Idli Kadai First Review: 'ಕಾಂತಾರ'ಗೂ ಮುನ್ನ ರಿಲೀಸ್ ಆಗುತ್ತಿರುವ 'ಇಡ್ಲಿ ಕಡೇ' ಸಿನಿಮಾ ಹೇಗಿದೆ?
ಧನುಷ್ ನಟಿಸಿದ ಕಳೆದ ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜೋರಾಗಿ ಸದ್ದು ಮಾಡಲಿಲ್ಲ. ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದರೂ ಗಲ್ಲಾ ಪಟ್ಟಿಗೆಯಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುವುದರಲ್ಲಿ ಸಿನಿಮಾ ಸೋತಿದೆ. ಈಗ ಧನುಷ್ ನಟನೆಯ ಮತ್ತೊಂದು ಸಿನಿಮಾ ಇಡ್ಲಿ ಕಡೇ ಬಿಡುಗಡೆ ಸಜ್ಜಾಗಿದೆ. ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕಾಂತಾರ' ಬಿಡುಗಡೆಗೆ ಒಂದು ದಿನ ಮುನ್ನ ಈ ಸಿನಿಮಾ ರಿಲೀಸ್ ಆಗುತ್ತಿದೆ.
ಇಡ್ಲಿ ಕಡೇ ಸಿನಿಮಾದಲ್ಲಿ ಧನುಷ್ ಹೀರೋ ಆಗಿ ನಟಿಸಿದ್ದಷ್ಟೇ ಅಲ್ಲ. ಈ ಸಿನಿಮಾಗೆ ನಿರ್ಮಾಪಕರೂ ಇವರೇ. ನಿರ್ದೇಶಕರೂ ಇವರೇ. ಧನುಷ್ ಅವರೇ ಕಥೆಯನ್ನು ಕೂಡ ಬರೆದಿರೋದು ವಿಶೇಷ. ಧನುಷ್ ಅವರ ವಂಬರ್‌ಬಾರ್ ಫಿಲ್ಮ್ಸ್ ಮತ್ತು ಡಾನ್ ಪಿಕ್ಚರ್ಸ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಧನುಷ್ ಜೊತೆ ದಕ್ಷಿಣ ಭಾರತದ ನಟಿ ನಿತ್ಯಾ ಮೆನನ್, ಅರುಣ್ ವಿಜಯ್, ಶಾಲಿನಿ ಪಾಂಡೆ, ಸತ್ಯರಾಜ್, ಆರ್. ಪಾರ್ಥಿಬನ್, ಪಿ. ಸಮುದ್ರಕನಿ, ರಾಜ್ ಕಿರಣ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಧನುಷ್ ಅವರ ಇಡ್ಲಿ ಕಡೇ ಸಿನಿಮಾ ಇದೇ ನಾಳೆ (ಅಕ್ಟೋಬರ್ 1) ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈ ಸಿನಿಮಾದ ತುಣುಕು ಈಗಾಗಲೇ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಧನುಷ್ ಮತ್ತೊಂದು ಸಿನಿಮಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಲಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಇತ್ತೀಚೆಗೆ ತಮಿಳುನಾಡಿನ ಸೆನ್ಸಾರ್ ಬೋರ್ಡ್ ಸಿನಿಮಾ ವೀಕ್ಷಿಸಿ, ಇಡ್ಲಿ ಕಡೇ ಬಗ್ಗೆ ಕೆಲವು ಅಂಶಗಳನ್ನು ಹಂಚಿಕೊಂಡಿರುವ ಬಗ್ಗೆ ವರದಿಯಾಗಿದೆ.
ಕಣ್ಣಲ್ಲಿ ನೀರು ತರಿಸುವ ಪಾತ್ರಗಳಿಂದ ಜನರ ಮನಸ್ಸನ್ನು ಗೆದ್ದಿರುವ ಧನುಷ್ ಮತ್ತೊಂದು ಕೌಟುಂಬಿಕ ಭಾವನಾತ್ಮಕ ಕಥೆಯನ್ನು ಇಟ್ಕೊಂಡು ಥಿಯೇಟರ್‌ಗೆ ಲಗ್ಗೆ ಇಡುತ್ತಿದ್ದಾರೆ. ಸಾಮಾನ್ಯವಾಗಿ ಇಂತಹ ಸಿನಿಮಾಗಳಿಗೆ ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಜೊತೆಯಾಗುತ್ತಾರೆ. ಇಡ್ಲಿ ಕಡೇ ಸಿನಿಮಾಗೂ ಇವರೇ ಟ್ಯೂನ್ ಹಾಕಿದ್ದಾರೆ. ಹೀಗಾಗಿ ಭಾವನಾತ್ಮಕ ಸಿನಿಮಾ ಜೊತೆ ಇವರ ಸಂಗೀತ ಪ್ರೇಕ್ಷಕರನ್ನು ಭಾವನಾತ್ಮಕ ಲೋಕಕ್ಕೆ ಕರೆದುಕೊಂಡು ಹೋಗುತ್ತೆ ಎನ್ನಲಾಗಿದೆ.
