಿನಿಮಾದ ದೃಶ್ಯಗಳೊಂದಿಗೆ ಸಂಭಾಷಣೆ ಅದ್ಭುತವಾಗಿ ವರ್ಕ್‌ಔಟ್ ಆಗಿದೆ. ತಂದೆಯ ಪ್ರೀತಿ ಮತ್ತು ಹಾಸ್ಯ ಸನ್ನಿವೇಶಗಳು ಸಿನಿಮಾದ ದೊಡ್ಡ ಶಕ್ತಿ. ಚಿರಂಜೀವಿಯ ಅದ್ಭುತ ನಟನೆ ಸಿನಿಮಾವನ್ನು ಯಶಸ್ಸಿನತ್ತ ತೆಗೆದುಕೊಂಡು ಹೋಗಿದೆ.
ಚಿರಂಜೀವಿ ಮತ್ತು ವೆಂಕಟೇಶ್ ಕಾಂಬಿನೇಷನ್ ಪ್ರೇಕ್ಷಕರು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾರೆ. ಕಥೆ ಮುಗಿದೇ ಹೋಯಿತು ಅನ್ನಿಸುವ ಸಮಯದಲ್ಲಿ ವೆಂಕಟೇಶ್ ಎಂಟ್ರಿ ನಿರ್ದೇಶಕರ ಜಾಣ್ಮೆಯನ್ನು ತೋರಿಸುತ್ತೆ. ಭೀಮ್ಸ್ ಸಿಸಿರೋಲಿಯೋ ಅವರ ಸಂಗೀತ ಸಿನಿಮಾಗೆ ಬ್ಯಾಕ್ ಬೋನ್ ಎನ್ನಬಹುದು.
ವರಪ್ರಸಾದ್ ಮೈನಸ್ ಪಾಯಿಂಟ್ ಏನು?
ಈ ಸಿನಿಮಾದಲ್ಲೂ ಕೆಲವು ಮೈನಸ್ ಪಾಯಿಂಟ್‌ಗಳಿವೆ. ದ್ವಿತೀಯಾರ್ಧದಲ್ಲಿ ಕೆಲವೆಡೆ ಸ್ಕ್ರೀನ್‌ಪ್ಲೇ ಎಳೆದಾಡಿದ್ದಾರೆ ಎಂಬ ಅನುಭವ ಸಿಗುತ್ತೆ. ಚಿರಂಜೀವಿ ಎದುರು ಖಡಕ್ ಆಗಿರುವ ಖಳನಾಯಕ ಇಲ್ಲದೆ ಇರೋದು ಇನ್ನೊಂದು ಮೈನಸ್ ಪಾಯಿಂಟ್. ಇನ್ನು ಕೆಲವು ಚಿಕ್ಕಪುಟ್ಟ ಲೋಪದೋಷಗಳು ಮನರಂಜನೆಯ ಜೊತೆಗೆ ಪ್ರೇಕ್ಷಕರ ಅರಿವಿಗೆ ಬಾರದಂತೆ ಅನಿಲ್ ರವಿಪುಡಿ ತಡೆದಿದ್ದಾರೆ.
ಕೊನೆಯಲ್ಲಿ
'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾದಲ್ಲಿ ನೀವೇನಾದರೂ ಲಾಜಿಕ್ ಹುಡುಕುವುದಕ್ಕೆ ಹೋದರೆ ನಿರಾಸೆ ಆಗುತ್ತೆ. ಸಾಮಾನ್ಯ ಪ್ರೇಕ್ಷಕರು ಸುಲಭವಾಗಿ ಊಹಿಸಬಹುದಾದ ಕಥಾವಸ್ತು ಇದೆ. ಹಾಗಂತ ಮಾಸ್ ಪ್ರೇಕ್ಷಕರಿಗೆ ಪಕ್ಕಾ ಮಾಸ್ ಕಮರ್ಷಿಯಲ್ ಎಂಟರ್‌ಟೈನರ್ ನೀಡುವುದರಲ್ಲಿ ಹಿಂದೆ ಬೀಳುವುದಿಲ್ಲ. ಇಲ್ಲಿ ಮನರಂಜನೆಯೇ ಪ್ರಧಾನ. ಈ ಚಿತ್ರದಲ್ಲಿ ಹಾಸ್ಯ, ಭಾವನಾತ್ಮಕತೆ, ಆಕ್ಷನ್, ಹಾಡುಗಳು, ಫೈಟ್‌ಗಳು, ಡ್ಯಾನ್ಸ್ ಎಲ್ಲವೂ ಇದೆ.


Click it and Unblock the Notifications










