Kuberaa Review:ಮೂವರು 'ಕುಬೇರ'ರ ಭಾವನಾತ್ಮಕ ಕಥೆ ಹೇಗಿದೆ? ಪ್ಲಸ್ ಏನು? ಮೈನಸ್ ಏನು?
ಧನುಷ್, ನಾಗಾರ್ಜುನ ಹಾಗೂ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ 'ಕುಬೇರ' ರಿಲೀಸ್ ಆಗಿದೆ. ತೆಲುಗಿನ ಜನಪ್ರಿಯ ನಿರ್ದೇಶಕ ಶೇಖರ್ ಕಮ್ಮುಲ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಹಲವು ಕಾರಣಗಳಿಗೆ ಪ್ರೇಕ್ಷಕರ ಗಮನ ಸೆಳೆದಿತ್ತು. ಟ್ರೈಲರ್‌ನಲ್ಲಿ ನೋಡಿದ ಧನುಷ್ ಅಭಿನಯ, ಇನ್ನೊಂದು ನೆಗೆಟಿವ್ ಶೇಡ್‌ನಲ್ಲಿ ತೋರಿಸಿರುವ ನಾಗಾರ್ಜುನ ಪಾತ್ರ. ಇವರಿಬ್ಬರ ಪಾತ್ರಗಳು ಹಾಗೂ ಮುಖಾ ಮುಖಿಯನ್ನು ಕಣ್ತುಂಬಿ ಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು.
ಇವರಿಬ್ಬರನ್ನು ಬಿಟ್ಟು 'ಕುಬೇರ'ನ ಮತ್ತೊಂದು ಆಕರ್ಷಣೆ ಅಂದರೆ, ಅದು ರಶ್ಮಿಕಾ ಮಂದಣ್ಣ. ಭಿಕ್ಷುಕರನ್ನು ಬಳಸಿಕೊಂಡು ಸಾವಿರಾರು ಕೋಟಿಯ ಅಕ್ರಮವಾಗಿ ಬಿಲಿಯನೇರ್‌ಗಳು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳುವ ಒಂದೆಳೆಯನ್ನು ಇಟ್ಟುಕೊಂಡು 'ಕುಬೇರ' ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಇಲ್ಲಿ ಯಾರು ಯಾರನ್ನು ಬಳಸಿಕೊಂಡರು? ಕಥೆಯಲ್ಲಿರುವ ಟ್ವಿಸ್ಟ್ ಅಂಡ್ ಟರ್ನ್ ಏನು? ಎನ್ನುವುದೇ ಇಂಟ್ರೆಸ್ಟಿಂಗ್.

ಧನುಷ್ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳ ಕಥೆಯ ಮೇಲೆ ಒಂದು ನಂಬಿಕೆ ಇದ್ದೇ ಇರುತ್ತೆ. ಆದರೆ, ಇತ್ತೀಚೆಗೆ ಅವರ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿದ್ದಕ್ಕೆ ಅಭಿಮಾನಿಗಳಲ್ಲಿ ಸಣ್ಣ ಆತಂಕವಿತ್ತು. 'ಕುಬೇರ' ಸಿನಿಮಾ ನೋಡಿದ ಬಳಿಕ ಆ ಆತಂಕಗಳೆಲ್ಲ ದೂರ ಆದವೇ? ಸಿನಿಮಾದ ಹೈಲೈಟ್ ಏನು? ಪ್ಲಸ್ ಪಾಯಿಂಟ್ ಏನು? ಮೈನಸ ಪಾಯಿಂಟ್‌ಗಳೇನು? ತಿಳಿಯುವುದಕ್ಕೆ ಮುಂದೆ ಓದಿ.
'ಕುಬೇರ'ನ ಕಥೆಯೇನು?
