Mother Promise Review: 'ಮದರ್ ಪ್ರಾಮಿಸ್' ಇಲ್ಲಿ ಕಿತ್ತಾಟಕ್ಕಿಂತ ಹೊಟ್ಟೆ ಹುಣ್ಣಾಗಿಸುವ ನಗುವೇ ಹೆಚ್ಚು
ನಟ ರಾಕ್ಷಸ ಡಾಲಿ ಧನಂಜಯ್ ಸೇರಿದಂತೆ ಕನ್ನಡದ ಬಹುಮುಖ ಪ್ರತಿಭೆಗಳೇ ನಟಿಸಿರುವ 'ಮದರ್ ಪ್ರಾಮಿಸ್' ಈ ವಾರ ರಾಜ್ಯಾದ್ಯಂತ ತೆರೆಕಂಡಿದೆ. ಧನಂಜಯ್ ಗೆಳೆಯ ಹಾಗೂ ನಟ ಪೂರ್ಣಚಂದ್ರ ಮೈಸೂರು ಇದೇ ಮೊದಲ ಬಾರಿಗೆ ಈ ಸಿನಿಮಾ ಮೂಲಕ ನಿರ್ದೇಶನಕ್ಕೂ ಕೈ ಹಾಕಿದ್ದಾರೆ. ಹೀಗಾಗಿ ಈ ವಾರ ಬಿಡುಗಡೆಯಾಗಿರುವ ಸಿನಿಮಾಗಳಲ್ಲಿ 'ಮದರ್ ಪ್ರಾಮಿಸ್' ದುಪ್ಪಟ್ಟು ಕುತೂಹಲ ಕೆರಳಿಸಿದೆ.
'ಮದರ್ ಪ್ರಾಮಿಸ್' ಟ್ರೈಲರ್, ಟೀಸರ್ ನೋಡಿದ್ಮೇಲೆ ಇದೊಂದು ಅಪ್ಪಟ ಕಾಮಿಡಿ ಡ್ರಾಮಾ ಅನ್ನೋದು ಪ್ರೇಕ್ಷಕರ ಗಮನಕ್ಕೆ ಬಂದಿರುತ್ತೆ. ದಿನ ನಿತ್ಯದ ಜಂಜಾಟಗಳನ್ನು ಬಿಟ್ಟು ನಗುವಿನ ಅಲೆಯಲ್ಲಿ ತೇಲಬೇಕು ಅನ್ನೋ ಮೂಡ್‌ನಲ್ಲಿ ಇರುವವರಿಗೆ ಡಾಲಿ ಧನಂಜಯ್ ನಟನೆಯ 'ಮದರ್ ಪ್ರಾಮಿಸ್' ಒಂದೊಳ್ಳೆ ಸಿನಿಮಾ ಆಗಬಹುದು. ಯಾಕಂದ್ರೆ, ಹಾಸ್ಯವನ್ನು ಇಷ್ಟ ಪಡುವವರಿಗಾಗಿಯೇ ಈ ಸಿನಿಮಾವನ್ನು ಮಾಡಿದಂತೆ ಇದೆ.

ನಟ ಪೂರ್ಣಚಂದ್ರ ಮೈಸೂರು ಮೊದಲ ಬಾರಿಗೆ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಯಶಸ್ಸಿನ ಹಾದಿ ಹಿಡಿದಿದ್ದಾರೆ. ಈ ಸಿನಿಮಾ ಬೆಂಗಳೂರಿನ ಬ್ಯಾಗ್‌ಗ್ರೌಂಡ್‌ನಲ್ಲಿ ನಡೆಯುವ ಕಥೆ. ಇದೊಂದು ಎರಡು ಗ್ಯಾಂಗ್‌ಗಳ ನಡುವೆ ನಡೆಯವ ಗ್ಯಾಂಗ್‌ಸ್ಟರ್ ಶೈಲಿಯ ಕಾಮಿಡಿ ಸಿನಿಮಾ. ಬೆಂಗಳೂರಿನ ಕಾಲ್ಪನಿಕ ಜೂಜಾಟದ ಮಾಫಿಯಾ ಹಾಗೂ ಡ್ರಗ್ ಮಾಫಿಯಾಗಳ ನಡುವಿನ ಸುತ್ತ ಕಥೆ ಸಾಗುತ್ತೆ. ಹಾಗಿದ್ದರೆ, 'ಮದರ್ ಪ್ರಾಮಿಸ್' ಸಿನಿಮಾದ ಕಥೆ ಏನು? ಪ್ಲಸ್ ಪಾಯಿಂಟ್ ಏನು? ಮೈನಸ್ ಪಾಯಿಂಟ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ಮದರ್ ಪ್ರಾಮಿಸ್' ಕಥೆಯೇನು?