ಇನ್ನು ಇಡ್ಲಿ ಕಡೇ ಕಥೆಯ ಏನು ಅಂತ ನೋಡುವುದಾರೇ, ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತಿದ್ದ ಮುರುಗನ್ (ಧನುಷ್) ತನ್ನ ತಂದೆ ಶಿವನೇಶನ್ (ರಾಜ್ ಕಿರಣ್) ನಡೆಸುತ್ತಿದ್ದ ಹೋಟೆಲ್ ಮರುಜೀವ ಕೊಡುವುದಕ್ಕೆ ನಿರ್ಧರಿಸುತ್ತಾನೆ. ತನ್ನ ಕೆಲಸವನ್ನು ಬಿಟ್ಟು ಸಣ್ಣ ಗ್ರಾಮಕ್ಕೆ ಬಂದು ನೆಲೆಸುತ್ತಾನೆ. ಇಲ್ಲಿಂದ ಅವನಿಗೆ ಸಮಸ್ಯೆಗಳ ಸರಮಾಳೆಯೇ ಸುತ್ತಿಕೊಳ್ಳುವುದಕ್ಕೆ ಶುರುವಾಗುತ್ತೆ. ಮುರುಗನ್‌ಗೆ ಎದುರಿಸುವ ಸವಾಲುಗಳೇನು? ತನ್ನ ತಂದೆಯ ಬಹುದಿನಗಳ ಕನಸನ್ನು ನನಸು ಮಾಡುತ್ತಾನಾ? ಅನ್ನೋದೇ ಕಥೆ.

ಈ ಭಾವನಾತ್ಮಕ ಸಿನಿಮಾ ಇಡ್ಲಿ ಕಡೇಗೆ ಸೆನ್ಸಾರ್ ಬೋರ್ಡ್ ಕ್ಲಿಯರೆನ್ಸ್ ಕೊಟ್ಟಿದ್ದು, ಅಧಿಕಾರಿಗಳು ಖುಷಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸಿನಿಮಾ ವೀಕ್ಷಿಸಿದ ಬಳಿಕ ಕೆಲವು ಸೀನ್‌ಗಳ ಬಗ್ಗೆ ಸಂಪೂರ್ಣ ತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ಧನುಷ್ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ನಿರ್ದೇಶನವನ್ನು ಇಷ್ಟ ಪಟ್ಟಿದ್ದಾರೆ. ಅಷ್ಟೇ ಅಲ್ಲದೆ "ಧನುಷ್ ಒಬ್ಬ ನಿರ್ಮಾಪಕರಾಗಿ ಈ ಸಿನಿಮಾವನ್ನು ಮನಸ್ಸಿಗೆ ಮುದ ನೀಡುವಂತೆ ನಿರ್ಮಾಣ ಮಾಡಿದ್ದಾರೆ" ಎಂದು ಸೆನ್ಸಾರ್ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆಂದು ವರದಿ ಮಾಡಲಾಗಿದೆ.
ಇಡ್ಲಿ ಕಡೇ ಸಿನಿಮಾ ಎಲ್ಲಾ ವರ್ಗಕ್ಕೂ ಇಷ್ಟ ಆಗುವ ಸಿನಿಮಾ. ಕುಟುಂಬದ ಜೊತೆಯಲ್ಲಿ ಸಿನಿಮಾ ನೋಡುವುದಕ್ಕೆ ಇದು ಸೂಕ್ತ. ಎಲ್ಲಾ ವಯಸ್ಸಿನವರೂ, ಸಿನಿಮಾವನ್ನು ಇಷ್ಟ ಪಡುವವರಿಗೆ ಇಡ್ಲಿ ಕಡೇ ಇಷ್ಟವಾಗುತ್ತೆ ಎಂದು 'ಯು' ಸರ್ಟಿಫಿಕೇಟ್ ನೀಡಿದ್ದಾರೆಂದು ವರದಿಯಾಗಿದೆ. ಈ ಸಿನಿಮಾ ಸುಮಾರು 147 ನಿಮಿಷಗಳಿವೆ. ಅಂದರೆ 2 ಗಂಟೆ 27 ನಿಮಿಷಗಳ ರನ್ ಟೈಮ್. ಧನುಷ್ ಕೂಡ ಸೆನ್ಸಾರ್ ಮಂಡಳಿಯಿಂದ ಸಿಕ್ಕಿದ ಪ್ರಶಂಸೆ ಬಳಿಕ ಮತ್ತಷ್ಟು ಕಾನ್ಫಿಡೆಂಟ್ ಆಗಿದ್ದಾರೆ ಎನ್ನಲಾಗಿದೆ. ಸದ್ಯ ಸಿನಿಮಾಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನು ಸಿನಿಮಾವನ್ನು ನೋಡಿ ಪ್ರೇಕ್ಷಕರು ಏನಂತಾರೆ ಅನ್ನೋದು ಗೊತ್ತಾಗಲಿದೆ.


Click it and Unblock the Notifications











