Edagaiye Apaghatakke Karana Review:ಎಡಗೈ ನಾಯಕನ ಸಾಲು ಸಾಲು ಅಪಘಾತ.. ನಕ್ಕು ಬರಲು ಅಡ್ಡಿಯಿಲ್ಲ!
ಈ ಪ್ರಪಂಚದಲ್ಲಿ ಬಲಗೈಯನ್ನು ಪ್ರಮುಖವಾಗಿ ಬಳಸುವ ಮಂದಿನೇ ಹೆಚ್ಚು. ಇದೊಂತರ ಬಲಗೈ ಡಾಮಿನೇಡೆಟ್ ಪ್ರಪಂಚ. ಹೀಗಾಗಿ ಎಡಗೈ ಅನ್ನು ಬಳಸುವವರ ಸಂಖ್ಯೆ ತೀರಾ ಕಡಿಮೆ. ಆದರೆ, ಅವರ ಸಮಸ್ಯೆಗಳೇನು ಅಂತ ಯಾರಾದರೂ ಕೇಳಿದ್ದಾರಾ? ಹೋಗಲಿ ಅವರಿಗೂ ಸಮಸ್ಯೆಗಳು ಇರುತ್ತವೆ ಅನ್ನೋದು ಗೊತ್ತಾ? ಬಹುಶ: ಇಂತಹ ಆಲೋಚನೆ ಬಹುತೇಕ ಮಂದಿಗೆ ಬಂದಿರಲು ಸಾಧ್ಯವಿಲ್ಲ. ಇಂತಹ ಆಲೋಚನೆಯನ್ನು ಇಟ್ಕೊಂಡು ನಿರ್ಮಾಣ ಮಾಡಿದ ಸಿನಿಮಾ 'ಎಡಗೈಯೇ ಅಪಘಾತಕ್ಕೆ ಕಾರಣ'.
ಆಟಗಾರರೋ, ಇಲ್ಲ ಕೆಲವು ಕ್ರೇಜಿ ಪರ್ಸನಾಲಿಟಿಗಳು ಉದ್ದೇಶ ಪೂರ್ವಕವಾಗಿ ಎಡಗೈ ಅನ್ನು ಬಳಸುವುದು ಉಂಟು. ಆದರೆ, ಇಲ್ಲಿರುವ ಪ್ರಶ್ನೆಯೇ ಬೇರೆ. ಬಲಗೈ ಬಳಸುವವರಿಂದಲೇ ತುಂಬಿರುವ ಪ್ರಪಂಚದಲ್ಲಿ ಎಡಗೈ ಬಳಸುವವರು ಹೇಗೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎನ್ನುವುದನ್ನು ಈ ಸಿನಿಮಾ ಹೇಳುವುದಕ್ಕೆ ಹೊರಟಿದೆ. ಇದರೊಂದಿಗೆ ಒಂದು ಕ್ರೈಂ ಸ್ಟೋರಿ ಕೂಡ ಇದೆ. ಅದಕ್ಕೆ ನಿರ್ದೇಶಕರು ಈ ಅಪಘಾತಕ್ಕೆ ಎಡಗೈಯೇ ಕಾರಣ ಎಂದಿದ್ದಾರೆ.

ದೂದ್ ಪೇಡಾ ದಿಗಂತ್, ನಿಧಿ ಸುಬ್ಬಯ್ಯ, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳೆ, ಧನು ಹರ್ಷ, ರಾಧಿಕಾ ನಾರಾಯಣ್ ಸೇರಿದಂತೆ ಕನ್ನಡದ ಕಲಾವಿದರ ದೊಡ್ಡ ತಂಡವೇ ಇದೆ. ಈ ಸಿನಿಮಾವನ್ನು ಸಮರ್ಥ್ ಕಡಕೋಳ್ ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿದ್ದಾರೆ. ಕೆಲವು ದಿನಗಳಿಂದ ದಿಗಂತ್ ಅಂಡ್ ಟೀಮ್ ವಿಭಿನ್ನವಾಗಿ ಭರ್ಜರಿ ಪ್ರಚಾರ ಮಾಡಿದ್ದರು. ಈಗ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಹಾಗಿದ್ದರೆ, ಈ ಸಿನಿಮಾದಲ್ಲಿ ಏನಿದೆ? ಏನಿಲ್ಲ? ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗುತ್ತಾ? ಎನ್ನುವುದನ್ನು ತಿಳಿಯಲು ಮುಂದೆ ಓದಿ.