ಬೆಂಗಳೂರಿನ ಎರಡು ಗ್ಯಾಂಗ್‌ಗಳ ಮಧ್ಯೆ ನಡೆಯುವ ಕಥೆ. ಒಂದ್ಕಡೆ ಗ್ಯಾಂಬ್ಲಿಂಗ್ ಕಿಂಗ್‌ಪಿನ್ ರೋಸಿ (ಧನಂಜಯ್).. ಇನ್ನೊಂದು ಕಡೆ ದೊನ್ನೆ ಬಿರಿಯಾನಿ (ಮಹದೇವ್ ಪ್ರಸಾದ್). ಇವರಿಬ್ಬರ ನಡುವೆ ನಡುವಿನ ವೈಷಮ್ಯದ ಕಹಾನಿಯಿದು. ಒಂದು ಸಂದರ್ಭದಲ್ಲಿ ಚಿಕ್ಕ ವಿಷಯಕ್ಕೆ ನಡೆಯುವ ಚಕಮಕಿ ಎರಡು ಗ್ಯಾಂಗ್‌ಗಳ ನಡುವಿನ ಕಿತ್ತಾಟ ಕಾರಣವಾಗಿಬಿಡುತ್ತೆ. ಹಾಗಂತ ಟೈಟಲ್‌ಗೂ ಕಥೆಗೂ ಒಂದು ಸಂಬಂಧವಿದೆ. ಇದು ತಾಯಿ ಮತ್ತು ಮಗನ ನಡುವಿನ ಭಾವುಕ ಸಂಬಂಧ ಹಾಗೂ ಆಕೆಗೆ ನೀಡಿದ ಪ್ರಾಮಿಸ್‌ನ ಸುತ್ತ ಸಾಗುತ್ತೆ. ಗ್ಯಾಂಗ್, ಗ್ಯಾಂಬ್ಲಿಂಗ್, ಕಿತ್ತಾಟ ಎಲ್ಲಾ ಇದ್ದರೂ.. ಇವೆಲ್ಲವೂ ಹಾಸ್ಯ ರೂಪ ಪಡೆದುಕೊಳ್ಳುವುದು ಸಿನಿಮಾ ಹೈಲೈಟ್.
ಹೇಗಿದೆ ನಿರ್ದೇಶನ?
ಧನಂಜಯ್ ಗೆಳೆಯ ಪೂರ್ಣಚಂದ್ರ ಮೈಸೂರು ಚೊಚ್ಚಲ ನಿರ್ದೇಶನದಲ್ಲೇ ಗೆದ್ದಿದ್ದಾರೆ. 'ಮದರ್ ಪ್ರಾಮಿಸ್' ಕಥೆ-ಚಿತ್ರಕಥೆ ಎಲ್ಲವನ್ನೂ ಇವರೇ ಬರೆದಿದ್ದು ಪ್ರೇಕ್ಷಕರ ಅಭಿರುಚಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡೇ ಈ ಸಬ್ಜೆಕ್ಟ್‌ಗೆ ಕೈ ಹಾಕಿದಂತೆ ಇದೆ. ಹಾಸ್ಯವನ್ನೇ ಪ್ರಧಾನವಾಗಿಟ್ಟುಕೊಂಡು ಸಿನಿಮಾ ಕಥೆಯನ್ನು ಹೆಣೆದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾದಲ್ಲಿರುವ ನೂರೆಂಟು ಪಾತ್ರಗಳನ್ನು ಮೊದಲ ಪ್ರಯತ್ನದಲ್ಲಿಯೇ ಸಮರ್ಥವಾಗಿ ನಿಭಾಯಿಸಿರೋದನ್ನು ಗಮನಿಸಬಹುದು. ಫಸ್ಟ್ ಹಾಫ್‌ನಲ್ಲಿ ಸ್ಕ್ರೀನ್‌ಪ್ಲೇಯನ್ನು ಇನ್ನು ಟೈಟ್ ಮಾಡಬಹುದಿತ್ತು ಅನ್ನೋದು ಬಿಟ್ಟರೆ, ಉಳಿದಂತೆ ನಿರ್ದೇಶನಕ್ಕೆ ಫುಲ್ ಮಾರ್ಕ್ಸ್ ಕೊಡಬಹುದು.
'ಮದರ್ ಪ್ರಾಮಿಸ್' ಪ್ಲಸ್ ಏನು?