ಈ ಸಿನಿಮಾದಲ್ಲಿ ಧನುಷ್, ನಾಗಾರ್ಜುನ, ರಶ್ಮಿಕಾ ಮಂದಣ್ಣ ಹೊರತಾಗಿ ಮತ್ತೊಂದು ಪಾತ್ರ ಪ್ರೇಕ್ಷಕರನ್ನು ಕಾಡುತ್ತೆ. ಅದುವೇ ಉದ್ಯಮಿ ನೀರಜ್ ಪಾತ್ರ. ಬಿಲಿಯನೇರ್ ಆಗಿರುವ ಉದ್ಯಮಿ ಅಕ್ರಮ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡುವುದಕ್ಕೆ ಸಂಚು ರೂಪಿಸುತ್ತಿದ್ದಾರೆ. ಇದಕ್ಕಾಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ದೀಪಕ್ (ನಾಗಾರ್ಜುನ) ಸಹಾಯವನ್ನು ಪಡೆಯುತ್ತಾನೆ. ಜೈಲಿನಲ್ಲಿ ಇದ್ದುಕೊಂಡೇ ದೀಪಕ್ ಭಿಕ್ಷುಕರನ್ನು ಉದ್ಯಮಿಗಳನ್ನಾಗಿ ಮಾಡುತ್ತಾರೆ. ಅವರಲ್ಲಿ ಪ್ರಮುಖರು ತಿರುಪತಿಯ ದೇವ (ಧನುಷ್) ಉಳಿದವರು ಖೇಲು, ದಿವ್ಯಾ ಮತ್ತು ಖುಷ್ಬೂ. ತನ್ನ ಕೆಲಸ ಮುಗಿದ ಮೇಲೆ ಈ ಭಿಕ್ಷುಕರನ್ನು ಮುಗಿಸುವುದಕ್ಕೆ ಸಂಚು ರೂಪಿಸುತ್ತಾನೆ. ಇದರಲ್ಲಿ ಧನುಷ್ ಹೇಗೆ ತಪ್ಪಿಸಿಕೊಳ್ಳುತ್ತಾನೆ? ದೀಪಕ್ ಯಾರು? ಅವನು ಯಾಕೆ ಜೈಲಿನಲ್ಲಿದ್ದಾನೆ? ದೇವಾ ಹಾಗೂ ಸಮೀರಾ (ರಶ್ಮಿಕಾ ಮಂದಣ್ಣ) ಭೇಟಿ ಹೇಗಾಗುತ್ತೆ? ಎನ್ನುವುದನ್ನು ತಿಳಿಯುವುದಕ್ಕೆ ಸಿನಿಮಾ ನೋಡಲೇಬೇಕು.

ಪ್ಲಸ್ ಪಾಯಿಂಟ್ ಏನು?
'ಕುಬೇರ'ನ ಕಥೆ ಆರಂಭ ಆಗುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತೆ. ನಂತರ ಕಥೆ ವೇಗವನ್ನು ಪಡೆದುಕೊಳ್ಳುತ್ತೆ. ಭಿಕ್ಷುಕನಾಗಿ ಧನುಷ್ ಮತ್ತೊಮ್ಮೆ ಭೇಷ್ ಎನಿಸಿಕೊಳ್ಳುತ್ತಾರೆ. ಎಮೋಷನಲ್ ಸೀನ್‌ಗಳಲ್ಲಿ ಬೆಸ್ಟ್ ಪರ್ಫಾಮೆನ್ಸ್ ಎನ್ನುಬಹುದು. ಧನುಷ್ ಬಳಿಕ ನಾಗಾರ್ಜುನ ಪಾತ್ರ ಪ್ರೇಕ್ಷಕರನ್ನು ಖಂಡಿತಾ ಸೆಳೆಯುತ್ತೆ. ಎಲ್ಲಕ್ಕಿಂತ ಸರ್ಪ್ರೈಸ್ ಎನ್ನುವುದು ನೀರಜ್ ಪಾತ್ರದಲ್ಲಿ ನಟಿಸಿರುವ ಜಿಮ್ ಸರಬ್ ಅಭಿನಯ. ದಿಗ್ಗಜರ ಮಧ್ಯೆ ಜಿಮ್ ಸರಬ್ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ. ಫಸ್ಟ್ ಹಾಫ್‌ನಲ್ಲಿ ರಶ್ಮಿಕಾ ಮಂದಣ್ಣ ಎಂಟ್ರಿಯ ಜೊತೆ ಅವರ ಪಾತ್ರವೂ ಕಥೆಯೊಳಗೆ ಸೇರಿಕೊಳ್ಳುತ್ತಾ ಹೋಗುತ್ತೆ. ಫಸ್ಟ್ ಆರಂಭದಲ್ಲಿ ನಿಧಾನವಾಗಿದೆ ಎಂದೆನಿಸಿದರೂ, ಇಂಟರ್‌ವಲ್ ಹೊತ್ತಿಗೆ ಇಂಟ್ರೆಸ್ಟಿಂಗ್ ಎಂದು ಅನಿಸುವುದಕ್ಕೆ ಶುರುವಾಗುತ್ತೆ. ಇನ್ನು ಸೆಕೆಂಡ್ ಹಾಫ್ ಕುತೂಹಲವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು. ಇನ್ನು ತಾಂತ್ರಿಕವಾಗಿ ಶೇಖರ್ ಕಮ್ಮುಲ ಕೆಲವು ಕಡೆ ಸ್ಕ್ರೀನ್‌ಪ್ಲೇನಲ್ಲಿ ಎಡವಿದ್ದಾರೆ ಎನಿಸುತ್ತದೆ. ಕ್ಯಾಮರಾ ವರ್ಕ್ ಹಾಗೂ ದೇವಿಶ್ರೀ ಪ್ರಸಾದ್ ಸಂಗೀತ ಈ ಸಿನಿಮಾದ ಹೈಲೈಟ್ ಎನ್ನಬಹುದು.