ಎಡಗೈ ಮಂದಿಯ ಕಥೆ ಏನು?
'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾದ ಕಥಾನಾಯಕ ಲೋಹಿತ್. ಪ್ರೀತಿಯಿಂದ ಇವನನ್ನು ಲೊಡ್ಡೆ ಲೋಹಿತ್ ಎಂದು ಕರೆಯುತ್ತಾರೆ. ಇವನು ಲೆಫ್ಟಿ ( ಎಡಗೈ ಬಳಸುವವನು). ಬಲಗೈ ಬಳಸುವವರಿಗೆಂದು ಮಾಡಿರುವ ಸಮಾಜದಲ್ಲಿ ಎಡಗೈ ಬಳಸುವವರಿಗೆ ಸಮಸ್ಯೆ ಎಂದು ನಂಬಿರುವವನು. ಇದರಿಂದ ಸಾಕಷ್ಟು ಕಿರಿಕಿರಿಯನ್ನೂ ಅನುಭವಿಸುತ್ತಾನೆ. ಇನ್ನೊಂದು ಕಡೆ ನತದೃಷ್ಟ. ಏನೇ ಕೆಲಸ ಮಾಡುವುದಕ್ಕೆ ಹೋದರೂ ವಿಘ್ನಗಳೇ. ಒಮ್ಮೆ ಗೆಳತಿ ಪೂಜಾ (ನಿಧಿ ಸುಬ್ಬಯ್ಯ) ತನ್ನ ಫ್ಲ್ಯಾಟ್ಗೆ ಕರೆದಿದ್ದಕ್ಕಾಗಿ ಅಲ್ಲಿಗೆ ಹೋಗುತ್ತಾನೆ. ಅಲ್ಲಿಂದ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಒಂದಿಷ್ಟು ಹೆಣಗಳು ಬೀಳುತ್ತವೆ. ಇದೆಲ್ಲ ಹೇಗೆ ನಡೆಯುತ್ತೆ? ಇದಕ್ಕೆ ಲೋಹಿತನ (ದಿಗಂತ) ಎಡಗೈ ಹೇಗೆ ಕಾರಣ ಆಯ್ತು? ಎನ್ನುವುದೇ ಕಥೆ.

ಸಿನಿಮಾದ ಹೈಲೈಟ್ ಏನು?
ದಿಗಂತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾದಲ್ಲಿ ಹಲವು ಕಾರಣಕ್ಕೆ ಇಷ್ಟ ಆಗುತ್ತೆ. ಇದೊಂದು ಪಕ್ಕಾ ಎಂಟರ್‌ಟೈನರ್. ಲಾಜಿಕ್ ಎಲ್ಲ ಪಕ್ಕಕ್ಕಿಟ್ಟು, ಕ್ರೈಂ, ಥ್ರಿಲ್ಲರ್‌ಯಲ್ಲೂ ಕಾಮಿಡಿ ಮಾಡುತ್ತಾ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ. ಇಲ್ಲಿ ಕಣ್ಣೀರು ಹಾಕುವ ಸನ್ನಿವೇಶಗಳಿಲ್ಲ. ಸಮಾಜಕ್ಕೆ ಸಂದೇಶ ಕೊಡಬೇಕು ಎನ್ನುವ ಗೋಜಿಗೆ ಬಿದ್ದಿಲ್ಲ. ಜನರಿಗೆ ಮನರಂಜನೆ ನೀಡಬೇಕು ಎನ್ನುವುದನ್ನೇ ಮುಖ್ಯ ವಿಷಯವಾಗಿಟ್ಟುಕೊಂಡು ಈ ಸಿನಿಮಾ ಮಾಡಿರುವುದು ನಿರ್ದೇಶಕರ ಉದ್ದೇಶ ಎನ್ನುವುದು ಗೊತ್ತಾಗುತ್ತೆ.
ಫಸ್ಟ್ ಹಾಫ್ ಹೇಗಿದೆ?