ಡಾಲಿ ಧನಂಜಯ್ ಅವರ ಮ್ಯಾನರಿಸಂ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. ಗ್ಯಾಂಗ್‌ಸ್ಟರ್ 'ರೋಸಿ' ಪಾತ್ರದಲ್ಲಿ ಧನಂಜಯ್ ಲುಕ್, ಡೈಲಾಗ್ ಡೆಲಿವರಿ ಮತ್ತು ಆಟಿಟ್ಯೂಡ್ ಕಿಕ್ ಕೊಡುತ್ತೆ. ಇವರೊಂದಿಗೆ ಇಡೀ ಸಿನಿಮಾದಲ್ಲಿ ಗಮನ ಸೆಳೆಯೋದು ಪೂರ್ಣಚಂದ್ರ ಮೈಸೂರು. ಒಂದ್ಕಡೆ ನಿರ್ದೇಶನದಲ್ಲಿ ಗೆದ್ದರೆ, ಇನ್ನೊಂದು ಕಡೆ ನಟನೆಯಲ್ಲೂ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಾರೆ. ಇವರೊಂದಿಗೆ ನಾಗಭೂಷಣ್, ವಿನಯಾ ಪ್ರಸಾದ್ ಹಾಗೂ ವಿಲನ್ ಪಾತ್ರಧಾರಿಗಳ ಟೈಮಿಂಗ್ ಸಖತ್ ಆಗಿದೆ. ಕನ್ನಡದಲ್ಲಿ ಡಾರ್ಕ್ ಕಾಮಿಡಿ ಬರೋದೇ ಅಪರೂಪ. ಅಂತಹ ಸಿನಿಮಾಗಳ ಸಾಲಿಗೆ ಇದು ಸೇರುತ್ತೆ. ಇನ್ನು ನವನೀತ್ ಶಾಮ್ ಸಂಗೀತ, ಧನಂಜಯ್ ಸಾಹಿತ್ಯದಲ್ಲಿ ಬಂದ ಹಾಡುಗಳು ಇಷ್ಟ ಆಗುತ್ತವೆ.

'ಮದರ್ ಪ್ರಾಮಿಸ್' ಮೈನಸ್ ಏನು?
'ಮದರ್ ಪ್ರಾಮಿಸ್' ಇಂತಹದ್ದೇ ಒಂದು ವರ್ಗಕ್ಕೆ ಎಂದು ಮಾಡಿದ ಸಿನಿಮಾ ಅಲ್ಲ. ಹಾಗೇ ಹಾಸ್ಯವೇ ಪ್ರಧಾನ ಆಗಿದ್ದರಿಂದ ಎಲ್ಲಾ ವರ್ಗಕ್ಕೂ ಕನೆಕ್ಟ್ ಆಗುತ್ತಾ? ಇಲ್ಲಿ ಬರುವ ಕಾಮಿಡಿ ಎಲ್ಲರಿಗೂ ಇಷ್ಟ ಆಗುತ್ತಾ? ಅನ್ನೋ ಅನುಮಾನವಿದೆ. ಆದರೆ, ಯುವ ಸಮುದಾಯಕ್ಕಂತೂ ಇಷ್ಟ ಆಗುತ್ತೆ ಅನ್ನೋದರಲ್ಲಿ ಎರಡು ಮಾತಿಲ್ಲ. ಫಸ್ಟ್ ಹಾಫ್‌ನಲ್ಲಿ ಸಿನಿಮಾ ನಿಧಾನ ಅಂತ ಅನಿಸುತ್ತೆ. ಇಲ್ಲೊಂದಿಷ್ಟು ಕಡೆ ನಿರ್ದೇಶಕರು ಗಮನ ಹರಿಸಬೇಕಿತ್ತು. ಡಾಲಿಯನ್ನು ಮಾಸ್ ಸೀನ್‌ಗಳಲ್ಲಿ ನೋಡಬೇಕು ಅಂತಿರೋರಿಗೆ ನಿರಾಸೆ ಆಗಬಹುದು.
ಕೊನೆಯಲ್ಲಿ
'ಮದರ್ ಪ್ರಾಮಿಸ್' ಹಾಸ್ಯ ಇಷ್ಟುವವರಿಗೆ ಖಂಡಿತಾ ಇಷ್ಟ ಆಗುತ್ತೆ. ಯುವಕರ ಫೇವರಿಟ್ ಸಿನಿಮಾ ಆಗಬಹುದು. ಡಾಲಿ ಧನಂಜಯ್ ವೃತ್ತಿ ಬದುಕಿನಲ್ಲೊಂದು ಹೊಸ ಆಯಾಮ ಎನ್ನಬಹುದು. ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಬ್ಬರು ಕಾಮಿಡಿ, ಸೆಂಟಿಮೆಂಟ್ ಸಿನಿಮಾ ನೋಡುವ ಮೂಡ್ನಲ್ಲಿ ಇದ್ದರೆ 'ಮದರ್ ಪ್ರಾಮಿಸ್' ಇಷ್ಟೇ ಆಗೇ ಆಗುತ್ತೆ.


Click it and Unblock the Notifications