ಮೈನಸ್ ಪಾಯಿಂಟ್ ಏನು?
ನಿರ್ದೇಶಕ ಶೇಖರ್ ಕಮ್ಮುಲ ಒಳ್ಳೆಯ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಸ್ಕ್ರೀನ್‌ಪ್ಲೇ ಕಡೆಗೆ ಇನ್ನೂ ಹೆಚ್ಚು ಗಮನ ಹರಿಸಬೇಕಿತ್ತು ಎಂದೆನಿಸುತ್ತೆ. ಅದರಲ್ಲೂ ಫಸ್ಟ್ ಹಾಫ್‌ನ ಆರಂಭದಲ್ಲಿ ಒಂದಿಷ್ಟು ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ, ಸಿನಿಮಾ ಮತ್ತಷ್ಟು ವೇಗವನ್ನು ಪಡೆದುಕೊಳ್ಳುತ್ತಿತ್ತು. ಇನ್ನು ಕ್ಲೈಮ್ಯಾಕ್ಸ್‌ಗೂ ಮುನ್ನ ಟ್ವಿಸ್ಟ್ ಅಂಡ್ ಟರ್ನ್‌ಗಳು ನೋಡುವುದಕ್ಕೆ ಸಿಗುವುದಿಲ್ಲ. ಭಾವನಾತ್ಮಕ ಸನ್ನಿವೇಶಗಳೇ ನೋಡುವುದಕ್ಕೆ ಸಿಗುತ್ತವೆ. ಇದು ಪ್ರೇಕ್ಷಕರಿಗೆ ಸ್ವಲ್ಪ ಕಸಿವಿಸಿ ಮಾಡಬಹುದು. ಇಷ್ಟು ಬಿಟ್ಟರೆ, ಸಿನಿಮಾವನ್ನು ಆರಾಮಾಗಿ ನೋಡಬಹುದು.
ಕೊನೆಯಲ್ಲಿ ?
ಧನುಷ್ ಸಿನಿಮಾಗಳನ್ನು ಫ್ಯಾಮಿಲಿ ಕೂತು ನೋಡಬಹುದು. ಒಂದೊಳ್ಳೆ ಕಥೆಯನ್ನಂತೂ ನಿರೀಕ್ಷೆ ಮಾಡಬಹುದು. ಧನುಷ್, ನಾಗಾರ್ಜುನ, ರಶ್ಮಿಕಾ ಮಂದಣ್ಣ ಹಾಗೂ ಜಿಮ್ ಸರಬ್ ಅವರ ಅಭಿನಯ ಇಷ್ಟು ಆಗುತ್ತೆ. ಒಂದಿಷ್ಟು ಚಿಕ್ಕ ಪುಟ್ಟ ತಪ್ಪುಗಳಿವೆ. ಕೆಲವೆಡೆ ಲಾಜಿಕ್ ಮಿಸ್ ಆಗಿದೆ. ಹಾಗಿದ್ದರೂ ಕುಟುಂಬದ ಜೊತೆ ಒಮ್ಮೆ ಹೋಗಿ ಸಿನಿಮಾ ನೋಡುವುದಕ್ಕೆ ಏನೂ ಸಮಸ್ಯೆಯಿಲ್ಲ.


Click it and Unblock the Notifications