'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾದ ಕಲ್ಪನೆ ಇಷ್ಟ ಆಗಿದ್ದರೂ, ಫಸ್ಟ್ ಹಾಫ್ ಏನೋ ಮಿಸ್ಸಿಂಗ್ ಅನಿಸುತ್ತೆ. ಇಂಟ್ರೆಸ್ಟಿಂಗ್ ಸನ್ನಿವೇಶಗಳನ್ನು ಇನ್ನೂ ಚೆನ್ನಾಗಿ ಕಟ್ಟಿಕೊಡಬಹುದಿತ್ತು ಅಂತ ಅನಿಸುತ್ತೆ. ಆಗಾಗ ಇದೇ ಗೊಂದಲಕ್ಕೆ ಬೀಳುತ್ತೇವೆ. ಹಾಸ್ಯ ಸನ್ನಿವೇಶಗಳಿಗೆ, ಕೆಲವು ಡೈಲಾಗ್‌ಗಳಿಗೆ ಪ್ರತಿಕ್ರಿಯೆ ನೀಡಿದರೂ ಏನೋ ಕೊರೆತೆ ಇದೆ ಎನಿಸುತ್ತೆ. ಇದಕ್ಕೆ ಕಾರಣ ಸ್ಕ್ರೀನ್ ಪ್ಲೇ ಎನ್ನಬಹುದು.
ಸೆಕೆಂಡ್ ಹಾಫ್ ಕಥೆಯೇನು?
ಫಸ್ ಹಾಫ್‌ಗಿಂತ ಸೆಕೆಂಡ್ ಹಾಫ್ ಚೆನ್ನಾಗಿದೆ. ಕಥೆ ಕೊಂಚ ಮಟ್ಟಿಗೆ ವೇಗ ಪಡೆದುಕೊಳ್ಳುತ್ತೆ. ಕಾಮಿಡಿ ಸನ್ನಿವೇಶಗಳು ಹೆಚ್ಚಿವೆ. ದೃಶ್ಯಗಳಲ್ಲಿ ಟ್ವಿಸ್ಟ್ ಅಂಡ್ ಟರ್ನ್‌ಗಳಿವೆ. ಕ್ಲೈಮ್ಯಾಕ್ಸ್ ಕೆಲವರಿಗೆ ಇಷ್ಟ ಆಗಬಹುದು. ಇನ್ನು ಕೆಲವರಿಗೆ ಇನ್ನೇನೋ ಮಾಡಬಹುದಿತ್ತಾ? ಅಂತಾನೂ ಅನಿಸಬಹುದು. ಒಟ್ಟಾರೆಯಾಗಿ ನೋಡುವುದಾರೇ, ಇದು ಔಟ್ ಅಂಡ್ ಔಟ್ ದಿಗಂತ್ ಸಿನಿಮಾ.
ಕೊನೆಯಲ್ಲಿ ಏನು?
ದಿಗಂತ್‌ಗೆ ಈ ಸಿನಿಮಾ ಒಳ್ಳೆಯ ಕಮ್‌ಬ್ಯಾಕ್ ಎನ್ನಬಹುದು. ಸಿನಿಮಾದಲ್ಲಿ ಕಂಟೆಂಟ್ ಇರಬೇಕು ಎನ್ನುವವರಿಗೆ ಈ ಸಿನಿಮಾ ಇಷ್ಟ ಆಗುತ್ತೆ. ದಿಗಂತ್ ಜೊತೆ ಈ ಸಿನಿಮಾದಲ್ಲಿ ಧನು ಹರ್ಷ ಕೂಡ ಇಷ್ಟ ಆಗುತ್ತಾರೆ. ನಿಧಿ ಸುಬ್ಬಯ್ಯ, ಕೃಷ್ಣ ಹೆಬ್ಬಾಳೆ ಅವರಿಗೆ ಕೊಟ್ಟಿರುವ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಿರೂಪ್ ಭಂಡಾರಿ ಹಾಗೂ ರಾಧಿಕಾ ನಾರಾಯಣ್ ಇಬ್ಬರೂ ಅತಿಥಿ ಪಾತ್ರದಲ್ಲಿ ಸರ್ಪ್ರೈಸ್ ಕೊಡುತ್ತಾರೆ. ವೀಕೆಂಡ್‌ನಲ್ಲಿ ಆರಾಮಾಗಿ ಫ್ಯಾಮಿಲಿ ಸಮೇತ ಹೋಗಿ ಸಿನಿಮಾ ನೋಡಬಹುದು.


Click it and Unblock the Notifications











